ದಿನಾ ಪತ್ರಿಕೆ ಬಿಡಿಸಿದರೆ ಸಾಕು
ನೆನಪಿಗೆ ಬರುವುದು ಎಂದೋ ಕೇಳಿದ್ದ ಏಡಿಗಳ ಕಥೆ;
ಮನತುಂಬುವುದು ಆ ಕಥೆಯೊಳಗಿನ ವ್ಯಥೆ.
ಪರದೇಶಗಳಿಗೆ ಕಳುಹಿಸಲೆಂದು ಹಡಗು ತುಂಬಿದ್ದರು
ಮೀನು ತುಂಬಿದ್ದ ಬುಟ್ಟಿಗಳ.
ದೀರ್ಘ ಪ್ರಯಾಣ, ತೆರೆಗಳ ನಿರಂತರ ಹೊಡೆತ
ಕುಲುಕಾಟದಲಿ ಸಡಿಲಗೊಂಡಿತೊಂದು ಬುಟ್ಟಿಯ ಮುಚ್ಚಳ.
ಕಟ್ಟಲೆಂದು ತೆರೆದನೊಬ್ಬ ಬುಟ್ಟಿಯ
ಕಟ್ಟುವುದ ಬಿಟ್ಟು ದಂಗಾಗಿ ಕುಳಿತನವ
ಏಡಿಗಳ ಕಾಲೆಳೆಯುವ ಆಟವ ನೋಡುತ.
ಮೇಲೇರುತ್ತಿದ್ದ ಏಡಿಗಳ ಕಾಲು ಹಿಡಿದು
ಕೆಳಗಳೆಯುತ್ತಿದ್ದವು ಕೆಳಗಿದ್ದ ಏಡಿಗಳು!
ಪದೇ ಪದೇ ಕೆಳಗುರುಳುತ್ತಿದ್ದವು ಮೇಲೇರುತ್ತಿದ್ದ ಏಡಿಗಳು!
ಈ ಎಳೆದಾಟದ ಆಟವ ನೋಡುತ ಮೈಮರೆತನವ ವಿಸ್ಮಯದಿಂದ,
ಮೇಲೇರ ಪ್ರಯತ್ನಿಸಿಯೂ ಮೇಲೆರಲಾಗದ
ಏಡಿಗಳ ಸ್ಥಿತಿಗೆ ಮಮ್ಮಲ ಮರುಗುತ.
ಇದ ನೋಡಿ ಅಲ್ಲಿದ್ದ ವಿದೇಶಿಯನೊಬ್ಬ
ಉದ್ಘರಿಸಿದ “ಓ ಇಂಡಿಯನ್ ಕ್ರ್ಯಾಬ್ಸ್” “ಅಪ್ಪಟ ಭಾರತೀಯ ಏಡಿಗಳು”!
ಈ ಬುಟ್ಟಿಗೆ ಮುಚ್ಚಳದಗತ್ಯವಿಲ್ಲ.
ಇವು ಹೊರಗೆ ಬರುವುದಿಲ್ಲ ಏಡಿಗೆ ಏಡಿಯೇ ಸರ್ಪಗಾವಲು!
ನಾವೇನು ಬೇರೆಯೇ?
ಮೇಲೇರುತ್ತಿರುವವರ ಕೆಳಕೆ ಜಗ್ಗುವುದು ನಮ್ಮ ನಿರಂತರ ಆಟ.
ಈ ಆಟದಲಿ ಮೇಲೇರಿದವರು ಕೆಳಕ್ಕುರುಳುವುದು
ಒದ್ದಾಡುವುದು, ನಗೆಗೀಡಾಗುವುದು ನಮ್ಮ ಜನ್ಮಕ್ಕಂಟಿದ ಶಾಪ.
ಮೇಲೇರುವವರ ಕ೦ಡರೆ ನಮಗಾಗದು
ಯಾರನ್ನೂ ಮೇಲೇರ ಬಿಡೆವು, ಕೆಳಗುರುಳಿಸಿಯೇ ತೀರುವೆವು
ಕೊನೆಗೊಮ್ಮೆ ಎಲ್ಲರೂ ನೆಲಸಮವಾಗುವೆವು
ಮತ್ತೆ ಮೇಲೇರಲೇ ಆಗದಂತೆ!
ಆಗ ಬರುವುದು ಇನ್ನೊಂದು ಗುಂಪು ಇದೇ ಆಟ ಆಡುತ.
ಪತ್ರಿಕೆ ತುಂಬಾ ಇದೇ ಸುದ್ದಿ
ಎಲ್ಲ ಕಡೆ ಏಡಿಗಳಂತವರದ್ದ ಆಟ.
ಕುರ್ಚಿಗಾಗಿ, ಹಣಕ್ಕಾಗಿ, ಹೆಣ್ಣಿಗಾಗಿ ಕಾದಾಟ, ಎಳೆದಾಟ, ಜಗ್ಗಾಟ.
ಅವರ ಕಾಲನ್ನಿವರು ಇವರು ಕಾಲನ್ನವರು
ಎಳೆದು ಉರುಳಿಸುತ್ತಿರೋ ಕಥೆಗಳು
ಈ ಎಳೆದಾಟದಲಿ ಕಂಗೆಟ್ಟಿರುವ ಪ್ರಜೆಗಳ
ಪರಿಹಾರ ಕಾಣದ ವ್ಯಥೆಗಳು!
*****