ಜಾತಿ ಬಗ್ಗೆ ಅನಂತಮೂರ್‍ತಿ

ಜಾತಿ ಬಗ್ಗೆ ಅನಂತಮೂರ್‍ತಿ

ಅನಂತಮೂರ್‍ತಿ ತಮ್ಮ ಕೃತಿಗಳಲ್ಲಿ ಜಾತಿಯ ಸ್ವರೂಪವನ್ನು ಆಧುನಿಕವಾಗಿ ನೋಡುವ ದೃಷ್ಟಿಕೋನವನ್ನು ಬೆಳೆಸಿಕೊಂಡೇ ಬಂದಿದ್ದಾರೆ. ‘ಸಂಸ್ಕಾರ’ದಲ್ಲಿ ಬ್ರಾಹ್ಮಣ್ಯದ ಪ್ರಶ್ನೆ ರಿಲಿಜಿಯಸ್ ಆದ ಚೌಕಟ್ಟಿನಲ್ಲಿ ವ್ಯಕ್ತವಾಯಿತು. ಅದರ ಅಸ್ತಿತ್ವವಾದಿ ನಿಲುವುಗಳ ಜೊತೆಯಲ್ಲೇ ಆಧುನಿಕ ಸಮಾಜವನ್ನು ಪ್ರತಿನಿಧಿಸುವ ನಾರಾಣಪ್ಪ ಸೈತಾನ ಪ್ರವೃತ್ತಿಗೆ ಸಂಪ್ರದಾಯವು ಹೇಗೆ ಎದುರಿಸಬಹುದು ಎನ್ನುವುದನ್ನು ಕಾದಂಬರಿ ಹೇಳಿತು. ಬ್ರಾಹ್ಮಣ ಸಮಾಜದ ಎದುರಿಗೆ ಜೀವಂತಿಕೆಯಿಂದ ಇರುವ ಶೂದ್ರ ಪಾತ್ರಗಳು ಅವರ ಬ್ರಾಹ್ಮಣ ಶೂದ್ರ ಪರಿಕಲ್ಪನೆಯ ಇನ್ನೊಂದು ಅಭಿವ್ಯಕ್ತಿಯೇ ಆಗಿವೆ. ಸಮಕಾಲೀನ ಚಿಂತಕರಾದ ಅನಂತಮೂರ್‍ತಿ ನಿರಂತರವಾಗಿ ಜಾತಿಯ ಬಗ್ಗೆ ಜಿಜ್ಞಾಸೆ ಮಾಡುತ್ತಲೇ ಬಂದಿದ್ದಾರೆ. ಆಧುನಿಕ ಸಮಾಜ, ಸಂದರ್‍ಭಗಳಲ್ಲಿ ಬ್ರಾಹ್ಮಣ-ಶೂದ್ರನ ವಿನ್ಯಾಸಗಳೇನು ಎಂಬುದನ್ನು ಆತ್ಮನಿರೀಕ್ಷಣೆಯ ಧಾಟಿಯಲ್ಲಿ ಮಾಡಿಕೊಂಡು ಬಂದಿದ್ದಾರೆ. ಲೋಹಿಯಾ ಚಿಂತನೆಗಳಲ್ಲಿ ಮುನ್ನೆಲೆಗೆ ಬರುವ ಜಾತಿ ಸಂಗತಿಯು ಸಾಮಾಜಿಕ ಸಂದರ್‍ಭದಲ್ಲಿ ನಿರ್‍ಣಾಯಕವಾದುದು. ಮೇಲ್ಜಾತಿಯಲ್ಲಿ ಹುಟ್ಟಿದ ಅನಂತಮೂರ್‍ತಿಯವರು ಬ್ರಾಹ್ಮಣ ಶೂದ್ರ ವಿನ್ಯಾಸವನ್ನು ತಮ್ಮ ವ್ಯಕ್ತಿಗತ ನೆಲೆಯಲ್ಲಿ ಬಿಡಿಸಿಕೊಳ್ಳಲು ಬಯಸುತ್ತಾರೆ. ಇದರಿಂದ ಅವರ ಚಿಂತನಾ ಕ್ರಮದಲ್ಲಿ ವ್ಯಷ್ಟಿ ಮತ್ತು ಸಮಷ್ಟಿಗಳು ನಿರಂತರವಾಗಿ ಪಲ್ಲಟಗೊಳ್ಳುತ್ತಾ ವಿಶ್ಲೇಷಣೆಗೆ ಅನುವು ಮಾಡಿಕೊಡುತ್ತಿರುತ್ತವೆ.

