ಕದವನ್ನು ತಟ್ಟಿದ ಶಬ್ದವನ್ನು ಕೇಳಿ ಜೀನ್ ವಾಲ್ಜೀನನು ತಲೆ ಯೆತ್ತಿ ನೋಡಿ, ಮೆಲ್ಲನೆ, ‘ ಒಳಗೆ ಬನ್ನಿ,’ ಎಂದನು.
ಬಾಗಿಲು ತೆರೆಯಿತು. ಕೋಸೆಟ್ಟ, ಮೇರಿಯಸ್ಸನೂ ಅವನ ಕಣ್ಣಿಗೆ ಬಿದ್ದರು. ಕೋಸೆಟ್ಟಳು ಕೊಠಡಿಯೊಳಗೆ ನುಗ್ಗಿ ಓಡಿಬಂದಳು. ಮೇರಿಯಸ್ಸನು, ಬಾಗಿಲಿನ ಚೌಕಟ್ಟಿಗೆ ಒರಗಿ, ಹೊಸಿಲಿನ ಮೇಲೆಯೇ ನಿಂತನು.
ಕುಗ್ಗಿ, ಕಂಗೆಟ್ಟು, ನೋಡುವುದಕ್ಕೆ ಭಯವಾಗುವಂತಿದ್ದ ಜೇನ್ ವಾಲ್ಜೀನನು ಎರಡು ತೋಳುಗಳನ್ನೂ ಚಾಚಿ, ನಡುಗುತ್ತ, ಕುರ್ಚಿಯಿಂದ ಮೇಲಕ್ಕೆ ಮಿತಿಮೀರಿದ ಆನಂದದಿಂದ ಎದ್ದು, ‘ಕೋಸೆ ಟ್’ ಎಂದನು.
ಕೋಸೆಟ್ಟಳಿಗೆ ದುಃಖಾನಂದಗಳೆರಡರಿಂದಲೂ ಉಸಿರಾಡ ದಂತೆ ಆಗಿ, ಅವಳು ‘ಅಪ್ಪಾ !’ ಎಂದು ಜೀನ್ ವಾಲ್ಜೀನನ ಎದೆಯ ಮೇಲೆ ಬಿದ್ದು ಆಲಿಂಗಿಸಿದಳು.
ಜೀನ್ ವಾಲ್ಜೀನನು ಹುಚ್ಚು ಹಿಡಿದವನಂತೆ, ‘ ಏನು ? ಕೋಸೆಟ್ಟಿ ? ನೀವೇ ? ಆಹಾ! ನನ್ನ ದೈವವೇ ! ಕೊಸೆಟ್, ನಿಜ ವಾಗಿಯೂ ನೀನೇ ? ನೀನು ಇಲ್ಲಿಗೆ ಬಂದೆಯಾ ? ಹಾಗಾದರೆ ನೀನು ನನ್ನನ್ನು ಕ್ಷಮಿಸಿರುವೆಯಾ?’
ಮೇರಿಯಸ್ಸನು, ಕಣ್ಣೀರು ಕೆಳಗೆ ಬೀಳದಂತೆ ತನ್ನ ರೆಪ್ಪೆ ಗಳನ್ನು ಮುಚ್ಚಿ, ಮುಂದಕ್ಕೆ ಅಡಿಯಿಟ್ಟು, ಉಕ್ಕಿ ಬರುವ ದುಃಖ ವನ್ನು ಅಡಗಿಸಿಕೊಂಡು, ಮೆಲ್ಲನೆ : ಅಪ್ಪಾ, ತಂದೇ ! ‘ ಎಂದನು.
ಅದಕ್ಕೆ ಜೀನ್ ವಾಲ್ಜೀನನು, ಓಹೋ ! ನೀನೂ ನನ್ನನ್ನು ಮನ್ನಿ ಸಿದೆಯಾ ? ‘ ಎಂದನು.
