ಪ್ರತಿಯೊಬ್ಬರಲ್ಲೂ ಅಸಂಖ್ಯ ಆಸೆಗಳು ಇರುತ್ತವೆ. ಆದರೆ ಎಲ್ಲಾ ಆಸೆಗಳು ಕೈಗೂಡುತ್ತವೆ ಎನ್ನುವ ಗ್ಯಾರಂಟಿ ಮಾತ್ರ ಇಲ್ಲ. ಆಸೆಗಳೆಂಬ ಮರೀಚಿಕೆಯ ಬೆನ್ನು ಹತ್ತಿ ಓಡುತ್ತಿರುವಾಗ ಎಲ್ಲೋ ಒಂದು ಕಡೆ ನಿರಾಸೆ ಕಟ್ಟಿಟ್ಟ ಬುತ್ತಿ. ಪುರಂದರದಾಸರು ಹೇಳಿರುವ ಹಾಗೆ ‘ಇಷ್ಟು ದೊರಕಿದರೆ ಮತ್ತಿಷ್ಟು ಬೇಕೆಂಬಾಸೆ. ಮತ್ತಿಷ್ಟು ದೊರಕಿದರೆ ಮತ್ತೂ ಇಷ್ಟರಾಸೆ’. ಆಸೆಗಳಿಗೆ ಮಿತಿಯಿಲ್ಲ. ಅದು ಯಾರನ್ನೂ ಬಿಟ್ಟೂ ಇಲ್ಲ.
ಆಸೆಗಳ ಬೆಂಬತ್ತಿ ಹೋಗುವುದರಿಂದಲೇ ಹಲವಾರು ಬಾರಿ ನಿರಾಸೆಯ ಮಡುವಿನಲ್ಲಿ ಬಿದ್ದು ನೋವಿನ ಕ್ಷಣಗಳನ್ನು ಅನುಭವಿಸ ಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಅಂತಹ ಕ್ಷಣಗಳಲ್ಲಿ ಭಾವುಕವಾಗಿ ನಿಪಾತ ಸ್ಥಿತಿಯನ್ನು ತಲುಪಿ ಪ್ರಪಾತಕ್ಕೆ ಬಿದ್ದಷ್ಟು ತೊಳಲಾಟ! ಜೀವನವೇ ಮುಗಿದುಹೋದಂತೆ, ಸುತ್ತಲ ಪರಿಸರವೆಲ್ಲ ಸ್ತಬ್ಧವಾದಂತೆ, ಉಸಿರಾಡಲು ಗಾಳಿಯೇ ಇಲ್ಲದಂತೆ, ನೋಡಲು ಬೆಳಕೇ ಇಲ್ಲದಂತೆ ಒದ್ದಾಟ. ಮಾತು ಬೇಡ, ಪ್ರೀತಿ ಬೇಡ, ಜನ ಬೇಡ, ಊಟ ಬೇಡ, ಏನೂ ಬೇಡ. ಸಿಟ್ಟು, ಅಸಹಾಯಕತೆ, ಅಸಮಾಧಾನ ಎಲ್ಲ ನಕಾರಾತ್ಮಕ ಭಾವನೆಗಳ ದಾಳಿ, ಈ ನಿರಾಸೆಯ ಕೂಪದಿಂದ ಹೊರ ಬರುವ ಪ್ರಯತ್ನ ಮಾಡದಿದ್ದರೆ ಆ ಕೆಲವು ಕ್ಷಣಗಳಲ್ಲಿ ಏನಾದರೂ ನಡೆಯಬಹುದು. ತನ್ನನ್ನು ತಾನೇ ಕೊಂದುಕೊಳ್ಳಬಹುದು; ಬೇರೆಯವರನ್ನು ಕೊಲ್ಲಬಹುದು. ಹೊಡೆಯಬಹುದು, ಕಿರಿಚಾಡಬಹುದು. ಸ್ವರ್ಗಕ್ಕೆ ಕಿಚ್ಚು ಹಚ್ಚಬಹುದು; ಮತಿಭ್ರಮಣೆಗೊಳಗಾಗಬಹುದು; ಹೃದಯಸ್ತಂಭನವಾಗಬಹುದು. ಯಾವ ವಿವೇಚನೆಗೂ ಸಿಗದ ಕ್ಷಣವದು. ಹೀಗಾದಾಗ ಮಾಡಬೇಕಾದುದಾದರೂ ಏನು?
