ಮಜ್ಜಿಗೆ ಹಳ್ಳಿಯಲ್ಲಿಅಶ್ವತ್ಥ ಕಟ್ಟೆಯ ಆಚೆಯ ಮನೆಯೇ ಮಲ್ಲಣ ನದು. ಅವನು ಏಕನಾದ ಹಿಡಿದು ಊರೂರು ಅಲೆಯುತ್ತದ್ದ ವನು. ಒಂದು ಸಲ ಆವೂರಿಗೂ ಬಂದ. ಆಗ ಪಟೇಲ್ ಹಿರಿಯನಾಯ ಕರು ಬದುಕಿದ್ದರು. ಅವನ ತಂದಾನಾ ಪದಗಳಿಗೆ ಮನಸೋತು “ಇಲ್ಲೆ ಇದ್ದುಬಿಡೋ ಮಗ” ಎಂದರು. ಮಲ್ಲಣ್ಣ “ಅಪ್ಬಣೆ” ಎಂದ. ಗೌಡರು ಊರಬೇಲಿ ಮಗ್ಗುಲಲ್ಲಿ ತಮ್ಮ ಹುಲ್ಲುಮೆದೆ ಇದ್ದ ಹಿತ್ತಲು ಅವನಿಗೆ ಕೊಟ್ಟರು. “ಆದವರು ಆ ಬಡಪಾಯಿಗೆ ಅಷ್ಟು ಸಾಯಾ ಮಾಡಿರಯ್ಯ” ಎಂದರು. ಎರಡು ಮೂರು ದಿನದಲ್ಲಿ ಒಂದು ಆರು ಅಂಕಣದ ಮನೆ ಯಾಯಿತು. ಮಲ್ಲಣ್ಣ ಹೋಗಿ ಹೆಂಡತೀನ ಕರೆದುಕೊಂಡು ಬಂದು ಅಲ್ಲಿ ಸಂಸಾರ ಹೂಡಿದ.
ಮಲ್ಲಣ್ಣನ ಹೆಂಡತಿ ಕೆಂಪಿ. ಹೆಸರು ಕೆಂಪಿಯಾದರೂ ಬಣ್ಣದಲ್ಲಿ ಮಾತ್ರ ಕಾಳಿ ನೋಡಿದೋರೆಲ “ಇವಳನ್ನ ಕಾಳಿ ಅಂತ ಕರಿಯೋದು ಬಿಟ್ಟು ಕೆಂಪಿ ಅಂತ ಯಾಕೆ ಕರೆದರೋ’ ಎಂದುಕೊಳ್ಳುವರು. ಆದರೂ ಕೆಂಪಿ ಒಳ್ಳೆ ಮೋಪಾದ ಹೆಂಗಸು. ಕಾವೇರೀ ತೀರದ ಹೆಣ್ಣುಗಳನ್ನು ನೋಡಿದ್ದವರಿಗೇ ಆ ಮೋಪು ಅನ್ನುವುದರ ಅರ್ಥವಾಗುವುದು. ಎದೆ ಅಗಲ. ಅಗಲ ಮಾತ್ರವಲ್ಲ! ಆ ಉಬ್ಬು ಏನೋ ಮನೋಮೋಹಕ. ಬೇಡ ಅಂದವರ ಕಣ್ಣನ್ನೂ ಬಿಡದೆ ಒಂದು ಗಳಿಗೆ ಹಿಡಿದಿದ್ದು ಗರ್ರನೆ ಒಂದು ಸುತ್ತು ಹೊಡೆಸಿಬಿಡುವ ಎದೆಯುಬ್ಬು. ಜೊತೆಗೆ ಅವಳು ತಿರುಗಿದರೆ, ಒಂದು ಭಾರಿ ಎತ್ತು ತಿರುಗಿದಂತಾಗುವುದು. ಅವಳ ನಡು ಎಷ್ಟು ಸಣ್ಣಗಿತ್ತೋ ಆ ನಿತಂಬಗಳೂ ಊರೂಸ್ತಂಭಗಳೂ ಅಷ್ಟು ತುಂಬು ! ಅಷ್ಟು ಭದ್ರ.
ಮಲ್ಲಣ್ಣ ಏಕಾಂತದಲ್ಲಿ ಎಷ್ಟೋ ದಿನ “ಬಾಳೇಕಂಬ ಕಡಿದಿಟ್ಟು, ಕುಂಬಳಕಾಯ ಹೇರಿಟ್ಟು ಬಣ್ಣ ಸುತ್ತಿಬಿಟ್ಟರೊ ಹೆಣ್ಣು, ನನ್ನ ಈ ಕಣ್ಣ ಮಣಿಯನ್ನು ಎಂದು ಹಾಡಿ ಹಾಡಿ ಅವಳನ್ನು ರೇಗಿಸುವನು.