ಮೇರಿಯಸ್ಸನು ಒಂದು ಮಾತನ್ನೂ ಆಡಲಾರದೆ ಸುಮ್ಮ ನಿರಲು, ಜೀನ್ ವಾಲ್ಜೀನನು, “ ನಿನಗೆ ದೇವರು ಒಳ್ಳೆಯದನ್ನು ಮಾಡಲಿ,’ ಎಂದನು. ಕೋಸೆಟ್ಟಳು, ಹೊದ್ದಿದ್ದ ಶಾಲನ್ನು ತೆಗೆದುಹಾಕಿ, ತನ್ನ ಟೋಪಿಯನ್ನು ಹಾಸುಗೆಯ ಮೇಲಕ್ಕೆ ಎಸೆದು, ಇವುಗಳಿಂದ ತೊಂದರೆ,’ ಎಂದು ಹೇಳಿ, ಮುದುಕನ ಮೊಣಕಾಲಿನ ಮೇಲೆ ಕುಳಿತು, ಅವನ ಬಿಳಿಯ ಕೂದಲನ್ನು ಅಂದವಾಗಿ ನೇವರಿಸಿ ಅವನ ಹಣೆಯನ್ನು ಮುದ್ದಿಟ್ಟಳು.
ಆಗ ಜೀನ್ ವಾಲ್ಜೀನನು, ತೊದಲು ಮಾತುಗಳಿಂದ, ‘ಅಯೋ ! ನಾವು ಎಷ್ಟು ಅವಿವೇಕಿಗಳು ! ನಾನು, ಇನ್ನು ಳನ್ನು ಎಂದಿಗೂ ನೋಡುವುದೇ ಇಲ್ಲವೆಂದು ತಿಳಿದಿದ್ದೆನು. ಮಾನ್ ಸಿಯುರ್ ಪಾಂಟ್ ಮರ್ಸಿ, ನೀನು ಒಳಗೆ ಬಂದಾಗ, ನನ್ನಲ್ಲಿ ನಾನು, ” ಎಲ್ಲವೂ ಮುಗಿಯಿತು. ಅವಳ ಪುಟ್ಟ ಉಡುಪುಗಳು ಮಾತ್ರ ಇಲ್ಲಿವೆ. ನಾನು ಮಹಾ ದು:ಖಿಯು, ಮತ್ತೆ ಕೋಸೆ ಟ್ಟಳನ್ನು ನಾನು ಎಂದಿಗೂ ನೋಡುವಂತಿಲ್ಲ” ಎಂದು ಮಾತನಾಡಿ ಕೊಳ್ಳುತ್ತಿದ್ದೆನು, ನೀವು ಮಹಡಿಯ ಮೆಟ್ಟಿಲನ್ನು ಹತ್ತಿ ಬರು ತ್ತಿರುವಾಗಲೆ ಹೀಗೆ ಹೇಳಿಕೊಳ್ಳುತ್ತಿದ್ದೆನು. ನಾನು ಅವಿವೇಕಿ ಯಲ್ಲವೇ ? ಆಲೋಚಿಸು. ನಾವು ದೇವರಿರುವನೆಂಬುದನ್ನು ಗಮನಿಸದೆಯೇ ಆಲೋಚನೆಗಳನ್ನು ಮಾಡುವೆವು. ದೇವರು ಮಾತ್ರ, ” ಅಯ್ಯೋ ಮಂಕಾ ! ನಾನು ನಿನ್ನ ಕೈಬಿಡುವೆನೆಂದು ತಿಳಿದೆಯಾ ? ಇಲ್ಲ, ಇಲ್ಲ, ಹಾಗಾಗಲಾರದು. ಎಲೆ, ದೈವೀ ವ್ಯಕ್ತಿಯೇ ಬಾ, ಇಲ್ಲಿ ನಿನ್ನಂತಹ ಸ್ವರ್ಗಿಯ ದೇವತೆಯ ಸಹಾಯ ವನ್ನು ಅಪೇಕ್ಷಿಸುತ್ತಿರುವ ಬಡವನಾದ ಸತ್ಪುರುಷನೊಬ್ಬನಿರು ವನು,” ಎಂದು ಹೇಳಿದನು, ಆ ದೇವಭಾಮಿನಿಯು ಬಂದೇ ಬಂದಳು. ನನ್ನ ಮುದ್ದು ಕೋಸೆಟ್ಟಳನ್ನು ಮತ್ತೆ ನೋಡಿ ದೆನು ! ಅಯ್ಯೋ ! ನಾನು ಎಷ್ಟು ದುಃಖಿತನಾಗಿದ್ದನು ! ‘ ಎಂದನು.