ವಸಾಹತುಶಾಹಿ ಓದುಗಳಲ್ಲಿ ಜಾತಿ ಎನ್ನುವುದು ತುಂಬಾ ಕಚ್ಚುಕಚ್ಚಾಗಿ ಅನುವಾದಿಸಿಕೊಂಡ ಪದ. ಅದು ವರ್‍ಣವೋ ವರ್‍ಗವೋ ತಿಳಿಯದ ಅನುವಾದಕಾರರ ತಾಕಲಾಟದ ಸಂಕೇತವೂ ಹೌದು. ಜಾತಿಯು ಯುರೋಪಿಯನ್ನರಿಗೆ ಕ್ರೈಸ್ತಮತದ ಮೂಲಕವೇ ಅರ್‍ಥವಾಗಬೇಕಿತ್ತು. ಅವರು ಹಾಗಾಗಿ ಅದನ್ನು ಕ್ರೈಸ್ತಧರ್‍ಮದ ಮೂಲಾಧಾರಗಳ ಮೇಲೆ ವಿವರಿಸಿಕೊಂಡರು ಎನ್ನಲಾಗಿದೆ. ವರ್‍ಣಾಶ್ರಮ ಧರ್‍ಮವನ್ನು ಕುಶಲಕರ್‍ಮಿಗಳ ಮಾದರಿಗೆ ಸಮನಾಗಿ ಓದಿದ ಕಾರಣ ಆಧುನಿಕಪೂರ್‍ವದ ವರ್‍ಣಾಶ್ರಮ ಧರ್‍ಮವು ಆಧುನಿಕ ಕಾಲದಲ್ಲೂ ಗೊಂದಲದೊಂದಿಗೆ ಬಳಸಲ್ಪಟ್ಟಿತು ಎಂದು ಸಮಾಜಶಾಸ್ತ್ರಜ್ಞರು ಅಭಿಪ್ರಾಯ ಪಡುತ್ತಾರೆ. ರಾಷ್ಟ್ರ ಪರಿಕಲ್ಪನೆಯ ಕಾಲದಲ್ಲಿ ಬ್ರಾಹ್ಮಣ ಶೂದ್ರ ಎನ್ನುವುದು ವರ್‍ಣಾಶ್ರಮದ ಪದಗಳಾಗಿ ಉಳಿಯುತ್ತವೆ ಎಂಬುದುದ ಅನುಮಾನ. ಆಧುನಿಕ ರಾಷ್ಟ್ರನಿರ್‍ಮಾಣದ ಸಂದರ್‍ಭದಲ್ಲಿ ಅವುಗಳ ವಿನ್ಯಾಸ ಹಳೆಯದರಂತೆ ಇರಬೇಕಿಲ್ಲ. ಅವುಗಳ ಸ್ವರೂಪ ಆಧುನಿಕ ಸಮಾಜದ ಆಶೋತ್ತರಗಳಿಗೆ ತಕ್ಕಂತೆ ಬದಲಾಗಿರುತ್ತವೆ. ಹೊಸ ಸಮಾಜದ ಆಶೋತ್ತರಗಳನ್ನು ಬಹುಬೇಗ ಗ್ರಹಿಸಿದ್ದು ಮೇಲ್ಜಾತಿಯವರು. ಅದೇ ವೇಗದಲ್ಲಿ ಕೆಳಜಾತಿ ಜನರು ಏಕೆ ತೆರೆದುಕೊಳ್ಳಲಿಲ್ಲ ಎಂಬುದು ಸಂದಿಗ್ಧವಾಗಿದೆ. ಶ್ರೀನಿವಾಸರು ಹೇಳುವ ಸಂಸ್ಕೃತೀಕರಣದ ಪ್ರಕ್ರಿಯೆ ಏಕೆ ಒಂದನ್ನು ಅನುಸರಿಸಿಯೇ ಇನ್ನೊಂದು ಪ್ರಗತಿಯ ಮಾದರಿಗಳನ್ನು ಕಂಡುಕೊಳ್ಳಬೇಕಾಯಿತು? ಈ ಪ್ರಕ್ರಿಯೆಯನ್ನು ವಿವರಿಸುವುದು ಕಷ್ಟ.

