‘ನಾರಿ ನಾನೆಂದಕಟ ರೂಪಗೋಸಾಯಿ೧
ನನಗೀಯನೆನುವನೇಂ ದರ್ಶನದ ಭಾಗ್ಯಂ?
ಹೆಮ್ಮೊಗನ ನೋಡದೇನವನ ವೈರಾಗ್ಯಂ?
ಏತರೀ ವ್ರತವೊ!’ – ಎಂದಳು ಮಿರಾಬಾಯಿ ೪
‘ಇವನಾದೊಡಂ ಗಂಡೆ? ಗೋಕುಲದೊಳೆಲ್ಲ
ಹೆಂಗಸಲ್ಲದೆ ಗಂಡಸಿಲ್ಲಿ ಬರಸಲ್ಲ!
ಅರಿಯಲಿವನಿಲ್ಲಿಹುದನಟ್ಟದಿರಳಲ್ಲ
ಬೃಂದಾವನದ ದೇವಿ! ಇವನದೇಂ ಬಲ್ಲ’ ೮
ಬಲ್ಲವರ ಬಲ್ಲನೀ ಸಾಧುವೆಂದರಿವಂ
ಜಗದೊಳೊಗೆದವರೆಲ್ಲ ಹೆಮ್ಮಕ್ಕಳೆಂದು?
ನನ್ನ ಹೃದಯೇಶ ಜಗದೀಶನವನೊರುವಂ
ಶ್ರೀಕೃಷ್ಣನೈಸೆ ಭುವನಕೆ ಗಂಡಸೊಂದು? ೧೨
ರಾಧೆ ಯಾರೆಂಬುದಂ ಗೋಸಾಯಿ ಮರೆವಂ-
ರಾಧೆಯಹ ಮುನ್ನಮೇಂ ಗಿರಿಧಾರಿ ದೊರೆವಂ?’
*****
೧ ಚೈತನ್ಯದೇವನ ಪ್ರಖ್ಯಾತನೊಬ್ಬ ಶಿಷ್ಯ.