ಒಂದು ಕ್ಷಣಮಾತು ಮಾತನಾಡಲಾರದೆ ಸುಮ್ಮನಿದ್ದು, ‘ ಆಗಾಗ ಕೋಸೆಟ್ಟಳನ್ನು ಸ್ವಲ್ಪ ಹೊತ್ತಿನ ವರೆಗಾದರೂ ನೋಡ ಬೇಕೆಂದು ನನಗೆ ನಿಜವಾಗಿಯೂ ಬಹಳ ಅಪೇಕ್ಷೆಯಿತ್ತು. ಮನಸ್ಸು ತನ್ನ ಸಂತೋಷಕ್ಕಾಗಿ ಯಾವುದಾದರೂ ಒಂದು ಆವ ಲಂಬನವನ್ನು ಬಯಸುವುದು ಸ್ವಭಾವ. ಆದರೂ ನನ್ನ ಮನಸ್ಸಿನ ಆನಂದಕ್ಕೆ ನಾನೇ ಪ್ರತಿಬಂಧಕನಾಗಿರುವೆನೆಂಬುದು ನನಗೆ ಚೆನ್ನಾಗಿ ಗೊತ್ತಿದ್ದಿತು. ಅದಕ್ಕೆ ಕಾರಣಗಳನ್ನಾಲೋಚಿಸಿ, ಅವರಿಗೆ ನಾನು ಬೇಕಿಲ್ಲ, ನನ್ನ ಸ್ಥಳದಲ್ಲಿ ನಾನು ಬಿದ್ದಿರಬೇಕಲ್ಲದೆ ಅವರ ಸಂಗಡಲೇ ಕಡೆಯವರೆಗೂ ಇರುವುದಕ್ಕೆ ನನಗೆ ಅಧಿಕಾರ ವಿಲ್ಲವೆಂದು ನನ್ನ ಮನಸ್ಸಿಗೆ ನಾನೇ ಹೇಳಿ ಕೊಂಡೆನು, ಆಹಾ, ದೇವಾ ! ಮತ್ತೆ ಅವಳನ್ನು ನೋಡಿದೆನಲ್ಲವೆ !’ ಎಂದನು.
ಅನಂತರ ಮೇರಿಯಸ್ಕನ ಕಡೆಗೆ ತಿರುಗಿ, ‘ ನೀನೂ ಸಹ ಬಂದಿರುವೆ ! ಮಾನ್ಸಿಯರ್ ಫಾಂಟ್‌ಮರ್ಸಿ, ನನ್ನನ್ನು ಕ್ಷಮಿಸು,’ ಎಂದು, ಮತ್ತೆ ಮತ್ತೆ ನುಡಿದನು.
ಈ ಮಾತುಗಳನ್ನು ಕೇಳಿದೊಡನೆಯೇ, ಮೇರಿಯಸ್ಸನ ಮನಸ್ಸಿನ ಭಾವವು ಉಕ್ಕಿ ಹೊರಹೊಮ್ಮಿತು. ಅವನು, ‘ಕೋಸೆಟ್, ಕೇಳಿದೆಯಾ ? ಈತನು ಯಾವಾಗಲೂ ಹೀಗೆಯೇ ! ನನ್ನ ಪ್ರಾಣ ವನ್ನು ಉಳಿಸಿದ ಈತನು, ತಾನೇ ನನ್ನ ಕ್ಷಮೆಯನ್ನು ಬೇಡುತ್ತಿರು ವನು. ಇಷ್ಟೇ ಅಲ್ಲ, ನಿನ್ನನ್ನು ಬೇರೆ ನನಗೆ ಕೊಟ್ಟಿರುವನು. ನನ್ನ ಪ್ರಾಣವನ್ನೂ ಉಳಿಸಿ, ನಿನ್ನ ನ್ಯೂ ನನಗೆ ಕೊಟ್ಟು, ತಾನು ಯಾವ ಸುಖಪಟ್ಟನು? ತನ್ನ ಸುಖಪರಿತ್ಯಾಗದಿಂದ ಆತ್ಮ ಯಜ್ಞವನ್ನೇ ಮಾಡಿಕೊಳ್ಳುತ್ತಿರುವನು. ಮನುಷ್ಯನೆಂದರೆ ಇವನು. ಕೃತ ಘ್ನನೂ, ಮರವೆಗೆ ವಶನಾದ ನಿಷ್ಕರುಣಿಯ, ಅಪರಾಧಿಯ ಆಗಿರುವ ನನಗೆ ವಂದನೆಯನ್ನರ್ಪಿಸುವನು. ಈ ಮಹಾ ಪುರು ಷನ ಪಾದಸೇವೆಯಿಂದ ನನ್ನ ಜೀವಮಾನವೆಲ್ಲವನ್ನೂ ಕಳೆದರೂ ಅದು ಅತ್ಯಲ್ಪವೇ ಆಗುವುದು,’ ಎಂದನು.