ಸ್ವತಃ ಬ್ರಾಹ್ಮಣನೆಂಬ ಜಾತಿ ಅಸ್ಮಿತೆಯನ್ನು ಸಾರ್‍ವಜನಿಕವಾಗಿ ಹೇಳಿಕೊಳ್ಳಬೇಕಾಗಿ ಬಂದ ಮುಜುಗರದ ಪರಿಸ್ಥಿತಿಯನ್ನು ಅನಂತಮೂರ್‍ತಿ ತಮ್ಮ ಬರಹಗಳಲ್ಲಿ, ಭಾಷಣಗಳಲ್ಲಿ ವಿವರಿಸುತ್ತಲೇ ಬಂದಿದ್ದಾರೆ. ಬ್ರಾಹ್ಮಣತ್ವದ ಹಿರಿಮೆಯನ್ನು ಮಾತ್ರ ಕಾಣುವ ಸಮಾಜಕ್ಕೆ ಬ್ರಾಹ್ಮಣನಾಗಿರುವ ಅಸ್ಪೃಶ್ಯತೆಯನ್ನು ವಿವರಿಸುತ್ತಾರೆ. ಒಂದು ಕಾಲದಲ್ಲಿ ಸಮಾಜದ ಮೇಲು ಸ್ಥಾನದಲ್ಲಿದ್ದ ಬ್ರಾಹ್ಮಣ ಅನೇಕ ಮೆಟ್ಟಿಲುಗಳಲ್ಲಿ ಇಳಿದಿದ್ದಾನೆ. ಅವನ ಸ್ಥಾನದಲ್ಲಿ ಇಂದು ಆರ್‍ಥಿಕವಾಗಿ ಸದೃಢವಾಗಿರುವವರು ಕೂತಿದ್ದಾರೆ. (ಅನಂತಮೂರ್‍ತಿಯವರ ಪ್ರಕಾರ ಇಂದು ಬ್ರಾಹ್ಮಣ ಅಥವಾ ಶೂದ್ರ ಇಬ್ಬರಿಗಿಂತ ವೈಶ್ಯ ಅತ್ಯುನ್ನತ ಸ್ಥಾನದಲ್ಲಿದ್ದಾನೆ). ಆದರೆ ಸಮಾಜದಲ್ಲಿ ಮೇಲ್ವಾತಿಯವರಿಗೆ ಜನ್ಮದತ್ತವಾಗಿ ಸ್ವಯಂತೃಪ್ತಿ ಮತ್ತು ಅಹಮಿಕೆಯನ್ನು ಸಮಾಜವೇ ಹುಟ್ಟುಹಾಕುತ್ತದೆ. ಬ್ರಾಹ್ಮಣನೂ ಸೇರಿದಂತೆ ಮೇಲ್ಜಾತಿಯವರು ತಮ್ಮ ಕಷಾಯಗಳನ್ನು ಕಳೆದುಕೊಳ್ಳುವುದು ಹೇಗೆ? ಅಹಮಿಕೆಯನ್ನು ಪಶ್ಚಾತ್ತಾಪದಿಂದ ನೋಡಿಕೊಳ್ಳುವ ಗಾಂಧಿ ಮಾದರಿಯು ಅನಂತಮೂರ್‍ತಿಯವರ ಆಯ್ಕೆಯಾಗಿದೆ. ಗಾಂಧಿಯದು ಸ್ವಯಂ ಮೌಲ್ಯಮಾಪನದ ಹಾದಿ. ಆತ್ಮನಿರೀಕ್ಷಣೆಯಲ್ಲಿ ಬಸವಣ್ಣನ ಕುಲದವರಾದ ಗಾಂಧಿ ಆಧುನಿಕ ಸಂದರ್‍ಭದಲ್ಲಿ ಜಾತಿಯನ್ನು ಮೀರುವುದು ತಮ್ಮ ಶುದ್ಧ ಧಾರ್‍ಮಿಕತೆಯ ಸಹಾಯದಿಂದ. ಅನಂತಮೂರ್‍ತಿ ತುಂಬ ಇಷ್ಟಪಟ್ಟು ಆಯ್ಕೆ ಮಾಡಿಕೊಂಡ ವ್ಯಕ್ತಿಗತ ಮತ್ತು ಸೈದ್ಧಾಂತಿಕ ಆಯ್ಕೆಗಳಲ್ಲಿ ಗಾಂಧಿ ಒಬ್ಬರು. ಅಸ್ಪಶ್ಯತೆ ಎನ್ನುವುದು ಶೂದ್ರತ್ವದ ಅನುಭವವಾದರೆ ಅದನ್ನು ಗಾಂಧಿ ದಕ್ಷಿಣ ಆಫ್ರಿಕಾದಲ್ಲಿ ರೈಲಿನಿಂದ ಹೊರತಳ್ಳಿಸಿಕೊಂಡಾಗಲೇ ಪಡೆದುಕೊಂಡಿದ್ದರು ಎನ್ನುತ್ತಾರೆ ಅನಂತಮೂರ್‍ತಿ. ಹೀಗೆ ಸಾರ್‍ವಜನಿಕವಾಗಿ ಬೇರೊಂದು ಕಡೆಯಿಂದ ಶೂರತ್ವದ ಅನುಭವಗಳು ಚುಚ್ಚಿದಾಗ ಒಬ್ಬ ಮೇಲ್ಪಾತಿಯವನು ಕೆಳಜಾತಿ/ವರ್‍ಗದವರ ನೋವನ್ನು ಅರಿಯುತ್ತಾನೆ. ಅನಂತಮೂರ್‍ತಿಯವರ ಈ ವಾದ ಆಕರ್‍ಷಕವಾಗಿದೆ, ನಿಜ. ಅಸ್ಪೃಶ್ಯತೆ ಮತ್ತು ವರ್‍ಣಭೇದಗಳಿಗೆ ಸಮಾನ ಸ್ಥಾನವನ್ನು ಕಲ್ಪಿಸಿ ನೋಡುವ ದೃಷ್ಟಿಯೊಂದು ಇದ್ದೇ ಇದೆ. ಗಾಂಧಿಯನ್ನು ಮೊದಲ ಅಸ್ಪೃಶ್ಯ ಎಂದು ಕರೆಯುವ ಅನಂತಮೂರ್‍ತಿ ಆ ಮೂಲಕ ಮೇಲ್ವಾತೀಯ ಪೂರ್‍ವಾಗ್ರಹಗಳನ್ನು ಇನ್ನೊಂದು ಸಂದರ್‍ಭದಲ್ಲಿಟ್ಟು ನೋಡುತ್ತಿದ್ದಾರೆ. ಕೆ.ಜಿ.ನಾಗರಾಜಪ್ಪ ತಮ್ಮ ಲೇಖನದಲ್ಲಿ ಅನಂತಮೂರ್‍ತಿ ಮತ್ತು ಮೊಕಾಶಿಯವರು ಬ್ರಾಹ್ಮಣತ್ವವನ್ನು ಬೇರೊಂದು ರೀತಿಯಲ್ಲಿ ವಿಶ್ಲೇಷಿಸುವುದನ್ನು ಅವಲೋಕಿಸುತ್ತಾ ‘ಇಲ್ಲಿ ಹುಟ್ಟಿಗಿಂತ ಅವಮಾನ ಮತ್ತು ಮುಟ್ಟು ಚಟ್ಟುಗಳ ಆಚರಣೆಯೇ ಅಸ್ಪೃಶ್ಯತೆಯ ನಿರ್‍ಣಾಯಕ ಅಂಶಗಳು’ ಎನ್ನುವ ಕಡೆ ಗಮನ ಸೆಳೆಯುತ್ತಾರೆ (ಕೆ.