ಪರಿಸರ ನಮ್ಮನ್ನು ರಕ್ಷಿಸುವ ದಿನಗಳು ಮುಗಿದವು; ನಾವೀಗ ಪರಿಸರವನ್ನು ರಕ್ಷಿಸಬೇಕಾಗಿದೆ! ಈ ಮಾತಿನ ಅರ್ಥ ಸರಳವಾದುದು. ಈವರೆಗೊ ಬದುಕಿನ ಉನ್ನತಿಗಾಗಿ ಪ್ರಕೃತಿಯನ್ನು ದೋಚುತ್ತಿದ್ದ ಮನುಷ್ಯ ಬದಲಾದ ಸಂದರ್ಭದಲ್ಲಿ ತನ್ನ ಉಳಿವಿಗಾಗಿ ಪ್ರಕೃತಿಯನ್ನು ರಕ್ಷಸಬೇಕಾಗಿದೆ.
ನಮ್ಮ ಅಜ್ಜ ಮುತ್ತಜ್ಜಂದಿರಾರೂ ಎಂದೂ ಎದುರಿಸದ ಪರಿಸರ ಸಂರಕ್ಷಣೆಯ ತುರ್ತು ನಮ್ಮ ಮುಂದಿದೆ. `ಪರಿಸರ ಸಂರಕ್ಷಣೆ’ ಎನ್ನುವ ಪರಿಕಲ್ಪನೆ ಹುಟ್ಟಿಕೊಂಡದ್ದೇ ಇತ್ತೀಚೆಗೆ. ನಾವಿಂದು ಪರಿಸರ ಸಂರಕ್ಷಣೆ ಎಂದು, ಯಾವುದನ್ನು ಭಾವಿಸುತ್ತೇವೆಯೋ ಅದ್ಯಾವುದೂ ನಮ್ಮ ಹಿರೀಕರಿಗೆ ರಕ್ಷಣೆ ಆಥವಾ ಕರ್ತವ್ಯ ಎಂದೆನಿಸಿರಲಿಲ್ಲ ಗಿಡ ನೆಡುವುದು, ಸುತ್ತಮುತ್ತಲಿನ ಪರಿಸರವನ್ನು ಚೊಕ್ಕಟವಾಗಿಡುವುದು. ಜಲಮೂಲಗಳನ್ನು ಶುಚಿಯಾಗಿಡುವುದು- ಇವೆಲ್ಲಾ ನಮ್ಮ ಹಿರೀಕರ ಬದುಕಿನ ಭಾಗವಾಗಿದ್ದವೇ ಹೊರತು ನಮಗಾಗಿರುವಂತೆ `ಕರ್ತವ್ಯ ಭಾರ’ ವಾಗಿರಲಿಲ್ಲ.
ಅಸಲಿಗೆ `ಪರಿಸರ ಸಂರಕ್ಷಣೆ’ ಎನ್ನುವ ಮಾತೇ ಅರ್ಥಹೀನವಾದುದು. ಜೀವವುಳ್ಳ ಏನೊಂದನ್ನೂ ಸೃಜಿಸಲಾರದ ಮನುಷ್ಯ ಸಕಲ ಜೀವಕುಲವ ಪೊರೆವ ಪ್ರಕೃತಿಯನ್ನು ರಕ್ಷಿಸುವ ಮಾತನಾಡುವುದು ತಮಾಷೆ. ನಮ್ಮ ಇವತ್ತಿನ ದುರಂತವೆಂದರೆ, ಇಂಥ ತಮಾಷೆಗಳೇ ಸುಡು ಸತ್ಯಗಳಾಗಿ ಪರಿಣಮಿಸಿರುವುದು.
ಎಲ್ಲಿಯವರೆಗೆ ಪ್ರಕೃತಿಯ ಶಿಶುವಾಗಿದ್ದನೊ ಅಲ್ಲಿಯವರೆಗೂ ಪ್ರಕೃತಿ-ಪರಿಸರ ಸಂರಕ್ಷಣೆಯ ಅಗತ್ಯವೇ ಇರಲಿಲ್ಲ. ಆದರೆ ಯಾವಾಗ ಪ್ರಕೃತಿಯ ಗರ್ಭದಾಳವನ್ನು ಜಾಲಿಸತೊಡಗಿದನೊ ಆಗಿನಿಂದ ಪರಿಸರ ಸಂರಕ್ಷಣೆಯ ತುರ್ತು ತಲೆದೋರಿದೆ. ನಮ್ಮ ಇವತ್ತಿನ ಸವಾಲು ಇರುವುದು ಪ್ರಕೃತಿಯನ್ನು ವೃದ್ಧಿಸುವುದಲ್ಲ, ಇರುವುದನ್ನು ಉಳಿಸಿಕೊಳ್ಳುವಲ್ಲಿ.
