“ನಿದ್ದೆಗೇಡಿ ಬುದ್ದಿಗೇಡಿ” ಎಂಬ ಗಾದೆ ಮಾತಿದೆ. ನಿದ್ದೆಯಿಲ್ಲದವರು ಬುದ್ಧಿಯಿಲ್ಲದವರು ಒಂದೇ. ದೇಶ ವಿದೇಶಗಳಲ್ಲಿ ಜನರು ಈಗೀಗ ನಿದ್ದೆಯಿಲ್ಲದೆ ವಿಲವಿಲ ಒದ್ದಾಡುತ್ತಿರುವರು. ನಾನಾ ಒತ್ತಡಗಳಿಂದಾಗಿ ಮನಃಶಾಂತಿಯಿಲ್ಲದೆ ಕಡ್ಡಾಯವಾಗಿ ನಿದ್ರೆ ಮಾತ್ರೆ ತೆಗೆದುಕೊಂಡೇ ನಿದ್ರೆಗೆ ಜಾರುತ್ತಿರುವರು. ನಿದ್ರೆಯನ್ನು ಕೊಳ್ಳಲಾಗದು. ಸಹಜವಾಗಿ ನಿದ್ರೆ ಬರಬೇಕು. ಆದರೆ ನಿದ್ರೆಯಿಲ್ಲದೆ ನಾನಾ ಕಸರತ್ತು ಮಾಡುವರು. ಸುಖ, ನಿದ್ರೆ ಮಾತ್ರ ಕಾಣರು.
“ಬೇಗ ಮಲಗು ಬೇಗ ಏಳು” ಇದು ಕೆಲವರ ಕೈಯಿಂದ ಆಗದು. ಇವರು ತಡವಾಗಿ ಮಲಗುವುದು ತಡವಾಗಿ ಏಳುವುದು, ಸೂರ್ಯ ಪುತ್ರರಂತೆ ಬಿಸಿಲು ಮೈಸುಟ್ಟರೆ ಆಗ ಎಚ್ಚರವಾಗುವರು.
ಇನ್ನು ಕೆಲವರು ಸೂರ್ಯಕಾಂತಿಯ ಹೂವಂತೆ ಸೂರ್ಯನಿಗೆ ಮುಖ ಕೊಟ್ಟು ದುಡಿವವರು. ಸೂರ್ಯಾಸ್ತಮಿಸಿದಂತೆ ಅವರ ದುಡಿಮೆ ಮುಗಿವದು. ವಿಶ್ರಾಂತಿ ಬಯಸುವರು.
ಎಷ್ಟು ಹೊತ್ತಿಗೆ ಮಲಗಿದೆ ನಿದ್ರಿಸಿದೆ ಮುಖ್ಯ ಅಲ್ಲ. ಬೆಳಿಗ್ಗೆ ಸೂರ್ಯನನ್ನು ಎಬ್ಬಿಸುವುದು ಜಗಕೆ ಬೆಳಕು ಹರಿಸುವುದು ಮುಖ್ಯ. ಮೂಡಣ ದಿಕ್ಕಿಗೆ ಸೂರ್ಯನಿಗೆ ಮುಖ ಕೊಟ್ಟು ನಿಂತಾಗ ಸೂರ್ಯನಾಡುವ ಆಟದಿಂದ ನಮ್ಮ ಆಟ ಮೊದಲಾಗಬೇಕು. ಆಗ ಶಕ್ತಿ ಸಂಚಲನವಾಗುವುದು. ಅಂದು ಒಳ್ಳೆಯ ನಿದ್ದೆ ಸವಿಯಲು ಸಾಧ್ಯವಿದೆ.
ಒಳ್ಳೆಯ ನಿದ್ದೆ ಸಹಜವಾದ ನಿದ್ದೆ ಮನುಷ್ಯನನ್ನು ಲವಲವಿಕೆಯಿಂದ ಇಡುವುದು. ಏನೆಲ್ಲ ನೆನಪುಗಳನ್ನು ಒತ್ತರಿಸಿಕೊಂಡು ಬರುವುದು.
ನಿದ್ದೆಯ ಬಗ್ಗೆ ಇತ್ತೀಚಿಗೆ ಬ್ರಿಟನ್ ಅಧ್ಯಯನಕಾರರು ಹೊಸ ಹೊಸ ವಿಚಾರಗಳನ್ನು ಸಂಶೋಧಿಸಿರುವರು. ನಿದ್ದೆ-ನೆನಪಿನ ಶಕ್ತಿಯನ್ನು ವೃದ್ಧಿಸುವದೆಂದಿರುವರು. ಬ್ರಿಟನ್‌ನ ಎಕ್ಸೆಟರ್ ವಿಶ್ವವಿದ್ಯಾಲಯ ಹಾಗೂ ಸ್ಪೇನ್‌ನ ಮಿದುಳು ಹಾಗೂ ಭಾಷಾ ಕೇಂದ್ರದ ತಜ್ಞರ ತಂಡ ಈ ಅಧ್ಯಯನವನ್ನು ಕೈಗೊಂಡಿದ್ದು… ಈ ಹಿಂದೆ ಮರೆತು ಹೋಗಿದ್ದ ನೆನಪಿಗೆ ಸಿಗದ ಎಷ್ಟೋ ವಿಚಾರಗಳು, ಘಟನೆಗಳು ಸುಮಧುರ ಕ್ಷಣಗಳನ್ನು ಒಳ್ಳೆಯ ನಿದ್ದೆಯು ಸುಲಭವಾಗಿ ನೆನಪು ಮಾಡಿಕೊಳ್ಳಲು ಅನುವು ಮಾಡಿಕೊಡುವುದೆಂದು ಸಂಶೋಧಿಸಿರುವರು.
ಸರಿಯಾಗಿ ನಿದ್ರೆಯಾಗದ ದಿನಗಳಲ್ಲಿ ಎಚ್ಚರವಾಗಿದ್ದ, ನಿದ್ರೆಯಲ್ಲಿ ಮರೆತು ಹೋಗಿರುವ ಎಷ್ಟೋ ಹಣಕಾಸಿನ ವಿಚಾರಗಳು ಒಳ್ಳೆಯ ನಿದ್ರೆಯ ಬಳಿಕ ನೆನಪಿಸಿಕೊಳ್ಳುವ ಸಾಮಾರ್ಥ್ಯ ದುಪ್ಪಟ್ಟಾಗಿರುವುದೆಂದು ಅಧ್ಯಯನಕಾರರು ಖಚಿತಪಡಿಸಿರುವರು.
ಆದ್ದರಿಂದ ಒಳ್ಳೆಯ ನಿದ್ದೆಯಿಂದ ಒಳ್ಳೆಯ ಕನಸುಗಳು ಸಾಕಾರಗೊಳ್ಳುವುದು. ನೆನಪಿನ ಶಕ್ತಿಯನ್ನು ಮತ್ತಷ್ಟು ತೀಕ್ಷ್ಯಗೊಳಿಸುವುದು, ಆಯುಷ್ಯ ವೃದ್ಧಿಸುವುದು. ಇತ್ಯಾದಿ ಲಾಭಗಳನ್ನು ಎಕ್ಸೆಟರ್ ವಿಶ್ವವಿದ್ಯಾಲಯದ ನಿಕೊಲಸ್‌ಡುಮಯ್ ವಿವರಿಸಿರುವರು. ಆದ್ದರಿಂದ ಎಲ್ಲರೂ ಒಳ್ಳೆಯ ನಿದ್ದೆ ಮಾಡಲು ಮನಸು ಮಾಡೋಣವಲ್ಲವೇ?
*****