(ಜೀವನದಲ್ಲಿಯ ಒಂದು ಅನುಭವದ ಅನ್ಯೋಕ್ತಿಯಿದು.)
೧
‘ಇರುಳೆಲ್ಲವೂ ತಿರುಗಿ ತಿರೆಗೆ ಚೆಲುವನು ಬೀರಿ,
ನರರ ಕಣ್‌ಮನ ತಣಿವ ತೆರದಿ ಒಲವನು ತೂರಿ,
ಚರಿತಾರ್ಥನಾಗಲಿಕೆ ಸರಿಯಿದೇದಿನ’ ಎಂದು,
ಹುಣ್ಣಿಮಯ ತಣ್‌ಗದಿರ ತುಂಬುಮೊಗದಲಿ ಬಂದು,
ಅಳತೆಯಿಲ್ಲದ ಪಳುಕು-
ಸೆಳೆಯಂತಿರುವ ತನ್ನ
ಹೊಳೆವ ಕೈ ಕೆಳಗಿಳುಹಿ,
ಹೊನ್ನ ಹುಡಿಯನ್ನು ಹಸನೆಣ್ಣೆಯಲ್ಲಿ ಹೊರೆದು,
ಬಣ್ಣ ಬರೆದನು ಇಳೆಗೆ ಕಲೆಯ ನೆಲೆಯರಿದು.
೨
ಬೆಳಕಿನೊಂದಿಗೆ ರವಿಯು ಬಿರುಬಿಸಿಲ ಪಸರಿಸಿರೆ
ಝಳತಾಗಿ ಜೀವ ಕುಲ ತಳಮಳಿಸುತಿರಲು, ಪೆರೆ
ಬೆಳಕಿನೊಡವೆರಸಿ ತನ್ನೊಡಲಿನಮೃತವ ಸುರಿಸಿ,
ಎಳನಗೆಯ ಮಲ್ಲಿಗೆಯ ಅರಳುಗಳ ಮಳೆಗರಿಸಿ
ನೆಲಕೆ ತಂಪನು ನೀಡಿ,
ಜೀವಿಗಳ ಮೈ ತೀಡಿ,
ಸುಖ-ಶಾಂತಿಗಳನೂಡಿ,
ಜಗವನೆಲ್ಲವ ನಗಿಸಿ ಸೊಗಸನೊಂದಿರುವ-
ನಗುನಗುತ ಬಾನ ತೊರೆಯೊಳು ತೇಲುತಿರುವ.
೩
ಏನಿದೇನಿದು ಚಿತ್ರ? ಬಾನೊಳಾಡುವ ಪೆರೆಯು
ಹೀನಕಳೆಯವನಾಗುತಿಹನೇಕೆ? ಅಚ್ಚರಿಯು!
ನೋಡು ನೋಡುವುದರೊಳೆ ಎನಿತು ಇದು ಮಾರ್‍ಪಾಡು?
ಮೋಡ ನಸುವೂ ಇಲ್ಲ, ಆದರೆಯು ಈ ಪಾಡು!
ಚೆಲುವು ಜಾರುತ್ತಲಿದೆ,
ಹೊಳಪು ಹಾರುತ್ತಲಿದೆ,
ಕೊಳೆಯು ಹೇರುತ್ತಲಿದೆ-
ಬಾಡಿರುವ ಹೊನ್ನರಳ ತೆರ ತೋರುತಿಹನು-
ನೋಡುಗರ ಕಣ್- ಮನದ ತಣಿವ ಕಳೆದಿಹನು.
೪
ಅರಿವು ಮಿರುಗುವ ಎದೆಯು ಮುನಿಯ ಮನವಲ್ಲಾಡೆ,
ಮರೆವು ಅವನನು ಮುಸುಕುವಂತೆ-ಪೆರೆಮೊಗ ಬಾಡೆ,
ಎದ್ದು ಹೊರಟಿದೆ ನೆಲದೊಳಿದ್ದ ಹೊಂಬಣ್ಣವದು;
ಇದ್ದಲಿನ ಹುಡಿಯೆರಚಿದಂತೆ ಕತ್ತಲೆ ಕವಿದು
ಎತ್ತಲೂ ಹರಡಿಹುದು,
ಗೊತ್ತಾಗದೇನೊಂದು,
ಹೊತ್ತು ಎಂತಹದಿಂದು?
ಹೀಗೇತಕಾಗಿದೆಯೊ! ಹಾಂ! ತಿಳಿದೆ, ಅಹುದು!
ಈಗ ಚಂದ್ರನಿಗೆ ಗ್ರಹಣದ ಸಮಯವಿಹುದು!
೫
ಗ್ರಹಣಸಮಯವು ಇಹುದು; ಕುಹಕಿ ಯಹ ಗರವೊಂದು
ಗುಹೆಯಂತೆ ಬಾಯ್ದೆರೆದು ನೊಣೆಯಲಿಕ ನಿಂದಿಹುದು.
ಎಂತಲೇ ತಿಂಗಳಿನ ಕಾಂತಿ ಕುಂದುತಲಿಹುದು-
ಇಂತಹನ ಹಿಂಸಿಸುವುದೆಂಥ ಗರವಿರಬಹುದು?
ಚೆಲುವಿಕೆಗೆ ನೆಲೆಯಿವನೆ,
ಒಲವಿನಾ ಸೆಲೆಯಿವನೆ,
ಕಳೆಯ ಹಿರಿಹೊಳೆಯಿವನೆ!
ಅಯ್ಯೋ, ಏನನ್ಯಾಯ! ಈತಗೂ ಹಗೆಯೆ?
ಅಯ್ಯ! ಜಗದೊಡೆಯ! ನಿನಗೆಲ್ಲವಿದು ನಗೆಯೆ?