ಎಲ್ಲವನ್ನೂ ಬಿಟ್ಟು ಓಡುವುದಂತೂ ಸಾಧ್ಯವಿಲ್ಲ. ದುಂಡಗಿರುವ ಜಗತ್ತು ಎಲ್ಲೂ ಕೊನೆಯಾಗುವುದೂ ಇಲ್ಲ. ಮತ್ತೆ ಮತ್ತೆ ಅಲ್ಲಲ್ಲೇ ಸುತ್ತಾಟ. ಆದರೆ ಒಂದು ಮಾತ್ರ ಸತ್ಯ. ಎಲ್ಲ ಕ್ಷಣಗಳೂ ಭೂತಕಾಲದ ಕಾಲಗರ್ಭದೊಳಗೆ ಸೇರಿ ಹೋಗುತ್ತವೆ. ಅದೊಂದು ರೀತಿಯ ರಿಸೈಕ್ಲಿಂಗ್ ಬುಟ್ಟಿಯಂತೆ.
ಭೂತಕಾಲದ ಎಲ್ಲ ಅನುಭವಗಳು ಭವಿಷ್ಯದ ಪಕ್ವತೆಗೆ ಕಾರಣವಾಗುತ್ತವೆ ಎನ್ನುವುದನ್ನು ಅಲ್ಲಗಳೆಯಲಾಗದು. ಆದರೆ ಸದಾ ಕಳೆದುಹೋದ ಅನುಭವಗಳ ಭಾರ ಹೊತ್ತು ತಿರುಗಬೇಕಾಗಿಲ್ಲ. ವರ್ತಮಾನದ ಎಲ್ಲ ಕ್ಷಣಗಳನ್ನು, ಆ ಕ್ಷಣಗಳಲ್ಲಿ ಅನುಭವಿಸಿದ ಸಂತಸ, ನೋವು, ನಿರಾಸೆ, ಆತಂಕಗಳನ್ನು ಭೂತಕಾಲದ ಕಾಲಗರ್ಭದೊಳಕ್ಕೆ ಎಸೆದು ಭವಿಷ್ಯದತ್ತ ದಾಪುಗಾಲು ಹಾಕುವುದು ಬುದ್ಧಿವಂತಿಕೆ. ಇದು ಲೋಕ ನಿಯಮ. ಯಾರೂ ಇದರಿಂದ ಹೊರಗಿಲ್ಲ. ಹೊರಗಿರಬಾರದು ಕೂಡಾ. ನಮ್ಮ ಹಿಂದಿನ ಅನುಭವಗಳಿಂದ ಗಳಿಸಿದ ಜ್ಞಾನದ ಬೆಳಕು ಭವಿಷ್ಯದ ದಾರಿಗೆ ಬೆಳಕು ಚೆಲ್ಲುತ್ತಲೇ ಇರುತ್ತದೆ. ಇದ್ದಷ್ಟು ದಿನ ಜೀವಿಸಲೇಬೇಕೆನ್ನುವ ಛಲ, ಬಿದ್ದಲ್ಲಿಂದ ಎದ್ದೆದ್ದು ನಿಲ್ಲುವ ಧೈರ್ಯ ಇದ್ದಲ್ಲಿ ಜೀವಿಸಲು ಬೇಕಾಗುವ ಜಾಣತನ ನಮ್ಮೊಳಗೆ ಹುಟ್ಟಿಕೊಳ್ಳುತ್ತದೆ. ಈ ಜಾಣತನವನ್ನು, ಛಲವನ್ನು ಬೆಳೆಸಿಕೊಂಡಾಗ ಯಾವ ರೀತಿಯ ನೋವನ್ನಾಗಲೀ ನಿರಾಸೆಯನ್ನಾಗಲೀ ನಗುನಗುತ್ತಾ ಎದುರಿಸುವುದು ಸಾಧ್ಯವಾಗುತ್ತದೆ.
