ರಂಗಣ್ಣನ ಕನಸಿನ ದಿನಗಳು – ೧೫

ರಂಗಣ್ಣನ ಕನಸಿನ ದಿನಗಳು – ೧೫

ಸಾಹೇಬರ ತನಿಖೆ

ಜನಾರ್ದನಪುರಕ್ಕೆ ಎರಡು ಮೈಲಿ ದೂರದಲ್ಲಿ ಒಂದು ನಿರ್ಜನ ಪ್ರದೇಶದಲ್ಲಿ ಬಂಗಲೆ. ರಂಗಣ್ಣ ಒಳ್ಳೆಯ ಉಡುಪನ್ನು ಧರಿಸಿಕೊಂಡು ಬಂಗಲೆಗೆ ಹತ್ತೂವರೆ ಗಂಟೆಗೆ ಸರಿಯಾಗಿ ಹೋದನು. ಸಾಹೇಬರಿಗೆ ಅಡಿಗೆಯ ಏರ್ಪಾಟು ನಡೆದಿತ್ತು. ಗುಮಾಸ್ತೆ ನಾರಾಯಣ ರಾವ್ ಸಾಹೇಬರ ಕೊಟಡಿಯಲ್ಲಿ ಕಚೇರಿಯ ಕಾಗದಗಳನ್ನು ಸರಿಯಾಗಿ ಜೋಡಿಸಿಟ್ಟು ಹೊರಕ್ಕೆ ಬಂದನು. ಸುಮಾರು ಹನ್ನೊಂದು ಗಂಟೆಯ ಹೊತ್ತಿಗೆ ಮೋಟಾರು ಬಂಗಲೆಗೆ ಬಂತು ; ಸಾಹೇಬರು ಇಳಿದರು. ನಮಸ್ಕಾರಾದಿ ಪ್ರಕರಣಗಳು ಮುಗಿದುವು. ಸಾಹೇಬರು ಮೆಟ್ಟುಲುಗಳನ್ನು ಹತ್ತುತ್ತಿದ್ದ ಹಾಗೆಯೇ, ‘ಏನು? ನಿಮ್ಮ ರೇಂಜಿನಲ್ಲಿ ಮೇಷ್ಟ್ರುಗಳು ಸರ್ಕ್ಯುಲರುಗಳ ಪ್ರಕಾರ ನಡೆಯುತ್ತಾ ಇಲ್ಲ. ನೀವು ಸರಿಯಾಗಿ ರೂಲ್ಸುಗಳನ್ನು ಜಾರಿಗೆ ತರಬೇಕು’ – ಎಂದು ಸ್ವಲ್ಪ ಕಠಿನವಾಗಿ ಆಡಿದರು.

‘ಒಳ್ಳೆಯದು ಸಾರ್! ನಾನು ರೂಲ್ಸುಗಳನ್ನು ಬಿಗಿಯಾಗಿಯೇ ಆಚರಣೆಗೆ ತರುತ್ತಿದ್ದೇನೆ. ಎಲ್ಲಿಯಾದರೂ ಒಂದೆರಡು ಕಡೆ ಉಲ್ಲಂಘನೆ ಆಗಿರಬಹುದು. ವಿಚಾರಿಸಿ ಸರಿಮಾಡುತ್ತೇನೆ.’

‘ನೋಡಿ! ದಾರಿಯಲ್ಲಿ – ಆ ಹಳ್ಳಿ, ಅದರ ಹೆಸರೇನು?’ ಎಂದು ತಮ್ಮ ಜೇಬಿನೊಳಗಿಂದ ಕೈ ಪುಸ್ತಕವನ್ನು ತೆಗೆದು, ‘ಸರಿ, ತಿಪ್ಪೇನಹಳ್ಳಿ! ರಿಜಿಸ್ಟರಿನಲ್ಲಿ ದಾಖಲೆಯಿಲ್ಲದ ಮಕ್ಕಳನ್ನು ಆ ಮೇಷ್ಟ್ರು ಒಳಗೆ ಕೂಡಿಸಿಕೊಂಡಿದ್ದ, ಸಣ್ಣ ಮಕ್ಕಳು – ಐದು ವರ್ಷದ ಮೂರು ಮೂರು ವರ್ಷದ ಮಕ್ಕಳು! ಅವನಿಗೆ ಬರೆ ಎಳೆದಿದ್ದೇನೆ! ಇಲ್ಲಿಂದ ನಾಲ್ಕು ಮೈಲಿ ದೂರದಲ್ಲಿ ಸುಂಡೇನಹಳ್ಳಿ! ಮೇಷ್ಟ್ರು, ಆ ಹಳ್ಳಿಯಲ್ಲಿ ವಾಸಮಾಡುತ್ತಾ ಇಲ್ಲ. ಜನಾರ್ದನಪುರದಿಂದ ಬಂದು ಹೋಗುತ್ತಿದ್ದಾನಂತೆ! ಅವನು ಸ್ಕೂಲ್ ಬಾಗಿಲು ಮುಚ್ಚಿ ಕೊಂಡು ಬೈಸ್ಕಲ್ ಹತ್ತುವ ಹೊತ್ತಿಗೆ ನನ್ನ ಮೋಟಾರು ಅಲ್ಲಿಗೆ ಹೋಯಿತು. ಕಳ್ಳ ಸಿಕ್ಕಿಬಿದ್ದ. ಹಳ್ಳಿಯಲ್ಲಿ ಮನೆ ಕೊಟ್ಟಿಲ್ಲ – ಎಂದು ಸುಳ್ಳನ್ನು ಹೇಳಿದ್ದಾನೆ! ಗ್ರಾಮಸ್ಥರನ್ನು ವಿಚಾರಿಸಿದ್ದರಲ್ಲಿ – ಮನೆಗಳಿಗೇನು ಸ್ವಾಮಿ! ಮೋಸ್ತಾಗಿವೆ – ಎಂದು ಹೇಳಿದರು’

‘ಗ್ರಾಮಸ್ಥರನ್ನು ತಾವು ವಿಚಾರಿಸಿದರೆ ಅವರು ಹಾಗೆಯೇ ಹೇಳುವುದು! ಆ ಹಳ್ಳಿಯಲ್ಲಿ ಮೇಷ್ಟರ ವಾಸಕ್ಕೆ ಮನೆಯನ್ನು ಕೊಟ್ಟಿಲ್ಲ. ಆ ವಿಚಾರದಲ್ಲಿ ರಿಕಾರ್ಡು ನಡೆದಿದೆ.’

‘ಮೇಷ್ಟು ವಿನಾಯಿತಿ ಪಡೆದಿದ್ದಾರೆಯೋ!’

‘ಶಿಫಾರಸು ಮಾಡಿದ್ದೇನೆ. ತಮ್ಮ ಕಚೇರಿಯಲ್ಲಿ ಕಾಗದ ಇದೆ. ಜವಾಬು ಬಂದಿಲ್ಲ.’

‘ನಾರಾಯಣರಾವ್! ಇನ್ಸ್‌ಪೆಕ್ಟರ್ ಹೇಳಿದುದನ್ನು ಕೇಳಿದೆಯಾ? ಕಚೇರಿಗೆ ಈಗಲೇ ಬರೆದು ಹಾಕು, ಸಂಬಂಧಪಟ್ಟ ಗುಮಾಸ್ತೆಯರ ಸಮಜಾಯಿಷಿ ತೆಗೆದು ಕೂಡಲೇ ಕಳಿಸಲಿ. ಆ ಅಸಿಸ್ಟೆಂಟು ಶುದ್ಧ ನಾಲಾಯಖ್! ಆಫೀಸನ್ನು ಸರಿಯಾಗಿ ನೋಡಿ ಕೊಳ್ಳೋದಿಲ್ಲ. ಆತನಿಗೆ ವರ್ಗವಾಗಬೇಕು!’

ರಂಗಣ್ಣ ಸ್ವಲ್ಪ ಹೊತ್ತು ಅಲ್ಲಿದ್ದು ಸಾಹೇಬರ ಅಪ್ಪಣೆ ಪಡೆದು ಹಿಂದಿರುಗಿದನು. ಮಧ್ಯಾಹ್ನ ಮೂರು ಗಂಟೆಗೆ ಸಾಹೇಬರು ಕಚೇರಿಯ ತನಿಖೆಗೆ ಬರುವುದಾಗಿ ತಿಳಿಸಿದ್ದರು. ಅದರಂತೆ ಹೊತ್ತಿಗೆ ಸರಿಯಾಗಿ ಅವರು ಬಂದು ದಾಖಲೆಗಳನ್ನು ನೋಡಿದರು. ಸುಮಾರು ಐದು ಗಂಟೆಯ ಹೊತ್ತಿಗೆ ಕುರ್ಚಿಯಿಂದೆದ್ದು, ಉಳಿದದ್ದನ್ನು ನಾಳೆ ನೋಡೋಣ. ನಾಳೆ ಬೆಳಗ್ಗೆ ಒಳಭಾಗದ ಕೆಲವು ಸ್ಕೂಲುಗಳನ್ನು ನೋಡಬೇಕೆಂದಿದ್ದೇನೆ’ ಎಂದು ರಂಗಣ್ಣನಿಗೆ ಹೇಳಿದರು. ಒಳ ಭಾಗದ ಸ್ಕೂಲುಗಳನ್ನು ನೋಡ ಬೇಕಾದರೆ ಬೈಸ್ಕಲ್ ಮೇಲೋ ಗಾಡಿಯಲ್ಲೋ ಹೋಗಬೇಕಾಗುತ್ತದೆಂದು ರಂಗಣ್ಣ ತಿಳಿಸಿದನು. ‘ಬೈಸ್ಕಲ್ ಅಭ್ಯಾಸ ಹಿಂದೆಯೇ ತಪ್ಪಿ ಹೋಯಿತು. ಅದನ್ನು ಹತ್ತಿದರೆ ಎದೆ ನೋವು ಬರುತ್ತದೆ! ಗಾಡಿಯಲ್ಲಿ ಹೋಗಿ ಬರುವುದೆಂದರೆ ಬಹಳ ಹೊತ್ತು ಹಿಡಿಯುತ್ತದೆ. ಆದ್ದರಿ೦ದ ನಿಮ್ಮ ಸಲಹೆ ಸರಿಯಾಗಿಲ್ಲ! ಮೋಟಾರಿನಲ್ಲೇ ಹೋಗಿಬರೋಣ. ಆದರೆ ರಸ್ತೆ ಚೆನ್ನಾಗಿರಬೇಕು ಎಂದು ಸಾಹೇಬರು ಹೇಳಿದರು.

‘ಹಳ್ಳಿಗಳ ಕಡೆ ರಸ್ತೆಗಳು ಚೆನ್ನಾಗಿರುವುದಿಲ್ಲ ಸಾರ್! ಮೋಟಾರು ಹೋಗುವುದು ಕಷ್ಟ.’

‘ದೊಡ್ಡ ರಸ್ತೆಗೆ ಈಚೆ ಆಚೆ ಎರಡು ಫರ್ಲಾಂಗು ದೂರದಲ್ಲಿ ಒಳಭಾಗದ ಸ್ಕೂಲುಗಳಿಲ್ಲವೆ?’

‘ಇವೆ. ಆದರೆ ಅವೆಲ್ಲ ರಸ್ತೆ ಪಕ್ಕದ ಸ್ಕೂಲುಗಳು! ಒಳಭಾಗದ ಸ್ಕೂಲುಗಳು ರಸ್ತೆಯಿಂದ ಐದು, ಆರು, ಎಂಟು ಮತ್ತು ಹತ್ತು ಮೈಲಿಗಳ ದೂರದಲ್ಲಿರುತ್ತವೆ?