೬
ಕೇಡು- ಹಗೆ- ಪೀಡೆ-ಗರ ಕಾಡಬಹುದಾರನ್ನು?
ಖೋಡಿ-ಕೇಡಿಗ-ಕವಡಿಯಾದ ನಾಡಾಡಿಯನು!
ಜಗದಾಪ್ತನೀತ, ಇವನಿಗು ಹಗೆಗಳಿಹರೇನು?
ಜಗವನೇ ಸೊಗದೊಳಿಡೆ ಹಗಲಿರುಳು ಹವಣಿಪನು.
ಎಳೆಯರೆಲ್ಲರು ಇವನ
ಕಳೆಗಳಿಗೆ ಮನಸೋತು,
ಒಲವಿನೊಲವಾಗಿರುವ
ತಮ್ಮ ತಾಯಿಗೆ ತಮ್ಮನೆಂದು ತಿಳಿಯುವರು-
‘ನಮ್ಮ ಚಂದಮಾಮ’ ಎನುತ ಹಿಗ್ಗುವರು.
೭
ಕೊಡುಗೂಸುಗಳು ಇವನ ಬೆಡಗು-ಗಾಡಿಗೆ ಬೆರೆತು,
ಪಡೆಯಲಿಹ ಒಡನಾಡಿ ಸೆರೆಯಂತೆ ಇರಲೆಂದು,
ಮನದೆರಕದಿಂದ ಮೈ ಮರೆದು ಲಜ್ಜೆ ಯನುಳಿದು
‘ಇನಿಯ ಚಂದ್ರಮರಾಯ!’ ಎಂದು ಒಕ್ಕಣಿಸುವರು.
ನಲ್ಲ-ನಲ್ಲೆಯರೊಂದಿ
ಚೆಲ್ಲಾಟಗಳನಾಡೆ-
ಉಲ್ಲಸದೊಳೋಲಾಡೆ-
ಎಲ್ಲರೀ ಚೆಲ್ಲಿಗನ ಕೆಳೆಯ ಬಯಸುವರು-
‘ಇಲ್ಲ ಸರಿ ಇದಕೆ’ನುವ ಸೊಗವ ಸಾರುವರು.
೮
ಬಾಳುವೆಯ ತಿರುಳೆಂದು ತಿಳಿದ ಹಸುಮಕ್ಕಳನು
ಹೇಳಲಾಗದ ಹೃದಯದೊಲವಿಂದೆ ತಾಯದಿರು
ಬಲು ಮುದ್ದು ಮಾಡಿ ಕರೆಯುವರಾವ ಹೆಸರಿಂದೆ?
‘ಚೆಲುವ ಚೆಂದಿರ!’ ಎಂದೆ-ಬೇರೆ ಇನ್ನಾವುದಿದೆ?
ಎಲ್ಲರೊಲವಿನ ಸರಿಗೆ
ಸಲ್ಲುವಂತೆಯೆ ತೂಗೆ
ಇಲ್ಲವೀತನ ಹಾಗೆ!
ಮಾತಿನಾಚೆಯ ಬಗೆಯ ಮೌನಗೀತವ ಹಾಡಿ,
ಈತ ಜಡಗಳನು ಸಹ ನಲಿಸುವನುಸಿರ ನೀಡಿ.
೯
‘ಸುರರ ಗರುವಿಕೆಯೇನು? ನರರ ಕಿರುಕುಳವೇನು?
ಸರಿಯೆ ಎಲ್ಲರು!’ ಎಂಬ ಸಮದರ್ಶಿ ಚಂದಿರನು-
ಸುರಿಸುತಿರುವನು ನಿರುತ ಧರೆಗೆ ಸವಿಸೊದೆಯನ್ನು ;
ಸರಿಹೋಲುವರಾರು ಈ ಯೋಗಿರಾಜನನು?
ಇವನೊಡನೆಯೂ ಹಗೆಯೆ?
ಇವನಲಿಯು ಕೀಳ್‌ಬಗೆಯೆ?
ಇವನಿಗೂ ತಗುಬಗಿಯೆ?
ರವಿಯ ರಾಜ್ಯದೊಳು ಕಾವಳದ ಹಾವಳಿಯೆ ?
ಸುವಿಮುಕ್ತ ಜೀವರಿಗು ಭವದ ಬಳಲಿಕೆಯೆ ?
೧೦
ಭಂಗಕೊಳಗಾಗಿಸಲು ತಿಂಗಳಿನ ತಪ್ಪೇನು ?
ಕೊಂಗಿಗಳು ಒಪ್ಪು-ತಪ್ಪುಗಳ ನೋಡುವರೇನು ?
ಬಹುಜನಕೆ ಬೇಕಾದ ಮಹಿಮನನು ಕಂಡೊಂದು
ಕುಹಕಿ ತಾ ಸಹಿಸದೆಯೆ ಬರಿದೆ ವೈರವ ತಳೆದು
ಖೋಡಿಗಳೆಯುತೆ ಹಳಿದು,
ಕಾಡಿ ಪೀಡಿಸುವುದಿದು
ರೂಢಿನಿಯಮವೆ ಇಹುದು.
ಹಾಲಗಡಿಗೆಯಲಿ ಹುಳಿಬೆರಸಿ ಹಿಗ್ಗುವುದು,
ಕೀಳುಜೀವದ ಹುಟ್ಟು ಗುಣವೆ ಆಗಿಹುದು.
ನೊಣೆಯಲಿಗೆ ಬಂದಿರುವ ಹಗೆಯನ್ನು ಹಣಿದು,
ಮಿನುಗದಿಹನೇ ಮುನ್ನಿನಂತೆ ಪೂರ್ಣೇಂದು?
*****