ಅದಕ್ಕೆ ಜೀನ್ ವಾಲ್ಜೀನನು ಪಿಸುಮಾತಿನಿಂದ, ಹುಶ್ ! ಹುಶ್ ! ಅದೆಲ್ಲವನ್ನೂ ಏತಕ್ಕೆ ಹೇಳುವೆ, ಒಂದನ್ನೂ ಹೇಳಬೇಡ,’ ಎಂದನು.
ಆಗ ಮೇರಿಯಸ್ಸನು ಭಕ್ತಿಗೌರವಭರಿತವಾದ ಕೋಪದಿಂದ, ‘ತಂದೇ, ಆದರೆ ನೀವು ಆ ವಿಷಯಗಳೆಲ್ಲವನ್ನೂ ಏತಕ್ಕೆ ನನಗೆ ಹೇಳಲಿಲ್ಲ ? ಅದು ನಿಮ್ಮದೂ ತಪ್ಪು, ನೀವು ಜನರ ಪ್ರಾಣವನ್ನು ಉಳಿಸುವಿರಿ, ಅದನ್ನು ಅವರಿಗೆ ತಿಳಿಸದೆ ಗೋ ಪ್ಯವಾಗಿಡುವಿರಿ. ಇನ್ನೂ ಎಷ್ಟೋ ಉತ್ತಮ ಕಾವ್ಯಗಳನ್ನು ಮಾಡಿ, ನಿಮ್ಮ ನಿಜ ಸ್ಥಿತಿಯನ್ನು ಹೇಳುವುದರಲ್ಲಿ ನಿಮ್ಮನ್ನು ನೀವೇ ದೂರಿ ದೂಷಿಸಿ ಕೊಳ್ಳುವಿರಿ, ಇದು ಬಹಳ ಭಯಂಕರ ವಿಚಾರ,’ ಎಂದನು.
ಅದಕ್ಕೆ ಜೀನ್ ವಾಲ್ಜೀನನು, “ ನಾನು ನಿಜಾಂಶವನ್ನೇ ಹೇಳಿದೆನು,’ ಎಂದನು.
ಮೇರಿಯಸ್ಸನು, ‘ಇಲ್ಲ ; ನಿಜಾಂಶವೆಲ್ಲವನ್ನೂ ಹೇಳಿಬಿಟ್ಟಿ ದ್ದರೆ, ಅದು ನಿಜವಾಗುತ್ತಿದ್ದಿತು. ನೀವು ಹಾಗೆ ಹೇಳಲಿಲ್ಲ. ನೀವು ಮೂನ್ ಸಿಯುರ್ ಮೇಡಲಿನನಾಗಿದ್ದಿರಿ; ಆ ವಿಚಾರ ವನ್ನೇತಕ್ಕೆ ಹೇಳಲಿಲ್ಲ ? ನೀವು ಜೇವರ್ಟನ ಪ್ರಾಣವನ್ನು ಉಳಿಸಿ ದ್ವಿರಿ ; ಅದನ್ನೇತಕ್ಕೆ ಹೇಳಲಿಲ್ಲ ? ನನ್ನ ಪ್ರಾಣವುಳಿದುದೂ ನಿಮ್ಮಿಂದ, ಅದನ್ನೇತಕ್ಕೆ ಹೇಳಲಿಲ್ಲ ?’ ಎಂದು ಕೇಳಿದನು.
‘ ಏತಕ್ಕೆಂದರೆ, ನಾನು ಇವೆಲ್ಲವನ್ನೂ ವಿವರವಾಗಿ ಹೇಳಿ ದ್ದರೆೆ ಎಲ್ಲರಿಗೂ ಅದರಿಂದ ತೊಂದರೆಯುಂಟಾಗುತ್ತಿದ್ದಿತು.’
