ಅಯೋಧ್ಯೆಯ ಬಾಬರಿ ಮಸೀದಿ-ರಾಮಜನ್ಮಭೂಮಿ ವಿವಾದದಲ್ಲಿ ಚಾರಿತ್ರಿಕ ಸಂಗತಿಗಳ ಸತ್ಯಾನ್ವೇಷಣೆ ಮತ್ತು ಸಾಮರಸ್ಯ ಗೌಣವಾಗಿ, ಭಾವೋದ್ರೇಕದ ಬುಲ್ಡೋಜರ್ ತನ್ನೆಲ್ಲ ಅಬ್ಬರದೊಂದಿಗೆ ಬೀದಿಗೆ ಬಂದಿದೆ. ಹಿಂದೂ ಮತ್ತು ಮುಸ್ಲಿಂ ಮೂಲಭೂತವಾದಿಗಳು ಔಚಿತ್ಯ ಪ್ರಜ್ಞೆಯ ಮೇಲೆ ಹಲ್ಲೆ ಮಾಡುತ್ತಿರುವ ಈ ಸಂದರ್ಭದಲ್ಲಿ ನಾವೆಲ್ಲ ಸಮಚಿತ್ತದಿಂದ ಚಿಂತಿಸುವ ಅಗತ್ಯವಿದೆ.
ದೇಶದ ಸಮಗ್ರತೆಗೆ ಧಕ್ಕೆ ತರುವ ಪ್ರತ್ಯೇಕತಾವಾದ, ಕೋಮುವಾದಗಳನ್ನು ಯಾರೇ ಪ್ರತಿಪಾದಿಸಲಿ – ಅವರು ಹಿಂದೂ, ಮುಸ್ಲಿಂ, ಸಿಖ್, ಕ್ರೈಸ್ತ ಯಾರೇ ಆಗಿರಲಿ – ಪ್ರತಿಭಟಿಸಬೇಕಾದ್ದು ಜನಹಿತ ಬಯಸುವ ಎಲ್ಲರ ಕೆಲಸವಾಗಿದೆ.
ನಮಗೆ ಇಂದು ದೇಶದ ಚಿತ್ತ ಸ್ವಾಸ್ಥ್ಯವನ್ನು ಕಾಪಾಡುವ ಹೊಣೆಗಾರಿಕೆ ಬೇಕು. ಚಾರಿತ್ರಿಕ ಹಾಗೂ ಸಮಕಾಲೀನ ಸಂಗತಿಗಳನ್ನು ಆರೋಗ್ಯಕರ ನೆಲೆಯಲ್ಲಿ ವಿವರಿಸಿಕೊಳ್ಳುವ ಮನಸ್ಥಿತಿ ಯೊಂದು ಇಲ್ಲದಿದ್ದರೆ, ಚರಿತ್ರೆಯ ಪುಟಗಳ ತುಂಬ ಚಿತ್ತು ಮಾಡುತ್ತೇವೆ. ಸಮಕಾಲೀನ ಸತ್ಯಗಳನ್ನು ಸುಳ್ಳಿನ ಸುಂದರ ಸಮಾಧಿಯಲ್ಲಿ ಹೂತುಬಿಡುತ್ತೇವೆ. ಇದು ನಮ್ಮ ಮೆದುಳು ಮತ್ತು ಮನಸ್ಸುಗಳಿಗೆ ನಾವೇ ಮಾಡಿಕೊಳ್ಳುವ ವಂಚನೆಯಾಗುತ್ತದೆ.