‘ಸರಿ, ನಾಳೆ ಬೆಳಗ್ಗೆ ಏಳೂವರೆ ಗಂಟೆಗೆಲ್ಲ ಬಂಗಲೆಯ ಹತ್ತಿರ ಬನ್ನಿ, ಹೋಗಿ ನೋಡಿಕೊಂಡು ಬರೋಣ’

ಮೇಲಿನ ಏರ್ಪಾಟಿನಂತೆ ಮಾರನೆಯ ದಿನ ರಂಗಣ್ಣ ಬಂಗಲೆಯ ಹತ್ತಿರ ಏಳೂ ಕಾಲು ಗಂಟೆಗೆಲ್ಲ ಹಾಜರಾಗಿದ್ದನು. ಸಾಹೇಬರು ಏಳೂ ವರೆ ಗಂಟೆಗೆ ಸರಿಯಾಗಿ ಹೊರಕ್ಕೆ ಬಂದರು. ಅವರ ಮೋಟಾರಿನಲ್ಲಿ ಇಬ್ಬರೂ ಹೊರಟರು. ದಾರಿಯಲ್ಲಿ ಮಾತುಗಳಿಗೆ ಪ್ರಾರಂಭವಾಯಿತು. ‘ನಿಮ್ಮ ಮೇಲೆ ಬಹಳ ದೂರುಗಳು ಬರುತ್ತಾ ಇವೆ ರಂಗಣ್ಣ! ಏತಕ್ಕೆ ಅವುಗಳಿಗೆಲ್ಲ ಅವಕಾಶ ಕೊಡುತ್ತಿದ್ದೀರಿ? ನೀವು ಇನ್ನೂ ಸಣ್ಣ ವಯಸ್ಸಿನವರು ; ಮುಂದೆ ಇಲಾಖೆಯಲ್ಲಿ ದೊಡ್ಡ ಹುದ್ದೆಗೆ ಬರತಕ್ಕವರು ; ಠಾಕ್ ಠೀಕಾಗೇನೋ ಕಾಣುತ್ತೀರಿ! ಆದರೆ ಟ್ಯಾಕ್ಟ್ ಇಲ್ಲ’ ಎಂದು ಸಾಹೇಬರು ಹೇಳಿದರು.

‘ಯಾರು ದೂರು ಕೊಟ್ಟಿದ್ದಾರೆ ಎಂಬುದು ನನಗೆ ತಿಳಿಯದು. ಬಹುಶಃ ಉಪಾಧ್ಯಾಯರು ಯಾರೂ ಅರ್ಜಿಗಳನ್ನು ಬರೆದಿಲ್ಲವೆಂದು ಹೇಳಬಲ್ಲೆ’

‘ಪಬ್ಲಿಕ್! ಸಾರ್ವಜನಿಕರು-ಬಂದು ದೂರು ಹೇಳುತ್ತಾರೆ.’

‘ಪಬ್ಲಿಕ್ ಎಂದರೆ ಯಾರು ಸಾರ್! ಏನು ದೂರು ಕೊಟ್ಟಿದ್ದಾರೆ? ನಾನು ಲಂಚ ತಿನ್ನುತ್ತೇನೆಂದು ಹೇಳುತ್ತಾರೆಯೇ? ನಡತೆ ಕೆಟ್ಟವ ನೆಂದು ಹೇಳುತ್ತಾರೆಯೇ ?’

‘ಅಂಥವುಗಳು ಏನೂ ಇಲ್ಲ. ರಾಜಕೀಯದಲ್ಲಿ ಕೈ ಹಾಕುತ್ತಿದ್ದೀರಿ ಎಂದು ಮುಖಂಡರು ಹೇಳುತ್ತಾರೆ.’

‘ನಾನು ಸರ್ಕಾರದ ನೌಕರ, ರಾಜಕೀಯದಲ್ಲಿ ಪ್ರವೇಶಿಸಬಾರದೆಂದೂ ಸರ್ಕಾರಕ್ಕೆ ವ್ಯತಿರಿಕ್ತವಾಗಿ ನಡೆಯಬಾರದೆಂದೂ ನನಗೆ ಗೊತ್ತಿದೆ. ನಾನು ರಾಜಕೀಯದಲ್ಲಿ ಕೈ ಹಾಕುತ್ತಿಲ್ಲ. ಹಾಗೆ ಹಾಕುತ್ತಾ ಇದ್ದಿದ್ದರೆ ಸಿ. ಐ. ಡಿ. ಕೈಗೆ ನಾನು ಸಿಕ್ಕುತ್ತಿದ್ದೆ. ಅಂತಹ ಪ್ರಸಂಗ ಇದುವರೆಗೂ ನಡೆದಿಲ್ಲ.’

‘ಎದುರು ಪಾರ್ಟಿಗಳನ್ನು ಕಟ್ಟುತ್ತಿದ್ದೀರೆಂದು ನಿಮ್ಮ ಮೇಲೆ ದೂರು ಬಂದಿದೆ! ಆ ದೂರು ಸರ್ಕಾರಕ್ಕೂ ಮುಟ್ಟಿದೆ!

‘ಅಂತಹ ಪ್ರಭಾವಶಾಲಿ ನಾನಲ್ಲ! ಒಂದು ವೇಳೆ ಪಾರ್ಟಿಗಳನ್ನು ಕಟ್ಟುವ ಚೈತನ್ಯ ವಿದೆಯೆಂದು ನನಗೆ ಮನವರಿಕೆಯಾದರೆ ಈ ಗುಲಾಮ ಗಿರಿಗೆ ರಾಜೀನಾಮೆ ಕೊಟ್ಟು ಬಿಟ್ಟು ರಾಜಕೀಯ ಮುಖಂಡನಾಗುತ್ತೇನೆ! ತಮ್ಮನ್ನು ಸಹ ಆಗ ನಾನು ಬೆದರಿಸುತ್ತೇನೆ! ಇವುಗಳೆಲ್ಲ ಏನು ಮಾತುಗಳು ಸಾರ್! ಯಾರೋ ಒಬ್ಬಿಬ್ಬರು ಸ್ವಾರ್ಥ ಸಾಧಕರು ಹೇಳುವ ಮಾತುಗಳಿಗೆ ಕಿವಿ ಜೋತು ಹಾಕಿ ನನ್ನನ್ನು ಟೀಕಿಸುತ್ತಿದ್ದೀರಿ. ಮೇಲಿನ ದೊಡ್ಡ ದೊಡ್ಡ ಅಧಿಕಾರಿಗಳಿಗೆ ತಾನೆ ಏನು ಬೇಕಾಗಿದೆ! ಸ್ವಾರ್ಥ ಸಾಧನೆಗೆ ನಾಲ್ಕು ಜನ ಮುಖಂಡರ ಬೆಂಬಲ! ಅಷ್ಟೇ.’

ಮೇಲಿನ ಮಾತುಗಳು ನಡೆಯುತ್ತಿದ್ದಾಗ ರಸ್ತೆಯ ಪಕ್ಕದಲ್ಲಿ ಒಂದು ಹಳ್ಳಿ ಹತ್ತಿರವಾಯಿತು.

‘ಇಲ್ಲಿ ಒಂದು ಸ್ಕೂಲಿದೆ. ತಾವು ನೋಡುತ್ತೀರಾ? ಎಂದು ರಂಗಣ್ಣ ಕೇಳಿದನು.

ಸಾಹೇಬರು ನೋಡುವುದಾಗಿ ಹೇಳಿದ ಮೇಲೆ ಮೊಟಾರು ನಿಂತಿತು. ಇಬ್ಬರೂ ಇಳಿದು ಹಳ್ಳಿಯನ್ನು ಪ್ರವೇಶಿಸಿದರು. ಆ ಇಕ್ಕಟ್ಟಿನ ಕೊಳಕು ಸಂದುಗಳನ್ನೂ ಬಗುಳುತ್ತಿದ್ದ ನಾಲ್ಕು ನಾಯಿಗಳನ್ನೂ ದಾಟಿ ಹೋದ ಮೇಲೆ ಸ್ಕೂಲು ಸಿಕ್ಕಿತು. ಆ ಕಟ್ಟಡವನ್ನು ಗ್ರಾಮಸ್ಥರು ಕೊಟ್ಟಿದ್ದರು. ನೆಲವೆಲ್ಲ ಕತ್ತಿ ಹೋಗಿ ಅಲ್ಲಲ್ಲಿ ಹಳ್ಳಗಳು ಬಿದ್ದಿದ್ದುವು. ಗೋಡೆಗಳಿಗೆ ಜನಮೇಜಯರಾಯನ ಕಾಲದಲ್ಲಿ ಸುಣ್ಣ ಹೊಡೆದಿದ್ದಿರಬಹುದು! ಕೆಲವು ಕಡೆ ಗೋಡೆಗಳಲ್ಲಿ ಬಿರುಕುಗಳು ಬಂದು ಆಚೆಯ ಕಡೆಯ ದೃಶ್ಯ ಕಣ್ಣಿಗೆ ಬೀಳುತ್ತಿತ್ತು. ಚಾವಣಿ ಮಣ್ಣಿನದು; ಮರದ ಕೊಂಬೆಗಳನ್ನು ಹಾಸಿ ಮೇಲೆ ಮಣ್ಣನ್ನು ಮುಚ್ಚಿ ಮಾಡಿದ್ದ ಚಾವಣಿ, ಆಗಾಗ ಮಣ್ಣು ಕೆಳಕ್ಕೆ ಉದುರುತ್ತಿತ್ತು. ಕಟ್ಟಡಕ್ಕೆ ಒಂದು ಬಾಗಿಲು ಮತ್ತು ಎರಡು ಕಿಟಕಿ ಗಳಿದ್ದವು.

‘ಇದು ಸರಕಾರದ ಸ್ಕೂಲು ; ಕಟ್ಟಡ ಮಾತ್ರ ಹಳ್ಳಿಯವರು ಕೊಟ್ಟದ್ದು’ ಎಂದು ರಂಗಣ್ಣ ಹೇಳಿದನು.

ಸಾಹೇಬರು ಒಳ ಹೊಕ್ಕಾಗ ಮಕ್ಕಳು ಎದ್ದು ನಿಂತು ಮೌನವಾಗಿ ಕೈ ಮುಗಿದರು. ಮೇಷ್ಟ್ರು ಗಾಬರಿಯಾಗಿ ನಿಂತಿದ್ದನು. ನಾಲ್ಕನೆಯ ತರಗತಿಯಲ್ಲಿ ಒಬ್ಬ ಹುಡುಗ, ಮೂರನೆಯ ತರಗತಿಯಲ್ಲಿ ಇಬ್ಬರು, ಎರಡನೆಯ ತರಗತಿಯಲ್ಲಿ ಆರು ಜನ, ಮೊದಲನೆಯ ತರಗತಿಯಲ್ಲಿ ಹದಿನೈದು ಮಂದಿ-ಹೀಗೆ ತರಗತಿಗಳಲ್ಲಿ ಮಕ್ಕಳಿದ್ದರು. ಸಾಹೇಬರು ಹತ್ತು ನಿಮಿಷಗಳ ಕಾಲ ಅಲ್ಲಿದ್ದು ಮೇಷ್ಟರ ಡೈರಿ ಮತ್ತು ಟಿಪ್ಪಣಿ ಗಳನ್ನೂ ಕೆಲವು ದಾಖಲೆಗಳನ್ನೂ ಪರಿಶೀಲಿಸಿದರು. ಅಷ್ಟು ಹೊತ್ತಿಗೆ ಕೆಲವರು ಗೌಡರು ಮತ್ತು ಯುವಕರು, ಚಿಳ್ಳೆಪಿಳ್ಳೆ ಮಕ್ಕಳು ಕಟ್ಟಡ ದೊಳಕ್ಕೆ ಬಂದು ನಿಂತರು. ಸಾಹೇಬರು,

‘ಇಲ್ಲಿ ಪಂಚಾಯತಿ ಮೆಂಬರುಗಳಿದ್ದಾರೋ?’ ಎಂದು ಕೇಳಿದರು.

ಒಬ್ಬಾತ ಮುಂದೆ ಬಂದು ಕೈಮುಗಿದನು. ‘ನಾನು ಒಬ್ಬ ಮೆಂಬರು ಸೋಮಿ!’

‘ಈ ಕಟ್ಟಡ ಸ್ವಲ್ಪವೂ ಚೆನ್ನಾಗಿಲ್ಲ! ಇದಕ್ಕೆ ಬೇಗ ರಿಪೇರಿ ಮಾಡಿಸಿ ಕೊಡಬೇಕು!’

‘ಈ ಕಟ್ಟಡಾನ ಸರಕಾರಕ್ಕೊಪ್ಪಿಸಿ ಬಾಳ ವರ್ಸ ಆಗೋಯ್ತು ಸೋಮಿ! ಮುಚ್ಚಳಿಕೆ ಸಹ ಬರೆದು ಕೊಟ್ಟಿದ್ದೇವೆ. ರಿಪೇರಿ ಗಿಪೇರಿ ಎಲ್ಲ ಸರಕಾರದೋರೆ ಮಾಡಿಸಬೇಕು ಸೋಮಿ!’