ಜಿ.ನಾಗರಾಜಪ್ಪ, ದಲಿತ ಮಾರ್‍ಗ ಪು. ೧೬೦) ಜಾತಿಯ ಮೂಲಕ ಲೌಕಿಕವನ್ನಾಗಲೀ ಪಾರಮಾರ್‍ಥಿಕತೆಯನ್ನಾಗಲೀ ಪಡೆಯದ ಮೇಲ್ವಾತಿಯ ಅಸ್ಪುರ್‍ಶ್ಯತೆಯನ್ನು ದಲಿತನ ಸಂವಾದಿಯೆಂಬಂತೆ ಮುಂದಿಡುವ ವಾದವನ್ನು ನಾಗರಾಜಪ್ಪ ಒಪ್ಪುವುದಿಲ್ಲ. ‘ಬ್ರಾಹ್ಮಣ ಅಥವಾ ಗಾಂಧಿ ನಿಂದೆ ದೇಶದ ಪ್ರತೀಕವಾಗುತ್ತದೆ ಮತ್ತು ಸಾಮೂಹಿಕವಾಗುತ್ತದೆ. ಅಂಬೇಡ್ಕರರಿಗೆ ದೇಸೀಯರಿಂದ ಆದ ನಿಂದೆ ಸ್ಥಳೀಯವಾಗುತ್ತದೆ ಮತ್ತು ವ್ಯಕ್ತಿಗತವಾಗುತ್ತದೆ. ಮೇಲುವರ್‍ಗದವರಿಗೆ ವರ್‍ಣಾಶ್ರಮ ಬೆಂಬಲಿಸಿದ ಗಾಂಧಿ ಪ್ರಸ್ತುತ. ವರ್‍ಣಧರ್‍ಮವಿರೋಧಿಸಿದ ಅಂಬೇಡ್ಕರ್ ಅಪ್ರಸ್ತುತ. ಮೇಲುವರ್‍ಗ ಸದಾ ರಾಷ್ಟ್ರೀಯತೆ ಮತ್ತು ಅಂತಾರಾಷ್ಟ್ರೀಯತೆಯ ಮಾತನಾಡುತ್ತ ಅದನ್ನು ಪ್ರಾಂತೀಯ ಮತ್ತು ಸ್ಥಳೀಯರಿಗೆ ಮಾಡುತ್ತಿರುವ ಮೋಸವನ್ನು ಮುಚ್ಚಿಕೊಳ್ಳದೆ ಸಾಧನವನ್ನಾಗಿ ಬಳಸುತ್ತದೆ (ಅದೇ, ಪು.೧೬೪). ನಾಗರಾಜಪ್ಪ ಅವರ ಈ ಮಾತು ಅನಂತಮೂರ್‍ತಿಯವರನ್ನು ಉದ್ದೇಶಿಸಿದಂತೆ ಆಡಿದ ಮಾತು. ಅವರ ಆಕ್ಷೇಪ ಅನಂತಮೂರ್‍ತಿಯವರ ವಿಷಯದಲ್ಲಿ ಇನ್ನೂ ಬಗೆ ಹರಿದಿಲ್ಲ. ಅನಂತಮೂರ್‍ತಿಯವರ ದಲಿತ ಪರ ಧ್ವನಿಯನ್ನು ಸಾರಾಸಗಟಾಗಿ ಒಪ್ಪಲು ಸಾಧ್ಯವಿಲ್ಲ ಎಂದೇ ನಾಗರಾಜಪ್ಪ ಅವರ ಅಭಿಪ್ರಾಯ.

