ಉದುರಿಸುತ ಮಣಿ ಮಂಜು | ಮಾಡಿ ಮಲ್ವಾಸುಗಳ
ನೆಲದ ಹಸುರನು ಮುಚ್ಚಿ – ಹರಡಿ ಬಿಳಿ ಬಣ್ಣಗಳ
ಬೆದೆಯನಾರಿಸಿ ತಣ್ಪ | ನೆರಚಿ ಚಳಿ ಹೊದಿಕೆಗಳ
ಹೊದಿಸಿ ನಡುಗುವ ಕುಳಿರ | ನೂಕುತಿದೆ ಕುರುಡಿರುಳ.
ಬೆಟ್ಟಗಳ ನಡುವಿಂದ | ಹರಿದು ಬಹ ಹೊಳೆಯಂತೆ
ಮಂಜಿನೆಳೆ ವಸ್ತ್ರಗಳ | ಹೊದಿಸಿ ಚಳಿ ಮುರಿವಂತೆ
ಆಗಸವೆ ಧರೆಗಿಳಿದು | ಬೆಟ್ಟದಲಿ ನಿಂದಂತೆ
ತೋರುತಿದೆ ಸುತ್ತಲುಂ | ತುಹಿನಗಿರಿ ಬಂದಂತೆ.
ರಸವೇರಿ ಚೆಲುವೆತ್ತು | ಮೈದೋರಿ ಕಾಣುತಿವೆ
ಪೂಗಾಯಿ ಪಣ್ಗಳುಂ | ನುಡಿಗಳಿಗೆ ಸಿಲುಕದಿವೆ
ಸುತ್ತಣ ದಿಗಂತದಲಿ | ಹಿಮದ ರೇಖೆಯ ನಾವೆ
ಮನ ಸೆಳೆದು ಜಗ ಮರೆದು | ಎಲ್ಲೆಲ್ಲು ತೇಲುತಿವೆ.
ಓಡಿಹೋದನು ಚಂದ್ರ | ಹಿಮಗಿರಿಯ ಸೆರೆಯಲ್ಲಿ
ಚಳಿಯ ಹೂದಿಕೆಯ ಸೂರ್ಯ | ಝಳನೀಗಿ ಹಗಲಲ್ಲಿ
ಕುಳಿರ ಕುಣಿತಕೆ ಸೋತು | ಪಣ್ಪಿರಿಯೆ ಮರದಲ್ಲಿ
ಮೈಯುರುಬಿ ನುಡಿಯುತಿವೆ | ಗಿಳಿವಿಂಡು ಮರೆಯಲ್ಲಿ.
ಎಳೆಯ ಹರೆಯದ ವೃದ್ಧ | ರೆಲ್ಲರುಂ ಗಡಗಡನೆ
ನಡುಗುತ್ತ ಬೆನ್ ಬಾಗಿ | ಮೈ ಕುಗ್ಗಿ ಬರುತೊಡನೆ
ಕುಳಿರು ಬರುತಿರೆ ಸಾಗಿ | ಸೂರ್ಯನಲ್ಲೆನುತೊಡನೆ
ಉರಿಗೆ ನೀರೆರೆದಂತೆ | ಸಹಿಸದೆಯೆ ಬಲು ಬೇನೆ.
ಕಾಯ್ಗಟ್ಟಿ ಮೈಯೆಲ್ಲ | ಹುರಿಗಟ್ಟಿ ನವಿರೆಲ್ಲ
ಹಿಮ ತಣ್ಪು ಒಳಗೇರೆ | ರಕುತಮಂ ಹೊರಚೆಲ್ಲಿ
ಕುಳಿರ ಚಲುವಂ ನೋಡೆ | ಮೈಯೊಡೆವ ತೆರನೆಲ್ಲ
ಕೂಪಗೊಂಡಿವೆ ಹಸಿದು | ನಿಮಿರಿ ರೋಮಗಳೆಲ್ಲ.
*****