“ಅವ್ವಾ, ನಾ ನಿನ್ನ ಮಗಳು
ದೇಹದ ಮುಗುಳು, ನಿನ್ನ ಕನಸಿನ ಅರಳವ್ವಾ
ನಾ ಬರಿ ಭ್ರೂಣವಲ್ಲ.
ನನ್ನ ಹಡೆದವ್ವ
ನಿನ್ನ ಮೈ ಗಂಧದಿಂದ
ಕಿತ್ತುಕೊಂಡರೆ ನಾ ಸತ್ತೆನವ್ವಾ
ಚೆಲ್ಲಬೇಕೆ ಉಡಿಯ ಮುತ್ತು
ನಾ ಬರಿ ಭ್ರೂಣವಲ್ಲ
ಕೇಳವ್ವ.. ಕಂಡಿಲ್ಲ ನಾನಿನ್ನೂ ಬದುಕಿನಾಗಸದ ನೀಲ
ಪಚ್ಚೆಯಂಥ ನೆಲ, ಗಾಳಿಯ ಮೃದು ಸ್ಪರ್‍ಶ
ನಾ ಬರಿ ಭ್ರೂಣವಲ್ಲ.”
ಇದು ಹೆಣ್ಣು ಭ್ರೂಣವೊಂದು ತನ್ನ ಒಡಲಲ್ಲಿ ಹೊತ್ತ ತಾಯಿಯೊಂದಿಗೆ ನಡೆಸುವ ಸಂವಾದ. ಖ್ಯಾತ ಕವಯತ್ರಿ ಮಾಲತಿ ಪಟ್ಟಣ ಶೆಟ್ಟಿಯವರ “ಅವ್ವಾ ನಾ ಬರಿ ಭ್ರೂಣವಲ್ಲ.” ಕವನದ ಸಾಲುಗಳು. ಹೆಣ್ಣು ಭ್ರೂಣ ಹತ್ಯೆಯ ಸುತ್ತ ಅದರ ಬದುಕುವ ಹಕ್ಕನ್ನು ಕಸಿದುಕೊಳ್ಳುತ್ತಿರುವ ಸಾಮಾಜಿಕ ವ್ಯವಸ್ಥೆಯ ವಿರುದ್ಧ ಸಿಡಿದೆದ್ದ ಕವನ. ಮಾನವೀಯ ಅಂತಃಕರಣವೇ ಸತ್ತ ಸಮಾಜದಲ್ಲಿ ಬರಿಯ ಆಡಂಬರ, ಪ್ರತ್ಯೇಕತೆಗಳೇ ಮೇಲುಗೈ ಸಾಧಿಸುತ್ತ ಸಾಗುತ್ತಿರುವ ವ್ಯಾವಹಾರಿಕ ಜಗತ್ತಿನ ಮುಂದೆ ಎಲ್ಲ ನೋವು ದುಃಖ, ನಿರಾಶೆಯ ರೋಧನವೂ ಬರಿಯ ಅರಣ್ಯರೋದನವೇ ಆಗುತ್ತಿರುವುದು ಇಂದಿನ ವಿಪರ್‍ಯಾಸ. ಸ್ತ್ರೀ ಬರಿಯ ದೇಹವಲ್ಲ. ಆಕೆಯಲ್ಲೂ ಮಿಡಿವ ತುಡಿವ ಸೂಕ್ಷ್ಮಾತಿಸೂಕ್ಷ್ಮ ಮನಸ್ಸಿದೆ. ಆಕಾಂಕ್ಷೆಗಳಿವೆ. ಮನೋಧಾರ್‍ಡ್ಯತೆ ಇದೆ. ಆದರೂ ಹೆಣ್ಣು ಎಂದರೆ ಯಾಕಿಷ್ಟು ಅನಾದರ. ಹೆತ್ತವರ ಒಡಲನ್ನು ತನ್ನ ಬಾಲಲೀಲೆಗಳಿಂದ ತೃಪ್ತಗೊಳಿಸುವ ಕಂದಗಳು ತಮ್ಮದೇ ರಕ್ತ ಮಾಂಸಗಳ ಹೊತ್ತಿದ್ದರೂ ಹೆಣ್ಣು ಗಂಡೆಂದು ಬೇಧ ತೋರುವ ಈ ಸಮಾಜದಲ್ಲಿ ಸಮವರ್‍ತಿತ ಸಂವಾದ ಎಂದು ಬರುವುದು. ಕರಿಯ-ಬಿಳಿಯ, ಶ್ರೀಮಂತ-ಬಡವ, ಮೇಲ್ಜಾತಿ-ಕೆಳಜಾತಿ ಎಂಬ ಪ್ರತ್ಯೇಕತೆಯ ನೀತಿ ಇಂದು ನಿನ್ನೆಯದಲ್ಲ. ಎಲ್ಲೆಲ್ಲಿ ಅತಿ ಬುದ್ಧಿವಂತಿಕೆಯ ಲಕ್ಷಣಗಳು ಗೋಚರಿಸಿದವೋ ಅಲ್ಲೆಲ್ಲಾ ಪ್ರತ್ಯೇಕತೆಯ ಜಾಡು ಶೋಷಣೆಯ ವಿವಿಧ ಮುಖಗಳು ಕಾಲದುದ್ದಕ್ಕೂ ಹಬ್ಬಿಕೊಂಡೇ ಬಂದಿವೆ.
