ಎನ್ನೊಡಲಾದಡೆ ಎನ್ನಿಚ್ಚೆಯಲ್ಲಿರದೆ
ನಿನ್ನೊಡಲಾದಡೆ ನಿನ್ನಿಚ್ಛೆಯಲ್ಲಿರದೆ
ಅದು ಎನ್ನೊಡಲೂ ಅಲ್ಲ
ನಿನ್ನೊಡಲೂ ಅಲ್ಲ
ಅದು ನೀ ಮಾಡಿದ ಜಗದ ಬಿನ್ನಾಣದೊಡಲು
ಕಾಣಾ
ರಾಮನಾಥ
ಜೇಡರ ದಾಸಿಮಯ್ಯನ ವಚನ. ಇದು ನನ್ನ ಮೈಯಾದರೆ ನನ್ನ ಮಾತು ಕೇಳಬೇಕು, ಕೇಳುತ್ತಿಲ್ಲ. ದೇವರೇ, ಇದು ನಿನ್ನ ಮೈಯಾದರೆ ನಿನ್ನ ಮಾತು ಕೇಳುತ್ತಿರಬೇಕು. ಕೇಳುತ್ತಿಲ್ಲವಲ್ಲಾ? ಇದು ನನ್ನ ಒಡಲೂ ಅಲ್ಲ, ನಿನ್ನ ಒಡಲೂ ಅಲ್ಲ, ಈ ಲೋಕದ ಬಿನ್ನಾಣಕ್ಕೆ ಸಿಕ್ಕಿಬಿದ್ದ ಒಡಲು.
ಜೇಡರ ದಾಸಿಮಯ್ಯನ ಈ ಮಾತು ನಮ್ಮ ವ್ಯಕ್ತಿತ್ವಗಳು ಆದರ್ಶಗಳಿಂದ ಅಲ್ಲ, ನಮ್ಮ ಸುತ್ತಲ ವಾಸ್ತವ ಪರಿಸರದಿಂದ ರೂಪುಗೊಳ್ಳುತ್ತದೆ ಅನ್ನುವ ನಿಲುವಿನಿಂದ ಮೂಡಿದಂತಿದೆ. ಬಿನ್ನಾಣ ಎಂಬ ಮಾತಿಗೆ ತೋರಿಕೆಯ ವೈಭವ, ಆಕರ್ಷಣೆ ಇತ್ಯಾದಿ ಅರ್ಥಗಳೊಂದಿಗೆ ಅದು ವಿಜ್ಞಾನ ಎಂಬ ಮಾತಿನ ತದ್ಭವವೂ ಹೌದು.
ಈ ಲೋಕದ ವ್ಯವಹಾರದ ವಿಜ್ಞಾನ ನಮ್ಮ ನಮ್ಮ ವ್ಯಕ್ತಿತ್ವಗಳನ್ನು ತಿದ್ದುತ್ತದೆ, ನಮ್ಮ ಇಚ್ಛೆ ಅಂದುಕೊಳ್ಳುವುದೂ, ದೇವರ ಕಲ್ಪನೆಯೂ ನಮಗೆ ದೊರೆತ ಜಗತ್ತಿನ ಸಂಪರ್ಕದಿಂದಲೇ ಮೂಡಿದ್ದಲ್ಲವೇ? ಹಾಗಿದ್ದರೆ ನಾವು ಹೀಗೇಕೆ ಅನ್ನುವುದಕ್ಕೆ ನಮ್ಮ ಸುತ್ತಲ ಜಗತ್ತೇ ಕಾರಣ ಎಂದೆನ್ನಬಹುದೇ?
ಆಗದೇನೋ. ಯಾಕೆಂದರೆ ಜಗತ್ತಿನ ಇಚ್ಛೆಯಂತೆ ನಡೆಯಬೇಕೆನ್ನುವ ಬಲವಂತ, ದೇವರ ಆದರ್ಶದಂತೆ ಇರಲಾಗದ ಯಾತನೆ ಇವುಗಳ ಇಬ್ಬಂದಿಯೇ ದಾಸಿಮಯ್ಯನಿಗೆ ಮುಖ್ಯವಾದಂತೆ ತೋರುತ್ತದೆ. ಇವೆಲ್ಲದರ ಮೂಲದಲ್ಲಿರುವುದು ಕೂಡ ನಾನು ಅನ್ನುವ ಕಲ್ಪನೆಯನ್ನು ವಿವರಿಸಿಕೊಳ್ಳಲಾಗದ ತೊಳಲಾಟವೇ ಇರಬಹುದು.
*****