ಅವಳು ” ಅಂಯ್ ! ಬುಡೀ ಅಂದರೆ ನಿಮ್ಮ ಈ ಹುಡು ಗಾಟಕೇಯ !” ಎನ್ನುವಳು.
ಮಲ್ಲಣ್ಣ ಕೀಟಲೆಮಾಡಿ “ಹಾಗಾದಕೆ ಬೂದಿ ಬೊಳಕೊಂಡು
ಸನ್ಯಾಸಿಯಾಗಲಾ ಹೇಳು” ಎನ್ನುವನು.
ಅವಳು ಫಳಾರನೆ ನಕ್ಕು”‘ಈಮುಕ್ಕ ಸನ್ಯಾಸಿಯಾದರೆ ಬಟ್ಟೆಗೆ ಬಣ್ಣ ಕೇಡು” ಎನ್ನುವಳು.
ಅವನು “ಏನು ಹೆಂಗಂತೀ ? ನನಗೇನು ವೇದಾಂತದ ಹಾಡು ಬರೋಕಿಲ್ಲವಾ? ಕೇಳು:
ತಂದನ್ನಾ ತಾನ ತಂದನ್ನಾ. ಚೆನ್ನಾಗಿ ಹೇಳುವೆ ಕೇಳಲೆ ಹೆಣ್ಣೇ ॥
ಬೊಮ್ಮೆವೆಂಬುದು ಬರಿಯ ಬಯಲು, ಅದರಲ್ಲಿ ಒಮ್ಮೆ,
ಮಿಂಚಿತು ಮಾಯೆಯೆಂಬುವ ಚಲುವು ॥
ಚಲುವಿನ ಮರಿಯಾಗಿ ಮೊಳೆಯಿತು ಬರಿಯ ಭ್ರಾಂತಿ ॥
ಭ್ರಾಂತಿಗೆ ಸೋತು ಬಯಲಿನ ಬೊಮ್ಮವು ಮಣಿಯಾಯ್ತು ॥
ಮಣಿಗೆ ಮುಸುಕಿಟ್ಟ ಮಾಯೇ
ಕರೆಯಿತು ಅದ ಜೀವವೆಂದು ॥
ಜೀವಕೆ ಬಂದಿಥು ಸಂಸಾರ ನೋಡಂದು ॥…
ತಂದನ್ನಾ ತಾನ ತಂದನ್ನಾ…-
“ನೋಡಿದೆಯಾ, ನಿಂಗೇನು ಗೊತ್ತು? ಕೇಳು ಹೇಳುತೀನಿ. ಒಂದು ಸಲ ಹಂಗೇ ಸಂಚಾರ ಹೋಗಿದ್ದಾಗ ಸಿಂಗೇರಿಗೆ ಹೋದೆ. ಅಲ್ಲಿ ಆ ತಾಯೀನೇನೋ ಕಂಡು ನಮಸ್ಕಾರ ಹಾಕಿದೆ. ಗುರುಗಳ ನೋಡದೆ ಇರೋದಾ ಅನ್ಲಿಸಿತು. ನನ್ನ ಕರಕೊಂಡು ಹೋಗಿ ಅವರ ಮುಂದೆ ನಿಲ್ಲಿಸೋರಾದರೂ ಯಾರು? ಅದಕ್ಕಾಗಿ ಒಂದು ಪಂದು ಮಾಡಿದೆ. ಅವರು ಅಮ್ಮನೋರ ಗುಡೀಗೆ ಬರೋ ಹೊತ್ತು ಇಚಾರಿಸಿ ಕೊಂಡೆ, ಆ ಒತ್ತಿಗೆ ಹೋಳೇಲಿ ಮಿಂದು ಮಡಿ ಮಾಡಿಕೊಂಡು ಈಭೂತಿ ಚೆನ್ನಾಗಿ ಧರಿಸಿಕೊಂಡು ರುದ್ರಾಕ್ಲಿ ಮಾಲೆ ಇಳೀ ಬಿಟ್ಟು ಏಕನಾದ ತಕೊಂಡು ಭಕ್ತಿಯಾಗಿ ವೇದಾಂತದ ಹಾಡೇ ನುಡೀಸ್ತಾ ನಿಂತು ಬಿಟ್ಟೆ. ಕಣ್ಮುಚಿ ಹೊದೀತಿದ್ದೀನಿ. ಆ ಸಿಪಾಯಯ್ಯ ಬಂದು ಹಿಡಿದು ಅಲ್ಲಾಡಿಸಿ ‘ ಅಪ್ಪಣೆ ಆಗ್ತದೆ ಬಾರೋ’ ಅಂದ. ಓಡಿ ಹೋದೆ ಅವನ ಜೋತೇಲೆ. ಅಲ್ಲಿ ಯಾರು ಅಂತೀಯ – ಗುರುಗಳು. ಅಲಲಾ! ಏನಾಯ್ತು ಅಂತೀಯೇ, ಕೆಂಪಿ, ನಂಗೆ ಎಚ್ಚರ ತಪ್ಪೋ ಹಂಗಾಗೋದಾ ! ಮರು ಮಾತಾಡದೆ ಅಡ್ಡ ಬದ್ದು ಬಿಟ್ಟೆ. ಅವರು ಎಲ್ಲಾ ಕೇಳಿದರು: ಯಾರು? ಎಲ್ಲಿಯವನು ? ಈ ಪದಗಳೆಲ್ಲ ಎಲ್ಲಿ ಕಲಿತೆ? ಅಂತ ಎಲ್ಲಾ ಹೇಳಿದೆ ಅನ್ನೂ. ಆಮೇಲೆ ಅಲ್ಲಿ ಅವರನ್ನು ಕರೆದು ‘ಇವನಿರೋಷ್ಟು ದಿವಸ ಇವನಿಗೆ ಊಟ ಹಾಕಿಸಿ’ ಅಂತ ಹೇಳಿ, ‘ನೀನಿರೋಷ್ಟು ದಿನವೂ ಈ ಹೊತ್ತಿಗೆ ಇಲ್ಲಿಗೆ ಬಂದು ಅಮ್ಮನವರಿಗೆ ನಿನ್ನ ಹಾಡು ಒಪ್ಪಿಸು’ ಅಂದರು. ಅಲ್ಲಿ ಹದಿನ್ನೆದು ದಿನ ಇದ್ದು ಬಂದ ಗಂಡು ಕಣಾ ನಾನು. ನನ್ನ ವೇದಾಂತದ ಹಾಡು ಅಂದರೆ ಬಿಟ್ಟಿ ಅಲ್ಲಾ ಕಣ್ಲೇ! ಗುರುಗಳನ,ಸಿಂಗೇರಿ ಗುರುಗಳನ ಮೆಚ್ಚಿಸಿ ಬಿಟ್ಟಿವ್ನಿ – ಅಂಥಾದ್ದರಲ್ಲಿ ನಾನು ಸಂನ್ಯಾಸ ತಕೊಂಡರೆ ಬಟ್ಟೆಗೆ ಬಣ್ಣ ಕೇಡಂತೆ!” ಅನ್ನುವನು.
ಕೆಂಪಿಯೂ ” ಹಂಗಾದರೆ ನನ್ನ ಕಾವೇರಮ್ಮನ ಪಾಲು ಮಾಡಿ ಬುಡತಿ ಅನ್ನೂ?” ಎನ್ನುವಳು. ಜೊತೆಯಲ್ಲಿಯೇ ಮಲ್ಲಣ್ಣನು “ಉಂಟಾ! ಒಲಿದು ಬಂದ ಹೆಣ್ಣು ನಿನ್ನ ಕಾಡುಪಾಲು ಮಾಡಿದರೆ ಮನೆ ದೇವರು ಒಪ್ಪೀತಾ ! ಅದೇ ನನಗೆ ಬಂದಿರೋ ಸಂಕಟಾ! ಮಾಯೆ ನಿನ್ನ ರೂಪ್ದಲ್ಲಿ ಬಂದು ಹಿಡಿದು ಬಿಟ್ಟವಳೆ. ಬಲೆ ಭದ್ರ ವಾಗದೆ. ಬಿಡಸೋಕೂ ಆಗೋಲ್ಲ. ಹೋಗಲಿ, ಬುಡು, ನಿನ್ನ ಮಣ್ಣು ಮಾಡಿ, ಆ ಗುಡ್ಡೆ ಮೇಲೆ ಕೂತ್ಕೊಂಡು, ಅಲ್ಲಿ ಏಕನಾದ ಹಿಡಿದು ಒಂದು ಹಾಡು ಹೇಳಿ ‘ಶಿವಾ, ಈ ಹೆಣ್ಣ ಈ ತಾಯಿ ಮಡಲಲ್ಲಿ ಇಟ್ಟು ಕೊಂಡ ಹಾಗೇ ನೀನು ನಿನ್ನ ಪರಿವಾರಕ್ಕೆ ಸೇರಿಸಿಕೊ, ಧರ್ಮವಾಗಿದ್ದ ತಾಯಿ ಮಗಳು ಇವಳು’ ಅಂದು ಒಂದು ಕಣ್ಣೀರು ಹನಿ ಅಲ್ಲಿ ಹಾಕಿ ಮುಂದಕ್ಕೆ ಹೊರಡೋದು ? ಅನ್ನುವನು. ಆವಳು “ಅಂಯ್ ! ನನ್ನ ಚಿನ್ನ, ಈ ಬೊಡ್ಡೀ ಮಗನಿಗೆ ಎಷ್ಟು ಕರುಳೋ!? ಎಂದು ಕೆನ್ನೆಸವರಿ ತಲೆಯ ಪಕ್ಕದಲ್ಲಿ ನೆಟಿಕೆ ಮುರಿಯುವಳು