ಹೆಣ್ಣಿಗಿಂತ ಮೊದಲೇ ಪದಗಳ ಏಕಸ್ವಾಮ್ಯ ಪಡೆದ ಪುರುಷ ತನ್ನ ಜ್ಞಾನದ ಬಲೆಯಿಂದ ಆಕೆಯ ಮರಳುಗೊಳಿಸುತ್ತ, ಆಕೆಗೆ ಶಿಕ್ಷಣದಿಂದ ವಂಚಿಸುತ್ತ ನಡೆದ. ಇದಕ್ಕೆ ಕಾರಣ ತನ್ನ ಮೇಲುಗಾರಿಕೆಯ ತುಡಿತ. “The most civilized are the most barbaric” ಪ್ರತ್ಯೇಕತೆ ಎನ್ನುವುದು ಹುಟ್ಟುವುದು ಇಲ್ಲೇ. ಸ್ತ್ರೀ ಸ್ವಾತಂತ್ರ್ಯ ಹರಣ, ಹೆಣ್ಣು ಭ್ರೂಣ ಹತ್ಯೆ ಅದಕ್ಕೆ ಹೆತ್ತ ತಾಯಿ ಕೂಡಾ ಕುಟುಂಬದ ದೌರ್‍ಜನ್ಯಕ್ಕೆ ಬೆದರಿಯೋ, ಮುಂದೆ ಆ ಕೂಸಿನ ಸಂಕಷ್ಟಗಳ ನೆನೆದೋ ಭೂಮಿಗೆ ಬರುವ ಮುನ್ನವೇ ಚಿವುಟಿ ಹಾಕಲು ಬಯಸುವುದನ್ನು ಅದಕ್ಕೆ ಜಗತ್ತನ್ನೆ ಇನ್ನು ನೋಡದ ಆ ಭ್ರೂಣ ತನ್ನ ಜೀವನದ ಹಕ್ಕನ್ನು ಕಸಿದುಕೊಳ್ಳುತ್ತಿರುವ ಈ ವ್ಯವಸ್ಥೆಗೆ ಅದರ ಪಾಶವೀ ವರ್‍ತನೆಗೆ ಪ್ರತಿಭಟಿಸುತ್ತಾ ತನ್ನ ಬದುಕಿನ ಹಕ್ಕನ್ನು ಪ್ರತಿಪಾದಿಸುವುದು ಇಲ್ಲಿಯ ಪ್ರಯತ್ನ. ಸಂಪೂರ್‍ಣವಾಗಿ ತಾಯಿಯನ್ನೆ ಅವಲಂಬಿಸಿದ ಆ ಹೆಣ್ಣು ಭ್ರೂಣ ಆಕೆಯಲ್ಲಿಯೇ ಅರಿಕೆ ಮಾಡಿಕೊಳ್ಳುತ್ತಿದೆ. ನಿನ್ನ ದೇಹದ ಮೊಗ್ಗು ಮುಂದೆ ಹೂವಾಗಿ ಅರಳಬೇಕಾದವಳು. ನಿನ್ನ ಕನಸ ನನಸು ಮಾಡುವವಳು. ತನ್ನ ಕಾಪಾಡು. ತಾನು ಬರಿ ಭ್ರೂಣ ಮಾತ್ರವೇ ಅಲ್ಲ. ನನ್ನಲ್ಲೂ ಜೀವವಿದೆ. ಹೊಸ ಜಗತ್ತಿನ್ನು ನೋಡುವ ಅದಮ್ಯ ಆಕಾಂಕ್ಷೆ ಇದೆ ಎನ್ನುತ್ತದೆ ಅದು. ಆದರೆ ತನ್ನ ಅಸ್ತಿತ್ವವನ್ನೆ ನಿರಾಕರಿಸುವ ಜಗತ್ತಿನ ನೀತಿಗೆ ಆ ಭ್ರೂಣ ಬೇಸತ್ತಿದೆ. ಹತಾಶೆಗೊಂಡಿದೆ. ಹೆಣ್ಣು ಎಂದು ಕುಡಿಯಲ್ಲಿಯೇ ಚಿವುಟಿ ಹಾಕುವ ಹುನ್ನಾರ ನಡೆಯುತ್ತಿದೆ. ಕರಿಯ ಉಗುರುಗಳು