‘ಬೇಸಗೆಯ ಬೇಸರಂ ಬೀಸು ೧ಕಾದಿಗೆಯೇ!
ಮೊಗ್ಗರಿಸಿ ಮೊರೆ ಮುಗಿಲೆ! ಮಿನುಗು ಮೊನೆಮಿಂಚೇ!-
ಮೇಣಿಂತು ಮಳೆಯ ಮುಂಬನಿ ಮಣಿದು ಹೊಂಚೆ
ನಿನ್ನ, ನೀನದನೊಲ್ಲದೆಲ್ಲಿ ಚಾದಗೆಯೇ೨? ೪
ನಿನ್ನ ತನುವೆಂತು? ದನಿಯೆಂತು? ಮನೆಯೆಂತು?
ದೆಸೆಡೆಸೆಯ ಸೋಸಿ ನಾ ಸೋತೆ! ನೀಂ ಭುವಿಯಾ
ಹಾರುಹಕ್ಕಿಯೊ? ಬರಿಯ ಕಾಣಿಕೆಯೊ ಕವಿಯಾ?
ಬಾರ, ತನಿ ಬಾನಹನಿ ಬಸಿದೆಸೆಯ ಬಂತು!’ ೮
`ಹೊರಗೆನ್ನಸರಸುವರೆ, ಮರುಳೆ? ನಿನ್ನೊಳಗೆ
ಮರೆಯನ್ನ! ಹೊರಹಕ್ಕಿಯಲ್ಲ ನಾನರಿಯಾ?
ನಿನ್ನೆದೆಯ ಮುಸುಕಿ ಮನನಂ ಮಸೆದು ಮೊಳಗೆ,
ಕನಸು ಝಲ್ಲನೆ ಝಳಕೆ, ಸೋರ್ವ ಸೀವರಿಯಾ ೧೨
ಕುಡಿದು ಕಿಲಕಿಲ ಕೆಲೆವೆ ಕಂಠದಿಂ ಕವಿಯಾ
ಕಿವಿಯಾರ ಕಾಂಬೆಯಂದೆನ್ನ ಮೆಯ್ಸವಿಯಾ!’
*****
೧ ಮಳಿಗಾಲವಾರಂಭಿಸುವ ಮಾಸ (ಕಾತಿಕೆ)
೨ ಮಣಿಯಂತೆ ಸಣ್ಣಗೆ ದುಂಡಾಗಿ, ಬಗ್ಗಿ