ಈ ನಾಟಕ, ನೋಡುವವರಿಲ್ಲದಿದ್ದರೂ ವಾರಕ್ಕೆ ಮೂರು ಸಲವಾದರೂ ನಡೆಯುವುದು. ನೂರಾರು ಸಲ ನಡೆದಿದ್ದರೂ ಹಳೇ ದಾಗಿರಲಿಲ್ಲ. ಅವರಿಗೆ ಬೇಸರವಾಗಿರಲಿಲ್ಲ ಇಂತಹ ನಾಟಕ ಎಲ್ಲಿ ನಡೆದರೂ ಎಷ್ಟು ಸಲ ನಡೆದರೂ ಆಡುವವರಿಗೆ ಬೇಸರವಾಗುವುದೇನು? ಎಂದಿಗೂ ಇಲ್ಲ. ಅದೇ ಅದರ ಝೋಕು. ಅದೇ ಅದರಲ್ಲಿರುವ ನವೋನವತ್ವ.
ಇವೊತ್ತು ಮಲ್ಲಣ್ಣ ಹೋಗಿ ಸುತ್ತಿಕೊಂಡು ಬಂದಿದ್ದ. ಸುಮಾರು ಐದಾರು ಸೇರು ಜೋಳ ಬಂದಿತ್ತು. ಆದರೂ ಅದೇಕೋ ಮಂಕಾಗಿದ್ದ. ಮಣ್ಣ ಏಕನಾದ ಗೂಟಕ್ಕಿಟ್ಟು ರುಮಾಲು ತೆಗೆದು ಅದಕ್ಕೆ ಮುಡಿಸಿದಹಾಗಿಟ್ಟು ಕಸೆ ಅಂಗರೇಕು ಬಿಚ್ಚುತ್ತಿದ್ದ. ಕೆಂಪಿ ಬಂದು ಮೊಕ ನೋಡಿದಳು. ಒಳಕ್ಕೆ ಹೋಗಿ ಒಂದು ರಾಗಿ ರೊಟ್ಟಿ, ಅಷ್ಟು ಈರುಳ್ಳಿ ಚಿಟ್ನಿ ಒಂದುಲೋಟಾದಲ್ಲಿ ನೀರು ಮಜ್ಜಿಗೆ ತಂದು ಇಟ್ಟಳು. ಅದನ್ನೂ, ಅವಳ ಮೊಕವನ್ನೂ “ನೋಡಿ, “ಇದೇನಾ
ನಾವೇನು ಕೆಂಪು ಜನಾ ಕೆಟ್ಟೋದೆವಾ! ಕೈಕಾಲು ತೋಳೀದೆ ತಿನ್ನೋದಾ !” ಅಂದ.
“ಸರಿ, ಮೊಕ ನೋಡಿ ! ಸುಟ್ಟ ಬದನೆಕಾಯಂಗೆ ಆಗದೆ. ಒಳಗಿರೋ ಶಿವಾ ಎಷ್ಟು ನೊಂದವನೋ ! ಮೊದಲು ತಿಂದು ಆಮೇಲೆ ಕೈ ಜೊತೇಲೆ ಕಾಲು ತೊಳೆದರಾಗೋಕಿಲ್ಲವೇನೋ? ಅಂದಳು ಅವಳು. ಹೊಸದಾ ಮಾಡಿಸಿದ್ದ ಹಿತ್ತಾಳೆ ಕಡಗ ಗುತ್ತವಾಗಿ ತೊಟ್ಟಿದ್ದ ಕೆಂಪು ಬಳೆಗಳು ಇದ್ದ ಕೈಗಳನ್ನು ಭಾವವಾಗಿ ತಿರುಗಿಸಿ ಕೊಂಡು ಆಡಿದ ಮಾತು ಕೇಳಿ ಮಲ್ಲಣ್ಣನಿಗೆ ಹೇಗೆ ಹೇಗೊ ಆಯಿತು : “ಅಬ್ಬಾ! ಅದೇನು ಜಾತಿ ಹೆಣ್ಣಪ್ಪ ಇದು. ಮಸಾಣದೆ ಬೀರೇ ದೇವರನ್ನೂ ಮನೆ ಮಾಡೀವಪ್ಪನ ಮಾಡೋ ಜಾತಿ. ಮಾತು ಅಂದರೆ ಆನೆಗೆ ಹಾಕಿದ ಅಂಕುಸವೋ! ‘ಜಪ್ಪನೆ ಕೈ ಕಾಲು ತೊಳೆಕೋ ಅಷ್ಟು ಈಭೂತಿ ಹಂಗಂದ್ಕೊಂಡು ದೇವರಿಗೆ ಒಂದು ಕೈಮುಗಿದು ಜಟ್ಟ ನೇಳು’ ಅನ್ನಬಾರದಾ ! ಹಾಳ ಹೊಟ್ಟೆ ಇದ್ದೇ ಆದೆ. ನಾವು ಬೇಡ ಅಂದರೆ ತಾನೇ ಬಿಟ್ಟೀತು ! ! ಇರಲಿ. ಒಂದು ಚೊಂಬು ನೀರು ತತ್ತಾ ! ನಾನು ಕಾಲು ತೊಳಕೊಂಡು ಬರೋದರೊಳಗೆ ಒಂದು ಮಣೆ ಹಾಕಿ, ತಣಿಗೆ ತಂದಿಟ್ಟು ಬಡಸು. ಏನವಸರಾ ಅಂಥಾದ್ದೇನು ನಾವು ಬಾಳೆ ಹಣ್ಣು ಗುಡಾಣದೊಳಗೆ ಬೆಳೆದಿರೋದು ? ” ಅಂದು ಮಲ್ಲಣ್ಣ ಉಟ್ಟಿದ್ದ ಪಂಚೆ ಎತ್ತಿ ಕಟ್ಟದ ಕೆಂಪಿಯೂ ಮಾತನಾಡದೆ ಹೋಗಿ ನೀರು ತಂದು ಕೈಕಾಲಿಗೆ ನೀರು ಕೊಟ್ಟಳು.
ಒಳಗೆ ಬಂದ ಮಲ್ಲಣ್ಣ ಮಾಡಬೇಕಾದ್ದೆಲ್ಲ ಮಾಡಿ ಹರಿವಾಣದ ಮುಂದೆ ಕೂತು ರೊಟ್ಟಿ ಮುರಿದು ಕಣ್ಣಿಗೊತ್ತಿಕೊಂಡು “ಶಿವಾ” ಎಂದು ಊಟಕ್ಕೆ ಕುಳಿತ. ಹೆಂಡತಿ ಬಂದುಹೋಗ್ತಾ ಇರುವುದನ್ನು ನೋಡುತ್ತ “ಏನೋ ಹೇಳಬೇಕೂಂತ ಇದ್ದೀ! ಹೇಳುಬುಡು” ಎಂದ.
ಅವಳಿಗೆ ಕಣ್ಣಲ್ಲಿ ನೀರಾಡಿತು. ಕಣ್ಣೇರು ಒರಸಿಕೊಂಡು, ಗಾಬರಿ ಬಿದ್ದ ಗಂಡನ ಮನಸ್ಸು ಸಮಾಧಾನವಾಗಲಿ ಎಂದು ನಕ್ಕು, “ಎಲ್ಲ ಕೊಟ್ಟ ಶಿವ ನನ್ನ ಹೊಟ್ಟೆಗೊಂದು ಬೊಂಬೆ ಹಾಕದೇಹೋದ. ಅದಕೇ–” ಅಂದಳು. ಮುಂದಿನ ಮಾತು ಹೊರಡಲಿಲ್ಲ
ಮಲ್ಲಣ್ಣ ಒಂದು ರೆಪ್ಪೆ ಹೊಡೆಯೋ ಹೊತ್ತು ಸುಮ್ಮನಿದ್ದು ಕಣ್ಣಿಗೆ ಬಂದ ನೀರು ಹಾಗೇ ತಡೆದುಕೊಂಡು, “ಅದಕ್ಕೇನು ಮುಡುಕ ತೊರೆಗೆ ಹೋಗಿ ಬೀಜಾ ತರೋನ ಅ೦ತೀಯೋ ?” ಅಂದೇ ಬಿಟ್ಟ.
ಕೆಂಪಿಗೆ ರೇಗಿ ಹೋಯಿತು : “ಧೂ ಮುಕ್ಕ ! ಹಳೇದು ಮರೀಲೆ ಒಲ್ಲದು. ನಾನು ಏಳೋದರೊಳಗೆ ಅದೇನೋ ಅವಸರ ” ಎಂದು ಒದರಿದಳು.