ಕಾಯುತ್ತಿವೆ. ತಾಯಿಯಾದವಳು ಮಗುವಿನ ಬರುವಿಕೆಯಲ್ಲೇ ಜಗತ್ತಿನ ನೋವು ಮರೆಯುತ್ತಾಳೆ. ಆದರೆ ಇಲ್ಲಿ ಆಕೆಯ ಮೇಲೆ ಕೂಡಾ ವ್ಯವಸ್ಥೆಯ ದಬ್ಬಾಳಿಕೆ ಇದೆ. ಹೊತ್ತವಳ ಗರ್‍ಭದಲ್ಲಿ ಯಾವ ಅಂಜಿಕೆಯಿಲ್ಲದೇ ಭರವಸೆಯಲ್ಲಿ ಬೆಳೆಯಬೇಕಾದ ಈ ಭ್ರೂಣಕ್ಕೂ ಇಂದು ಚಿಂತೆ ತಪ್ಪಿಲ್ಲ. ಈ ಹೊತ್ತಿನಲ್ಲಿ ಆಕೆಗೆ ಭರವಸೆಯ ಬೆಳಕಾಗಿ ಕಾಣುವವಳು ತಾಯಿ ಮಾತ್ರ. ಇನ್ನಾರಲ್ಲೂ ಅದರ ವಿನಂತಿಯಿಲ್ಲ. ಹುಟ್ಟುವುದಕ್ಕೂ ಹೆಣ್ಣು ಹೋರಾಟ ಮಾಡಬೇಕಾದ ಅನಿವಾರ್‍ಯತೆಯ ಚಿತ್ರಣ ಕರಳು ಹಿಂಡುತ್ತದೆ. ಹೆಣ್ಣಿಗೆ ಹೆಣ್ಣೇ ಬೆಂಬಲ. ಆಕೆಯೇ ದಿಕ್ಕು ಎಂಬರ್‍ಥವೂ ಸೂಕ್ಷ್ಮವಾಗಿ ಬಿಂಬಿತವಾಗಿದೆ. ಇದೇನೂ ಸ್ತ್ರೀವಾದವಲ್ಲ. ಬದಲಿಗೆ ಸಾಮಾಜಿಕ ಬದುಕಿನ ಅನಿಷ್ಟಕ್ಕೆ ಹಾಕಿದ ಒಂದು ಪ್ರಶ್ನೆಯಷ್ಟೇ.
ಇಂದಿನ ಆಧುನಿಕ ವ್ಯವಸ್ಥೆಯಲ್ಲಿ ಸ್ತ್ರೀ ಸ್ವಾಯತ್ತವಾದ ಬಲಗೊಳ್ಳುತ್ತಿದ್ದರೂ ಆಕೆಯ ಮೇಲೆ ಹೆಚ್ಚುತ್ತಿರುವ ದೌರ್‍ಜನ್ಯಗಳಿಗೇನೂ ಕಡಿಮೆಯಿಲ್ಲ. ಅದಕ್ಕೊಂದು ಉದಾಹರಣೆ ಎಂದರೆ ಈ ಹೆಣ್ಣು ಭ್ರೂಣ ಹತ್ಯೆ. ಇಂದಿಗೂ ಭಾರತೀಯ ಸಮಾಜದ ಕಳಂಕ. ಗಂಡು ಹೆತ್ತಾಗ ಸಂಭ್ರಮಿಸುವ ಪರಿ, ಅಪುತ್ರಸ್ಯಃ ಗತಿರ್‍ನಾಸ್ತಿ ಎಂಬ ಗೊಡ್ಡು ನಂಬಿಕೆಯಿಂದ ಗಂಡು ಸಂತಾನದ ಬಯಕೆ, ಗಂಡೇ ಮುಂದೆ ತಂದೆತಾಯಿಗಳಿಗೆ ದಿಕ್ಕು, ಹೆಣ್ಣು ವಿವಾಹವಾಗಿ ಹೋಗುವವಳು, ಹೆಣ್ಣು ಎಂದರೆ ರಕ್ಷಣೆಯ ಜವಾಬ್ದಾರಿ ಹೆಚ್ಚು, ಪುರುಷ ಪ್ರಧಾನ ಮೌಲ್ಯಗಳು, ಧಾರ್‍ಮಿಕ ಪದ್ಧತಿ ಆಚರಣೆ, ಸಂಪ್ರದಾಯಗಳು ಇತ್ಯಾದಿಯಾಗಿ ಹತ್ತು ಹಲವು ಸಂಗತಿಗಳು ಹೆಣ್ಣು ಭ್ರೂಣ ಹತ್ಯೆಗೆ ಕಾರಣವಾಗಿವೆ.
