ಹುಟ್ಟು ಎಲ್ಲೊ ಹರಿವುದೆಲ್ಲೂ
ಸೇರುವುದೊಂದೆ ಕಡಲಿಗೆ
ನೀರು ಯಾವ ನದಿಯದಾದರೇನು
ಕಡಲ ಒಡಲಿಗಿಲ್ಲ ಭೇದಭಾವ
ಹರಿದು ಬಂದುದೆಲ್ಲ ಸ್ವಾಹಾ!
ಹುಟ್ಟುವಾಗ ಎಲ್ಲರೊಂದೆ
ಬೆಳೆಯುವಾಗ ಹಲವು ಜಾತಿ ಹಲವು ಮತ
ಸತ್ತ ಮೇಲೆ ಒಂದೇ ಕಾಟ
ನಡುವೆ ಏಕೆ ಅಂತಃಕಲಹ?
ದೇವರಿಗಿಲ್ಲ ಮೇಲು ಕೀಳು
ಯಮನಿಗಿಲ್ಲ ಭೇದಭಾವ
ಕಾಮನಿಗಿಲ್ಲ ಜಾತಿ ಮತ
ಮನುಜಗೇಕೆ ಕುಲದ ಹಲುಬು
ಸಣ್ಣ ದೃಷ್ಟಿ ಭೇದಭಾವ ಸೃಷ್ಟಿ?
ಮನಸ್ಸು ಕಡಲು ಆದರೆ
ಎಲ್ಲ ಅಲೆಯು ಬೆರೆಯುವಂತೆ
ಮನುಜರೆಲ್ಲ ಬೆರೆತರೆ
ನಾವು ನೀವು ಅವರು ಇವರು ಎಲ್ಲರೊಂದೆ
ಎಲ್ಲರದ್ದೂ ಮನುಜ ಕುಲವು
ಮಾನವೀಯ ಧರ್ಮವು.
ಉಳಿವುದೊಂದೆ ವಿಶ್ವಪಥವು
ಕಡಲು ಮೆರೆವ ತಾದಾತ್ಮ್ಯ ಭಾವವು!
*****