ಪರಿಸರ ಸಂರಕ್ಷಣೆಯ ಮೊದಲ ಪಾಠ ನಂನಮ್ಮ ಮನೆಗಳಿಂದಲೇ ಪ್ರಾರಂಭವಾಗುವುದು ಬಹುಮುಖ್ಯ. ಏಕೆಂದರೆ ಸಂರಕ್ಷಣೆಯ ಕಾರ್ಯಗಳು ಸೂತ್ರಗಳಾಗಿ ಸಂಕೀರ್ಣಗೊಳ್ಳುತ್ತಾ ಹೋದಂತೆ, ಅವು ಪುಸ್ತಕದ ಬದನೆಯಾಗುವ ಸಾಧ್ಯತೆಯೇ ಹೆಚ್ಚು. ವಿಶ್ವವಿದ್ಯಾಲಯಗಳು, ವಿವಿಧ ಸಂಸ್ಥೆಗಳು ತಂತಮ್ಮ ನೆಲೆಗಳಲ್ಲಿ ಪರಿಸರವನ್ನು ರಕ್ಷಿಸಲಿ. ನಾಗರಿಕರ ಪರಿಸರ ಸಂರಕ್ಷಣೆಯ ಓನಾಮ ಮನೆಯಿಂದಲೇ ಪ್ರಾರಂಭವಾಗಬೇಕು. ಮನೆಯ ಒಳಭಾಗ ಸ್ವಚ್ಚವಾಗಿದ್ದರಷ್ಟೇ ಸಾಲದು; ಮನೆಯ ಮುಂದಿನ ಚರಂಡಿ, ರಸ್ತೆಯೂ ಚೊಕ್ಕಟವಾಗಿರಬೇಕು. ಮನೆ ಮುಂದೆ ನೆರಳು ಚೆಲ್ಲುವಂತೆ ಮರಗಳನ್ನು ಬೆಳೆಸಬೇಕು. ಹಾಗೆ ಚೊಕ್ಕಟವಾಗಿಡುವ, ಗಿಡ ನೆಟ್ಟು ನೀರೆರೆವ ಕೆಲಸ ಸರ್ಕಾರದ್ದೋ ಅಥವಾ ಮತ್ತ್ಯಾವ ಪ್ರಕಾರದ್ದೋ ಆಗಿರುವುದಕ್ಕಿಂಥ ಹೆಚ್ಚಾಗಿ ವ್ಯಕ್ತಿಯದಾಗಿರುತ್ತದೆ. ಪರಿಸರ ಸಂರಕ್ಷಣೆಯ ಬಗ್ಗೆ ಚಿಂತಿಸುವ ನಾವು, ಆ ಸಂರಕ್ಷಣೆಯ ಹೊಣೆಯನ್ನು ಆಡಳಿತ ವರ್ಗಕ್ಕೆ ಸೀಮಿತವಾಗಿರಿಸದೆ ನಮ್ಮದಾಗಿಸಿಕೊಳ್ಳಬೇಕು. ಗಾಂಧೀಜಿ ಹೇಳಿದ ಸ್ವರಾಜ್ಯ ಸೂತ್ರ ಕೂಡ ಇದೇನೆ; ನಾವು ಮಾಡಿದ ಕಸವನ್ನು ನಾವೇ ಬಳಿಯುವುದು.
