ತಪ್ಪೊ ಒಪ್ಪೊ ಹೇಳ್ವುದೆಂತು ?
ಅಹಲ್ಯೆ ಜಾರಿಬಿದ್ದಳು
ಸುರಪ ಮತಿಹೀನನಾದ
ಅಳಲಿನಲ್ಲಿ ಬಿದ್ದಳು
ಋಕ್ಷ ಜೀವನಕ್ಕೆ ನೊಂದ
ಕುವರಿ ಬಾಯಿ ತೆರೆದಳು
ಭೀರು ನೊಂದು ಬೆಂದು ಪಾಪ
ಶಕ್ರನೊಡನೆ ಬೆರೆತಳು
ಅತ್ತಳೇನು ಶಾಪಕವಳು?
ನೊಂದಳಯ್ಯೊ ಪಾಪಕೆ
ಎದೆಯನೊಡೆದು ಬಿಟ್ಟಿತಕಟ
ಆವುದೆಣೆಯು ತಾಪಕೆ?
ಅಡಿಯ ಮುಡಿಯು ನಡುಗಿಸಿತ್ತು
ಎದೆಯನೆಲ್ಲ ಉಡುಗಿಸಿ
ಹೊಂಚು ಹಾಕಿ ಬಂತು ಕಾಮ
ಅರಿವನೆಲ್ಲ ಅಡಗಿಸಿ
ಬಿದ್ದಹಲ್ಯೆ ಪುಣ್ಯವಂತೆ –
ರಾಮಪಾದಕೆದ್ದಳು
ಮುನಿದ ಪತಿಯ ಪೂಜ್ಯ ಚರಣ-
ಕಮಲದಲ್ಲಿ ಬಿದ್ದಳು
ತಪ್ಪೊ! ಒಪ್ಪೊ! ಹೇಳ್ವುದೆಂತು
ಅಹಲ್ಯೆ ಜಾರಿಬಿದ್ದಳು
ಪುಣ್ಯವಂತೆ ನೊಂದಳಯ್ಯೊ
ರಾಮಪಾದಕೆದ್ದಳು
*****