ಬಾಡದಿರುವಲರಂತ ಬಗೆಯನ್ನು ಮಾಡಿದರೆ
ಬೈಯುವೆನೆ ನಿನ್ನ ತಾಯೇ ?
ಹಾಡುತಿಹ ಕೊಳಲಂತ ಕೊರಳನ್ನು ಮಾಡಿದರೆ
ಕುಂದಿಡುವನೇನು ತಾಯೇ ?
ಮೂಡುವಾ ನೇಸರಿನ ತರ ಮೆಯ್ಯ ಮಾಡಿದರೆ
ಮುಚ್ಚರಿಪರಾರು ತಾಯೇ,
ಕೋಡುಗಲ್ಲಂತೆನ್ನ ಮನವ ನೆಲೆನಿಲಿಸಿದರೆ
ಮುನಿವೆನೇ ಲೋಕಮಾಯೆ?
ಆದೊಡೇನು ?
ಖೋಡಿ ಕೊರಡಿನ ತರದಿ ಬರುಬಗೆಯ ಗೈದಿರಲು
ಬೆಂದು ಬೈಯುವೆನೆ ತಾಯೇ,
ಕಾಡ ಬಿದುರಿನ ಕೊಳವಿಯಂತೆ ಕೊರಳಿರ್‍ದುದಕೆ
ಕುಂದಿಡುವೆನಿಂದು ತಾಯೆ !
ಮೋಡ ಮುಸುಕಿದ ಪೆರೆಯ ತೆರ ಮೈಯ ನೀಡಿರುವೆ
ಮಚ್ಚರಿಪೆನದಕೆ ತಾಯೆ,
ಕಾಡುವಾ ಕೋಡಿಗನ ತೆರ ಮನವ ಮಾಡಿರುವೆ,
ಮುನಿಸದರೆ ಪ್ರಕೃತಿಮಾಯೆ!
ಮಾಡದುದ ಮಾಡಿ ನೀನಾಡುತಾಟಗಳನ್ನು
ಬಿನದಿಸುವ ಆಟಗಾರ್‍ತಿ !
ಮಾಡುವುದ ಮಾಡದೆಯೆ ಓಡಾಡಿಸುವೆ ಜೀವ-
ಜಡಗಳನು ಮಾಟಗಾರ್‍ತಿ!
*****