ಬಾಬರಿ ಮಸೀದಿ-ರಾಮಜನ್ಮಭೂಮಿ ವಿವಾದವನ್ನು ಬೀದಿಕಾಳಗ ಮಾಡುವಲ್ಲಿ ಹಿಂದೂ ಮತ್ತು ಮುಸ್ಲಿಂ ಮೂಲಭೂತವಾದಿಗಳಿಬ್ಬರೂ ವಿಭಿನ್ನ ಪ್ರಮಾಣದಲ್ಲಿ ಶಕ್ತಾನುಸಾರ ಶ್ರಮಿಸಿದ್ದಾರೆ. ಸ್ವಾತಂತ್ರ್ಯಪೂರ್ವದಲ್ಲಿ ಪ್ರಾರಂಭವಾದ ಹಿಂದೂ-ಮುಸ್ಲಿಮರ ಅಪನಂಬಿಕೆ, ಅಗಾಧವಾಗಿ ಬೆಳೆದು ಬಲಗೊಳ್ಳಲು ತಕ್ಷಣದ ಲಾಭಕ್ಕೆ ಹಾತೊರೆಯುವ ರಾಜಕಾರಣಿಗಳೂ ಬಹಳಷ್ಟು ಕಾರಣ. ಚರಿತ್ರೆಯನ್ನು ತಿರುಚಿ ತಂಗಳಲ್ಲಿ ತಿಂಗಳು ಬೆಳಕು ಕಾಣಬಯಸುವ ಪ್ರವೃತ್ತಿಗೆ ಈ ವಿವಾದ ಒಂದು ಜ್ವಲಂತ ಸಾಕ್ಷಿ.
ಅಲಹಾಬಾದ್ ವಿಶ್ವವಿದ್ಯಾನಿಲಯದ ಇತಿಹಾಸ ಸಂಶೋಧಕ-ಪ್ರಾಧ್ಯಾಪಕ ಡಾ|| ಸುಶೀಲ್ ವಾಸ್ತವ ಅವರು ಈ ವಿಷಯದ ಬಗ್ಗೆ ನಡೆಸಿದ ಸಂಶೋಧನೆ, ವಿವಾದ ಹುಟ್ಟು ಹಾಕುವಲ್ಲಿ ಬ್ರಿಟಿಷರು ವಹಿಸಿದ ಪಾತ್ರದ ಮೇಲೂ ಬೆಳಕು ಚೆಲ್ಲುತ್ತದೆ. ಅವರ ಪ್ರಕಾರ ೧೮೫೭-೫೮ರಲ್ಲಿ ಸಿಪಾಯಿ ಬಂಡಾಯ ಅಯೋಧ್ಯೆಯಿರುವ ಫೈಜಾಬಾದ್ ವಲಯಕ್ಕೂ ವಿಸ್ತರಿಸಿದಾಗ ಅಲ್ಲಿನ ಮಹಂತರುಗಳು ಬ್ರಿಟಿಷರ ಪರವಾದ ನಿಲುವು ತೆಗೆದುಕೊಂಡರು. ಇದಕ್ಕೆ ಪ್ರತಿಫಲವಾಗಿ ಬ್ರಿಟಿಷರು, ಬಾಬರಿ ಮಸೀದಿ ಮುಂದುಗಡೆ ರಾಮಜನ್ಮಭೂಮಿ ವೇದಿಕೆಯೊಂದನ್ನು ನಿರ್ಮಿಸಲು ಅವಕಾಶ ಕೊಟ್ಟರು.
ಅವದ್ ಪ್ರದೇಶದ ಬ್ರಿಟಿಷ್ ರೆಸಿಡೆಂಟ್ ೧೮೫೯ರಲ್ಲಿ ಆಜ್ಞೆಯೊಂದನ್ನು ಹೊರಡಿಸಿ, ಮಸೀದಿಗೆ ಬರುವವರು ಉತ್ತರದ ಬಾಗಿಲಿನಿಂದ ಬರಬೇಕೆಂದು ನಿಯಮ ಮಾಡಿದ. ಅಲ್ಲದೆ ಇದು ರಾಮಜನ್ಮಭೂಮಿಯಾಗಿತ್ತೆಂದು ಹಕ್ಕು ಸ್ಥಾಪಿಸಲು ಹಿಂದೂಗಳಿಗೆ ಪ್ರಚೋದನೆ ನೀಡಿದ.
ಈ ರೆಸಿಡೆಂಟ್‌ನ ಆಜ್ಞೆ ಬರುವುದಕ್ಕೆ ಮುಂಚೆ ೧೮೫೫ರಲ್ಲಿ ಹಿಂದೂ-ಮುಸ್ಲಿಂ ಮುಂದಾಳುಗಳು ಸೌಹಾರ್ದ ಒಪ್ಪಂದಕ್ಕೆ ಬಂದು ಒಳ ಜಗಳಗಳಿಗೆ ವಿರಾಮ ಹಾಕಿದ್ದರು. ೧೮೫೯ರಲ್ಲಿ ರೆಸಿಡೆಂಟಿನ ಆಜ್ಞೆ ಹೊರಟಾಗ ಈ ಮುಂದಾಳುಗಳೆಲ್ಲ ಮರಣ ದಂಡನೆಗೆ ಗುರಿಯಾದರು. ಮರವೊಂದಕ್ಕೆ ಇವರನ್ನೆಲ್ಲ ನೇಣು ಹಾಕಲಾಯಿತು. ಈ ಮರವು ಹಿಂದು ಮುಸ್ಲಿಮರ ಪವಿತ್ರ ಸ್ಮಾರಕವಾಗಿತ್ತು.
೧೮೮೫ರಲ್ಲಿ ರಘುಬೀರ್‌ದಾಸ್ ಎಂಬ ಒಬ್ಬ ಮಹಂತನು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಬಾಬರಿ ಮಸೀದಿಯ ಮುಂದಿರುವ ವೇದಿಕೆಯ ಮೇಲೆ ಮಂದಿರವನ್ನು ಕಟ್ಟಲು ಸರ್ಕಾರಿ ಆದೇಶಕ್ಕಾಗಿ ಕೇಳಿಕೊಂಡರು. ೧೮೮೫, ಡಿಸೆಂಬರ್ ೨೪ ರಂದು ಈ ಅರ್ಜಿಯನ್ನು ಫೈಜಾಬಾದಿನ ಉಪ ನ್ಯಾಯಾಧೀಶ ಹರಿಕಿಷನ್ ಶಾಸ್ತ್ರಿಯವರು ತಿರಸ್ಕರಿಸಿದರು.
ಮಂದಿರ ನಿರ್ಮಾಣಕ್ಕೆ ಅವಕಾಶ ಕೊಟ್ಟರೆ ಕೋಮು ಗಲಭೆಯ ಕದ ತೆಗೆದಂತಾಗುತ್ತದೆ ಯೆಂಬ ಅಭಿಪ್ರಾಯವನ್ನು ಅವರ ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿತ್ತು.
ಸ್ವಾತಂತ್ರ್ಯಾನಂತರವೂ ಈ ವಾದ-ವಿವಾದ ಮುಂದುವರೆಯಿತು. ಒಂದು ದಿನ ಇದ್ದಕ್ಕಿದ್ದಂತೆ ಶ್ರೀರಾಮ, ಲಕ್ಷಣ ಮತ್ತು ಸೀತೆಯರ ವಿಗ್ರಹಗಳನ್ನು, ಬಾಬರಿ ಮಸೀದಿಯ ಒಳಗಡೆ ಸಾಗಿಸಿ ಸ್ಥಾಪಿಸುವ ಪ್ರಯತ್ನ ನಡೆಯಿತು. ಈ ಘಟನೆಗೆ ಸಂಬಂಧಿಸಿದಂತೆ, ಆಗ ಫೈಜಾಬಾದ್‌ನ ಜಿಲ್ಲಾಧಿಕಾರಿಗಳಾಗಿದ್ದ ಜಿ.ಎನ್. ಅಗರ್ ಅವರು ದಾಖಲಿಸಿದ ಪ್ರಮಾಣ ಪತ್ರದಲ್ಲಿ ಹೀಗೆ ಹೇಳಿದ್ದಾರೆ. “೧೯೪೯ರ ಡಿಸೆಂಬರ್ ೨೨ ಮತ್ತು ೨೩ರ ನಡುರಾತ್ರಿಯಲ್ಲಿ ಕೆಲವು ಕಿಡಿಗೇಡಿಗಳು ಮಸೀದಿ ಮತ್ತು ವೇದಿಕೆಯ ನಡುವಿನ ಗೋಡೆಯನ್ನು ಕೆಡವಿ, ಶ್ರೀರಾಮ, ಸೀತೆ, ಲಕ್ಷಣ, ಇವರ ಮೂರ್ತಿಗಳನ್ನು ಒಳಗೆ ಸ್ಥಾಪಿಸಲು ಯತ್ನಿಸಿದ್ದಾರೆ. ಇದರಿಂದ ತೀವ್ರತರ ಕೋಮು ಶೋಭೆಯ ಸಾಧ್ಯತೆ ಕಂಡುಬಂದಿದೆ.”
