ಕಲಿಯಲಿಲ್ಲ ನಾವು
ಕೃಷ್ಣ, ಕ್ರೈಸ್ತ, ಪೈಗಂಬರ,
ಬುದ್ಧ, ಮಹಾವೀರ, ಸಂತರೆಲ್
ಬೋಧಿಸಿರುವ ಶಾಂತಿ ಮಂತ್ರ,
ಕಲಿಯಲಿಲ್ಲ ನಾವು
ಗೀತೆ ಬೈಬಲ್ ಕುರಾನಿನಿಂದ
ಒಬ್ಬರನ್ನೊಬ್ಬರು ಪ್ರೀತಿಸುವ ಹೃದಯವಂತಿಕೆ,
ವಿಶ್ವಶಾಂತಿಯ ಕಾಯ್ವ, ಧೀಮಂತಿಕೆ!
ಮಾರಿಕೊಂಡೆವು ನಾವು
ನಮ್ಮ ಮನದ ಶಾಂತಿ
ಮರುಳಾಗಿ ಹತ್ತು ಹಲವು ಆಮಿಷಗಳಿಗೆ.
ಯಾರು ಕೊಟ್ಟರು ನಮಗೆ
ಒಬ್ಬರನ್ನೊಬ್ಬರು ಕೊಲ್ಲುವ
ಮಕ್ಕಳ ತಬ್ಬಲಿಯಾಗಿಸುವ ಹಕ್ಕು?
ಎಲ್ಲ ಕಡೆ ಬೆಂಕಿ ಹಚ್ಚುವ
ಮನೆಮನೆಯ ಶಾಂತಿ ಕೆಡಿಸುವ ಸೊಕ್ಕು?
ಶಾಂತಿ ಇಲ್ಲದ ಕ್ರಾಂತಿ ಬರೆ ಭ್ರಾಂತಿ!
ಶಾಂತವಾಗಿರೆ ಮನ ಸಾಧನೆಗಿಲ್ಲ ಇತಿಮಿತಿ.
ಹರಡಬಹುದೆಲ್ಲೆಲ್ಲೂ ಬೆಳದಿಂಗಳ ತಂಪು;
ಸೂರ್ಯಾಸ್ತದ ಮುಗಿಲ ರಂಗಿನ ಸೊಂಪು!
ಯಾರು ತಡೆಯಬೇಕೀಗ
ಮಾನವೀಯತೆಯ ನಿರಂತರ ಹೋಮ;
ಮನಮನಕೆ ತಾಗಿರುವ ವಿಕೃತಕಾಮ;
ಶಾಂತಿಯ ಕೆಡಿಸುವ ಮಾರಣ ಹೋಮ
ತುಂಬಲಾರೆವೆ ನಾವು
ಮನಮನದಲ್ಲಿ ಶುದ್ದಭಾವ ತನ್ಮಯತೆ
ಜಾತಿ ಮತ ಭೇದಗಳ ಮರೆತು
ಜಗವ ಪ್ರೀತಿಸುವ ಜೀವಂತಿಕೆ?
ನೆಲೆಸಬೇಕೀಗ
ನಮ್ಮಲ್ಲಿ ನಿಮ್ಮಲ್ಲಿ ಅವರಲ್ಲಿ ಎಲ್ಲರಲಿ
ಉಕ್ಕಿ ಉಕ್ಕಿ ಭೋರ್ಗರೆವ ತೆರೆಗಳು
ಕಡಲತಡಿಯ ಸೋಂಕಿ
ಹಿಂದೆ ಸರಿದು ಸಮುದ್ರ ಸೇರುವಾಗಿನ
ಒಂದು ಕ್ಷಣದ ಪ್ರಶಾಂತ ಸ್ಥಿತಿ.
ಅದೇ ಸಂತರನೇಕರು ಕಂಡ ಸ್ಥಿತ ಪ್ರಜ್ಞಸ್ಥಿತಿ.
ಓಂ ಶಾಂತಿ ಓಂ ಶಾಂತಿ ಓಂ
*****