ತಾಯಿಯಂತೆ ಭರಿಸುವೆ ನಾ ಈ ಇವರುಗಳ
ನನ್ನನ್ನು ಹಂಚಿಕೊಂಡವರ ದೇಶದ ನೆಲವ
ಇಂಚಿಂಚು ತಿಂದವರ ನನ್ನ ಮನಸ್ಸೆಂಬ
ಸರೋವರದಲೀಸಾಡ ಬಂದವರ, ನನ್ನ
ಒಂದೊಂದು
ಮೂಲೆಯನೂ ತಮ್ಮದೆಂದು ಕೊಂಡವರ
ಗಲ್ಲಿಯ ಗುರುವೊಬ್ಬ ಜಗದ್ಗುರುವಾದಂತೆ
ನನ್ನ ಸಹಿಷ್ಣುತೆಯ ಅನಿವಾರ್ಯತೆಯ
ನರಿಯವರ,
ಒಲ್ಲದವರ, ತಮ್ಮ ಪೌರುಷಕೆಂದೇ ನೆಲವೆಂದವರ
ಹುಸಿ ಭ್ರಮೆಯಲಿ ಮಿಂದವರ ಮುನ್ನ ಶತ
ಕೋಟಿ ರಾಯರುಗಳಾಳಿದ ನೆಲವ ತನ್ನದೆಂದೆನುತ
ಶಾಸನವ ಬರೆಸಿದವರ, ಗರ್‍ವರಸ ಸೋರಿದವರ.
ಒಂದು ಮಳೆಗೆಂದೂ ನೆನೆಯದ ಭೂಮಿ
ಕಾದಿರುವಂತೆ ಹತ್ತಾರು ಮಳೆಗೆ ಕಾದಿರುವೆ
ನಾನು, ತೆರೆದಂತೆ ಭಾನು ಈ ಜಗದ
ಮೂಲೆ ಮೂಲೆಯಲಿರುವ ಈ ಇವರ
ಒಂದೊಂದೇ ಫೋನಿಗಾಗಿ, ಒಂದೊಂದೇ ಪತ್ರ
ಕಾಗಿ, ಒಂದೊಂದೇ ಭೇಟಿಗಾಗಿ, ತನ್ನಿಂದಲೇ
ಇವಳು ಎಂಬ ಇವರ ಭ್ರಮೆಗಾಗಿ
ಏಕಿವರು ಅರ್ಥಮಾಡಿಕೊಳ್ಳುವುದಿಲ್ಲ
ಎಂದು ಕೊರಗಿದ್ದೇನೆ, ಏಕಿವರು
ಸಹಿಸುವುದಿಲ್ಲ ಎಂದು ಮರುಗಿದ್ದೇನೆ.
ಚಲನೆಯ ನಿಯಮದ ಆಳ ತಿಳಿಯದ
ಇವರ ಅಜ್ಞಾನಕೆ ಅತ್ತಿದ್ದೇನೆ. ತಾನು
ತುಂಬಲಾರದ ಶೂನ್ಯವ ತುಂಬಲಿರುವ
ಇನ್ನೊಂದು ಬರುವಿಕೆಯನಿವರೇಕೆ
ಅರಿಯಬಾರದು ಎಂದು ವಾದಿಸಿದ್ದೇನೆ.
ಮುಖ ಊದಿಸಿದ್ದೇನೆ ಬಾಯಿಮಾತ್ರ
ಬಿಡಲಾರೆ, ಬಿಟ್ಟರೆ ಮಾರಾಮಾರಿ.
ಇವರೇ ರಾವಣ ಕುಂಭಕರ್‍ಣರಾಗುತ್ತಾರೆ
ತಾವು ರಾಮ ಲಕ್ಷ್ಮಣರೆಂದೇ ಭಾವಿಸುತ್ತಾರೆ.
ದುರ್ಯೋಧನನ ಒಳಗೇ ಅಡಗಿ ಕುಳಿತು ಕೃಷ್ಣ
ನಂತೆ ನಟಿಸುತ್ತಾರೆ ಇವರು ಯಾವ ರಾಮಾ
ಯಣ ಭಾರತ ಬರೆಯುವುದು ಬೇಡ.
ಮಳೆ ಹನಿ ಹೇಗೆ ಹಸಿರೊಡೆಸಿ ಕರ್ತವ್ಯ ತೀರಿಸಿ
ನಡೆಯುವುದೋ ಹಾಗೆ ಬಾಳಿರೋ
ಎಂದು ಬುದ್ದಿ ಹೇಳಿದ್ದೇನೆ. ಏಕಾಂತದಲಿ
ಕಚ್ಚಾಡಿದ್ದೇನೆ.
ಅವನ ಸುದ್ದಿ ಇವನ ಬಳಿ ಇವನ ಸುದ್ದಿ ಅವನ
ಬಳಿ ಎತ್ತುವಂತಿಲ್ಲ ಕುರುಕ್ಷೇತ್ರ ಕಣ್ಣ
ಪಟ್ಟಿ, ಕಟ್ಟಿದ ಗಾಂಧಾರಿಯಂತ ಒಳಗೊಳಗೇ
ಕುದ್ದಿದ್ದೇನೆ. ಇವರು ಹರಿದು ಚಿಂದಿ
ಮಾಡಿದ ಈ ತೇಪೆ ದೇಹದ ಮೇಲೆಲ್ಲಾ
ನನ್ನ ಕರುಣೆಯ ವರ್ಷ ಸುರಿಸಿದ್ದೇನೆ.
ಒಂದೇ ತಟ್ಟೆಯಲಿವರಿಗೆ ಉಣಬಡಿಸಿದ್ದೇನೆ.
ಉಣ್ಣುತ್ತಲೇ ತನ್ನದು ತಟ್ಟೆ ಎಂದು ಭಾವಿಸುವ
ಅವರ ಮೂರ್‍ಖತನವ ಸೆರಗಿನಲಿ ಮುಚ್ಚಿ
ಇನ್ನೊಬ್ಬನಿಗೆ ತುತ್ತಿಕ್ಕಿದ್ದೇನೆ. ಸದಾ ಇವರಿ
ಗಾಗಿ ಬಿಕ್ಕಿದ್ದೇನೆ ಮತ್ತು ಇನ್ನೂ ಬದುಕಿದ್ದೇನೆ.
*****
-ಗಾಂಧಿ ಬಜಾರ್ ಪತ್ರಿಕೆ