‘ ಏತಕ್ಕೆ ತೊಂದರೆ ? ಯಾರಿಗೆ ತೊಂದರೆ ? ನೀವು ಇಲ್ಲಿಯೇ ಇರುವಿರೆಂದು ತಿಳಿದಿರುವಿರಾ ? ನಾವು ನಿಮ್ಮನ್ನು ಹಿಂದಕ್ಕೆ ಕರೆದು ಕೊಂಡು ಹೋಗುವೆವ. ನೀವು ನಮಗೆ ಸೇರಿದವರು, ನಮ್ಮಲ್ಲಿ ಒಬ್ಬರು. ನೀವು ಅವಳಿಗೂ ತಂದೆ, ನನಗೂ ತಂದೆ ; ನೀವು ಈ ಭಯಂಕರವಾದ ಮನೆಯಲ್ಲಿ ಒಬ್ಬರೇ ಇನ್ನು ಒಂದು ದಿನವೂ ಇರಕೂಡದು, ನಾಳೆಯ ದಿನ, ನೀವು ಇಲ್ಲಿಯೇ ಇರುವಿರೆಂದು ತಿಳಿಯಬೇಡಿ.’
ಜೀನ್ ವಾಲ್ಜೀನನು, “ ನಾಳೆಯ ದಿನ ನಾನು ಇಲ್ಲಿಯೂ ಇರುವುದಿಲ್ಲ ; ಮತ್ತು ನಿಮ್ಮ ಮನೆಯಲ್ಲಿಯೂ ಇರುವುದಿಲ್ಲ,’ ಎಂದನು.
ಬಾಗಿಲಲ್ಲಿ ಏನೋ ಶಬ್ದವಾಯಿತು. ಅದು ವೈದ್ಯನು ಒಳಕ್ಕೆ ಬರುತ್ತಿದ್ದ ಇಬ್ಬವ, ಜೀನ್’ ವಾಲ್ಜೀನನು, ‘ನಮಸ್ಕಾರ ವೈದ್ಯರೇ, ಹೋಗಿಬರುತ್ತೇನೆ ಇದೋ, ನನ್ನ ಮಕ್ಕಳು ಇವರು,’ ಎಂದನು.
ಮೇರಿಯಸ್ಸನು ವೈದ್ಯರ ಬಳಿಗೆ ಬಂದು, ‘ಮಾನ್‌ಸಿ ಯುರ್ ? ‘ ಎಂದನು. ಅವನು ಉಚ್ಚರಿಸಿದ ರೀತಿಯಿಂದ ಅದರಲ್ಲಿ ಒಂದು ಪ್ರಶ್ನೆಯೇ ಗರ್ಭಿತವಾಗಿತ್ತು.
ವೈದ್ಯನು ಈ ಪ್ರಶ್ನೆಗೆ ತನ್ನ ಭಾವಸೂಚಕ ದೃಷ್ಟಿಯಿಂದಲೇ ಉತ್ತರ ಕೊಟ್ಟನು.
ಅನಂತರ ವೈದ್ಯನು, ಜೀನ್ ವಾಲ್ಜೀನನ ನಾಡಿ ಹಿಡಿದು ಪರೀಕ್ಷಿಸಿ, ಕೋಸೆಟ್ಟಳನ್ನೂ ಮೇರಿಯಸ್ಸನನ್ನೂ ನೋಡಿ, ‘ಓಹೋ ! ಈತನು ಬಯಸುತ್ತಿದ್ದುದು ನಿಮ್ಮನ್ನೇ !’ ಎಂದು ಗೊಣಗುಟ್ಟಿ, ಮೇರಿಯಸ್ಸನ ಕಿವಿಯ ಬಳಿಗೆ ಬಾಗಿ, ಮೆಲ್ಲನೆ, ‘ಕಾಲ ಮೀರಿ ಹೋಯಿತು,’ ಎಂದನು.