ರಸ್ತೆಯನ್ನುವುದು ನಾವು ಬಳಸಿ ಬಿಸಾಡುವ ಸಕಲ ಅನಿಷ್ಟಗಳ ಕಸದ ತೊಟ್ಟಿ ಹಾಗೂ ಪೀಕುದಾನಿಯೆಂದು ಭಾವಿಸಿರುವ ಮಾಹಿತಿ ತಂತ್ರಜ್ಞಾನ ಯುಗದ ನಾವು ಪರಿಸರ ಸಂರಕ್ಷೆಣೆಯ ಆಆಇಈಯನ್ನು ನಮ್ಮ ಹಿರಿಯರ ನಡಾವಳಿಯಿಂದ ಕಲಿಯಬೇಕು. ಹಿರಿಯರ ಬದುಕಿನ ಎಳೆಗಳನ್ನು ಕೆಲವುಮಟ್ಟಿಗೆ ಉಳಿಸಿಕೊಂಡು ಬಂದಿರುವ ನಮ್ಮ ಗ್ರಾಮೀಣ ಜನತೆ ಇವತ್ತಿಗೂ- ಕಾಲುದಾರಿಯಲ್ಲಿ ಎಡತಾಕುವ ಕಲ್ಲುಮುಳ್ಳು ಅಥವಾ ಗಾಜಿನ ಚೂರುಗಳನ್ನು ಎತ್ತಿ ದೂರ ಬಿಸಾಡಿ ಮುಂದೆ ಹೋಗುತ್ತಾರೆ. ಉಗುಳಿನ ಮೇಲೆ ಕಾಲಿನಿಂದ ಮಣ್ಣು ನೂಕುತ್ತಾರೆ. ಹಂದಿ ನಾಯಿಗಳಿರಲಿ, ಮನುಷ್ಯನೊಬ್ಬ ರಸ್ತೆಯಲ್ಲಿ ಬಿದ್ದಿದ್ದರೂ ನಿರ್ವಿಕಾರವಾಗಿ ನಡೆಯುವ ಆಧುನಿಕರು ಗ್ರಾಮೀಣರಿಂದ ಕಲಿಯ ಬೇಕಾದುದು ಸಾಕಷ್ಟಿದೆ.
ನಗರವನ್ನು ಚೊಕ್ಕಟವಾಗಿಡುವುದು ಹೇಗೆ? ನಗರದ ನೈಮರ್ಲ್ಯ ಕಾಪಾಡುವುದು ಹೇಗೆ? ಮುಂತಾದ ಅಧ್ಯಯನದ ವಿಷಯಗಳೊಂದಿಗೆ ಜನ ಪ್ರತಿನಿಧಿಗಳು ಆಗಾಗೆ ವಿಮಾನ ಹತ್ತುವುದು ಮಾಮೂಲಾಗಿಬಿಟ್ಟದೆ. ಆದರೆ, ನಾವು ಕಲಿಯಬೇಕಾದ ಪರಿಸರ ಸಂರಕ್ಷಣೆಯ ಪಾಠಗಳಿರುವುದು ನಮ್ಮ ಹಿರಿಯರ ಬದುಕಿನ ಪುಟಗಳೆಲ್ಲಿಯೇ ಹೊರತು ವಿದೇಶಗಳಲ್ಲಿನ ನಗರಗಳು ಹಾಗೂ ಪುಸ್ತಕಗಳಲ್ಲಲ್ಲ. ಅಂಗಳ, ಹಿತ್ತಲು, ಬಯಲುಗಳಲ್ಲಿ ಗಿಡ ನೆಡುವುದು ಹಾಗೂ; ಬಳೆಕೆಯ ಸುತ್ತಮುತ್ತಲಿನ ಸ್ಥಳವನ್ನು ಶುದ್ದವಾಗಿರಿಸಿಕೊಳ್ಳುವುದು ಬದುಕಿನ ದಿನಚರಿಯಾಗಬೇಕು.
ಪರಿಸರ ಸಂರಕ್ಷಣೆಯ ಕೂಗು ಇವತ್ತು ಗಟ್ಟಿಯಾಗಿ ಕೇಳಬರುತ್ತಿರುವುದು ನಗರಗಳೆಂಬ ಹೈಟೆಕ್ ತಿಪ್ಪೇಗುಂಡಿಗಳಲ್ಲಿ ವಾಹನಗಳು ಹಾಗೂ ಕೈಗಾರಿಕೆಗಳ ಕಲ್ಮಶಗಳಿಂದ ನಗರಗಳು ನರಕಗಳಾಗಿವೆ. ಕೆರೆಗಳೆಲ್ಲ ಬಡಾವಣೆಗಳಾಗಿ, ಉಳಿದ ಕೆರೆಗಳು ಹೂಳು ತುಂಬಿಕೊಂಡು ನಶಿಸುತ್ತಿವೆ. ಕಾರ್ಖಾನೆಗಳೆ ಕಕ್ಕಸು ಚೆಲ್ಲುವ ಕುಂಡಿಯ ಮುಖಗಳು ನದಿಮೂಲಗಳ ಬಾಯಿಗೇ ಚಾಚಿಕೊಂಡಿವೆ. ಅಮ್ಮನ ಎದೆಹಾಲಿನಲ್ಲೂ ನಂಜಿನ ನೆರಳು ಕಾಣುವ ಕಾಲವಿದು. ಇಂಥ ಸಂದರ್ಭದಲ್ಲಿ ನಾವು ನಮ್ಮ ಜೀವನ ಶೈಲಿಯನ್ನು ಮರುಪರಿಶೀಲನೆಗೊಳಪಡಿಸುವ ಅಗತ್ಯವಿದೆ.
