ಬಿಸಿಲುರಿಯ ಸೂರ್ಯನಿಗೆ
ಬೆಳ್ಳನೆಯ ಬೆಳಕಿಗೆ
ನೀನು ‘ಗುಡ್-ನೈಟ್’ ಎಂದಿದ್ದು
ನನಗೆ ಕೇಳಿರಲಿಲ್ಲ
ಪ್ರತಿ ಹಗಲಿಗೊಂದು ಇರುಳು
ನಂತರ ನರಳಿ ಮರಳುವ ಹಗಲು
ಹೀಗೊಂದು ಕತೆ ಉಂಟೆಂದು
ನನಗೆ ತಿಳಿದಿರಲಿಲ್ಲ
ಆಕಾಶದಿಂದ ಇಳೆಗೆ
ಆಗಿ೦ದ ಈಗ
ಬೀಜದಿಂದ ಬೆಳೆಗೆ
ಬೆಳೆಯುತ್ತ ಕತ್ತಲೆ
ನಾಡು ಕವಿಯುವ ನೋಟ
ಕಂಡಿರಲಿಲ್ಲ
ಕಂಡರೂ ಈ ರೀತಿ
ಇಷ್ಟೊಂದು ಅನುಭವ
ಉಂಡಿರಲಿಲ್ಲ
ಹಗಲಿಗೆ ಸೂರ್ಯನೊಬ್ಬನೆ ಸಾಕೆ?
ಕತ್ತಲೆಗೆ ಚಂದ್ರ, ಕೋಟಿ ತಾರೆಗಳೆಲ್ಲ ಬೇಕೆ ?
ಯಾಕೆ ?
ಯಾಕೆಂದು ತಿಳಿಯುವುದಿಲ್ಲ
ಹಗಲಿಗೆ ಇರುಳಿನ ಸೂಜಿ
ಚುಚ್ಚಿ ಬದುಕಿನ ಬಟ್ಟೆ
ಹೊಲಿಯುವ ಭೂಪತಿಯನ್ನು
ನಾನು ಕಂಡಿಲ್ಲ
ಹೆಸರು ಕೇಳಿಲ್ಲ
ಇದರರ್ಥ, ನೀ ಬೇಡ ಎಂದಲ್ಲ
ನೀ ಬರದಿದ್ದರೆ ದಿನವಾಗುವುದಿಲ್ಲ
ಸಿಹಿ ನಿದ್ರೆಗಳು ಮಧುರ ಸ್ವಪ್ನಗಳು
ಮತ್ತೂ ರುಚಿ ರಾತ್ರಿಗಳು
ನಿನ್ನ ಮರೆಸುವುದಿಲ್ಲ
ಹಗಲಿನಿಂದ ರಾತ್ರಿ
ರಾತ್ರಿಯಿಂದ ಬೆಳಕು
ದಿನದಿಂದ ವಾರ
ನಾವು ಬೆಳಕಿನಿಂದ ಕತ್ತಲೆಗೆ
ಸರಿಯುವ ಬತ್ತಲೆ ಸತ್ಯ
ನನಗೆ ತಿಳಿಯದಿಲ್ಲ
ಒಂದು ಬೆಳಕು ನಿನ್ನಲ್ಲಿ
ಕರಗುವ ಮೊದಲು
ಅಥವಾ ಕಡೆಗೆ
ನಾನೂ ನಿನ್ನಲ್ಲೇ ಕರಗುವ ದಿವಸ
ದೂರವಿಲ್ಲ
ಅದು ಸತ್ಯ
ನಾನು ಸಾಕ್ಷಿ ಮಾತ್ರ
*****