ಜೀನ್’ ವಾಲ್ಜೀನನು, ಕೋಸೆಟ್ಟಳನ್ನು ದೃಷ್ಟಿಸಿ ನೋಡು ತಿದ್ದ ಹಾಗೆಯೇ, ಮೇರಿಯಸ್ಸನ ಕಡೆಗೂ ವೈದ್ಯನ ಕಡೆಗೂ ತನ್ನ ಗಂಭೀರವಾದ ದೃಷ್ಟಿಯನ್ನು ತಿರುಗಿಸಿದನು. ಅವನ ಬಾಯಿಂದ ಅಸ್ಪಷ್ಟವಾಗಿ ಹೊರಟ ಈ ಮಾತುಗಳು ಅವರಿಗೆ ಕೇಳಿಸಿದುವು : ‘ ಸಾಯುವುದು ಸುಲಭ ; ಆದರೆ ಈಗ ಜೀವಿಸದೆ ಹೋಗುವುದು ಬಹು ಭಯಂಕರ.’
. ಬಾಗಿಲಲ್ಲಿದ್ದ ಸರಿಚಾರಿಣಿಯು ಬಂದು, ಅರ್ಧ ತೆರೆದಿದ್ದ ಬಾಗಿಲಿನಿಂದ ಒಳಗೆ ನೋಡುತ್ತಿದ್ದಳು. ವೈದ್ಯನು ಅವಳನ್ನು ಹೊರಗೆ ಕಳುಹಿಸಿಬಿಟ್ಟನು ; ಆದರೆ ಭಕ್ತಿ ವಿಶ್ವಾಸಗಳಿಂದ ಕೂಡಿದ ಆ ದಯಾವತಿಯು ಹೋಗುವಾಗ, ಉತ್ಕ್ರಮಣಾವಸ್ಥೆಯಲ್ಲಿದ್ದ ಮುದುಕನನ್ನು ನೋಡಿ, ‘ ಪಾದ್ರಿಗಳನ್ನು ಕರೆತರಬೇಕೆ ? ಎಂದು ಅಳುತ್ತ ಕೇಳಿದಳು. ವೈದ್ಯನು ಇದಕ್ಕೆ ಅಡ್ಡಿ ಮಾಡಲು ಸಾಧ್ಯ ವಾಗಲಿಲ್ಲ.
ಜೀನ್ ವಾಲ್ಜೀನನು, ಇಲ್ಲಿ ಒಬ್ಬರಿದ್ದಾರೆ’ ಎಂದು, ತನ್ನ ಕೈಬೆರಳಿಂದ ತಲೆಯ ಮೇಲ್ಗಡೆಯಲ್ಲಿ ತೋರಿಸಿದನು. ಅದನ್ನು ನೋಡಿದರೆ ಅವನ ಕಣ್ಣಿಗೆ ಯಾರೋ ಕಾಣುತ್ತಿದ್ದರೆಂದೇ ಹೇಳುವ ಹಾಗಿತ್ತು. ಹಿಂದೆ ಇವನಿಗೆ ಉಪಕಾರ ಮಾಡಿದ ಪಾದ್ರಿಯೇ ಈ ಮರಣಸಂಕಟಕ್ಕೆ ಸಾಕ್ಷಿಯಾಗಿ ನಿಂತು ಅವನಿಗೆ ಕಾಣುತ್ತಿದ್ದಿರ ಬಹುದು.
ಕೋಸೆಟ್ಟಳು ಮೆಲ್ಲನೆ, ಅವನ ಬೆನ್ನಿನ ಕೆಳಕ್ಕೆ ಒಂದು ದಿಂಬನ್ನು ಇಟ್ಟಳು. ಜೀನ್ ವಾಲ್ಜೀನನು ಮತ್ತೆ, ‘ಮಾನ್‌ಸಿ ಯುರ್ ಪಾಂಟಮರ್ಸಿ, ನೀನು ಸ್ವಲ್ಪವೂ ಭಯಪಡಬೇಡ, ಆರುನೂರು ಸಾವಿರ ಫ್ರಾಂಕುಗಳೂ ನಿಜವಾಗಿಯೂ ಕೋಸೆಟ್ಟಳ ಹಣವು. ನಾನು ಆ ಹಣವನ್ನು ಮಾಂಟ್‌ಫರ್ ಮೆಯಿಲ್ ಎಂಬ ಪ್ರಾಂತ್ಯದ ಹತ್ತಿರ ಬೇರು ಪಟ್ಟಣದ ಅರಣ್ಯದಲ್ಲಿ ಒಂದು ಕಡೆ ಸುರಕ್ಷಿತವಾಗಿ ಹೂತಿಟ್ಟಿದ್ದೆನು,” ಎಂದನು.