ಪ್ರಕೃತಿ ಸವಕಲಾಗಲಿಕ್ಕೆ ಏಕೈಕ ಕಾರಣ ಮನುಷ್ಯನ ಮಿತಿ ಮೀರಿದ ಬಯಕೆಗಳೇ ಆಗಿವೆ. ಪರಿಸರ ಸಂರಕ್ಷಣೆಯ ತುರ್ತಿನ ಈ ದಿನಗಳಲ್ಲಿ ನಾವು ನಮ್ಮ ಅಗತ್ಯಗಳನ್ನು ಕಡಿಮೆ ಮಾಡಿಕೊಂಡಷ್ಟೂ ಒಳ್ಳೆಯದು. ಪರಿಸರದ ಮೇಲಿನ ಅವಲಂಬನೆಯನ್ನು ಸಾಧ್ಯವಿದ್ದಷ್ಟೂ ಕನಿಷ್ಠಗೊಳಿಸುವುದು ಪರಿಸರ ಸಂರಕ್ಷಣೆಯ ಬಹುದೊಡ್ಡ ಕಾರ್ಯವಾಗಿದೆ. ಅಗತ್ಯಗಳನ್ನು ಕಡಿಮೆ ಮಾಡಿಕೊಳುವುದೆಂದರೆ ಸರಳವಾಗಿ ಬದುಕುವುದೆಂದರ್ಥ. ಉದಾಹರಣೆಗೆ: ವಾಹನಗಳ ಬಳಕೆ ಕಡಿಮೆಗೊಳಿಸಿ ಸಾಧ್ಯವಾದಷ್ಟೂ ಕಾಲಿಗೆ ಕೆಲಸ ಕೊಡುವುದು, ವಿದ್ಯುತ್ ಬಳಕೆ ಕಡಿಮೆ ಮಾಡುವುದು. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು, ಇತ್ಯಾದಿ. ಈ ಸರಳತೆಯಿಂದಾಗಿ ಪರಿಸರ ಮಾಲಿನ್ಯದಿಂದ ದೇಹದ ಮೇಲೆ ಉಂಟಾಗುವ ಸಾಕಷ್ಟು ವ್ಯತಿರಿಕ್ತ ಪರಿಣಾಮಗಳು ನಿವಾರಣೆಯಾಗುತ್ತವೆ.
ಕೆಲವು ವರ್ಷಗಳ ಹಿಂದೆ ವರನಟ ರಾಜಕುಮಾರ್ ಪತ್ರಕರ್ತರ ಜೊತೆ ಔಪಚಾರಿಕವಾಗಿ ಮಾತನಾಡುತ್ತಾ ಹೇಳಿದ ಮಾತೊಂದು ನೆನಪಿಗೆ ಬರುತ್ತಿದೆ. ನಿಂತುಕೊಂಡು ಮೂತ್ರ ವಿಸರ್ಜಿಸುತ್ತಿದ್ದ ಯಾರೋ ದಾರಿಹೋಕನನ್ನು ಕಾರಿನಲ್ಲಿ ಬರುವಾಗ ಕಂಡಿದ್ದ ರಾಜ್, ಆತನ ನಡವಳಿಕೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು. ಜನ ಓಡಾಡುವ ಸ್ಥಳದಲ್ಲಿ ಎಗ್ಗಿಲ್ಲದೆ ಮೂತ್ರ ಮಾಡುವುದು, ಅದರಲ್ಲೂ ನಿಂತುಕೊಂಡು ಮೂತ್ರ ಮಾಡುವುದು ರಾಜ್ ಕಣ್ಣಿಗೆ ವಿಪರೀತವಾಗಿ ಕಂಡಿತ್ತು. ಈ ಆಕ್ಷೇಪಣೆ ಅತಿಯಾಗಿ, ತಪ್ಪು ಸಣ್ಣದಾಗಿ ಕಾಣಬಹುದು. ಆದರೆ, ಇಂಥ ಸಣ್ಣ ಸಣ್ಣ ತಪ್ಪುಗಳನ್ನು
ತಡೆಗಟ್ಟುವುದರಿಂದಲೇ ಪರಿಸರ ಸಂರಕ್ಷಣೆ ಸಾಧ್ಯ. ಒಳ್ಳೆಯ ಪರಿಸರ ಎಂದರೆ ಒಳ್ಳೆಯ ಸಂಸ್ಕೃತಿಯೂ ಹೌದು.
