Home / ಕವನ / ಕವಿತೆ / ಶಕ್ತಿ ಸಂಕೇತದ ಸೂಕಿ

ಶಕ್ತಿ ಸಂಕೇತದ ಸೂಕಿ

ಎರಡು ದಶಕದ ಜೈಲುವಾಸಕ್ಕೆ ಕೊನೆಯಾಯ್ತು
ಗೃಹಬಂಧನದ ಜೈಲಿನ ಗೋಡೆಗಳಿಗೆ
ಅಪ್ಪಳಿಸಿದ ನಿನ್ನ ಪ್ರಜಾಸತ್ತೆಯ ಧ್ವನಿ
ಮ್ಯಾನ್‌ಮಾರ್‌ನ ತುಂಬ ಪ್ರತಿಧ್ವನಿಸುತ್ತಿತ್ತು.

ಅರವತ್ತೈದರ ತೆಳ್ಳನ ದೇಹದಲ್ಲಿ
ಬಿರುಗಾಳಿಗೂ ಬಗ್ಗದ ಆತ್ಮವಿಶ್ವಾಸವಿತ್ತು.
ನೀಳ ದೇಹದಲ್ಲಿ ಸಾಗರದಷ್ಟು ಸಿಟ್ಟು
ಬಂದೂಕಿನ ನಳಿಕೆಗೂ ಹೆದರದ ಕೆಚ್ಚು
ಮುಖದಲಿ ಹೊಳೆವ ಪ್ರಶಾಂತ ಕಣ್ಣುಗಳು
ಮ್ಯಾನ್‌ಮಾರ್‌ನ ಭವಿಷ್ಯದ ಕಿರಣಗಳಾಗಿದ್ದವು.

ಮಿಲಿಟರಿ ಶಾಸನದಲಿ ರೆಕ್ಕೆ ಕತ್ತರಿಸಿದ
ಹಕ್ಕಿಯ ಚಡಪಡಿಕೆ ಪಂಜರದಲ್ಲಿತ್ತು.
ಮರಣಶಯ್ಯಯಲ್ಲಿರುವ ಪತಿಯ ಮುಖ
ನೋಡಲು ಬಿಡದ ಮಿಲಿಟರಿ ದಬ್ಬಾಳಿಕೆ
ಪತಿಯ ಅಂತಿಮ ಇಚ್ಛೆ ಪೂರೈಸಲು ಅಡ್ಡಿಯಾಯ್ತು.

ದಶಕಗಳೇ ಸಂದವಲ್ಲೇ ಸೂಕಿ
ಕರುಳ ಕುಡಿ ಮೊಮ್ಮಕ್ಕಳ ಮುಖನೋಡಿ
ಜನಶಕ್ತಿ ಕೇಂದ್ರವನು ಹಿಡಿದಿಡುವ
ಹುಚ್ಚು ಹುನ್ನಾರ ಮಿಲಿಟರಿ ಸರ್‍ಕಾರಕ್ಕೆ
ಅಂತಿಮ ತೀರ್‍ಮಾನದ ದಿನ
ಜನರೇ ವಹಿಸಿಕೊಳ್ಳುತ್ತಾರೆ ಅಧಿಕಾರ.

ಗಂಡ, ಮಕ್ಕಳಿಂದ ಅಗಲಿಸಿದ
ಪತಿಯ ಅಂತಿಮ ದರ್‍ಶನಕ್ಕೂ ಬಿಡದ,
ನೋಬಲ್‌ ಶಾಂತಿ ಪುರಸ್ಕಾರ
ಪಡೆಯಲೂ ಬಿಡದ ಆ
ಮಿಲಿಟರಿ ಸರ್‍ಕಾರವ ಸೋಲಿಸಿ
ಜೈಲಿನಲ್ಲಿದ್ದೇ ಚುನಾವಣೆಯ ಗೆದ್ದೆಯಲ್ಲೇ.

ಪ್ರಜಾಸತ್ತೆಯ ಚುನಾವಣೆಯಲ್ಲಿ
ಮ್ಯಾನ್‌ಮಾರ್‌ನ ಜನತೆ ಉತ್ತರಿಸಿದ್ದಾರೆ.
ಜೈಲಿನಲ್ಲಿದ್ದ ಸೂಕಿಗೆ ಗೆಲಿಸಿದ್ದಾರೆ.
ಮಿಲಿಟರಿ ಮಾಡಿದ ಅನ್ಯಾಯಕೆ
ಪ್ರತ್ಯುತ್ತರ ನೀಡಿ, ಎಚ್ಚರಿಸಿದ್ದಾರೆ.