ಇಂಥ ತೀವ್ರ ಕ್ಷೋಭೆಯ ಸ್ವರೂಪವನ್ನು ಅರ್ಥಮಾಡಿಕೊಂಡ ಜವಾಹರಲಾಲ್ ನೆಹರೂ ಅವರು ಮಧ್ಯೆ ಪ್ರವೇಶಿಸಿ ಮಸೀದಿಗೆ ಬೀಗಮುದ್ರೆ ಹಾಕಿಸಿದರು. ೧೯೮೫ರ ಜನವರಿ ೩೦ ರಂದು ಪಾಂಡೆ ಎನ್ನುವವರು ಫೈಜಾಬಾದ್ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಸಲ್ಲಿಸಿದ ಮನವಿಯನ್ನು ಪುರಸ್ಕರಿಸಿ ಬೀಗಮುದ್ರೆ ತೆಗೆಯಲು ನ್ಯಾಯಾಲಯವು ಅವಕಾಶ ಕಲ್ಪಿಸಿತು.
ಇದಕ್ಕಿಂತ ಮುಂದೆ ೧೯೮೫ರ ಜನವರಿ ೨೫ ರಂದು ಸಾದರ್ ನ್ಯಾಯಾಲಯವು ಇದೇ ಪಾಂಡೆಯವರ ಅರ್ಜಿಯನ್ನು ತಿರಸ್ಕರಿಸಿತ್ತು. ೧೯೮೫ರಲ್ಲಿ ಈ ವಿವಾದದ ಬೀಗ ಬಾಗಿಲುಗಳನ್ನು ಮತ್ತೆ ತೆರೆಯಲಾಯಿತು. ಅಲ್ಲಿಂದ ಇಲ್ಲಿಯವರೆಗೆ ಈ ವಿವಾದವು ತೀರಾ ಅನಾರೋಗ್ಯಕರ ತಿರುವುಗಳನ್ನು ತೆಗೆದುಕೊಂಡಿದೆ. ಅನೇಕ ಸಂಘ ಸಂಸ್ಥೆಗಳು ಹುಟ್ಟಿಕೊಂಡು ಸಮಸ್ಯೆಯ ಜಟಿಲತೆಗೆ ತಂತಮ್ಮ ಕೊಡುಗೆ ಕೊಟ್ಟಿದೆ. ಜನರ ಧಾರ್ಮಿಕ ಭಾವುಕತೆಯನ್ನು ಬಳಸಿಕೊಳ್ಳಲು ಯತ್ನಿಸಿವೆ. ಬಾಬರಿ ಮಸೀದಿ ಸಂಯೋಜನಾ ಸಮಿತಿ, ವಿಶ್ವ ಹಿಂದೂ ಪರಿಷತ್, ಬಜರಂಗದಳ, ಹಿಂದೂ ಶಿವಸೇನ, ಆದಂಸೇನೆ, ಬಾಬರಿ ಮಸೀದಿ ಕ್ರಿಯಾ ಸಮಿತಿ -ಇಂಥ ಸಂಸ್ಥೆಗಳು ಹಿಂದೂ-ಮುಸ್ಲಿಂ ಮನಸ್ಸುಗಳನ್ನು ಕೆರಳಿಸಿ ಕೋಮುವಾದದ ಕೆಂಡ ದೇಶದ ಕರುಳು ಸುಡುವಂತೆ ಮಾಡಿವೆ.