ಸಾಹೇಬರು ಒಂದು ನಿಮಿಷ ಸುಮ್ಮನಿದ್ದು, ‘ಸರಕಾರ ಮಾಡಿಸ ಬೇಕು ಅಂತ ಕಾದರೆ ಬೇಗ ಆಗೋದಿಲ್ಲ! ನಿಮ್ಮ ಹಳ್ಳಿಯಲ್ಲಿರುವ ಕಟ್ಟಡವನ್ನು ನೀವು ಚೆನ್ನಾಗಿಟ್ಟು ಕೊಳ್ಳಬೇಕು!’ – ಎಂದು ಹೇಳಿದರು.

‘ಅದ್ಯಾಕ್ ಸೋಮಿ ಅಂಗೇಳ್ತಿರಾ! ನಮ್ಮ ಅಳ್ಳಿಗೆ ಸರಕಾರದವರು ಕಟ್ಟಡಾನ ಕಟ್ಟಿಸಿಕೊಡಲಿಲ್ಲ. ನಾವೇನೋ ಕಷ್ಟಪಟ್ಟು ಕಟ್ಟಿ ಸರಕಾರಕ್ಕೆ ವಹಿಸಿಕೊಟ್ಟರೆ ಅದರ ರಿಪೇರೀನೂ ಮಾಡಾಕಿಲ್ವಾ? ಸರಕಾರಿ ಕಟ್ಟಡಕೆಲ್ಲ ಅಳ್ಳೋರೆ ರಿಪೇರಿ ಮಾಡ್ತಾರ?’

ಸಾಹೇಬರು ಪರಂಗಿ ಟೋಪಿಯನ್ನು ಕೈಗೆ ತೆಗೆದು ಕೊಂಡು ಹೊರಕ್ಕೆ ಬಂದರು. ‘ಮೇಷ್ಟ್ರೆ! ಈ ಹಳ್ಳಿ ಜನಕ್ಕೆ ಏನೇನೂ ತಿಳಿವಳಿಕೆಯಿಲ್ಲ. ಸರಿಯಾದ ತಿಳಿವಳಿಕೆ ಕೊಟ್ಟು ಕಟ್ಟಡ ರಿಪೇರಿ ಮಾಡಿಸಿ ರಿಪೋರ್ಟು ಮಾಡಿ!’ ಎಂದು ಹುಕುಂ ಮಾಡಿದರು

ಅಲ್ಲಿಂದ ಹೊರಟವರು ಮೋಟಾರಿನಲ್ಲಿ ಕುಳಿತರು. ಗಾಡಿ ಹೊರಟಿತು. ದಾರಿಯಲ್ಲಿ ಪುನಃ ರಂಗಣ್ಣನಿಗೂ ಸಾಹೇಬರಿಗೂ ಮಾತು ಬೆಳೆಯಿತು. ‘ತಿಪ್ಪೂರಿನ ಪ್ರೈಮರಿ ಸ್ಕೂಲಿನ ಕಟ್ಟಡಕ್ಕೆ ರಿವೇರಿ ಆಗಿಲ್ಲ. ಎರಡು ಮೂರು ರಿಜಿಸ್ಟರ್‍ಡ್ ನೋಟೀಸುಗಳನ್ನು ಕೊಟ್ಟಿದ್ದಾಯಿತು. ಫಲವೇನೂ ಕಾಣಲಿಲ್ಲ. ಈಗ ಅಲ್ಲೆಲ್ಲ ಪ್ಲೇಗಿನ ಗಲಾಟೆ ಸ್ಕೂಲು ಕಟ್ಟಡದಲ್ಲಿ ಇಲಿ ಸಹ ಬಿದ್ದು ಸ್ಕೂಲನ್ನು ಮುಚ್ಚಿದೆ ಡಿಸಿನ್ ಫೆಕ್ಷನ್ನು ಸಮರ್ಪಕವಾಗಿ ಮಾಡಲಾಗುವುದಿಲ್ಲ; ಅಲ್ಲಿ ಏನಾದರೂ ಹುಡುಗರಿಗೆ ಹೆಚ್ಚು ಕಡಮೆಗಳಾದರೆ ತಾವು ಜವಾಬ್ದಾರರಲ್ಲವೆಂದು ವೈಸ್‌ಪ್ರೆಸಿಡೆಂಟರು ತಿಳಿಸಿದ್ದಾರೆ. ಮುಂದೆ ಏನು ಮಾಡಬೇಕು ಸಾರ್?’ ಎಂದು ರಂಗಣ್ಣ ಕೇಳಿದನು.

‘ಬೇರೆ ಕಟ್ಟಡ ಗೊತ್ತು ಮಾಡಿ.’
‘ಬೇರೆ ಕಟ್ಟಡ ಸುಲಭವಾಗಿ ಸಿಕ್ಕುವುದಿಲ್ಲ. ಈಗಿನಕಟ್ಟಡ ಕಲ್ಲೇ ಗೌಡರದು. ಅದಕ್ಕೆ ತಿಂಗಳಿಗೆ ಹತ್ತು ರೂಪಾಯಿ ಬಾಡಿಗೆ. ಅವರಿಗೆ ಪೈಪೋಟಿಯಾಗಿ ನಿಂತು ಊರಲ್ಲಿ ಯಾರೂ ಕಟ್ಟಡ ಕೊಡುವುದಿಲ್ಲ.’

‘ನೀವೇ ಕಲ್ಲೇಗೌಡರನ್ನು ಕಂಡು ಪ್ರಾರ್ಥನೆ ಮಾಡಿಕೊಳ್ಳಿ’

‘ಅದೂ ಆಯಿತು ಸಾರ್! ಫಲವೇನೂ ಇಲ್ಲ ತಿಂಗಳಿಂದ ಸ್ಕೂಲು ನಡೆದಿಲ್ಲ; ಮತ್ತೆ ಸ್ಕೂಲು ಪ್ರಾರಂಭವಾಗಬೇಕಾಗಿದೆ.’

‘ಬೇರೆ ಕಟ್ಟಡ ಸಿಕ್ಕುವವರೆಗೂ ಮಿಡಲ್ ಸ್ಕೂಲು ಕಟ್ಟಡದಲ್ಲಿ ಬೆಳಗ್ಗೆ ಮಾಡಿಕೊಳ್ಳಿ’

‘ಆ ಬಗ್ಗೆ ಹುಕುಂ ತಮ್ಮಿಂದ ಆಗಬೇಕು ಸಾರ್!’

‘ಓಹೋ! ಗುಮಾಸ್ತೆ ನಾರಾಯಣ ರಾವ್ ಕೈಗೆ ರಿಪೋರ್ಟನ್ನು ಕೊಡಿ, ಆರ್ಡರ್ ಮಾಡುತ್ತೇನೆ.’

ಮುಂದೆ ಒಂದು ಹಳ್ಳಿ ಸಿಕ್ಕಿತು. ಅಲ್ಲಿ ಒಂದು ಗ್ರಾಂಟ್ ಸ್ಕೂಲಿತ್ತು. ಮೋಟಾರನ್ನು ನಿಲ್ಲಿಸಿದರು. ಸಾಹೇಬರೂ ರಂಗಣ್ಣನೂ ಇಳಿದು ಹಳ್ಳಿಯನ್ನು ಹೊಕ್ಕರು. ಎರಡು ಮೂರು ಸಂದುಗಳನ್ನು ತಿರುಗಿದಮೇಲೆ ರಂಗಣ್ಣ ಒಂದು ಮನೆಯ ಹಿಂಭಾಗವನ್ನು ಪ್ರವೇಶಿಸಿ, ‘ತಲೆ ತಗ್ಗಿಸಿಕೊಂಡು ಬರಬೇಕು ಸಾರ್! ಬಾಗಿಲು ಗಿಡ್ಡು’ ಎಂದು ಎಚ್ಚರಿಕೆ ಕೊಟ್ಟನು. ಸಾಹೇಬರು ಪರಂಗಿ ಟೋಪಿಯನ್ನು ಕೈಯಲ್ಲಿ ಹಿಡಿದು ಕೊಂಡು ತಲೆ ತಗ್ಗಿಸಿಕೊಂಡು ಒಳಕ್ಕೆ ಹೋದರು. ಅಲ್ಲಿ ತಗ್ಗಿನ ಒಪ್ಪಾರವೊಂದು ಕಾಣಿಸಿತು. ಸುಮಾರು ಆರಡಿ ಅಗಲ, ಹದಿನೈದಡಿ ಉದ್ದ ಇದ್ದಿರಬಹುದು. ಅದರ ಒಂದು ಕೊನೆಯಲ್ಲಿ ಆರೇಳು ಕುರಿಗಳನ್ನು ಕಟ್ಟಿ ಹಾಕಿದ್ದರು! ಅವುಗಳ ಹಿಕ್ಕೆ ಗಂಜಳ- ಎಲ್ಲ ಕೆಳಗೆ ಹರಡಿಕೊಂಡು ದುರ್ವಾಸನೆಯನ್ನು ಬೀರುತ್ತಿದ್ದುವು. ಆ ಕುರಿಗಳು ಸಾಹೇಬರನ್ನು ನೋಡುತ್ತಲೂ, ‘ಬ್ಯಾ, ಬ್ಯಾ’ ಎಂದು ಅರಚತೊಡಗಿದುವು! ಆ ಕಟ್ಟಡದ ಚಾವಣಿಯ ತಳಭಾಗದಲ್ಲಿ ಬೊಂಬುಗಳ ಆಟ್ಟ ವಿತ್ತು. ಅದರಲ್ಲಿ ಹುಲ್ಲು, ಕಟ್ಟಿಗೆಯ ಚೂರುಗಳು ಮೊದಲಾದುವನ್ನು ಅಡಕಿದ್ದರು. ಒಪ್ಪಾರದ ಎದುರು ಅಂಗಳದಲ್ಲಿ ಎರಡು ಎಮ್ಮೆಗಳನ್ನೂ ಎರಡು ಎತ್ತುಗಳನ್ನೂ ಕಟ್ಟಿದ್ದರು. ಅವುಗಳ ಸಗಣಿ ಮತ್ತು ಗಂಜಳ ಅಲ್ಲೆಲ್ಲ ಹರಡಿಕೊಂಡಿದ್ದುವು. ಆ ಅಂಗಳದಲ್ಲೇ ಗಡಿಗೆಪಡಿಗೆಗಳನ್ನು ತೊಳೆದ ನೀರು ಆ ಸಗಣಿಯನ್ನು ಕೊಚ್ಚಿ ಕೊಂಡು ಬಂದು ಒಪ್ಪಾರದ ಪಕ್ಕದಲ್ಲಿ ಹರಿದು ನಿಂತಿತ್ತು.

ಆ ಪಾಠ ಶಾಲೆಯಲ್ಲಿ ನಾಲ್ಕು ಸಣ್ಣ ಮಕ್ಕಳು ಮಾತ್ರ ಇದ್ದರು! ಕುಳಿತುಕೊಳ್ಳುವುದಕ್ಕೆ ಹಲಗೆ ಇರಲಿಲ್ಲ. ಗಂಜಳದಲ್ಲಿ ನೆನೆದು, ಅರ್ಧ ಕೆತ್ತಿ ಹೋದ ನೆಲದಮೇಲೆ ಮಕ್ಕಳು ಕುಳಿತಿದ್ದರು ಬೋರ್ಡ್, ಕುರ್ಚಿ, ಮೇಜುಗಳಾಗಲಿ, ಮಣಿ ಚೌಕಟ್ಟು ಮೊದಲಾದ ಉಪಕರಣಗಳಾಗಲಿ ಇರಲಿಲ್ಲ. ಮೇಷ್ಟ್ರು- ಸುಮಾರು ಇಪ್ಪತ್ತು ವರ್ಷಗಳ ಯುವಕ, ಒಂದು ಲುಂಗಿಯನ್ನು ಸೊಂಟಕ್ಕೆ ಸುತ್ತಿಕೊಂಡು, ಷರ್ಟನ್ನು ಹಾಕಿ ಕೊಂಡಿದ್ದನು. ತಲೆಗೆ ಏನೂ ಇರಲಿಲ್ಲ. ಸಾಹೇಬರು ತನಿಖೆಗೆ ಪ್ರಾರಂಭಿಸಿ, ‘ಹಾಜರಿ ರಿಜಿಸ್ಟರ್ ಕೊಡು’ ಎಂದು ಕೇಳಿದರು. ಮೇಷ್ಟ್ರು ಅಲ್ಲೆ ಗೂಡಿನಲ್ಲಿಟ್ಟಿದ್ದ ನಲವತ್ತು ಪುಟಗಳ ಒಂದು ಸಣ್ಣ ನೋಟ್ ಪುಸ್ತಕವನ್ನು ಕೈಗೆ ಕೊಟ್ಟನು! ದಾಖಲೆಯಲ್ಲಿ ಹದಿನೈದು ಮಕ್ಕಳು ಇದ್ದರು. ಆ ದಿನದ ಹಾಜರಿ ನಾಲ್ಕು ; ಸರಾಸರಿ ಹಾಜರಿ ಆರು.