ಅಮ್ಮನಂತೆ ಮಗುವಿನಂತೆ ಪರಿಸರವನ್ನೂ ಪ್ರೀತಿಸಲು ಕಲಿಯುವ ತನಕ ಪರಿಸರ ಸಂರಕ್ಷಣೆ ಸಾಧ್ಯವಿಲ್ಲ. ಪ್ರಕೃತಿಯಿಂದ ದೂರ ಹೋದಷ್ಟೂ ಮನುಷ್ಯನ ಹೃದಯ ಕಠಿಣವಾಗುತ್ತದೆ ಎನ್ನುವ ಒಂದು ಮಾತಿದೆ. ಅಂದರೆ, ಪ್ರಕೃತಿಯ ಸಹಚರ್ಯದಲ್ಲಿ ಮನುಷ್ಯತ್ವ ಅರಳುತ್ತದೆ. ಇಂಥ ವ್ಯಕ್ತಿತ್ವ ವಿಕಸನಕ್ಕೆ ಸಾಲು ಮರದ ತಿಮ್ಮಕ್ಕ ಒಳ್ಳೆಯ ಉದಾಹರಣೆ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನೂರಾರು ಮರಗಳನ್ನು ನೆಟ್ಟು ಪೋಷಿಸಿದ ತಿಮ್ಮಕ್ಕ, ಬೆಳೆದು ನಿಂತ ಮರಗಳನ್ನೆ ತನ್ನ ಮಕ್ಕಳಾಗಿ ಕಂಡಳು. ಬದುಕು ಸಾರ್ಥಕವಾಗುವುದೆಂದರೆ ಇದೇನೆ.
ಪರಿಸರ ಸಂರಕ್ಷಣೆ ವ್ಯಾಪ್ತಿ ದಿನೇದಿನೇ ದೊಡ್ಡದಾಗುತ್ತಿದೆ. ಇವತ್ತಿನ ಜಾಗತಿಕ ಸಂದರ್ಭದಲ್ಲಿ ಪ್ರಕೃತಿಯ ಅತಿದೊಡ್ಡ ಶತ್ರುವಾಗಿ `ಯುದ್ಧ’ ಕಾಣಿಸಿಕೊಂಡಿದೆ. ಇಡೀ ಭೂ ಮಂಡಲವನ್ನು ಅನೇಕ ಸಲ ಸುಟ್ಟು ಬೂದಿ ಮಾಡುವಷ್ಟು ಪ್ರಮಾಣದ ಅಣುಬಾಂಬುಗಳು ವಿವಿಧ ದೇಶಗಳ ಅಸ್ತ್ರಾಸ್ತ್ರಕೋಠಿಯಲ್ಲಿವೆ. ವಸಾಹತುಶಾಹಿ ಆಧುನಿಕ ರೂಪದಲ್ಲಿ ಮತ್ತೆ ಕಾಣಿಸಿಕೊಂಡಿದೆ. ಇಂಥ ಸ್ಪೋಟಕ ಸನ್ನಿವೇಶದಲ್ಲಿ ನಾಗರಿಕರು ತಳೆಯುವ ಯುದ್ಧ ವಿರೋಧಿ ನಿಲುವು ಜಾಗತಿಕ ಶಾಂತಿ ಹಾಗೂ ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಮಹತ್ವವಾದುದು.
ಕೊನೆಯದಾಗಿ, ಪರಿಸರ ಸಂರಕ್ಷಣೆ ನಾವು ಪರಿಸರಕ್ಕೆ ಮಡುತ್ತಿರುವ ಉಪಕಾರವೇನೂ ಅಲ್ಲವೆನ್ನುವುದನ್ನು ನಾವು ನೆನಪಿನಲ್ಲಿಡಬೇಕು. ಈ ಸಂರಕ್ಷಣೆಯ ಕೆಲಸ ನಮ್ಮ ಬದುಕು, ಭವಿಷ್ಯವನ್ನು ಉತ್ತಮಪಡಿಸಿಕೊಳ್ಳುವುದೇ ಆಗಿದೆ. ಇವತ್ತಿನ ಪರಿಸರ ಸಂರಕ್ಷಣೆಯ ಕಾರ್ಯ ಮುಂದಿನ ಪೀಳಿಗೆಯ ಭವಿಷ್ಯದ ಕುರಿತು ನಾವು ಬರೆಯುವ ಭಾಷ್ಯವಾಗಿದೆ. ಈ ದೃಷ್ಟಿಯಲ್ಲಿ ನಾವೆಲ್ಲರೂ ಒಳ್ಳೆಯದನ್ನೇ ಬರೆಯೋಣ.
*****