ಈ ಸಂದರ್ಭದಲ್ಲಿ ಕೇವಲ ಕೋಮು ಸೌಹಾರ್ದವನ್ನಷ್ಟೇ ಅಲ್ಲ, ಇಂಥ ಅನಾರೋಗ್ಯಕರ ಪ್ರವೃತ್ತಿಯನ್ನು ದೃಢವಾಗಿ ತಡೆದು ಹಿಂದೂ-ಮುಸ್ಲಿಂ ಕೋಮುವಾದಿಗಳಿಗೆ ಕೆಲಸವಿಲ್ಲದಂತೆ ಮಾಡಬೇಕಾಗಿದೆ. ಇದಕ್ಕೆ ನಾನಾ ರೀತಿಯ ಪರಿಹಾರಗಳನ್ನು ಸೂಚಿಸಲಾಗುತ್ತಿದೆ. ಅಯೋಧ್ಯೆ ಯಲ್ಲಿ ಸರ್ವಧರ್ಮ ಮಂದಿರಗಳನ್ನು ಸ್ಥಾಪಿಸಬೇಕೆಂಬ ಸಲಹೆಯೂ ಇದೆ. ಇದು ಕಾರ್ಯ ರೂಪಕ್ಕೆ ಬಂದರೆ ಎರಡು ಮತ ಧರ್ಮಗಳ ವಿವಾದ ಸರ್ವಧರ್ಮ ವಿವಾದವಾಗುವ ಅಪಾಯವಿದೆ. ಆದ್ದರಿಂದ ನಮಗೆ ಒಪ್ಪಿಗೆಯಾಗಲಿ, ಆಗದಿರಲಿ, ಇರುವುದನ್ನು ಇರುವಂತೆ ಒಪ್ಪುತ್ತ ವರ್ತಮಾನ ಒತ್ತಾಸೆಯಲ್ಲಿ ಹೊಸ ಹೊಳಹುಗಳನ್ನು ಕಂಡುಕೊಳ್ಳುವ ಚಾರಿತ್ರಿಕ ಪ್ರಜ್ಞೆ ಯನ್ನು ಎಲ್ಲ ಧರ್ಮನಿಷ್ಠರೂ ತೋರಬೇಕಾಗಿದೆ. ಚರಿತ್ರೆಯಲ್ಲಿ ಆಗಿಹೋದ ಸಂಗತಿಗಳನ್ನು ಒಂದು “ದಾಖಲೆ”ಯಾಗಿ ಒಪ್ಪಿಕೊಳ್ಳುವುದು ಮತ್ತು ವಾದ-ವಿವಾದಗಳನ್ನು ಉಗ್ರಗಾಮಿ ನೆಲೆಗೆ ಕೊಂಡೊಯ್ಯದೆ ಭಿನ್ನಾಭಿಪ್ರಾಯ ಸಹಿತ ಚರ್ಚಿಸುವುದು ಎಲ್ಲ ಕಾಲಕ್ಕೂ ಆರೋಗ್ಯಕರ ನಿಲುವಾಗಬಲ್ಲದು. ಇಲ್ಲದಿದ್ದರೆ ಚರಿತ್ರೆಯ ನೆಲೆಗಳೇ ನಾಶವಾಗುತ್ತವೆ.
ಒಂದು ಮಾತನ್ನು ನೆನಪಿಡಬೇಕು. ಇದು ಕೇವಲ ಮಸೀದಿಯ ಪ್ರಶ್ನೆಯಲ್ಲ, ಎಲ್ಲ ಚಾರಿತ್ರಿಕ ನೆಲೆಗಳ ಪ್ರಶ್ನೆ. ಈ ಚಾರಿತ್ರಿಕ ನೆಲೆಗಳು ಮಸೀದಿ, ಮಂದಿರ, ಮನುಷ್ಯ – ಯಾವ ರೂಪದಲ್ಲಾದರೂ ಪ್ರಕಟವಾಗಿರಬಹುದು. ಮಸೀದಿಯನ್ನು ಕೆಡವಿ ದೇವಾಲಯ ಕಟ್ಟುವುದು ‘ತಪ್ಪನ್ನು ತಿದ್ದುವ ಕ್ರಿಯೆ’ ಎಂದು ಯಾರಾದರೂ ಹೇಳಿದರೆ, ಇಂಥ ‘ತಪ್ಪು’ಗಳನ್ನು ಚರಿತ್ರೆಯ ಹತ್ತಾರು ಸಂದರ್ಭಗಳಲ್ಲಿ ಕಾಣಬಹುದು.