‘ಸರಕಾರಿ ರಿಜಿಸ್ಟರನ್ನು ಇಡಬೇಕು! ಇಂಥ ಪುಸ್ತಕಗಳಲ್ಲಿ ಹಾಜರಿ ಗುರ್ತಿಸಕೂಡದು!’

‘ಸರಕಾರಿ ರಿಜಿಸ್ಟರ್ ಕೊಂಡು ಕೊಳ್ಳೋದಕ್ಕೆ ಕಾಸಿಲ್ಲ ಸ್ವಾಮಿ! ನನಗೆ ಬರೋ ಆರು ರೂಪಾಯಿಗಳಲ್ಲಿ ಜೀವನ ನಡೆಯುವುದೇ ಕಷ್ಟ ಸ್ವಾಮಿ!’

‘ಗ್ರಾಮಸ್ಥರಿಗೆ ಹೇಳಿ ಹಣ ಒದಗಿಸಿಕೊಳ್ಳಬೇಕು!’

‘ಗ್ರಾಮಸ್ಥರು ಏನೂ ಕೊಡೋದಿಲ್ಲ ಸ್ವಾಮಿ! ಈ ನೋಟ್ ಪುಸ್ತಕಕ್ಕೂ ನಾನೇ ದುಡ್ಡು ಕೊಟ್ಟಿದ್ದೇನೆ!’

‘ನಿನ್ನ ಟಿಪ್ಪಣಿ, ಡೈರಿ ಎಲ್ಲಿ?’

‘ಮನೆಯಲ್ಲಿಟ್ಟಿದ್ದೇನೆ ಸ್ವಾಮಿ! ಇಲ್ಲಿ ಇಟ್ಟು ಕೊಳ್ಳೋದಕ್ಕೆ ಸ್ಥಳ ಇಲ್ಲ.’

‘ಬರೋವಾಗ ಜೊತೆಯಲ್ಲೇ ತರಬೇಕು! ಟಿಪ್ಪಣಿಯಿಲ್ಲದೆ ಪಾಠ ಹೇಗೆ ಮಾಡುತ್ತೀಯೆ?’

‘ಎಲ್ಲಾ ಓದಿಕೊಂಡು ಬಂದು ಪಾಠ ಮಾಡುತ್ತೇನೆ ಸ್ವಾಮಿ!’

ಸಾಹೇಬರು ಮಕ್ಕಳನ್ನು ನೋಡಿದರು. ಇಬ್ಬರ ಹತ್ತಿರ ಎರಡು ಮುರುಕು ಸ್ಲೇಟುಗಳು, ಇಬ್ಬರ ಹತ್ತಿರ ಎರಡು ಹರುಕು ಬಾಲಬೋಧೆಗಳು ಇದ್ದುವು. ರಂಗಣ್ಣನ ಕಡೆಗೆ ಸಾಹೇಬರು ತಿರುಗಿ, ‘ಈ ಪಾಠಶಾಲೆಯನ್ನು ರದ್ದು ಮಾಡಿ ಬೇರೆ ಕಡೆಗೆ ವರ್ಗಾಯಿಸಿ’ ಎಂದು ಅಪ್ಪಣೆ ಮಾಡಿ ಅಲ್ಲಿಂದ ಹೊರಬಿದ್ದರು. ಅಷ್ಟು ಹೊತ್ತಿಗೆ ಹಳ್ಳಿಯ ಮುಖಂಡರು ಕೆಲವರೂ ಇತರರೂ ಯಾರೋ ಸಾಹೇಬರು ಬಂದಿದ್ದಾರೆಂದು ವರ್ತಮಾನ ಕೇಳಿ ಗುಂಪು ಸೇರಿದರು. ಸಾಹೇಬರಿಗೆ ಎರಡು ನಿಂಬೆ ಹಣ್ಣುಗಳನ್ನು ಕೊಟ್ಟು ಮುಖಂಡನೊಬ್ಬನು, ‘ಸೋಮಿ ! ನಮ್ಮ ಸರ್ಕಾರಿ ಇಸ್ಕೂಲು ಮಾಡಿ ಕೊಡಿ ಸೋಮಿ!’ ಎಂದು ಬೇಡಿಕೆ ಸಲ್ಲಿಸಿದನು.

‘ನಿಮ್ಮ ಹಳ್ಳಿಯಲ್ಲಿ ಸರಿಯಾದ ಕಟ್ಟಡವಿಲ್ಲ ; ಸ್ಕೂಲಿನಲ್ಲಿ ತಕ್ಕಷ್ಟು ಮಕ್ಕಳಿಲ್ಲ ; ಬೋರ್ಡು ವಗೈರೆ ಸಾಮಾನುಗಳಿಲ್ಲ. ನಿಮಗೆ ಸರ್ಕಾರಿ ಸ್ಕೂಲನ್ನು ಹೇಗೆ ಕೊಡೋದು? ಇರುವ ಸ್ಕೂಲನ್ನೆ ಬೇರೆ ಕಡೆಗೆ ವರ್ಗಾಯಿಸುತ್ತೇವೆ.’

ಅಂಗೆಲ್ಲ ಮಾಡ್ಬೇಡಿ ಸೋಮಿ ! ಸರಕಾರಿ ಇಸ್ಕೂಲು ಕೊಟ್ರೆ ಶಾನೆ ಮಕ್ಳು ಸೇರ್ತಾರೆ. ಕಟ್ಟಡಕ್ಕೆಲ್ಲ ಸಿದ್ದ ಮಾಡಿ ಕೊಂಡಿದ್ದೇವೆ. ಅಗೋ ! ಅಲ್ಲಿ ನೋಡಿ ಸೋಮಿ ! ಕಲ್ಲು ಜಮಾಯಿಸಿಕೊಂಡಿದ್ದೇವೆ ; ಆ ದೊಡ್ಡ ಮರ ಕೆಡವಿ ಮಡಗಿಕೊಂಡಿದ್ದೇವೆ ; ಅದನ್ನು ಕೊಯ್ಯೋ ದೊಂದೇ ಬಾಕಿ. ಈ ಬಾರಿ ಕೊಯ್ಲುಲಾಗುತ್ತಲೂ ಹದಿನೈದು ದಿನದಾಗೆ ಕಟ್ಟಡ ಎತ್ತಿ ಬಿಡ್ತೇವೆ! ಸರಕಾರ ಬಡರೈತರ್‍ನ ಕಾಪಾಡ್ಕೊಂಡು ಬರ್ಬೇಕು ಸೋಮಿ ! ಇರೋ ಇಸ್ಕೂಲ್ ತೆಗೆದು ಬಿಟ್ರೆ ಎಂಗೆ?’

‘ಒಳ್ಳೆಯದು! ನಿಮಗೆ ಮೂರು ತಿಂಗಳು ವಾಯಿದೆ ಕೊಟ್ಟಿದೆ. ಅಷ್ಟರೊಳಗಾಗಿ ಕಟ್ಟಡ ಸಿದ್ಧವಾಗಬೇಕು. ಸಾಮಾನುಗಳಿಗಾಗಿ ನೂರು ರೂಪಾಯಿಗಳನ್ನು ಖಜಾನೆಗೆ ಕಟ್ಟಿ ರಸೀತಿ ತಂದುಕೊಡ ಬೇಕು. ನಿಮ್ಮ ಇನ್‌ಸ್ಪೆಕ್ಟರವರ ಕಚೇರಿಗೆ ಹೋಗಿ ಛಾಪಾಕಾಗದದ ಮೇಲೆ ಮುಚ್ಚಳಿಕೆ ಬರೆದು ಕೊಡಬೇಕು. ಇದನ್ನೆಲ್ಲ ಮಾಡಿದರೆ ನಿಮ್ಮ ಹಳ್ಳಿಲಿ ಸ್ಕೂಲಿಟ್ಟಿರುತ್ತೇವೆ. ಇಲ್ಲವಾದರೆ ಬೇರೆ ಕಡೆಗೆ ವರ್ಗ ಮಾಡಿಬಿಡುತ್ತೇವೆ.’

ಸಾಹೇಬರೂ ರಂಗಣ್ಣನೂ ಮೋಟಾರನ್ನು ಹತ್ತಿದರು. ಮುಂದಕ್ಕೆ ಹೊರಟರು. ‘ಅವರಿಂದ ಮುಚ್ಚಳಿಕೆ ಬರೆಸಿಕೊಂಡು, ಸರಿಯಾದ ಎಚ್ಚರಿಕೆ ಕೊಟ್ಟು ಕಟ್ಟಡ ಕಟ್ಟಿಸಿ’ ಎಂದು ಸಾಹೇಬರು ರಂಗಣ್ಣನಿಗೆ ಹೇಳಿದರು.

ಅವರು ಈಗಾಗಲೇ ಮೂರಾವರ್ತಿ ಮುಚ್ಚಳಿಕೆ ಬರೆದು ಕೊಟ್ಟಿದ್ದಾರೆ ಸಾರ್ ! ಬಂದಾಗಲೆಲ್ಲ ಆ ಕಲ್ಲುಗಳ ರಾಶಿ ತೋರಿಸುತ್ತಾರೆ! ಆ ಬಿದ್ದ ಮರವನ್ನು ತೋರಿಸುತ್ತಾರೆ! ಏನಾದರೊಂದು ನೆಪ ಹೇಳುತ್ತಾರೆ!’

‘ಹಾಗೆಯೇ? ಈಗ ಆಖೈರ್ ನೋಟೀಸ್ ಕೊಟ್ಟಿದೆ! ಈಗಲೂ ಕಟ್ಟಡ ಕಟ್ಟದಿದ್ದರೆ ಸ್ಕೂಲನ್ನು ವರ್ಗಾಯಿಸಿಬಿಡಿ.’

‘ಇವತ್ತು ವರ್ಗಾಯಿಸಿದರೆ, ನಾಳೆಯೇ ಅರ್ಜಿಗಳನ್ನು ಹಾಕುತ್ತಾರೆ; ನಿಮ್ಮ ಕಚೇರಿಗೆ ಬರುತ್ತಾರೆ; ಬೆಂಗಳೂರಿಗೆ ಹೋಗುತ್ತಾರೆ; ಅವರ ಮುಖಂಡರುಗಳೆಲ್ಲ ದೊಡ್ಡ ಗಲಭೆ ಎಬ್ಬಿಸುತ್ತಾರೆ.’

‘ಅವರ ಗಲಭೆ ಗಿಲಭೆಗಳನ್ನೆಲ್ಲ ನಾವು ಸಡ್ಡೆ ಮಾಡುವುದಿಲ್ಲ! ರೂಲ್ಸು ಪ್ರಕಾರ ನಾವು ನಡೆಸಿಬಿಡುತ್ತೇವೆ!’

