ಎಲ್ಲ ನಾದದಲಿ ಎಲ್ಲ ದನಿಗಳಲಿ ದೇವವಾಣಿ ಜಾಗು
ಹಾಡು-ಪಾಡು ಗುಡುಗಾಟ ಮತ್ತೆ ಕುಹುಕಾಟ ಕೇಕ ಕೂಗು.
ಹರ್ಷಶೋಕದಲಿ ಮಿಕ್ಕಿಬರುವ ಜೀವನದ ತೊದಲು ಬದಲು
ವೈಖರಿಯ ಗಮಕ, ಗುಂಗುಣಿಸಿ ಬರುವ ಸವಿನುಡಿಯ ಯಮಕಗಳಲು.
ಕಡಲ ಮೊರೆತ ಕುಣಿಕುಣಿದು ನೊರೆಯ ತೆರೆತೆರೆಯ ಅಟ್ಟಹಾಸ.
ಗಾಳಿತೇರು ರೆಕ್ಕೆಗಳ ಬೀಸಿ ಪರೆಗುಡುವ ಜಯವಿಲಾಸ.
ಭೂಮಿ ಸುತ್ತಿ ತುತ್ತೂರಿ ಬರುವ ಬಾನುಲಿಯ ತೂರ್ಯನಾದ
ಯಂತ್ರ ಗಿರಣಿ ಎದೆಗುಕ್ಕು ದುಃಖ ಭಯರುದ್ರ ಭುಂ ನಿನಾದ.
ಆಕಾಶವಾಣಿ ಮಾರುತರ ಓಣಿ ಓಣಿಯಲಿ ಶಂಖ ಊದಿ
ದೇವಹೃದಯಕೂ ಜೀವದೆದೆಯೆದೆಗು ಮಾಡುತಿಹುದು ಹಾದಿ.
ರವಿತೇಜ ಕಂಡ, ಹಲನೀರನುಂಡ, ಏನೇನೋ ನೆನವು ಜನಿಸಿ
ಭವ್ಯ ಬಂಧದಲಿ ದಿವ್ಯಭಂದ ವೇದ ಪ್ರಬಂಧವೆನಿಸಿ.
ಅಂಧ-ಹೃದಯದಲಿ ನುಸುಳುತಿಹುದು ಸವಿ ತಾಳಮೇಳವಾಗಿ.
ನೀನೆ ದೇವ! ಓ ಜೀವ ಭಾವ! ಎನೆ, ಚೆಲುವಿಗಾಗಿ ಮಾಗಿ.
*****