ಇಂಥ ‘ತಪ್ಪುಗಳು’ ಮುಸ್ಲಿಮರಿಂದ ಮಾತ್ರ ಸಂಭವಿಸಿಲ್ಲ. ಬೌದ್ಧ ವಿಹಾರಗಳನ್ನು ನಾಶ ಮಾಡಿ ವೈದಿಕ ದೇವಾಲಯಗಳನ್ನು ನಿರ್ಮಿಸಿದ ‘ಚರಿತ್ರೆ’ಯು ನಮ್ಮಲ್ಲಿದೆ. ಅನೇಕ ಜಿನ ಮಂದಿರಗಳ ಜಾಗದಲ್ಲಿ ಶಿವ ದೇವಾಲಯಗಳು ನಿರ್ಮಾಣಗೊಂಡ ಉದಾಹರಣೆಗಳು ಇವೆ. ಬಾಬರಿ ಮಸೀದಿಯನ್ನು ಕೆಡವಿ ಶ್ರೀರಾಮ ದೇವಾಲಯವನ್ನು ಕಟ್ಟುವ ತರ್ಕಕ್ಕೆ ಕಟ್ಟುಬೀಳುವುದಾದರೆ ಅನೇಕ ಹಿಂದೂ ದೇವಾಲಯವನ್ನು ಕೆಡವಿ ಬೌದ್ಧ ವಿಹಾರಗಳನ್ನೂ ಜಿನ ಮಂದಿರ ಗಳನ್ನೂ ಕಟ್ಟಬೇಕಾಗುತ್ತದೆ. ಆದ್ದರಿಂದ ನಾವು ತಿಳಿದುಕೊಳ್ಳಬೇಕು-ಮಸೀದಿ, ದೇವಾಲಯ, ಬೌದ್ಧವಿಹಾರ, ವಿಗ್ರಹ, ಮಂದಿರ, ಮತ್ತಿತರ ಯಾವುದೇ ಅಂಗಗಳಾಗಲೀ, ಅವುಗಳ ಸ್ಥಾಪನೆಯ ಹಿಂದೆ ಒಂದು ಚರಿತ್ರೆಯಿರುತ್ತದೆ. ಈ ಚರಿತ್ರೆಯಲ್ಲಿ ಅನಾರೋಗ್ಯಕರ ಅಂಶಗಳೂ ಸೇರಿರಬಹುದು, ಆರೋಗ್ಯಕರ ಅಂಶಗಳೂ ಇರಬಹುದು. ಅವೆಲ್ಲವನ್ನೂ ನಮ್ಮ ಚರಿತ್ರೆಯ ಅವಿಭಾಜ್ಯ ಅಂಶಗಳೆಂದು ಒಪ್ಪಿಕೊಂಡು ಸಮಚಿತ್ತದ ಅರಿವಿನ ಭಾಗವಾಗಿಸಿಕೊಳ್ಳುವ ಕ್ರಿಯೆ ಉಚಿತ.
ಚರಿತ್ರೆಯ ಕೆಡಕುಗಳನ್ನು ನಮ್ಮ ಮನಸ್ಸಿನಲ್ಲಿ ಮುರಿದು ಹೊಸತು ಕಟ್ಟಿಕೊಳ್ಳಬೇಕೇ ಹೊರತು, ಹೊರಗಿನ ಕಟ್ಟಡಗಳನ್ನು ಕೆಡವಿ ಕಟ್ಟುವುದು ಮಾನಸಿಕ ಆರೋಗ್ಯಕರ ಲಕ್ಷಣವಲ್ಲ, ಚಾರಿತ್ರಿಕ ಔಚಿತ್ಯವೂ ಇದರಲ್ಲಿಲ್ಲ.
