ಬೆಳಕನೆರಚು, ಚಳಕನೆರಳು,
ಯುಗ-ಯುಗಾಂತ ತೊಳಗಲಿ!
ಇಳೆಯ ಕವಿದ ಕಳ್ತಲೆಯನು
ಕಳೆದೊಗೆ ದೀಪಾವಳಿ!
೧
ಬರಿಯ ಒಂದೆ ಇರುಳು ಬಂದೆ
ಮುಗಿಯಿತೇನು ಕಾರ್‍ಯ?
ವರುಷದಿ ನೂರಾರು ತಮಸಿ-
ನಿರುಳಿವೆ ಅನಿವಾರ್ಯ!
ಅಂದಂದಿನ ಕತ್ತಲಿಂದೆ
ಮಂದಿಯ ಮನವಿಡಿದು ಮುಂದೆ
ಕರೆದೊಯ್ಯುವರಾರ್ ಅನಂದೆ-
ಮರೆದು ಸರಿಯೆ ನೀನು ?
ಮಿರುಗಿ ಮಾಯವಾಗುತಿರುವ
ಮಿಂಚಿಗೆ ಬೆಲೆಯೇನು?
೨
ನಿನಗಾಗಿಯೆ ಹೊಲ-ನೆಲಗಳು
ಬೆಳೆಯೊಳೇರಿ ನಿಂತಿವೆ;
ನಿನಗಾಗಿಯೆ ಹೊಳೆ-ಕೊಳಗಳು
ತಿಳಿಯ ನೀರನಾಂತಿವೆ.
ಬಿಳಿಯ ಹೊನ್ನ ಸೇವಂತಿಗೆ
ಹೊಳೆದು ನಿನ್ನ ಮೈಕಾಂತಿಗೆ
ಸವಿಗಾರರ ಬಗೆಯ ಸೆಳೆವ
ತವಕದಿ ಬಾಯ್‌ದೆರೆದಿವೆ-
ಬುವಿಯ ಜೀವಕುಲವೆ ದೇವ-
ದಿನವ ನಿನ್ನ ಕರೆದಿವೆ!
೩
ಬರುವುದು ದೀವಳಿಗೆಯೆಂದು
ತಿರೆಯೇ ಕುಣಿ-ಕುಣಿಯಿತು!
ತರುವುದು ಹಿರಿಬೆಳಕನೆಂದು
ಜನವು ದಿನವು ನೆನೆಯಿತು!
ಸಂತೆಗೆ ಹಸರಿಗನು ಬಂದು
ಸಂತೆ ಹರಡಿ ದಿನವದೊಂದು
ಕಂತೆ ಹೇರಿ ಮತ್ತೆ ದಾರಿ
ಹಿಡಿದೆಲ್ಲಿಗೊ ನಡೆವನು;
ಅಂತೆ ನಿನ್ನ ಆಗಮವಿರೆ
ಹಿರಿಮೆ ನಿನ್ನದೇನು?
೪
ಕುರುಡಗೆರಡು ನಿಮಿಷ ಕಣ್ಣ
ನೋಟಗಳನೆ ನೀಡಿ,
ಧರೆಯ ಚನ್ನ ಸೊಬಗಿನನ್ನ-
ವೂಡುವಂತೆ ಮಾಡಿ,
ಮರಳಿ ಕಣ್ಣ ಕಳೆದೊಡವಗೆ
ಇರುವುದೇನು ಬರಿ ತಗುಬಗೆ!
ವರುಷಕೊಂದು ಬಾರಿ ಬಂದು
ಬೆಳಕಕರೆವೆ ನೀನು….
ಉಳಿದ ಇರುಳ ತಮಸಿನುರುಳ
ಕಳೆಯೆ ದಾರಿಯೇನು?
* * *
ಬೆಳಕನೆರಚು, ಬೆಳಕನೆರಚು,
ಯುಗ-ಯುಗವನು ಬೆಳಗಿಸು,
ಇಳೆಯ ಕವಿವ ಕಳ್ತಲೆಗಳ
ಕಳೆದೇಗಲು ತೊಳಗಿಸು !
*****