ನಮಗೆ ಪ್ರಿಯವಾದ ವ್ಯಕ್ತಿಯೊಂದು ಸಾಯುವ ಸಮಯ ದಲ್ಲಿ ನಾವು ಅದನ್ನು ಒಂದು ಪ್ರೇಮ ದೃಷ್ಟಿಯಿಂದ ನೋಡುವೆವು. ಆ ದೃಷ್ಟಿಯು ಆ ವ್ಯಕ್ತಿಗೆ ಹತ್ತಿಕೊಂಡು ಅದನ್ನು ಹಿಂದಿಹಿಂದಕ್ಕೆ ಎಳೆಯುವಂತಿರುವದು. ಮೇರಿಯಸ್ಸನೂ ಕೋಸೆಟ್ಟಳೂ ಕಾತರ ದುಃಖಗಳಿಂದ, ಜೀನ್ ವಾಲ್ಜೀನನಿಗೆ ಸನ್ನಿಹಿತವಾಗಿರುವ ಮರಣ ಕ್ಕಾಗಿ ಏನು ಹೇಳುವುದಕ್ಕೂ ತೋರದೆ, ಮಂಕಾಗಿ, ನಿರಾಶರಾಗಿ, ನಡುಗುತ್ತ ಒಬ್ಬರ ಕೈಯನ್ನೊ ಬ್ಬರು ಹಿಡಿದು ಮಕರಂತೆ ನಿಂತಿದ್ದರು.
ಜೀನ್ ವಿನನ ಮುಖವು ಕಳಾಹೀನವಾಗಿ ಅದರಲ್ಲಿ ಸ್ವಲ್ಪ ಮುಗುಳ್ಳಗೆ ಕಂಡಿತು. ಅದರಲ್ಲಿ ಜೀವವಿರಲಿಲ್ಲವೆಂತಲೇ ಹೇಳ ಬಹುದು. ಶ್ವಾಸವು ನಿಲ್ಲುತ್ತ ಬಂತು. ನೋಟವು ಗಂಭೀರ ವಾಯಿತು. ಅವನ ಶರೀರವು ಮರಣಾವಸ್ಥೆಯಲ್ಲಿರುವ ಒಂದು ಶವದಂತೆ ಇತ್ತು.
ಜೀನ್ ವಾಲ್ಜೀನನು ಮೊದಲು ಕೋಸೆಟ್ಟಳ ಬಳಿಗೂ ಅನಂತರ ಮೇರಿಯಸ್ಸನ ಕಡೆಗೂ ಜರುಗುವಂತೆ ಕಂಡನು. ಅದೇ ಅವರ ಕಡೆಯ ಘಂಟೆಯ ಕಡೆಯ ನಿಮಿಷ, ಅವನು ಬಹಳ ಮೆಲ್ಲನೆಯ ಸ್ವರದಿಂದ ಅವರೆಡನೆ ಮಾತನಾಡಲಾರಂಭಿಸಿದನು. ಈ ಶಬ್ಬವು ಯಾವುದೋ ಕಡೆಯಿಂದ ಬರುತ್ತಿದ್ದಂತೆ ಇತ್ತು. ಆಗಲೇ ಅವನು ಇವರಿಬ್ಬರನ್ನೂ ಅಗಲಿ ಹೋಗಿದ್ದನೆಂದು ಹೇಳಿ ಬಹುದಾಗಿತ್ತು.