ಅನಂತಮೂರ್‍ತಿ ತಮ್ಮ ಬಹುಪಾಲಿನ ಚರ್‍ಚೆಯಲ್ಲಿ ಗಾಂಧಿ ಮತ್ತು ಅಂಬೇಡ್ಕರ್ ನಿಲುವುಗಳ ತೌಲನಿಕ ಅಂಶಗಳು ಸುಳಿದು ಹೋಗುತ್ತವೆ. ಗಾಂಧಿ ತನ್ನ ಉಡುಪುಗಳನ್ನು ಕಳಚಿ, ಬೆತ್ತಲಾಗುವ ಪರಿ ಹಾಗೂ ಅಂಬೇಡ್ಕರ್ ಸೂಟುಬೂಟಿನಲ್ಲಿ ಕಾಣಿಸಿಕೊಳ್ಳುವ ರೀತಿಗೂ ದೃಷ್ಟಿಕೋನಗಳ ವ್ಯತಾಸಗಳಿರುವುದನ್ನು ಅವರು ಗುರುತಿಸುತ್ತಾರೆ. ಇದಕ್ಕೆ ಬದಲಾಗಿ ಅಂಬೇಡ್ಕರ್ ಅವರು ಬೌದ್ಧಧರ್ಮವನ್ನು ಸ್ವೀಕಾರ ಮಾಡಿದ ಸಂದರ್‍ಭದಲ್ಲಿ ತೆಗೆದ ಫೋಟೊ ಅವರ ಇನ್ನೊಂದು ಅಸ್ತಿತ್ವವನ್ನು ಹೇಳುತ್ತಿದೆ, ದಲಿತರಿಗೆ ಏಕೆ ಅಂಬೇಡ್ಕರ್ ಈ ರೂಪದಲ್ಲಿ ಬೇಡ? ಅವರೇಕೆ ಇದನ್ನು ಆರಾಧಿಸುವುದಿಲ್ಲ ಎಂಬ ಪ್ರಶ್ನೆಯನ್ನೂ ಓದುಗರ ಮುಂದಿಡುತ್ತಾರೆ.

ಗಾಂಧಿಯವರ ಕಳಚಿಕೊಳ್ಳುವಿಕೆ ಮತ್ತು ಅಂಬೇಡ್ಕರ್ ಕಳಚಿಕೊಳ್ಳುವಿಕೆ ಎರಡೂ ಭಿನ್ನ ಪ್ರಕ್ರಿಯೆಗಳು. ಮೇಲ್ಜಾತಿಯವರು ಕಳೆದುಕೊಳ್ಳಲಿಚ್ಛಿಸುವ ಅಹಮಿಕೆಯನ್ನು ದಲಿತರು ಪಡೆದುಕೊಳ್ಳಲು ಆಶಿಸುತ್ತಿರುತ್ತಾರೆ. ಗಾಂಧಿ ಮಾದರಿಯ ಅಹಂಕಾರ ನಿರಸನವು ದಲಿತ ಸಂದರ್‍ಭದಲ್ಲಿ ಅಷ್ಟೇನೂ ಪ್ರಯೋಜನಕಾರಿಯಾದುದಲ್ಲ. ಸಾಮಾಜಿಕವಾದ ಅಸ್ಮಿತೆಯ ಶೋಧದಲ್ಲಿರುವ ದಲಿತರಿಗೆ ಲೌಕಿಕವಾದ ಪ್ರಯೋಜನಗಳು ಅವರನ್ನು ಸಾಮಾಜಿಕವಾಗಿ ಏರಿಸಬಲ್ಲವು. ಈ ಪ್ರಕ್ರಿಯೆಯು ಭಾರ ಹೊರುವ ‘ಕಾಲು’ಗಳ ಹೊಣೆಗಾರಿಕೆಯಿಂದ ಮುಕ್ತನಾಗುವುದಕ್ಕೆ ಒತ್ತು ಕೊಟ್ಟು ತನ್ನ ಸ್ವಂತ ಕಾಲುಗಳ ಮೇಲೆ ಓಡಾಡಲು ಅವಕಾಶ ನೀಡುತ್ತದೆ.