ನಿನ್ನ ದೃಢ ನಿಲುವಿನ ಮುಂದೆ
ಮಂಡೆಯೂರಿನ ಮಿಲಿಟರಿ
ಬಂಧನದ ಬೇಡಿ ಕಳಚಿದಾಗ
ವಿಶ್ವದ ತುಂಬ ಸಂತೋಷದ ಲಹರಿ,
ಹಬ್ಬದ ಸಂಭ್ರಮ, ಸಿಡಿಲ ಮರಿಗೆ
ಹೃದಯ ತುಂಬಿದ ಸ್ವಾಗತ.

ಕಳಚಿ ಬಿದ್ದಿತು ಸರಳುಗಳ ಸರಪಳಿ
ಸೆರೆಮನೆಯ ಗೋಡೆಗಳು ಅದುರಿದವು
ಚೆಲ್ಲಾಪಿಲ್ಲಿಯಾದವು ಜನಶಕ್ತಿಯ ಮುಂದೆ
ಅಮೂಲ್ಯ ಬದುಕಿನ ಆ ಇಪ್ಪತ್ತು
ವರ್‍ಷಗಳ ಅಜ್ಞಾತವಾಸಕೆ,
ಮಕ್ಕಳಿಂದ, ಪತಿಯಿಂದ ಅಗಲಿಸಿದವರಿಗೆ
ಅವಳ ನಿಟ್ಟುಸಿರಿನ ಶಾಪ ತಟ್ಟದಿದ್ದೀತೆ?

ಜನರು ಮೈದಡವಿ ಮಾನವೀಯತೆಯ
ಬಿಗಿದಪ್ಪಿದರು ಭರವಸೆಯ ಬೆಳಕನು
ಇದು ಜನತೆಯ ಗೆಲುವು ನೋಡು
ಪ್ರಜಾಸತ್ತೆಯ ಉಳಿವು ಸತ್ಯವಾಯ್ತು,
ಸ್ವಾತಂತ್ರ ಹಕ್ಕಿಗೆ ಮುಕ್ತಿ ದೊರಕಿತು.

ಸೌಮ್ಯವಾದ ಶಾಂತ ಮುಖದಲ್ಲಿ
ಕಬ್ಬಿಣದಷ್ಟು ಕಠೋರ ನಿರ್‍ಧಾರ
ಒಡಲಾಳದಲ್ಲಿ ಅಸಹನೆಯ ಹೊಗೆ
ತುಟಿಯ ಮೇಲೆ ಮಾಸದ ಹೂನಗೆ
ಗುಬ್ಬಚ್ಚಿಯ ದೇಹದಲ್ಲಿ ಪರ್‍ವತದ ಆತ್ಮವಿಶ್ವಾಸ,
ಗುರಿ ಸಾಧಿಸುವವರೆಗೂ ನಿಲ್ಲದ ನಡಿಗೆ.

ಜಾಗತಿಕ ನೈತಿಕ ಕೊಂಡಿಗಳು
ಒಂದೊಂದೇ ಕಳಚಿ ಬೀಳುವ ಹೊತ್ತು
ಲೇಕ್‌ಸೈಡ್ ಮನೆಯಿಂದ ಹೊರಬಂದ
ಮೃದು ಮಾತಿನ ಒಡತಿ ಶಕ್ತಿ ಸಂಕೇತವಾಗಿ
ಭತ್ತದ ಉತ್ಸಾಹದ ಚಿಲುಮೆಯಾಗಿ
ಭರವಸೆಯ ಬೆಳಕಿನ ಚಿಗುರೆ ಕಂಗಳ
ಒಡತಿಗೆ ಕೊನೆಗೂ ದಕ್ಕಿತು ಮುಕ್ತಿ
*****
(ಸೂಕಿ ಗೃಹಬಂಧನದಿಂದ ಬಿಡುಗಡೆಯಾದ ದಿನ ಬರೆದ ಕವಿತೆ)

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...