ಭಾರತದಲ್ಲಿ ಲಿಂಗಾನುಪಾತದಲ್ಲಿ ಏಕರೂಪತೆ ಇಲ್ಲ. ಲಿಂಗಾನುಪಾತವು ಜನಸಮೂಹದಲ್ಲಿ ಗಂಡು ಹೆಣ್ಣುಗಳ ಸಂಖ್ಯಾ ಸಮತೋಲನದ ಸೂಚಕ. ನೂರು ಪುರುಷರಿಗೆ ಅನುಗುಣವಾಗಿ ಮಹಿಳೆಯರ ಸರಾಸರಿ ಸಂಖ್ಯೆ ೨೦೦೧ ರಲ್ಲಿ ೧೦೦೦ ಪುರುಷರ ಸಂಖ್ಯೆಗೆ ೯೩೩ ಮಹಿಳೆಯ ಸಂಖ್ಯೇ ಇತ್ತು. ಅದು ೨೦೧೧ ರ ಜನಗಣತಿಯ ಪ್ರಕಾರ ಏರಿಕೆ ಕಂಡಿದ್ದು ೧೦೦೦ ಪುರುಷ ಸಂಖ್ಯೆಗೆ ೯೪೦ ಸ್ತ್ರೀಯರಿದ್ದಾರೆ. ಆದರೆ ಮಕ್ಕಳ ಲಿಂಗಾನುಪಾತ ಮಾತ್ರ ಇದಕ್ಕೆ ತದ್ವಿರುದ್ಧವಾಗಿದೆ. ನಾಲ್ಕು ದಶಕಗಳ ಅಂಕಿ ಸಂಖ್ಯೆಗಳು ಗಾಬರಿ ಹುಟ್ಟಿಸುತ್ತವೆ. ಅಪಾರ ವ್ಯತ್ಯಾಸಗಳು ಕಂಡುಬರುತ್ತಿವೆ. ಆರುವರ್ಷದೊಳಗಿನ ಹೆಣ್ಣು ಶಿಶುಗಳ ಸಂಖ್ಯೆ ಸುಶಿಕ್ಷಿತ ಸಮಾಜ ನಾಚಿಕೆ ಪಡುವಷ್ಟು, ಗಾಬರಿ ಹುಟ್ಟಿಸುವಂತೆ ಕುಸಿತ ಕಾಣುತ್ತಿದೆ. ೧೯೮೧ರಲ್ಲಿ ೧೦೦೦ ಗಂಡುಮಕ್ಕಳಿದ್ದರೆ ೯೬೨ ಹೆಣ್ಣು ಮಕ್ಕಳಿದ್ದರು. ಅದೇ ೧೯೯೧ರಲ್ಲಿ ಇದು ೧೦೦೦:೯೪೫ ಕ್ಕೆ ಇಳಿದು, ೨೦೦೧ರಲ್ಲಿ ೧೦೦೦:೯೨೭ಕ್ಕೆ ಕುಸಿತ ಕಂಡುಬಂದಿತು. ಆದರೆ ೨೦೧೧ರ ಜನಗಣತಿಯ ಪ್ರಕಾರ ಆರು ವರ್ಷದೊಳಗಿನ ಮಕ್ಕಳ ಲಿಂಗಾನುಪಾತದ ದತ್ತಾಂಶ ೧೦೦೦ ಗಂಡು ಹುಡುಗರಿಗೆ ೯೧೪ ಇದ್ದು ಇದು ಮುಂದಿನ ಭವಿಷ್ಯದಲ್ಲಿ ಸ್ತ್ರೀ ಕುಲದ ವಿನಾಶಕ್ಕೆ ಮುನ್ನುಡಿಯಂತೆ ಕಂಡುಬರುತ್ತಿದೆ. ಅಷ್ಟೇ ಅಲ್ಲ ಬಹುಪತಿತ್ವದ ಸಾಧ್ಯತೆಗಳಿಗೆ ಕಾರಣವಾಗಲೂಬಹುದು. ಇದಕ್ಕೆಲ್ಲಾ ಕಾರಣ ಸ್ತ್ರೀ ಭ್ರೂಣ ಹತ್ಯೆ. ಬಿಹಾರ, ರಾಜಸ್ಥಾನ, ಉತ್ತರ ಪ್ರದೇಶ ಇನ್ನು ನಮ್ಮ ಕರ್ನಾಟಕದಲ್ಲೂ ಹೆಣ್ಣು ಭ್ರೂಣ ಹತ್ಯೆಯ ಪ್ರಮಾಣ ಹೆಚ್ಹಿದ್ದು ಗಂಡು ಸಂತತಿಯ ಬಯಕೆ ಮೊದಲ ಸ್ಥಾನ ಪಡೆದಿದೆ. ತಮಿಳುನಾಡಿನ ಕೆಲವು ಜಿಲ್ಲೆಗಳಲ್ಲೂ ಹೆಣ್ಣು ಶಿಶುಗಳನ್ನು ಉಸಿರುಗಟ್ಟಿಸಿ ಇಲ್ಲವೇ ವಿಷವುಣಿಸಿ ಸಾಯಿಸಿದ ಪ್ರಕರಣಗಳು ವರದಿಯಾಗಿವೆ.
ಸಾಮಾಜಿಕವಾಗಿ ವೈವಿಧ್ಯಮಯ ಸಂಸ್ಕೃತಿ ಸಾಮಾಜಿಕ ರೀತಿ ರಿವಾಜುಗಳನ್ನು ತನ್ನ ಒಡಲೊಳಗೆ ಕಟ್ಟಿಕೊಂಡ ಭಾರತ ಲಿಂಗ ವೈಷಮ್ಯ ಇಲ್ಲವೇ ಲಿಂಗ ಬೇಧ ತತ್ವಗಳ ಪರಿಪಾಲನೆಯಲ್ಲಿ ಮಾತ್ರ ಏಕಸಿದ್ಧಾಂತವನ್ನು ಒಪ್ಪಿಕೊಂಡಂತಿದೆ. ಎಲ್ಲ ಭಿನ್ನವಿಭಿನ್ನ ಜಾತಿ ಧರ್‍ಮ ಪಂಥಗಳಲ್ಲೂ ಸ್ತ್ರೀ ಪುರುಷ ಎಂಬ ತಾರತಮ್ಯ, ಪ್ರತ್ಯೇಕತೆಗಳಲ್ಲಿ ಮಾತ್ರ ಸಹಮತ ಕಾಣುತ್ತಿದೆ. ಅದರ ತಿರುಳು ಪುರುಷ ಪ್ರಧಾನತೆ. ೨೧ನೇ ಶತಮಾನದಲ್ಲೂ ಹೆಣ್ಣು ಭ್ರೂಣ ಹತ್ಯೆಯಂತಹ ಅಪರಾಧಿ ಕೃತ್ಯಗಳು ನಮ್ಮ ಸಾಮಾಜೀಕರಣ ಮತ್ತು ಸಾಂಸ್ಕೃತೀಕರಣದ ಮೇರು ವೈಭವಕ್ಕೆ ಕಪ್ಪು ಚುಕ್ಕೆಗಳಾಗಿ ಸುಶಿಕ್ಷಿತ ಸಮಾಜಕ್ಕೆ ಅಂಟಿದ ಕಳಂಕವಾಗಿದೆ. ಸ್ತ್ರೀ ಶಿಕ್ಷಣ ಸಾಕ್ಷರತೆ ಮಾತ್ರವೇ ಆಕೆಯ ಸಬಲೀಕರಣಕ್ಕೆ ಮಾರ್ಗವಾಗಬಲ್ಲದು. ಅದಕ್ಕೆ “ಬೇಟಿ ಪಡಾವೋ, ಬೇಟಿ ಬಚಾವೋ…”
*****