ಮುಂದೆ ಮೋಟಾರು ಹೋಗುತ್ತಿದ್ದಾಗ ಮತ್ತೊಂದು ಹಳ್ಳಿ ಸಿಕ್ಕಿತು. ಆ ಹಳ್ಳಿಯ ಮುಂಭಾಗದಲ್ಲಿ ಮೆಟ್ಟುಲುಗಳ ಮೇಲೆ ಒಂದು ತಗ್ಗಿನ ಮಾರಿಗುಡಿಯಲ್ಲಿ ಪಾಠ ಶಾಲೆಯನ್ನು ಮೇಷ್ಟ್ರು ಮಾಡುತ್ತಿದ್ದನು. ಮೋಟಾರನ್ನು ನಿಲ್ಲಿಸಿ ಸಾಹೇಬರೂ ರಂಗಣ್ಣನೂ ಸ್ಕೂಲ ಬಳಿಗೆ ಹೋದರು. ಮಾರಿಗುಡಿಯ ಎದುರಿನಲ್ಲಿ ಬಲಿ ಕಂಬದ ಹತ್ತಿರ ಎರಡು ದಿನದ ಹಿಂದೆ ಕುರಿಯೊಂದನ್ನು ಬಲಿ ಕೊಟ್ಟಿದ್ದರು. ಅದರ ರಕ್ತ ಅಲ್ಲಿ ನೆಲದ ಮೇಲೆ ಒಣಗಿ ಕಪ್ಪು ತಿರುಗಿ ಕರೆ ಕಟ್ಟಿತ್ತು! ಬಲಿಕಂಬಕ್ಕೂ ಆ ರಕ್ತಾಭಿಷೇಕ ನಡೆದಿತ್ತು! ಮಾರಿಗುಡಿಗೆ ಹತ್ತು ಮೆಟ್ಟಲುಗಳಿದ್ದುವು. ಆ ಮೆಟ್ಟಲುಗಳ ತರುವಾಯ ತಗ್ಗಿನ ಕಲ್ಲುಮಂಟಪ; ಸುಮಾರು ಐದೂವರೆ ಅಡಿ ಎತ್ತರ ಮತ್ತು ನಾಲ್ಕಂಕಣ ವಿಸ್ತಾರವುಳ್ಳದಾಗಿತ್ತು,

‘ಸ್ಕೂಲು ಕಟ್ಟಡದೊಳಗೆ ಹೋಗಬೇಕಾದರೆ ಬೂಟ್ಟು ಬಿಚ್ಚಿ ಹೋಗಬೇಕು ಸಾರ್!’ ಎಂದು ರಂಗಣ್ಣ ಸೂಚನೆ ಕೊಟ್ಟನು. ಸಾಹೇಬರು ಮೆಟ್ಟಲ ಮೇಲೆ ಕುಳಿತು ಕೊಳ್ಳಲು ಹೋದಾಗ ಮೇಷ್ಟ್ರು, ಮೇಲಿಂದ ಕುರ್ಚಿಯನ್ನು ತಂದು ಕೆಳಗಿಟ್ಟನು. ಹುಡುಗನೊಬ್ಬನು ಇನ್ಸ್‌ಪೆಕ್ಟರಿಗೆ ಸ್ಟೂಲೊಂದನ್ನು ತಂದು ಕೆಳಗಿಟ್ಟನು. ಬೂಟ್ಟುಗಳನ್ನು ಬಿಚ್ಚಿ ಮೇಲಕ್ಕೆ ಹತ್ತಿ ಹೋದರು. ಅಲ್ಲಿ ತಲೆಯೆತ್ತಿಕೊಂಡು ನಿಲ್ಲಲಾಗುತ್ತಿರಲಿಲ್ಲ. ಕೆಳಗಿದ್ದ ಕುರ್ಚಿ ಮತ್ತು ಸ್ಟೂಲು ಮೇಲಕ್ಕೆ ಬಂದುವು. ಸಾಹೇಬರುಗಳು ಅವುಗಳ ಮೇಲೆ ಕುಳಿತದ್ದಾಯಿತು. ಹುಡುಗರಿಗೆ ಹಲಗೆಗಳಾಗಲಿ ಬೆಂಚುಗಳಾಗಲಿ ಇರಲಿಲ್ಲ. ರಿಜಿಸ್ಟರುಗಳನ್ನು ಇಟ್ಟು ಕೊಳ್ಳುವುದಕ್ಕೆ ಪೆಟ್ಟಿಗೆ ಇರಲಿಲ್ಲ. ಏನನ್ನಾದರೂ ಬರೆಯುವುದಕ್ಕೆ ಬೋರ್ಡು ಇರಲಿಲ್ಲ.

‘ಇದೇನು ಗ್ರಾಂಟ್ ಸ್ಕೂಲೇ? ಕಟ್ಟಡವಿಲ್ಲ, ಸಾಮಾನಿಲ್ಲ!’ ಎಂದು ಸಾಹೇಬರು ಕೇಳಿದರು.

‘ಅಲ್ಲ ಸ್ವಾಮಿ! ಸರಕಾರಿ ಸ್ಕೂಲು.’

‘ಮತ್ತೆ ಹಲಗೆ ಬೆಂಚು ಏನೂ ಇಲ್ಲವಲ್ಲ! ಇನ್ನೂ ಸಪ್ಲೈ ಆಗಲಿಲ್ಲವೊ?’

ಎಲ್ಲವೂ ಆಗಿವೆ ಸ್ವಾಮಿ! ಇಲ್ಲಿ ಇಟ್ಟು ಕೊಳ್ಳೋದಕ್ಕೆ ಅನು ಕೂಲವಿಲ್ಲ. ಈ ಗುಡಿಗೆ ಬಾಗಿಲಿಲ್ಲ. ಗ್ರಾಮಸ್ಥರು ಬೇರೆ ಕಟ್ಟಡ ಕಟ್ಟಿಸಿ ಕೊಟ್ಟಿಲ್ಲ. ಸಾಮಾನುಗಳೆಲ್ಲ ಚೆರ್‍ಮರ ಮನೆಯಲ್ಲಿ ದಾಸ್ತಾನಿವೆ.’

‘ಪಾಠ ಮಾಡುವಾಗ ನೀನು ತಂದುಕೊಳ್ಳಬೇಕು!’

‘ಅಪ್ಪಣೆ ಸ್ವಾಮಿ! ಆದರೆ ಅವು ಬಹಳ ಭಾರ! ಬೋರ್ಡು ಬಹಳ ದೊಡ್ಡದು; ಬೆಂಚು ಮೊದಲಾದುವನ್ನು ಮಕ್ಕಳು ಹೊರಲಾರರು. ಅವುಗಳನ್ನೆಲ್ಲ ಬೆಳಗ್ಗೆ ಮತ್ತು ಮಧ್ಯಾಹ್ನ ಎರಡೆರಡು ಹೊತ್ತೂ ಸಾಗಿಸೋದು ಕಷ್ಟ ಸ್ವಾಮಿ!’

‘ಹಾಗಾದರೆ ಬೋರ್ಡಿಲ್ಲದೆ ಪಾಠ ಹೇಗೆ ಮಾಡುತ್ತೀಯೆ?’

‘ಹಾಗೇನೇ ಕಷ್ಟ ಪಟ್ಟು ಕೊಂಡು ಪಾಠ ಮಾಡುತ್ತಾ ಇದ್ದೇನೆ ಸ್ವಾಮಿ!’

‘ಕಟ್ಟಡ ಏಕಾಗಲಿಲ್ಲ? ಮುಚ್ಚಳಿಕೆ ಬರೆದು ಕೊಟ್ಟಿದ್ದಾರೋ ಇಲ್ಲವೋ?’

‘ಬರೆದು ಕೊಟ್ಟಿದ್ದಾರೆ ಸ್ವಾಮಿ! ಪಾಯ ಹಾಕಿದ್ದಾರೆ; ಮೇಲೆ ಕಟ್ಟಡ ಎದ್ದಿಲ್ಲ. ಎರಡು ವರ್ಷ ಆಗೋಯ್ತು.’

‘ಏಕೆ ಕಟ್ಟಡ ಆಗಲಿಲ್ಲ? ಏಕೆ ನಿಂತು ಹೋಯಿತು?’

‘ಅದು ರೈತನೊಬ್ಬನ ಜಮೀನು ಸ್ವಾಮಿ! ಅವನಿಗೆ ಕಾಂಪನ್ ಸೇಷನ್ ಕೊಡಿಸ್ತೇವೆ ಎಂದು ಗ್ರಾಮಸ್ಥರು ಹೇಳಿದ್ದರು. ಆ ಮೇಲೆ ಆ ರೈತನಿಗೆ ಏನೂ ಕೊಡಲಿಲ್ಲ. ಈಗ ಹಾಗೇನೇ ಕೊಟ್ಟು ಬಿಡು ಎಂದು ಒತ್ತಾಯ ಮಾಡುತ್ತಿದ್ದಾರೆ! ಆ ರೈತ ಈಗ ತಕರಾರು ಎಬ್ಬಿಸಿ ಕೆಲಸ ಮುಂದುವರಿಯದಂತೆ ತಡೆದು ಬಿಟ್ಟಿದ್ದಾನೆ ಸ್ವಾಮಿ!’

ಸಾಹೇಬರು ರಂಗಣ್ಣನ ಕಡೆಗೆ ತಿರುಗಿ ಕೊಂಡು, ‘ಆ ಜಮೀನನ್ನು ಅಕೈರು ಮಾಡಿಕೊಳ್ಳೋಣ. ಕೂಡಲೇ ಶಿಫಾರಸು ಮಾಡಿ ಕಾಗದವನ್ನು ಕಳಿಸಿಕೊಡಿ’ ಎಂದು ಹೇಳಿದರು.

ಸಾಹೇಬರು ಕೆಲವು ರಿಜಿಸ್ಟರುಗಳನ್ನು ನೋಡಿದ ಬಳಿಕ ಮೂರನೆಯ ತರಗತಿಯ ಹುಡುಗರಿಗೆ ಎರಡು ಬಾಯಿ ಲೆಕ್ಕಗಳನ್ನು ಕೇಳಿದರು. ‘ಹದಿನೈದನ್ನು ಏಳರಿಂದ ಗುಣಿಸಿ ನಲವತ್ತು ಕಳೆದು ಉಳಿದದ್ದಕ್ಕೆ ಹದಿನಾರು ಸೇರಿಸಿ ಒಂಬತ್ತು ಜನಕ್ಕೆ ಹಂಚಿದರೆ ಒಬ್ಬೊಬ್ಬನಿಗೆ ಎಷ್ಟೆಷ್ಟು ಬರುತ್ತದೆ?’

ಹುಡುಗರು ಬೆಪ್ಪಾಗಿ ನಿಂತಿದ್ದರು. ಉತ್ತರವನ್ನು ಹೇಳಲಾಗಲಿಲ್ಲ.

‘ಮುನ್ನೂರ ಎಪ್ಪತ್ತೈದರಲ್ಲಿ ನೂರೆಪ್ಪತ್ತೆಂಟು ಕಳೆದು ಬಂದದ್ದನ್ನು ಹನ್ನೆರಡರಿಂದ ಗುಣಿಸಿದರೆ ಏನು ಬರುತ್ತದೆ?’

ಈ ಪ್ರಶ್ನೆಗೂ ಉತ್ತರ ಬರಲಿಲ್ಲ. ಸಾಹೇಬರಿಗೆ ಕೋಪ ಬಂದು ಮೇಷ್ಟ್ರು ಶುದ್ಧ ನಾಲಾಯಖ್ ಎಂದು ತೀರ್ಮಾನಿಸಿ ಪರಂಗಿಟೋಪಿ ಹಿಡಿದುಕೊಂಡು ಮೆಟ್ಟಲಿಳಿದರು. ಮೋಟಾರನ್ನು ಹತ್ತಿ ಮುಂದಕ್ಕೆ ಹೊರಟದ್ದಾಯಿತು.

‘ಏನು ಇನ್‌ಸ್ಪೆಕ್ಟರೇ! ನಿಮ್ಮ ಮೇಷ್ಟ್ರುಗಳು ಸರಿಯಾಗಿ ಬಾಯಿ ಲೆಕ್ಕಗಳನ್ನು ಹೇಳಿ ಕೊಡುವುದೇ ಇಲ್ಲ.’

‘ಸಾರ್ ! ತನಗೆ ಕೋಪ ಬರಬಹುದು. ತಾವು ಕೇಳಿದ ಪ್ರಶ್ನೆಗಳೇ ಸರಿಯಲ್ಲ. ಅಷ್ಟು ಉದ್ದವಾದ ಮತ್ತು ಜಟಿಲವಾದ ಬಾಯಿ ಲೆಕ್ಕಗಳನ್ನು ಕೇಳ ಬಾರದು. ತಾವು ನಿಧಾನವಾಗಿ ಸ್ವಲ್ಪ ಸ್ವಲ್ಪವಾಗಿ ಹೇಳಿದ್ದರೆ ಬಹುಶಃ ಉತ್ತರ ಬರುತ್ತಿತ್ತೋ ಏನೋ! ತಮ್ಮ ಪ್ರಶ್ನೆಗಳಿಗೆ ಆ ಹುಡುಗರು ಬೆಪ್ಪಾಗಿ ಹೋದದ್ದು ಏನಾಶ್ಚರ್ಯ! ನನಗೂ ಉತ್ತರ ಹೊಳೆಯದೆ ನಾನೂ ಸಹ ಬೆಪ್ಪಾಗಿ ಹೋದೆ!’

‘ಏನು ? ನಿಮಗೂ ಉತ್ತರ ತಿಳಿಯಲಿಲ್ಲವೆ! ಇಂಗ್ಲೆಂಡ್ ಮತ್ತು ಅಮೆರಿಕಗಳಲ್ಲಿ ಹುಡುಗರು ಎಂಥೆಂಥ ದೊಡ್ಡ ಲೆಕ್ಕಗಳನ್ನು ಬಾಯಲ್ಲೇ ಮಾಡುತ್ತಾರೆ!’