ವಸಾಹತುಶಾಹಿಯೊಂದಿಗೆ ಬಂದ ಆಧುನಿಕತೆಯು ದಲಿತ ಸಂಕಥನವನ್ನು ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಹೊಸ ಜಿಜ್ಞಾಸೆಗೆ ಈಡು ಮಾಡಿತು. ಶಿಕ್ಷಣದ ಹಂಬಲ ಮತ್ತು ಸ್ವಾವಲಂಬಿ ಚಿಂತನೆಗಳನ್ನು ಹೊತ್ತು ತಂದ ಇಂಗ್ಲಿಷ್ ಶಿಕ್ಷಣವು ದಲಿತರಲ್ಲಿ ಸಮಾನತೆಯ ಹೊಸ ಆಶಾಕಿರಣವನ್ನು ಹುಟ್ಟಿಸುತ್ತಾ ಬಂದಿದೆ. ಚಂದ್ರಭಾನ್ ಸಿಂಗ್ ಮುಂತಾದ ದಲಿತ ಚಿಂತಕರು ಇಂದು ಬಂಡವಾಳಶಾಹಿ ಪದ್ಧತಿಯನ್ನು ದಲಿತರ ಪರವಾಗಿ ನೋಡುತ್ತಾ ಪರ್‍ಯಾಯವಾದಕ್ಕೆ ಒತ್ತು ನೀಡುತ್ತಿರುವ ಹೊತ್ತಲ್ಲೆ ಅನಂತಮೂರ್‍ತಿ ತರದ ಚಿಂತಕರು ಜಾಗತೀಕರಣದ ಬಂಡವಾಳಶಾಹಿತನದ ದುಷ್ಪರಿಣಾಮಗಳು ಆತ್ಮಘಾತುಕ ಎಂಬ ಅಭಿಪ್ರಾಯಕ್ಕೆ ಬರುವುದು ಪರಸ್ಪರ ವಿರೋಧಿಯಾದ ಚಿಂತನೆಗಳನ್ನು ಸೂಕ್ಷ್ಮವಾಗಿ ಗಮನಿಸುವಂತೆ ಮಾಡಿದೆ.

ಆಧುನಿಕ ಸಂಕಥನದಲ್ಲಿ ದಲಿತ ವಿಮರ್‍ಶೆ ಬಂಡವಾಳಶಾಹಿ, ಇಂಗ್ಲಿಷ್‌ ಪರ, ಹಳೆಯ ಅಸ್ಮಿತೆಗಳ ನಿರಾಕರಣೆಯ ಜಾಡಿನಲ್ಲಿ ಸಾಗುತ್ತಿರುವ ಸಂದರ್‍ಭದಲ್ಲೇ ಶೂದ್ರತ್ವದ ನೆಲೆ ಕನ್ನಡಕ್ಕೆ, ಸಂಸ್ಕೃತಿಗೆ ಅಗತ್ಯವಾಗಿಬೇಕು ಎನ್ನುವ ಅನಂತಮೂರ್‍ತಿಯವರ ವಾದ ಸಹಜವಾಗಿ ದಲಿತ ವಿಮರ್‍ಶೆಯ ನೆಲೆಗಳಿಗೆ ಮುಖಾಮುಖಿಯಾಗುತ್ತದೆ. ಗಾಂಧಿಯನ್ನು ನೆನೆಯುವ ಅನಂತಮೂರ್‍ತಿ ಗಾಂಧಿ ‘ತಾನು ಈ ಜನ್ಮದಲ್ಲಿ ಅಸ್ಪೃಶ್ಯನಾಗಲು ಸಾಧ್ಯವಿಲ್ಲ. ಆಗಬೇಕೆಂದಿದ್ದರೆ ಮತ್ತೆ ಹುಟ್ಟಿ ಬರಬೇಕು’ ಎಂದು ಹೇಳುವ ಆತ್ಮದ ಎಚ್ಚರದ ಮಾತನ್ನು ಅನಂತಮೂರ್‍ತಿ ಮರೆಯುವುದಿಲ್ಲ. ದಲಿತರನ್ನು ಶೋಷಿಸುವ ಮೇಲ್ವಾತಿ/ವರ್‍ಗಗಳ ಹುನ್ನಾರವನ್ನು ಸಂಪೂರ್‍ಣ ಒಪ್ಪದೇ ಹಿಂದುತ್ವವನ್ನು ಮತ್ತೆ ಪರಿಶೀಲಿಸಿಕೊಳ್ಳಲು ಸಾಧ್ಯವಿರುವುದೇ ಎಂಬ ಗಾಂಧಿಯ ಶೋಧನೆಯ ದಾರಿಯನ್ನು ಅನಂತಮೂರ್‍ತಿ ದಲಿತ ವಿಮರ್‍ಶೆಯ ಸಂದರ್‍ಭದಲ್ಲಿ ಒಪ್ಪುತ್ತಾರೆ. ರಿಲಿಜಿಯಸ್ ಎನ್ನಿಸುವ ಬದುಕಿನ ಮಾರ್‍ಗ ಆಧುನಿಕ ವಿದ್ಯಾವಂತ ಸಂತತಿಗೆ ಒಂದರ್‍ಥದಲ್ಲಿ ಮುಜುಗರದ ಸಂಗತಿ. ಅವರ ವೈಚಾರಿಕತೆ ಅವರನ್ನು ಶ್ರದ್ಧಾಳುಗಳನ್ನಾಗಿ ಮಾಡಲಾರದು. ಅದರ ತೊಡಕಿನೊಂದಿಗೇ ಜಾತಿಯನ್ನು ತೊಡೆಯುವ ತಾರ್ಕಿಕ ಮಾರ್‍ಗಗಳು ವೈಚಾರಿಕವಾಗಿ ಶಮನಗೊಳಿಸಲಾರವು ಎಂಬ ನಂಬಿಕೆಯನ್ನೂ ಹೊಂದಿರುವ ಸಂದಿಗ್ಧದಲ್ಲಿ ಆಧುನಿಕ ಭಾರತೀಯ ನಿಲ್ಲುತ್ತಾನೆ. ಅನಂತಮೂರ್‍ತಿಯವರಾದರೋ ತಮ್ಮನ್ನು ತಾವು ಪರೀಕ್ಷಿಸಿಕೊಳ್ಳುವುದಕ್ಕೆ ಹಿಂಜರಿಯದವರು. ಮತ್ತು ಈ ಸಾರ್‍ವಜನಿಕ ಆತ್ಮಸಾಕ್ಷಿಯನ್ನು ರೂಪಿಸಿಕೊಳ್ಳುವುದು ಸಾಮಾಜಿಕ ಸ್ವಾಸ್ಥ್ಯಕ್ಕೆ ಅಗತ್ಯವಾಗಿ ಬೇಕಾದ ಅಗತ್ಯ ಅಂಶ ಎಂಬುದನ್ನು ಎಂದೂ ಮರೆಯದವರು. ಶೂದ್ರತ್ವವನ್ನು ಪಡೆದುಕೊಳ್ಳುವ ಸಾಧ್ಯತೆಯ ಮೂಲಕವೇ ಭಾರತೀಯ ಸಂಸ್ಕೃತಿ ಪುನಶ್ವೇತನಗೊಳ್ಳುತ್ತದೆ ಎಂಬುದು ಕಡೆಗೂ ಅವರ ಬಲವಾದ ನಂಬಿಕೆಯಾಗಿಯೇ ಉಳಿದಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಂ ಮುನಿಯಂದು ಜರ್‍ಬು
Next post ಆರತಿ

ಸಣ್ಣ ಕತೆ

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…