ಮಾನ್ಸಿಯುರ್ ಪಾಂಟ್ ಮರ್ಸಿ, ನಾನು ನಿನ್ನನ್ನು ಸದಾ ಪ್ರೀತಿಸಿರಲಿಲ್ಲವೆಂಬ ನನ್ನ ತಪ್ಪನ್ನು ಒಪ್ಪಿಕೊಳ್ಳುತ್ತೇನೆ. ಇದಕ್ಕಾಗಿ ನಿನ್ನ ಕ್ಷಮೆಯನ್ನು ಬೇಡುವೆನು. ಈಗಲಾದರೋ, ಅವಳೂ ನೀನೂ ಇಬ್ಬರೂ ನನಗೆ ಒಂದೇ ರೀತಿಯಾಗಿ ಪ್ರಿಯವಾಗಿರುವಿರಿ. ನಾನು ನಿಮಗೆ ಬಹಳ ಕೃತಜ್ಞನಾಗಿದ್ದೇನೆ. ನೀನು ಕೋಸೆಟ್ಟಳನ್ನು ಸುಖ ವಾಗಿ ಕಾಪಾಡುವೆಯೆಂದು ನನ್ನ ನಂಬಿಕೆ, ನನ್ನ ವಿಷಯವನ್ನು ಸ್ವಲ್ಪ ಸ್ಮರಿಸಿಕೊಳ್ಳಿ. ನೀವು ಪುಣ್ಯಶಾಲಿಗಳು, ನನ್ನ ಗತಿಯೇನಾ ಗುವುದೆಂಬುದು ನನಗೆ ತಿಳಿಯದು. ನನ್ನ ಕಣ್ಣಿಗೆ ಒಂದು ಬೆಳಕು ಕಾಣುವುದು. ಬನ್ನಿ, ಇನ್ನೂ ಸವಿಾಸಕ್ಕೆ ಬನ್ನಿ , ನಾನು ಆನಂದದಿಂದ ಪ್ರಾಣಬಿಡುವೆನು. ನಾನು ನನ್ನ ಕೈಗಳನ್ನು ಪ್ರೀತಿಯಿಂದ ನಿಮ್ಮಿಬ್ಬರ ತಲೆಯ ಮೇಲೆ ಇಟ್ಟು ಆಶೀ ರ್ವದಿಸುವೆನು,’ ಎಂದನು.
ಕೋಸೆಟ್ಟಳೂ ಮೇರಿಯಸ್ಸನೂ, ಉಕ್ಕಿ ಬಂದ ದುಃಖದಿಂದ ಕಣ್ಣೀರುಗರೆಯುತ್ತ ಗದ್ಗಗ ಕಂಠದಿಂದ ಜೀನ್ ವಾಲ್ಜೀನನ ಒಂದೊಂದು ಕೈಯ. ಒಬ್ಬೊಬ್ಬರು ಹಿಡಿದುಕೊಂಡು ಮೊಣ ಕಾಲೂರಿ ಕುಳಿತರು. ಆ ಮಹನೀಯನ ಕೈಗಳು ಇನ್ನು ಚಲಿಸಲಿಲ್ಲ.
ಅವನು ಹಿಂದಕ್ಕೆ ಬಿದ್ದು ಬಿಟ್ಟನು. ಮೇಣದ ಬತ್ತಿಗಳ ಬೆಳಕು ಅವನ ಮೇಲೆ ಬಿದ್ದಿತ್ತು. ಬೆಳ್ಳಗಿದ್ದ ಅವನ ಮುಖವು ಮೇಲೆ ಸ್ವರ್ಗವನ್ನು ನೋಡುತ್ತಿದ್ದಿತು. ಕೋಸೆಟ್ಟಳೂ, ಮೇರಿ ಯಸ್ಸನೂ ಅವನ ಕೈಗಳನ್ನು ಎಷ್ಟೋ ಸಲ ಮುತ್ತಿಟ್ಟು ಕೊಂಡರು, ಅವನು ಮೃತನಾದನು,ಈ ರಾತ್ರಿಯು ನಕ್ಷತ್ರಗಳೂ ಕಾಣದಂತಹ ಕತ್ತಲಿಂದ ಕೂಡಿತ್ತು. ಆ ಅಂಧಕಾರದಲ್ಲಿ ಯಾವನೋ ತೇಜೋಮಯ ನಾಾದ ದೇವದೂತನು, ತನ್ನ ರೆಕ್ಕೆಗಳನ್ನು ವಿಸ್ತರಿಸಿ ಈ ಆತ್ಮವನ್ನು ಕರೆದೊಯ್ಯಲು ಕಾದಿದ್ದನೆಂಬುದಕ್ಕೆ ಯಾವ ಸಂದೇಹವೂ ಇರಲಿಲ್ಲ.
*****
ಮುಗಿಯಿತು
ವಿಕ್ಬರ್ ಹ್ಯೂಗೋ ನ “ಲೆ ಮಿಸರಾ ಬಲ್ಸ್”
ಜೆ ಲ ಫಾರ್‍ಜ್ ರವರ ಸಂಕ್ಷೇಪ ಪ್ರತಿಯ ಅನುವಾದ