‘ಇರಬಹುದು ಸಾರ್! ಆದರೆ ನನಗೆ ಆ ಅನುಭವಗಳಿಲ್ಲ. ಆ ಮೇಷ್ಟ್ರು ಕಷ್ಟ ಪಟ್ಟು ಕೆಲಸ ಮಾಡುತ್ತಿದ್ದಾನೆ.’

‘ನೀವು ಯಾವಾಗಲೂ ನಿಮ್ಮ ಮೇಷ್ಟ್ರುಗಳನ್ನು ವಹಿಸಿಕೊಂಡೇ ಮಾತನಾಡುತ್ತೀರಿ! ಆ ಸುಂಡೇನಹಳ್ಳಿ ಮೇಷ್ಟರ ವಿಚಾರದಲ್ಲಿಯೂ ಹಾಗೆಯೇ ಮಾಡಿದಿರಿ!’

ರಂಗಣ್ಣ ಮಾತನಾಡಲಿಲ್ಲ, ಅಲ್ಲಿಂದ ಮುಂದೆ ಎರಡು ಮೈಲಿಗಳ ದೂರ ಹೋದ ಮೇಲೆ ಒಂದು ದೊಡ್ಡ ಹಳ್ಳಿ ಸಿಕ್ಕಿತು. ಅಲ್ಲಿ ಹುಡುಗರ ಸ್ಕೂಲೊಂದು ಹುಡುಗಿಯರ ಸ್ಕೂಲೊಂದು ಇದ್ದುವು. ಮೊದಲು ಹುಡುಗರ ಸ್ಕೂಲಿಗೆ ಇಬ್ಬರೂ ಹೋದರು. ಪಕ್ಕಾ ಸರಕಾರಿ ಕಟ್ಟಡ ಅದು. ವಿಶಾಲವಾಗಿಯೂ ಚೆನ್ನಾಗಿಯೂ ಇತ್ತು. ಆದರೆ ಚಾವಣೆಯಲ್ಲಿ ಹತ್ತು ಹನ್ನೆರಡು ಮಂಗಳೂರು ಹೆಂಚುಗಳು ಇರಲಿಲ್ಲ ಅವು ಇಲ್ಲದ್ದರಿಂದ ಹಿಂದೆ ಮಳೆ ಬಂದಾಗ ಆ ಭಾಗದಲ್ಲಿ ಗೋಡೆಯಮೇಲೆ ಕರೆಗಳೂ ಪಟ್ಟಿಗಳೂ ಬಿದ್ದಿದ್ದುವು. ಸಾಹೇಬರ ದೃಷ್ಟಿ ಆ ಚಾವಣಿಯ ಕಡೆಗೆ ಹೋಯಿತು.

‘ಅಲ್ಲಿದ್ದ ಹೆಂಚುಗಳು ಏನಾದುವು?’ ಎಂದು ಹೆಡ್ ಮೇಷ್ಟರನ್ನು ಕೇಳಿದರು.

‘ಎರಡು ವರ್ಷಗಳ ಹಿಂದೆ ಬಿರುಗಾಳಿ ಎದ್ದಾಗ ಕೆಲವು ಹೆಂಚು ಗಳು ಹಾರಿ ಕೆಳಕ್ಕೆ ಬಿದ್ದು ಹೋದುವು ಸ್ವಾಮಿ! ಆ ಬಗ್ಗೆ ರಿಪೋರ್ಟ್ ಮಾಡಿದ್ದೇನೆ.’

‘ಅವುಗಳನ್ನು ಏಕೆ ಇದುವರೆಗೂ ಹಾಕಿಸಲಿಲ್ಲ?’

ಅದಕ್ಕೆ ರಂಗಣ್ಣನು, ‘ಈ ಹಿಂದೆಯೇ ಆ ಬಗ್ಗೆ ರಿಪೋರ್ಟನ್ನು ಕಳಿಸಿದೆ. ಅದು ತಮ್ಮ ಕಚೇರಿಯಲ್ಲಿದೆಯೋ ಅಥವಾ ಡಿಸ್ರ್ಟಿಕ್ಟ್ ಬೋರ್ಡ್ ಕಚೇರಿಯಲ್ಲಿದೆಯೋ ತಿಳಿಯದು. ಸ್ಯಾನಿಟರಿ ಇನ್ಸ್‌ಪೆಕ್ಟರೋ ಪಂಚಾಯತಿ ಇನ್ಸ್‌ಪೆಕ್ಟರೋ ಬಂದು ಎಸ್ಟಿಮೇಟ್ ಮಾಡಿ ಕೊಂಡು ಹೋಗಿರಬೇಕು ಎಂದು ತಿಳಿಸಿದನು.

ಹೆಡ್ಮೇಷ್ಟ್ರು ‘ಹೌದು ಸ್ವಾಮಿ! ಹೋದ ವರ್ಷ ಸ್ಯಾನಿಟರಿ ಇನ್ಸ್‌ಪೆಕ್ಟರು ಬಂದಿದ್ದರು. ಆಗ ಆರೇ ಹೆಂಚುಗಳು ಹಾರಿಹೋಗಿ ದ್ದುವು. ರಿಪೇರಿ ಬಗ್ಗೆ ಎಸ್ಟಿಮೇಟು ಮಾಡಿಕೊಂಡು ಹೋದರು ಅವರು, ಹೋದ ತರುವಾಯ ಪುನಃ ಗಾಳಿಯೆದ್ದು ಮತ್ತೆ ಕೆಲವು ಹೆಂಚುಗಳು ಹಾರಿಬಿದ್ದುವು. ಪುನಃ ಇನ್‌ಸ್ಪೆಕ್ಟರು ಬಂದು ನೋಡಿ-ನನ್ನ ಮೊದಲನೆಯ ಎಸ್ಟಿಮೇಟನ್ನು ಬದಲಾಯಿಸಬೇಕು! ಈಗ ಹೆಚ್ಚು ಹಂಚುಗಳು ಹಾರಿ ಹೋಗಿವೆ!- ಎಂದು ಕೊಂಡು ಹೊರಟು ಹೋದರು. ಇನ್ನೂ ಏನೂ ಆಗಿಲ್ಲ.’

‘ಈ ಸಣ್ಣ ಪುಟ್ಟ ರಿಪೇರಿಗಳನೆಲ್ಲ ಪಂಚಾಯತಿಯವರಿಂದ ಮಾಡಿಸ ಬೇಕು ಹೆಡ್‌ಮೇಷ್ಟ್ರೆ’ ಎಂದು ಸಾಹೇಬರು ಹೇಳಿದರು.

‘ಇದು ಸರಕಾರಿ ಕಟ್ಟಡ ಸ್ವಾಮಿ! ಪಂಚಾಯತಿಯವರು ರಿಪೇರಿ ಮಾಡೋದಿಲ್ಲ. ಪಂಚಾಯತಿ ರೂಲ್ಸಿನಲ್ಲಿಲ್ಲ, ಹೋಗಿ ಹೆಡ್ ಮೇಷ್ಟ್ರೇ! ಎಂದು ಗದರಿಸುತ್ತಾರೆ. ಪುನಃ ಸ್ಯಾನಿಟರಿ ಇನ್ಸ್‌ಪೆಕ್ಟರ್ ಬರೋ ಹೊತ್ತಿಗೆ ಮತ್ತೆ ಕೆಲವು ಹೆಂಚುಗಳು ಎಲ್ಲಿ ಹಾರಿ ಬೀಳುತ್ತವೆಯೋ! ಪುನಃ ಎಸ್ಟಿಮೇಟಿನ ಬದಲಾವಣೆ ಆಗಿ ಎಷ್ಟು ಕಾಲ ನಾವು ಕಾಯ ಬೇಕೋ! ಎಂದು ಯೋಚನೆ ಸ್ವಾಮಿ ನನಗೆ.’

ಸಾಹೇಬರು ಅಲ್ಲಿ ಹತ್ತು ನಿಮಿಷಗಳ ಕಾಲ ಇದ್ದು ಮೇಷ್ಟ್ರುಗಳ ಟಿಪ್ಪಣಿ ಮತ್ತು ಡೈರಿಗಳನ್ನು ನೋಡಿ ಕೊಂಡು ಹುಡುಗಿಯರ ಪಾಠಶಾಲೆಗೆ ಬಂದರು. ಅಲ್ಲಿ ಸುಮಾರು ಹದಿನೇಳು ಹದಿನೆಂಟು ಹುಡುಗಿಯರಿದ್ದರು. ಉಪಾಧ್ಯಾಯಿನಿಯ ಹೆಸರು ಸೀತಮ್ಮ ಆಕೆ ಹಳೆಯ ಕಾಲದ ವಿಧವೆ; ಆದ್ದರಿಂದ ತಲೆಗೆ ಮುಸುಕಿತ್ತು. ಚಿಕ್ಕಂದಿನಲ್ಲಿ ಯಾವಾಗಲೋ ಲೋವರ್ ಸೆಕೆಂಡರಿ ಪರೀಕ್ಷೆಗೆ ಕಟ್ಟಿದ್ದು ತೇರ್ಗಡೆ ಹೊಂದದೆ ಇದ್ದವಳು. ಆಮೇಲೆ ಗಂಡ ಸತ್ತು ಹೊಟ್ಟೆಗೆ ಗತಿಯಿಲ್ಲದೆ, ನೋಡಿ ಕೊಳ್ಳುವವರಾರೂ ಇಲ್ಲದೆ, ಇದ್ದ ನೆಂಟರು ತಲೆ ಬೋಳಿಸಿದ ಒಂದು ದೊಡ್ಡ ಉಪಕಾರ ಮಾಡಿ ಬೀದೀಗೆ ನೂಕಿದ್ದ ಹೆಂಗಸು! ಹಿಂದೆ ಲೋವರ್ ಸೆಕೆಂಡರಿ ವರೆಗೆ ಓದಿದ್ದುದು ಆಕೆಯ ಕಷ್ಟ ಕಾಲಕ್ಕೆ ಸಹಾಯವಾಗಿ ಜೀವನೋಪಾಯಕ್ಕೆ ನೆರವಾಯಿತು. ಆಕೆಗೆ ಸುಮಾರು ಐವತ್ತು ವರ್ಷ ವಯಸ್ಸು,
ಸಾಹೇಬರೂ ರಂಗಣ್ಣನೂ ಒಳಕ್ಕೆ ಹೋಗುತ್ತಲೂ ಆಕೆ ನಮಸ್ಕಾರಮಾಡಿ ಭಯದಿಂದ ನಿಂತು ಕೊಂಡಳು. ಹುಡುಗಿಯರು ಮೌನವಾಗಿ ಎದ್ದು ನಿಂತರು. ಸಾಹೇಬರು ಕುರ್ಚಿಯಮೇಲೆ ಕುಳಿತರು. ಮೇಜಿನ ಮೇಲೆ ಎರಡನೆಯ ಪುಸ್ತಕ ಇತ್ತು. ಅದನ್ನು ನೋಡಿ, ‘ಮುಂದಕ್ಕೆ ಪಾಠ ಮಾಡಿ’ ಎಂದು ಆಕೆಗೆ ಸಾಹೇಬರು ಹೇಳಿದರು. ಆದರೆ ಆಕೆ ಭಯದಿಂದ ದೂರದಲ್ಲೇ ನಿಂತಿದ್ದಳು. ರಂಗಣ್ಣನು ಎದ್ದು ಆ ಪುಸ್ತಕವನ್ನು ತೆಗೆದುಕೊಂಡು ಆಕೆಯ ಕೈಯಲ್ಲಿ ಕೊಟ್ಟನು. ಆಕೆ ಪುಸ್ತಕದಿಂದ ಒಂದು ವಾಕ್ಯವೃಂದವನ್ನು ತಾನು ಓದಿ, ಆಮೇಲೆ ಮಕ್ಕಳಿಂದ ಓದಿಸಿದಳು. ಮಕ್ಕಳು ಸುಮಾರಾಗಿ ಓದಿದರು. ಆಗ ಮಧ್ಯದಲ್ಲಿ ಕೆಲವು ಕಠಿನ ಪದಗಳು ಇದ್ದುವು. ಆಕೆ ಅವುಗಳ ಅರ್ಥವನ್ನು ಕೇಳಿದಳು. ‘ಶತ್ರು ಎಂದರೇನು?’ ಎಂದು ಕೇಳಿದಾಗ ಉತ್ತರ ಸರಿಯಾಗಿ ಬರಲಿಲ್ಲ, ಆಗ ಆಕೆ ಸೀಮೆಸುಣ್ಣದಿಂದ ಬೋರ್ಡಿನ ಮೇಲೆ, ‘ಶತೃ = ವೈರಿ’ ಎಂದು ಬರೆದು ಅರ್ಥ ವಿವರಣೆ ಮಾಡಿದಳು. ಸಾಹೇಬರು ಆ ಪಾಠ ಕ್ರಮವನ್ನು ಗಮನವಿಟ್ಟು ನೋಡುತ್ತಿದ್ದವರು ಕೋಪದಿಂದ ಕೆಂಡ ಕೆಂಡ ವಾಗಿ ರಂಗಣ್ಣನ ಮುಖವನ್ನು ನೋಡಿದರು! ರಂಗಣ್ಣನು ಆಕೆಗೆ, ‘ಭಯ ಪಟ್ಟುಕೊಳ್ಳಬೇಡಿ ಸೀತಮ್ಮ! ಪುಸ್ತಕ ನೋಡಿಕೊಂಡು ಸರಿ ಯಾಗಿ ಬರೆಯಿರಿ’ ಎಂದು ಸಲಹೆ ಕೊಟ್ಟನು ಆ ಇಬ್ಬರು ಸಾಹೇಬರುಗಳ ಎದುರಿನಲ್ಲಿ ಆ ಹೆಣ್ಣು ಹೆಂಗಸಿನ ಇದ್ದ ಬದ್ದ ಧೈರ್ಯನೆಲ್ಲ ಕುಸಿದು ಬಿತ್ತು! ಆಕೆ ಪುಸ್ತಕವನ್ನೂ ನೋಡಲಿಲ್ಲ; ಮುಂದೆ ಪಾಠವನ್ನೂ ಮಾಡಲಿಲ್ಲ. ತನ್ನದು ಏನು ತಪ್ಪು? ಎನ್ನುವುದು ಆಕೆಗೆ ತಿಳಿಯಲಿಲ್ಲ. ಸಾಹೇಬರು ಕುರ್ಚಿಯಿಂದೆದ್ದು ಹೊರಕ್ಕೆ ಬಂದುಬಿಟ್ಟರು! ರಂಗಣ್ಣನು ಬೋರ್ಡಿನ ಹತ್ತಿರ ಹೋಗಿ ‘ಶತ್ರು’ ಎಂದು ಸರಿಯಾಗಿ ಬರೆದು, ‘ಮಕ್ಕಳನ್ನು ಮನೆಗೆ ಬಿಟ್ಟು ಬಿಡಿ, ಹೊತ್ತಾಗಿ ಹೋಯಿತು’ ಎಂದು ಹೇಳಿ ಹೊರಟುಬಂದನು.