ಇಂತಹ ನಿಪಾತ ಸ್ಥಿತಿಯಲ್ಲಿರುವ ಕ್ಷಣಗಳಲ್ಲಿ ಎಲ್ಲ ಮರೆತು ನಿರ್ಲಿಪ್ತರಾಗಿ, ನಿರ್ಭಾವುಕರಾಗಿ ಎಲ್ಲ ನಿರಾಸೆಯನ್ನು ಕೊಡವಿ ಎದ್ದು ನಿಂತು ನಾಲ್ಕು ಗೋಡೆಗಳಿಂದ ಹೊರಬಂದು ಒಂದು ಘಳಿಗೆ ಕಣ್ಣು ಬಿಟ್ಟು ಸುತ್ತಲೂ ನೋಡುವ ಪ್ರಯತ್ನ ಅಗತ್ಯ. ಹೊರ ಬರುವುದು ಬೇಡವಾದರೆ ಕಿಟಿಕಿಯ ಬಳಿ ದೂರದವರೆಗೆ ದೃಷ್ಟಿ ಹಾಯಿಸಿದಾಗ ನಿಂತು ಹೊರಗೆ ಕಣ್ಣಿಗೆಟಕುವಷ್ಟು ಕಾಣುವ ನೋಟ ನಿಮ್ಮನ್ನು ಹೊಸ ವ್ಯಕ್ತಿಯನ್ನಾಗಿ ರೂಪಿಸಬಹುದು. ನಿಮ್ಮದೇ ಮನೆಯ ಅಂಗಳದಲ್ಲಿ ಚಿಕ್ಕದಾದ ಗಿಡವೊಂದರಲ್ಲಿ ಹೂವೊಂದು ಅರಳಿರಬಹುದು. ಒಣಗಿದ್ದ ಗಿಡದಲ್ಲಿ ಹೊಸದೊಂದು ಚಿಗುರೊಡೆದಿರಬಹುದು. ಅದು ನೀವೇ ನೆಟ್ಟ ಗಿಡವಾಗಿದ್ದರೆ ಮನಕ್ಕೆ ಆಗುವ ಮುದವೇ ಬೇರೆ. ರಸ್ತೆಯ ಬದಿಯ ಮರದಲ್ಲಿ ಕೊಂಬೆಯಿಂದ ಕೊಂಬೆಗೆ ಜಿಗಿಯುವ ಅಳಿಲಿನ ತುಂಟಾಟವನ್ನು ನೋಡುವಾಗ, ಪ್ರೀತಿಯ ಜಗಳದಲ್ಲಿ ಒಂದನ್ನೊಂದು ಬೆನ್ನಟ್ಟುವ ಸಂಭ್ರಮವನ್ನು ನೋಡುವಾಗ, ಯಾವುದೋ ಒಂದು ಹಕ್ಕಿ ತೇಲಿಬಂದ ಗಾಳಿಗೆ ಮೈಯೊಡ್ಡಿ ಚಿಲಿಪಿಲಿಗುಟ್ಟುವುದನ್ನು ನೋಡುವಾಗ ಚಳಿಗೆ ಮುದುಡಿದ್ದ ಹಕ್ಕಿ ಮೋಡದ ಮರೆಯಿಂದ ಸೂರ್ಯಕಿರಣ ನುಗ್ಗಿದಾಗ ರೆಕ್ಕೆ ಕೊಡವಿ ಆಗಸಕ್ಕೆ ನೆಗೆಯುವುದನ್ನು ನೋಡುವಾಗ, ಕೂಲಿ ಹೆಂಗಸೊಬ್ಬಳು ತನ್ನ ಕೆಲಸದ ನಡುವೆಯೂ ಮಗುವಿಗೆ ಹಾಲೂಡುವ ತಾದಾತ್ಮತೆಯನ್ನು ಗಮನಿಸುವಾಗ ನಿಮ್ಮೊಳಗೆ ಏನಾಗುತ್ತಿದೆ ಎನ್ನುವುದನ್ನು ಗಮನಿಸಿ.