ಮಲ್ಲಣ್ಣನಿಗೆ ಹೊಟ್ಟೆಗೆ ತುಂಬ ದಿಂಡಾಗಿತ್ತು. ಆಯಾಸ ಕಳೆದಿತ್ತು. ರೇಗು ಬರಲಿಲ್ಲ. ರೇಗಿದವಳನ್ನು ಕಂಡು ನಗು ಬಂತು. ” ಅದಕಲ್ಲಾ ! ಎಷ್ಟಾಗಲೀ ಹರೀತಿದ್ದ ನೀರು ಅದಕಂದೆ !” ಎಂದು ಇನ್ನೂ ಚೆಲ್ಲಾಟ ಮಾಡಿದ.
ಅವನ ಚೆಲ್ಲಾಟ ಅವಳನ್ನು ರೇಗಿಸಲಿಲ್ಲ. ಅವಳನ್ನು ಇನ್ನೂ ಅಷ್ಟು ಆಟವಾಡುವ ಹಾಗೆ ಪ್ರೇರಿಸಿತು. “ಹರೀತಿದ್ದ ನೀರು ಈಗ ಮೊಸರಿಗಿಂತ ಗಟ್ಟಿಯಾಗಿ ಕೂತಿಲ್ಲವೇನೋ? ಇನ್ನೇನು ಮರದ ತುಂಡಾಗಬೇಕೇನೋ! ” ಎಂದು ಮಾತಿಗೆ ಮಾತು ಜೋಡಿಸಿದಳು.
ಅವನು ರಂಗು ರಂಗಾಗಿ “ಆ ಹಾ ಹಾ! ಏನು ಹೇಳಲೋ ಹರೀತಿದ್ದ ನೀರ ಹಿಡಿದಿಟ್ಟಿರೋದು ಹರವಿ ಅಲ್ಲವೇನೋ? ಹಾರ ಹಾಕೊಂಗಿದ್ದರೆ ಹಾಕಬೇಕು ಹರವಿಗೆ” ಅಂದ.
“ಹೋಗು ಮುಕ್ಕ ! ನೀರಿಗೆ ಹರೀಬೇಕೂಂದರೆ ಹರವಿ ಒಂದು ಆಡ್ಡವಾ! ಒದ್ದರೆ ಮೂದೇವಿ ಮೂವತ್ತು ಚೂರಾಗ್ತದೆ. ನೀರು ಬೇಕೂಂತ ವರಕೊಟ್ಟು ನಿಂತದೆ ಅಂತ ತಿಳಿಕೊಳ್ಳೋ ಬುದ್ದಿ ಕೂಡ ಇಲ್ಲ. ಹಾರವಂತೆ ಹಾರ!” ಎಂದಳು.
” ಈ ಮಾತೇ ಅಲ್ಲವಾ ನನ್ನ ಕಾಲಿಗೆ ಸಂಕಲೆ ಹಾಕದ್ದು. ಈಗ ತಾನೇ ಏನು. ಬೇಕಾದರೆ ಹೋಗಿ ಬಾ. ಆದರೆ, ಮಾರಾಯಗಿತ್ತಿ, ನನ್ನೂ ಜೊತೇಲಿ ಬಾ ಅನ್ನಬೇಡ. ಕೈಮುಗಿತೀನಿ.”
ಕೆಂಪಿ ನಕು ಬಿಟ್ಟಳು. ಬಂದು ತಲೆಯ ಮೇಲೆ ಒಂದು ಸಣ್ಣ ಮೊಟಕು ಹಾಕಿ, “ಮುಂಡೇದೆ! ಕಂಡ ಹರಟೇ ಎಲ್ಲ ಮಾಡಬೇಡ. ಸಂಕ್ರಾಂತಿ ಆದ ಮೇಲೆ ಮುಡುಕತೊರೆ ಜಾತ್ರೆ. ಈಗ ಇನ್ನೂ ಗೌರಿ ಕೂಡ ಬಂದಿಲ್ಲ. ಅದೆಲ್ಲ ಇರಲಿ. ಬಾಯಿಮುಚ್ಚಿಕೊಂಡು ಕೇಳು. ಮಗ್ಗುಲ ಹಳ್ಳೀಲಿ ಒಂದು ಮೊಗ ಬಂದದೆ. ಯಾರೋ ದೊಂಬರು ತಂದವರಂತೆ. ಹೆಣ್ಣುಮೊಗ ಒಳ್ಳೆ ಜಾಜಿ ಮಲ್ಲಿಗೆ ಹೂವಿ ನಂಗೆ ಅದೆಯಂತೆ. ನೋಡಿಡರೆ ಯಾರದೋ ಉತ್ತಮರ ಮೊಗ ಇದ್ದಂಗೆ ಅದೆ. ಅದ ನಾನು ತಕೋಬೇಕು ಅಂತ ಇದ್ದೀನಿ. ನೀವು ಏನಂದೀರೋ ಅಂತ”
ಮಲ್ಲಣ್ಣ ಯೋಚಿಸಿದ… ಏನೇನೋ ಅಳೆದು ಸುರಿದು. “ಆಯಿತು. ಅಂಗಾದರೆ ನಿಂಗೆ ಮಕ್ಕಳಾಗೋ ವಯಸಾ ಆಗೋಯಿತು ಅಂತಲೋ!” ಆಂದ.