ಮೋಟಾರನ್ನು ಹತ್ತಿ ಕುಳಿತಮೇಲೂ ಸಾಹೇಬರ ಉಗ್ರಕೋಪ ಇಳಿದಿರಲಿಲ್ಲ. ರಂಗಣ್ಣನೇ ಮಾತಿಗಾರಂಭಿಸಿ, ‘ಏನೋ ಒಂದು ಸಣ್ಣ ತಪ್ಪು ಸಾರ್! ತಾವು ಅಷ್ಟೆಲ್ಲ ಕೋಪ ಮಾಡಿಕೊಂಡಿದ್ದೀರಿ! ದೊಡ್ಡ ದೊಡ್ಡ ಪಂಡಿತರುಗಳೇ ‘ಋ’ ಕಾರ ಎಲ್ಲಿ ಬರೆಯಬೇಕೋ ‘ರ’ ಎಲ್ಲಿ ಬರೆಯಬೇಕೋ ತಿಳಿಯದೆ ತಪ್ಪು ಮಾಡುತ್ತಾರೆ! ಆಕೆ ಹೆಂಗಸು, ವಿಧವೆ; ಯಾವ ಕಾಲದಲ್ಲಿ ಓದಿದವಳೋ ಏನೋ’ ಎಂದು ಸಮಾಧಾನ ಹೇಳಿದನು.

‘ಅವಳು ಪುಸ್ತಕವನ್ನೇ ನೋಡಲಿಲ್ಲ! ಆ ಪುಸ್ತಕದಲ್ಲಿಯೇ ಆ ಮಾತು ಇದೆ. ಸರಿಯಾಗಿರುವ ಮಾತನ್ನು ತಪ್ಪು ತಪ್ಪಾಗಿ ಹೇಳಿಕೊಡುತ್ತಾಳೆ. ಸರಿಯಾಗಿ ಸಿದ್ಧತೆ ಮಾಡಿಕೊಂಡು ಸ್ಕೂಲಿಗೆ ಬರುವುದಿಲ್ಲ! ನೀವೇನು ಅವಳಿಗೆ ಶಿಫಾರಸು ಮಾಡುತ್ತೀರಿ!’

ಒಂದು ವೇಳೆ ತಪ್ಪಿದರೆ ನಾನು ತಿದ್ದುತ್ತೇನೆ. ಉಪಾಧ್ಯಾಯರು ತಪ್ಪುಗಳನ್ನು ಮಾಡುತ್ತಲೇ ಇರುತ್ತಾರೆ. ನಾವು ತಿದ್ದಬೇಕು.’

‘ನೀವು ಯಾವಾಗಲೂ ಪಕ್ಕದಲ್ಲಿದ್ದು ಕೊಂಡು ತಿದ್ದುತ್ತೀರೋ? ಪುಸ್ತಕವನ್ನೇ ನೋಡದವರಿಗೆ ಪುಸ್ತಕವನ್ನು ತೆರೆದು ಕೈಗೆ ಕೊಡುತ್ತೀರೋ? ಇವರಿಗೆಲ್ಲ ಏನು ಕೆಲಸ ? ಸರಿಯಾಗಿ ಓದಿಕೊಂಡು ಬಂದು ಪಾಠ ಮಾಡ ಬೇಡವೇ ? ವಿದ್ಯಾಭಿವೃದ್ಧಿಯಿಲ್ಲದೆ ದೇಶ ಹಾಳಾಗಿರುವುದಕ್ಕೆ ಈ ಹಾಳು ಮೇಷ್ಟ್ರುಗಳೇ ಕಾರಣರು! ಸರಿಯಾಗಿ ಪಾಠ ಮಾಡುವುದಿಲ್ಲ ಏನೂ ಇಲ್ಲ! ಯಾವಾಗಲೂ ಕಳ್ಳಾಟ ಆಡುತ್ತಿರುತ್ತಾರೆ!’

‘ಹೆಚ್ಚು ಸಂಬಳ ತಿನ್ನುವ ದೊಡ್ಡ ದೊಡ್ಡ ಅಧಿಕಾರಿಗಳಿಗೇನೇ ಸರಿಯಾಗಿ ಕನ್ನಡ ಬರೆಯುವುದಕ್ಕೆ ಬರದು! ಆಡುವುದಕ್ಕೆ ಬರದು ! ಈ ದಿನ ನಾನು ಉಕ್ತಲೇಖನ ಹೇಳಿ ಬರೆಸಿದರೆ ತೇರ್ಗಡೆಯಾಗುವ ಅಧಿಕಾರಿಗಳು ಸೇಕಡ ಹತ್ತು ಕೂಡ ಇರುವುದಿಲ್ಲ ! ಆ ಬಡವಿ, ವಿಧವೆ, ಹದಿನೇಳು ರೂಪಾಯಿ ಸಂಬಳದ ಹೆಣ್ಣು ಮೇಷ್ಟ್ರು ತಮ್ಮ ದೃಷ್ಟಿಯಲ್ಲಿ ದೊಡ್ಡ ಅಪರಾಧಿನಿಯೇ ಸಾರ್?’

‘ನೀವು ಹುಚ್ಚು ಹುಚ್ಚಾಗಿ ಮಾತನಾಡುತ್ತಿದ್ದೀರಿ! ಇಲಾಖೆಯ ದೊಡ್ಡ ಅಧಿಕಾರಿಗಳನ್ನು ಟೀಕಿಸುತ್ತಿದ್ದೀರಿ! ನಿಮಗೆ ಎಚ್ಚರಿಕೆ ಕೊಡ ಬೇಕಾಗಿದೆ!’

ರಂಗಣ್ಣನಿಗೆ ಒಂದು ಕಡೆ ರೋಷ ಹುಟ್ಟಿತು; ಇನ್ನೊಂದು ಕಡೆ ವ್ಯಸನವಾಯಿತು. ಮೋಟಾರು ನಿಲ್ಲಿಸುವಂತೆ ಹೇಳಿ ಇಳಿದು ಹೊರಟು ಹೋಗಬೇಕೆಂದು ಒಂದು ಕ್ಷಣ ಹೊಳೆಯಿತು. ಇಳಿದುಬಿಟ್ಟರೆ ಜನಾರ್ದನಪುರ ಹನ್ನೆರಡು ಮೈಲಿ ದೂರವಿದೆ! ಬೈಸ್ಕಲ್ ಕೂಡ ಹತ್ತಿರ ಇಲ್ಲ. ಹೇಗೆ ಹೋಗುವುದು? ಜೊತೆಗೆ, ತಾನು ಹಾಗೆ ಇಳಿದು ಬಿಟ್ಟರೆ ಸಾಹೇಬರಿಗೂ ತನಗೂ ಬಹಿರಂಗವಾಗಿ ವ್ಯಾಜ್ಯವೇ ಆಗುತ್ತದೆಯಲ್ಲ! ಅದರ ಪರಿಣಾಮ ಹೇಗಾಗುವುದೋ ? ಎಂದು ಆಲೋಚನೆಗಳು ತಲೆದೋರಿ, ಮೌನವೇ ಪರಮೋ ಪಾಯ ಎಂದು ನಿರ್ಧರ ಮಾಡಿಕೊಂಡನು. ಮೋಟಾರು ಜನಾರ್ದನಪುರವನ್ನು ಸೇರುವುದಕ್ಕೆ ಅರ್ಧ ಗಂಟೆ ಹಿಡಿಯಿತು. ಆ ಅವಧಿಯಲ್ಲಿ ಹೆಚ್ಚು ಮಾತುಗಳೇನೂ ನಡೆಯಲಿಲ್ಲ. ಸಾಹೇಬರು ಕೇಳಿದ ಪ್ರಶ್ನೆಗಳಿಗೆ, ‘ಹೌದು, ಅಲ್ಲ ; ಇದೆ, ಇಲ್ಲ’ ಎಂದು ಎರಡಕ್ಷರದ ಉತ್ತರಗಳನ್ನೆ ರಂಗಣ್ಣ ಕೊಟ್ಟು ಕೊಂಡು ಬಂದನು. ಬಂಗಲೆಯ ಹತ್ತಿರ ಮೋಟಾರು ನಿಂತಿತು. ಸಾಹೇಬರು, ‘ಮಧ್ಯಾಹ್ನ ಮೂರು ಗಂಟೆಗೆ ಕಚೇರಿಗೆ ಬರುತ್ತೇನೆ. ತನಿಖೆ ಮುಗಿಸಿ ಕೊಂಡು ಸಾಯಂಕಾಲ ಐದು ಗಂಟೆಗೆ ನಾನು ಹಿಂದಿರುಗಬೇಕು’ ಎಂದು ಹೇಳಿ ಇಳಿದರು. ‘ಆಗಬಹುದು ಸಾರ್!’ ಎಂದು ಹೇಳಿ ರಂಗಣ್ಣನು ಹೊರಟುಬಂದನು.