ಕಿಟಕಿಯಿಂದ ಇಡೀ ಜಗತ್ತು ಕಾಣಿಸದಿದ್ದರೂ ಪ್ರಕೃತಿಯ ಒಂದು ತುಣುಕು ವಿಶಾಲವಾಗಿ ಕಣ್ಣಮುಂದೆ ತೆರೆದುಕೊಳ್ಳುತ್ತದೆ. ಯಾರೋ ಅಗೆದ ಹೊಂಡದಲ್ಲಿ ನೀರು ತುಂಬುತ್ತದೆ. ನಿರ್ದಾಕ್ಷಿಣ್ಯವಾಗಿ ಕಡಿದ ಮರದಲ್ಲಿ ಚಿಗುರೊಡೆಯುತ್ತದೆ. ಕಾಂಕ್ರೀಟು ಕಾಡಿನ ಮಧ್ಯೆ ಇರುವ ಬಿರುಕಿನಿಂದ ಗಾಳಿ, ಬೆಳಕು ನುಗ್ಗುತ್ತದೆ. ಪ್ರಕೃತಿಯ ಮೇಲೆ ನಡೆದಿರುವ ಅತ್ಯಾಚಾರಕ್ಕೆಲ್ಲ ಪ್ರಕೃತಿ ಮರುಗಿ ಕೊರಗುವುದಿಲ್ಲ. ಇದೊಂದು ವಿಶ್ವಕರ್ತನ ವಿಸ್ಮಯದ ಆಟ, ಸೃಷ್ಟಿಯ ಚೈತನ್ಯಕ್ಕೆ ಅಳಿವಿಲ್ಲ. ಇದನ್ನು ನೋಡುವಾಗ ನಿರಾಸೆ ಮರೆಯಾಗಿ ಚೈತನ್ಯ ತುಂಬುವುದಿಲ್ಲವೇ? ಎಲ್ಲ ಭಾವನೆಗಳಂತೆ ನಿರಾಸೆಯೂ ಶಾಶ್ವತವಲ್ಲ. ಅದೊಂದು ಕ್ಷಣಿಕದ ಭಾವ. ಒಂದು ಘಳಿಗೆಯ ನಿಪಾತ ಸ್ಥಿತಿಯಿಂದ ಹೊರಬಂದರೆ ನಮಗೇ ನಗು ಬರುತ್ತದೆ. ಇಷ್ಟು ಸಣ್ಣ ವಿಷಯಕ್ಕೆ ಇಷ್ಟೊಂದು ನಿರಾಸೆ ಏಕೆ ಎನ್ನುವ ಪ್ರಶ್ನೆ ನಮ್ಮನ್ನು ಎಚ್ಚರಿಸುತ್ತದೆ. ಹೀಗೆ ಆಗದಿದ್ದರೆ ಬದುಕು ಅಸಾಧ್ಯವಾಗುತ್ತಿತ್ತು.
ಕಾಲನ ಚಲನೆಯ ವೇಗಕ್ಕೆ ಸಾಟಿಯೇ ಇಲ್ಲ. ಎಷ್ಟು ಬೇಗ ಕ್ಷಣಗಳು ದಿನಗಳಾಗುತ್ತವೆ! ಕತ್ತಲೆ ಕಳೆದು ಬೆಳಕು ಮೂಡಿದಾಗ ಮುಂದಿನ ಹೆಜ್ಜೆ ಸಿದ್ಧವಾಗಿರುತ್ತದೆ. ನಾವಿಡುವ ಪ್ರತೀ ಹೆಜ್ಜೆಗೂ ಒಂದು ಗತಿಯಿದೆ, ಗುರಿಯಿದೆ. ಹೆಜ್ಜೆ ಯಾವತ್ತೂ ನಿಲ್ಲುವುದಿಲ್ಲ. ನಿಲ್ಲಬಾರದು ಕೂಡಾ. ಕಾಲನ ಚಲನೆಯ ವೇಗದ ಜತೆಗೆ ಹೆಜ್ಜೆ ಹಾಕಲೇಬೇಕಾದ ಅನಿವಾರ್ಯತೆಯಿಂದ ಜಡತ್ವವನ್ನು, ಆಗಿರುವ ನಿರಾಸೆಗಳನ್ನು ಮರೆತು ಕಾಲದ ಜತೆಗೆ ಮುಂದಕ್ಕೋಡಲೇಬೇಕು. ಮುಂದೆಲ್ಲೋ ಅಡಗಿರುತ್ತದೆ ನಿರಾಸೆಯ ಮಡುವಿನಿಂದೆದ್ದು ನಿಲ್ಲುವ ಗೆಲುವಿನ ಒಂದು ಸುಂದರ ಕ್ಷಣ!
*****