“ಹಂಗಲ್ಲ! ಯಾವುದೂ ನೋಡು. ಬೇಕೂಂದಾಗ ಬಂದರೆ ಚೆನ್ನ. ಅದು ಬಿಟ್ಟು ಬೇಸೆಗೇಲಿ ಬಂದೆ ಕಂಬಳಿ ಆದರೆ ಏನು ಚೆಂದ ಹೇಳು.”
” ನನ್ನ ಮಾತಿಗೆ ಏನು ಹೇಳಿದಂಗಾಯಿತು ಮತ್ತೆ ? “
“ಅದಾ! ಆ ಮೊಗಬಂದ ಪುಣ್ಯಕ್ಕೆ ಹೊಟ್ಟೇನೂ ತುಂಬಿ ಬಂದರೆ, ಒಂದಕ್ಕೆರಡು ಆಯಿತು. ಅಂದು ಶಿವನಿಗೆ ಕೈಮುಗಿಯೋದು.”
“ತಲೆಗೆ ಎರಡು ತುರುಬಾದಂಗಾದರೆ ? “
“ಹಂಗಲ್ಲ ಕಣ್ಣೇಮುಕ್ಕ ; ತುರುಬಿಗೆ ಎರಡು ಹೂವಾದಂಗೆ ಅನ್ನಬಾರದೇನೊ. “
“ಹಂಗಾದರೆ ಮಾತಿಲ್ಲ. ಆಗಬೋದು ನಮ್ಮ ಅಡ್ಡಿಯೇನಿಲ್ಲ. ಆದರೆ, ಆ ಮೊಗ ಬಂದರೆ ಹಾಲು ಬೆಣ್ಣೆ ಆದು !?
” ಅಂಯ್ ! ಹುಟ್ಟಿಸಿದ ದೇವರು ಹುಲ್ಲುಮೇಯಿಸ್ತಾನ! ಕರಾ ಬರೋ ವೇಳೆಗೆ ಕೆಚ್ಚಲು ಬಿಟ್ಟೇ ಇರುತ್ತದೆ.”
“ಹಂಗೆ ಆಗಲೇಳು ತಂದುಕೋ”
ಆ ವೇಳೆಗೆ ಊಟ ಆಗಿ ಮಲ್ಲಣ್ಣ ಢರ್ ಅಂತ ತೇಗಿದ್ದ. ಕೈ ತಣಿಗೇಲೇ ಕೈತೊಳೆದು ವಸ್ತ್ರದಲ್ಲಿ ಕೈಒರಸಿಕೊಳ್ಳುತ್ತಾ ಎದ್ದ. ಕೆಂಪಿ ಅವಸರವಸರವಾಗಿ ಅಡಕೆಲೆ “ಮುಂದಿಟ್ಟು “ಹಂಗಾದರೆ ಹೋಗಿ ತರಲಾ!” ಅಂದಳು
“ಈಗ ಈ ಉರಿಬಿಸಿಲಿನಲ್ಲಿ ಮಗ್ಗಲೂರಿಗೆ ಹೋಗಿಬಂದೀಯಾ?”
” ಇಲ್ಲೇ ಆ ಅರಳಿಕಟ್ಟಿ ಹತ್ತಿರ ಬಂದವರೆ !”
” ಹಂಗಾದರೆ ಎಲ್ಲಾ ಅಗದೆ ಅನ್ನೂ!”
” ಹೂಂ! “
“ಹಂಗೆ ತರೋ ಅಂಗಿದ್ದರೆ ಇಲ್ಲಿಂದ ನಿನ್ನ ಬಟ್ಟೆ ತಕೊಂಡು ಹೋಗು. ಆ ದೊಂಬರ ಬಟ್ಟೆ ಗಿಟ್ಟೆ ಮನೆಗೆ ತರಬೇಡ. ಅವರ ಸೊಂಕು ಬಂದು ನಾವೂ ಅವರಂಗೆ ಲಾಗಾಹಾಕೋ ಹಂಗಾದೀತು. ಒಂದು ಹಸ ಹಿಡಕೊಂಡು ಹೋಗಿ ಅದರ ಹೊಟ್ಟೆ ಕೆಳಗೆ ಈಸಿಕೊ, ಅವರನ್ನೆಲ್ಲ ಕರೆದು ಒಂದು ಹೊತ್ತು ಚೆನ್ನಾಗಿ ಪಾಯಸ ಮಾಡಿ ಅವರ ಹೊಟ್ಟೆ ತಣ್ಣಗೆ ಮಾಡಿ ಕಳಿಸು ಅವರೇನು ಕೇಳ್ತಾರೆ?”
“ಅವಳಿಗೆ ಒಂದು ಗಟ್ಟಿಯಾಗಿರೋ ಸೀರೆ ಬೇಕಂತೆ!”
” ಮೊಗಕ್ಕೊಂದು ಸೀರೆ ಏನೂ ಎಚ್ಚಲ್ಲ! ಆದರೆ ಆ ಮಾತು ಊರಿಗೆ ತಿಳೀಬಾರದು. ನೋಡಿಕೋ. “ಮಲ್ಲಣ್ಣ ಏನಪ್ಪಾ
ಸೀರೆ ಕೊಟ್ಟು ಮೊಗಾ ತಕೊಂಡ ಅನ್ನೋ ಮಾತು ಹಬ್ಬಿದರೆ ನಾವೇನೋ ಸಿರಿವಂತರಾಗೋದೋ ಅಂದುಕೊಂಡೀತು ಜನಾ!”
” ಅದೂ ನಿಜ. ಅಂಗಾದರೆ ಈಗ! “
“ಮುಚ್ಚಂಜೆವರೆಗೂ ಇರ್ರೋ ಅನ್ನೂ… ಪಾಯಸ ಮಾಡ ಬೇಡವಾ!”
” ಮಾಡಿಟ್ಟಿವ್ನಿ; “
” ಹಂಗಾದರೆ ಇನ್ನೇನು! “
“ಮೊಗ ನೀನಾ ತಂದು ಕೊಡಬೇಕು.”
“ಓ ಅಂಗೋ! ಆಗಲೆ ಏಳಿದ್ದರೆ ಆಗುತಿರಲಿಲ್ಲವಾ! ಅಂತೂ ಅದು ಬಂದರೂ ನನ್ನ ಕೈಯಿಂದಲೆ ನಿನ್ನ ಕೈಗೆ ಬರಬೇಕು. ಅಲ್ಲವಾ! ನಡಿ”
ಇಬ್ಬರೂ ಹೋಗಿ ಮಗುವನ್ನು ತಂದರು.
ಬರುತ್ತಾ ದಾರೀಲಿ ಮಲ್ಲಣ್ಣ ” ಈ ಮೊಗೀಗೆ ಏನು ಎಸರಿಡತಿ ?” ಎಂದು ಕೇಳಿದ.
ಕೆಂಪಿ ಸುಮ್ಮನೆ ಅವನ ಮೊಕವನ್ನು ನೋಡಿ “ಇನ್ನೇನೆಸರು? ಮಲ್ಲಿ” ಅಂದಳು. ಅವಳ ಕಣ್ಣು, ಆ ನಗು ಆ ಸೊಟ್ಟ ನೋಟ ಆ ಇನ್ನೇ ನಿನ್ನೇನೇನೋ ಹೇಳಿದ ಏನೇನೋ ಎಲ್ಲಾ ಅವನಿಗೆ ಅರ್ಥವಾಯಿತು.
ಆದರೂ ತುಂಬಿದ ಕೊಡದ ಗಾಂಭೀರ್ಯ ದಿಂದ ತಲೆಯಲ್ಲಾಡಿ ಸುತ್ತಾ “ಈ ಬಣ್ಣ, ಈ ಮೊಕ, ಈ ನಗ, ಎಲ್ಲಕ್ಕೂ ಸರಿಯಾಗಿದೆ ನಿನ್ನ ಎಸರು ” ಎಂದು ಒಪ್ಪಿಕೊಂಡು, ಆ ತಿಂಗಳ ಬೊಮ್ಮಟೆಯನ್ನು ಮುತ್ತಿಟ್ಟುಕೊಂಡು ಮಡದಿಯ ಕೈಗೆ ಕೊಟ್ಟ. ಅವಳು ಆನಂದದಿಂದ ಕಣ್ಣು ತುಂಬ ನೀರಿಟ್ಟುಕೊಂಡು, “ನನ್ನ ಮನೆಗೆ ಮಹಾಲಕ್ಷ್ಮಿ ಯಾಗವ್ವ” ಎಂದು ತೆಗೆದುಕೊಂಡು ಮುತ್ತಿಟ್ಟುಕೊಂಡು ಮಡಿಲಲ್ಲಿ ಸೇರಿಸಿಕೊಂಡಳು.
*****
ಮುಂದುವರೆಯುವುದು