ಆ ದಿನ ಬೆಳಗ್ಗೆ ತನಗಾದ ತೇಜೋಭಂಗವನ್ನು ಅವನು ಮನೆಯಲ್ಲಿ ಹೇಳಲಿಲ್ಲ. ತನ್ನ ಹೆಂಡತಿ ನೊಂದುಕೊಳ್ಳುತ್ತಾಳೆ; ತಾನು ಅರೆ ಹೊಟ್ಟೆ ತಿನ್ನುವುದರ ಜೊತೆಗೆ ಆಕೆಯೂ ಅರೆಹೊಟ್ಟೆ ತಿನ್ನುವುದನ್ನು ನೋಡ ಬೇಕಾಗುತ್ತದೆ; ಈ ಸಮಾಚಾರವನ್ನು ತಿಳಿಸುವುದು ಸರಿಯಲ್ಲ – ಎಂದು ತೀರ್ಮಾನಿಸಿ ಕೊಂಡು ಸುಮ್ಮನಾದನು. ಆದರೆ ಹೊಟ್ಟೆಯಲ್ಲಿ ತುಂಬಿದ್ದ ವ್ಯಧೆಯಿಂದ ಅವನು ಸರಿಯಾಗಿ ಊಟ ಮಾಡಲಾಗಲಿಲ್ಲ. ಆ ವ್ಯಧೆಯನ್ನು ಹೊರಕ್ಕೆ ಕಕ್ಕಿದ್ದರೆ ಅನ್ನ ಇಳಿಯುತ್ತಿತ್ತೋ ಏನೋ! ಅವನ ಹೆಂಡತಿ, ‘ಎಂದಿನಂತೆ ನೀವು ಊಟ ಮಾಡುತ್ತಿಲ್ಲ. ಏಕೆ?’ ಎಂದು ಕೇಳಿದಳು. ‘ಸಾಹೇಬರ ಜೊತೆಯಲ್ಲಿ ಸರ್ಕಿಟು ಹೋಗಿರಲಿಲ್ಲವೆ? ನೀನೇಕೆ ಕೇಳುತ್ತೀಯೆ?’ ಎಂದು ಅವನು ಉತ್ತರಕೊಟ್ಟನು. ಸರ್ಕಿಟಿನಲ್ಲಿ ಉಪ್ಪಿಟ್ಟು ಕಾಫಿ, ಬಾಳೆಯಹಣ್ಣುಗಳ ನೈವೇದ್ಯ ಆಗಿರಬಹುದೆಂದು ಆಕೆ ತಿಳಿದುಕೊಂಡು, ‘ಸರಿ, ಗೊತ್ತಾಯಿತು. ಕೇಳಿದರೆ ಏನು ತಪ್ಪು?’ ಎಂದುಬಿಟ್ಟಳು.

ಮಧ್ಯಾಹ್ನ ಸಾಹೇಬರು ಮೂರು ಗಂಟೆಗೆ ಕಚೇರಿಗೆ ಬಂದು ಕುಳಿತರು. ಗುಮಾಸ್ತೆ ನಾರಾಯಣರಾವ್ ತಾನು ಸಿದ್ಧ ಪಡಿಸಿದ್ದ ಕರಡು ವರದಿಯನ್ನು ಮೇಜಿನಮೇಲೆ ತಂದಿಟ್ಟನು. ‘ಸಾದಿಲ್ವಾರ್ ಮೊಬಲಿಗಿನಲ್ಲಿ ಒಂದು ಕಟ್ಟು ಕಾಗದ ಕೊಂಡುಕೊಂಡಿದ್ದಾರೆ. ಇದು ಅಕ್ರಮ. ಕಾಗದದ ಸಪ್ಲೈ ಇವರಿಗೆ ಸ್ಟೇಷನರಿ ಡಿಪೋದಿಂದ ಆಗುತ್ತೆ. ಹಾಗೆ ಒಂದುವೇಳೆ ಕೊಂಡುಕೊಳ್ಳಬೇಕಾಗಿದ್ದಿದ್ದರೆ ನಮ್ಮ ಆಫೀಸಿನ ಅಪ್ಪಣೆ ಪಡೆಯಬೇಕಾಗಿತ್ತು’ – ಎಂದು ಒಂದು ದೊಡ್ಡ ಆಕ್ಷೇಪಣೆ ಇತ್ತು. ಸಾಹೇಬರು, ‘ಏಕೆ ಹಾಗೆ ಮಾಡಿದಿರಿ? ನೀವು ರೂಲ್ಸು ತಿಳಿದು ಕೊಳ್ಳ ಬೇಕು’ ಎಂದು ರಂಗಣ್ಣನಿಗೆ ಹೇಳಿದರು.

‘ಒಂದು ರೀಮು ಕಾಗದ ಕೊಂಡುಕೊಳ್ಳಬೇಕೆಂದು ತಮ್ಮ ಕಚೇರಿಗೆ ತಿಳಿಸಿ ಅಪ್ಪಣೆ ಕೇಳಿದ್ದೇನೆ ಸಾರ್! ಕಾಗದ ಬರೆದು ಆರು ತಿಂಗಳಾದುವು; ಎರಡು ರಿಮೈಂಡರುಗಳನ್ನು ಸಹ ಕೊಟ್ಟೆ. ಜವಾಬೇ ಬರಲಿಲ್ಲ. ನಾನೇನು ಮಾಡಲಿ ಸಾರ್? ಕಾಗದ ಬಹಳ ಜರೂರಾಗಿ ಬೇಕಾಗಿತ್ತು. ಆದ್ದರಿಂದ ಕೊಂಡುಕೊಳ್ಳಬೇಕಾಯಿತು. ನನ್ನ ಆಫೀಸು ರಿಕಾರ್ಡುಗಳನ್ನು ತೋರಿಸುತ್ತೇನೆ, ಪರಾಂಬರಿಸಬೇಕು’ ಎಂದು ರಂಗಣ್ಣ ಹೇಳಿ, ಶಂಕರಪ್ಪನಿಂದ ದಾಖಲೆಗಳನ್ನು ತರಿಸಿ ತೋರಿಸಿದನು.

‘ನಿಮಗೆ ಹೆಚ್ಚಿಗೆ ಕಾಗದಕ್ಕೆ ಆವಶ್ಯಕತೆ ಏನು? ಬೇರೆ ರೇಂಜುಗಳಲ್ಲಿ ಹೀಗೆ ಕೊಂಡುಕೊಂಡಿಲ್ಲ.’

‘ಇಲ್ಲಿ ಮೇಷ್ಟ್ರುಗಳಿಗೆ ರೂಲ್ಸುಗಳ ವಿಷಯದಲ್ಲಿ ಬೋಧನಕ್ರಮ ಮತ್ತು ಸಂವಿಧಾನಗಳ ವಿಷಯದಲ್ಲಿ ತಿಳಿವಳಿಕೆ ಕೊಡುವುದಕ್ಕಾಗಿ ಹಲವು ಸರ್ಕ್ಯುಲರುಗಳನ್ನು ಕಳುಹಿಸಿದ್ದೇನೆ. ಆದ್ದರಿ೦ದ ಕಾಗದ ಹೆಚ್ಚು ಖರ್ಚಾಯಿತು’- ಎಂದು ಹೇಳಿ ರಂಗಣ್ಣ ಸರ್ಕ್ಯುಲರುಗಳ ಕಟ್ಟನ್ನು ತಂದು ಮುಂದಿಟ್ಟನು.

ಸಾಹೇಬರು ಅವುಗಳನ್ನೆಲ್ಲ ನೋಡಿ, ‘ನೀವು ಒಳ್ಳೆಯ ಕೆಲಸ ಮಾಡಿದ್ದಿರಿ! ನನಗೆ ಬಹಳ ಸಂತೋಷವಾಗುತ್ತದೆ! ಇವುಗಳ ನಕಲು ಗಳಿದ್ದರೆ ಒಂದು ಕಟ್ಟನ್ನು ನನ್ನ ಕಚೇರಿಗೆ ಕಳಿಸಿಕೊಡಿ. ಇತರ ರೇಂಜುಗಳಲ್ಲಿಯೂ ಹೀಗೆಯೇ ಮಾಡಿಸುತ್ತೇನೆ’ ಎಂದು ಹೇಳಿದರು. ರಂಗಣ್ಣನಿಗೆ ಸಂತೋಷವಾಯಿತು. ಬೆಳಗಿನ ತೇಜೋಭಂಗ ಮುಕ್ಕಾಲು ಭಾಗ ಹೋದಂತಾಯಿತು. ತನಿಖೆಯಲ್ಲಿದ್ದ ಇತರ ಅಂಶಗಳು : ಮೇಷ್ಟ್ರಗಳ ಸರ್ವಿಸ್ ರಿಜಿಸ್ಟರುಗಳಲ್ಲಿ ದಾಖಲೆಗಳನ್ನು ಪೂರ್ತಿಯಾಗಿ ಬರೆದಿಲ್ಲ; ಕೆಲವು ಕಡೆ ಇನ್ಸ್‌ಪೆಕ್ಟರ ರುಜುಗಳಿಲ್ಲ ; ಪಾಠಶಾಲೆಗಳ ಕಟ್ಟಡಗಳ ನಕ್ಷೆಗಳು ಕೆಲವು ಕಡೆ ಇಲ್ಲ ; ರಿಪೇರಿಗಳು ಯಾವಾಗ ಆದುವು? ಖರ್ಚು ಎಷ್ಟಾಯಿತು ? ಮುಂತಾದ ವಿವರಗಳನ್ನು ಬರೆದಿಲ್ಲ- ಇತ್ಯಾದಿ, ರಂಗಣ್ಣನು ಹಲವಕ್ಕೆ ಸಮಾಧಾನಗಳನ್ನು ಹೇಳಿದಮೇಲೆ ಕರಡು ಪ್ರತಿಯಲ್ಲಿದ್ದ ಹಲವು ಅಂಶಗಳನ್ನು ಸಾಹೇಬರು ಹೊಡೆದು ಹಾಕಿಬಿಟ್ಟರು. ರಂಗಣ್ಣನಿಗೆ ಸಾಹೇಬರು ಕಟ್ಟು ನಿಟ್ಟಿ ನವರೂ ಜಬರ್ದಸ್ತಿನವರೂ ಎಂದು ಕಂಡುಬಂದರೂ ಅವರು ಸ್ವಲ್ಪ ಮಟ್ಟಿಗೆ ಗುಣಗ್ರಾಹಿಗಳೂ ಆಗಿದ್ದಾರೆಂದು ಸಮಾಧಾನವಾಯಿತು. ತನಿಖೆಯನ್ನೆಲ್ಲ ಮುಗಿಸಿಕೊಂಡು ಸಾಹೇಬರು ಮೋಟಾರನ್ನು ಹತ್ತಿದರು. ‘ನಾನೀಗ ಹೆಡ್ ಕ್ವಾರ್ಟರಿಗೆ ಹಿಂದಿರುಗುತ್ತೇನೆ. ಪುನಃ ನಿಮ್ಮ ರೇಂಜಿಗೆ ಬರುತ್ತೇನೋ ಇಲ್ಲವೋ ತಿಳಿಯದು. ಬೇರೆ ಕಡೆಗೆ ವರ್ಗವಾಗುವ ನಿರೀಕ್ಷಣೆಯಿದೆ. ನೀವಿನ್ನೂ ಯುವಕರು; ಸ್ವಲ್ಪ ಟ್ಯಾಕ್ಟ್ ಕಲಿತುಕೊಳ್ಳಿ; ಮುಂದೆ ದೊಡ್ಡ ಹುದ್ದೆಗೆ ಬರಬಹುದು ? ಎಂದು ಹೇಳಿ ರಂಗಣ್ಣನ ಕೈ ಕುಲುಕಿ ಹೊರಟು ಹೋದರು.

ರಂಗಣ್ಣ ಮನೆಗೆ ಹಿಂದಿರುಗಿದ ಮೇಲೆ ಆ ದಿನ ಬೆಳಗ್ಗೆ ಯಿಂದ ಸಾಯಂಕಾಲದವರೆಗೂ ನಡೆದ ಎಲ್ಲ ಘಟನೆಗಳನ್ನೂ ಹೆಂಡತಿಗೆ ತಿಳಿಸಿದನು. ಆಕೆ, ‘ಇಷ್ಟು ವರ್ಷಗಳಿಂದ ನಿಮ್ಮೊಡನೆ ಸಂಸಾರ ನಡೆಸುತ್ತಿದ್ದೇನೆ! ನಿಮ್ಮ ಮರ್‍ಮ ನಾನರಿಯೆನೇ ! ಬೆಳಗ್ಗೆ ನಿಮ್ಮ ಮುಖ ಸಪ್ಪಗಿತ್ತು ! ಅದಕ್ಕೋಸ್ಕರವೇ ನಾನು ಕೇಳಿದ್ದು, ಈಗ ನಿಮ್ಮ ಮುಖ ಎಂದಿನಂತೆ ಕಳಕಳಿಸುತ್ತಿದೆ’ ಎಂದು ಹೇಳುತ್ತ, ಕಾಫಿ ತುಂಬಿದ ಬೆಳ್ಳಿಯ ಲೋಟವನ್ನು ಮುಂದಿಟ್ಟಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಿದ್ದರಾಮನಿಗೆ
Next post ಗತಕಾಲದಿತಿಹಾಸ ಪುಟಗಳಲಿ ಮೆರೆದಿರುವ

ಸಣ್ಣ ಕತೆ

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…