ತೌರಿಗೆ ಹೋದವಳು
ಬರಲು ತಡವಾದಲ್ಲಿ
ತಳಮಳ ಕಳವಳ ಹೇಳೋಕೆ ತೀರದು.
ಅಂಗಳದಿ ಪ್ರಿಯವಾದ ರಂಗೋಲಿ ನಗುವಿಲ್ಲ
ಹೂಬಳ್ಳಿ ಗಿಡಗಳಿಗೆ ನೀರಿಲ್ಲ
ದೇವರ ಮುಂದಿನ ದೀಪಿಲ್ಲ.
ಒಳಗೂ ಬಣ ಬಣ ಹೊರಗೂ ಬಣ ಬಣ
ಲಲ್ಲೆ ಹೊಡೆಯಲು ಲಲಿತೆ ಅವಳಿಲ್ಲ
ತಿನ್ನಲು, ಕುಡಿಯಲು ಸೊಗಸಿಲ್ಲ.
ಕಣ್ಣಿವೆ ಕಡಿದರು ನಿದ್ದಿಲ್ಲ
ಉದ್ದಾದ ರಾತ್ರಿಗೆ ಮದ್ದಿಲ್ಲ
ಸದ್ದಿಲ್ಲ, ಗದ್ದಿಲ್ಲ ಸುಂಯ್, ಸುಂಯ್ ಗುಡಿತಿದೆ ಮ್ಲಾನ
ಅಸಹನೀಯ ಮೌನ
ಎಲ್ಲಿದ್ಲೊ ಏನ್‌ಕಥೆಯೋ ಒಬ್ಬಳೇ ಬಂದಳು
ಎಲ್ಲವನು, ಎಲ್ಲರನು ಮರೆಸಿದಳು
ಘಳಿಗೆ ಬಿಟ್ಟಿರದಂತೆ ಮೋಡಿ ಮಾಡಿಹಳು
ತಡಮಾಡಿ ಬಂದುದಕೆ ದುಮ್ಮಾನ ತೋರಲು
ಬಿಮ್ಮನಿರ ಬೇಕೆಂದು ಯೋಜಿಸಿದೆ
ಪ್ರತಿಕ್ರಿಯೆ ತಿಳಿಯಲು ಬಯಸಿದೆ
ಅವುಚಿ ಕಂದನ ಎದೆಯಲ್ಲಿ
ಅಳುಕಿನ ಭಾವದಲಿ, ಅಸ್ಥಿರದ ಹೆಜ್ಜೆಯಲಿ
ಧಾವಿಸಿ ಬಂದಳು; ಕಂಡವಳೆ ಒಂಥರಹ ನಕ್ಕಳು
ಫಕ್ಕನೆ ಹೊತ್ತಿದವು ನನ್ನಲ್ಲಿ ಝಗಮಗಿಸುವ ದೀಪ
ಮರೆತೋಯ್ತು ಮಾಡಿದ್ದ ಶಪಥ
ಹಾರಿ ಮುತ್ತಿಡುವುದೊಂದೇ ಉಳಿಯಿತು
*****