ನೂರುಬಣ್ಣಗಳ ಉಟ್ಟು ನಲಿಯುವವು
ಮೋಡ ಹೊಳೆಯುಹಳ್ಳ
ನಿನಗೆ ತಂದಿರಲು ಬಣ್ಣದಾಟಿಗೆಯ
ಅಲ್ಲವೇನು ಕಳ್ಳ
ಕಣ್ಣನೆಳೆವ ಬಣ್ಣಗಳು ಹೂವ ಮೆರು-
ಗನ್ನು ಹೆಚ್ಚಿಸುವವು
ಏಕೆ ಎಂಬುದನು ಬಲ್ಲೆ ಬಾಳಣ್ಣ
ನಿನ್ನ ಮೆಚ್ಚಿಸುವವು
ನಿನ್ನ ಕುಣಿಸಲೆಂದಾನು ಹಾಡುತಿರೆ
ಎಲೆಗಳಲ್ಲಿ ಗಾನ
ತೇಲಿಬರುವದೋ ಗಾಳಿಯಲ್ಲಿ ಆ
ಮಧುರವಾದ ತಾನ
ನೆಲದ ಎದೆಯು ತಾನಕ್ಕು ನಲಿಯುವದು
ಅಲೆಯ ಗೀತ ಕೇಳಿ
ನನ್ನದನಿಗೆ ಜೊತೆಯಾಗಿ ನಡೆಯಲಿರೆ
ನಿನ್ನ ನೃತ್ಯ ಕೇಳಿ
ನಿನ್ನ ಚಾಚಿರುವ ಹರಹು ಅಂಗೈಗೆ
ಸವಿಯ ತಿನಸನಿಡಲು
ಹೂವು ಬಟ್ಟಲುಗಳಲ್ಲಿ ಒಟ್ಟಿಲಾ-
ಗುವದೊ ಜೇನ ಮಡಿಲು
ಏಕೆ ತನಿರಸವ ಹಣ್ಣು ಉಕ್ಕಿಸುವ –
ದೆಂದು ಬಲ್ಲೆನಣ್ಣ
ನಿನ್ನ ಅಂಗೈಗೆ ತಿನಿಸನಿಟ್ಟಿರಲು
ನನ್ನ ಮುದ್ದು ಚಿಣ್ಣ
ಮುಗುಳುನಗೆಯ ಮೂಡಿಸಲು ನಿನ್ನ
ಮುಖದಲ್ಲಿ ಮುತ್ತನಿಡಲು
ಸೊಗಸನುಕ್ಕಿಸುತ ಅರುಣಕಿರಣಗಳು
ಬಹವು ಇರುಳಿನೊಡಲು
ಬಗೆದು ಬಲ್ಲೆನಾನಿನ್ನ ಮುಖದಲ್ಲಿ
ನಲಿದು ಮುತ್ತನಿಡಲು
ಮಧು ಮಂದಪವನ ತರುತ್ತಿರುವ ಸುಖವ
ಉಣ್ಣುವದು ನನ್ನ ಒಡಲು
*****