ಕೋಮುವಾದದ ನೆತ್ತರದಾಹ ಎಲ್ಲೆ ಮೀರಿ ವಿಜೃಂಭಿಸುತ್ತಿರುವ ಇಂದಿನ ಸಂಕಟದ ಸನ್ನಿವೇಶದಲ್ಲಿ ಒಳದನಿಗಳೆಲ್ಲ ಹೊರಬರಬೇಕಾಗಿದೆ. ಮೊದಲಿಂದ ಹೊರಗಿದ್ದ ದನಿಗಳು ಮತ್ತಷ್ಟು ದೃಢಗೊಳ್ಳುವ ಹಾಗೂ ಸ್ಪುಟಗೊಳ್ಳುವ ಅಗತ್ಯ ಹೆಚ್ಚಾಗಿದೆ. ಇದು, ಸಂಕಟ ಮತ್ತು ಸಿಟ್ಟುಗಳೊಂದಾಗುವ ಮೂಲಕ ನಮ್ಮ ಮಾತಿಗೆ ಹೊಸ ವಿನ್ಯಾಸ ಲಭ್ಯವಾಗಬೇಕಾದ ಕಾಲ. ಅಂತೆಯೇ ಸಂತಗುಣ ಮತ್ತು ಸ್ಫೋಟಗುಣಗಳೊಂದಾದ ಮನೋಧರ್ಮವನ್ನು ನಿರೀಕ್ಷಿಸುತ್ತಿರುವ ಸನ್ನಿವೇಶ. ಈಗ ಮಾತುಗಳು ಎದೆಯಲ್ಲಿ ಹುದುಗಿ ಒಳಗೇ ಒದ್ದಾಡಿದರೆ ಸಾಲದು. ಎದೆಯಾಳದ ಒತ್ತಡದಲ್ಲಿ ಹುಟ್ಟಿ ಸಾರ್ವಜನಿಕವಾಗುವ ಮಾತು, ಒಳ-ಹೊರಗಿನ ಅಂತರವನ್ನು ಇಲ್ಲವಾಗಿಸಬೇಕು. ಅಂತಃಕರಣದ ಆಸ್ಫೋಟ, ಕೋಮುವಾದಕ್ಕೆ ಉತ್ತರವಾಗಬೇಕು. ಇದು ಸಿನಿಕತನದ ಸಂದರ್ಭವಲ್ಲ, ಸಮಚಿತ್ತದ ಸವಾಲಿನ ಸಂದರ್ಭ.
‘ಧರ್ಮಭೂಮಿ’ಯೆಂಬ ಕಂಠಪಾಠದಲ್ಲಿ ಉಬ್ಬಿ ಹೋದ ಇಂಡಿಯಾದ ಭೂಪಟದಲ್ಲಿ ನೆತ್ತರ ಗೆರೆಗಳು ದಟ್ಟವಾಗುತ್ತಿವೆ. ಸಮಚಿತ್ತದ ಸಾಧುಸಂತರ ನಾಡೆಂದು ಹೆಸರುಗಳಿಸಿದ್ದ ಈ ದೇಶದಲ್ಲಿ ಈಗ ಸಾಧುಸಂತರ ಮೈಮನಗಳಲ್ಲೇ ಕೋಮುವಾದದ ಬಣ್ಣ ಭೋರ್ಗರೆಯುತ್ತಿದೆ. ಸಮವೂ ಇಲ್ಲದ, ಚಿತ್ತವೂ ಇಲ್ಲದ ಹುಚ್ಚು ಹೊಳೆಯಲ್ಲಿ ಮುಗ್ಧ ಮನಸ್ಸುಗಳು ಕೊಚ್ಚಿಹೋಗುತ್ತಿವೆ.
ಯಾವುದು ಧರ್ಮ ಎನ್ನುವುದೇ ಇಂದಿನ ಮುಖ್ಯ ಪ್ರಶ್ನೆಯಾಗಿದ್ದು, ಉತ್ತರ ಹುಡುಕುತ್ತಲೇ ನೆತ್ತರನ್ನು ಒರೆಸುವ ಜವಾಬ್ದಾರಿ ನಮ್ಮ ಮೇಲಿದೆ. ನಮ್ಮ ಪರಂಪರೆಯ ಬಗ್ಗೆ ಮಾತನಾಡುವಾಗೆಲ್ಲ ಸಾಮರಸ್ಯದ ನೆಲೆಗಳನ್ನು ಒತ್ತಿ ಹೇಳುತ್ತೇವೆ. ಹಾಗಾದರೆ ಸಾಮರಸ್ಯ ವಿರೋಧಿಯಾದ ನೆಲೆಗಳು ನಮ್ಮ ಸಮಾಜದಲ್ಲಿರಲಿಲ್ಲವೆ? ಧರ್ಮಗಳು ಸಾಮರಸ್ಯಕ್ಕೆ ಬದಲಾಗಿ ಸಂಘರ್ಷದ ಹಾದಿ ಹಿಡಿದಿರಲಿಲ್ಲವೆ? ನಮ್ಮ ಇತಿಹಾಸವನ್ನು ನೋಡಿದರೆ ಸಾಮರಸ್ಯ ಮತ್ತು ಸಂಘರ್ಷದ ಎರಡೂ ಧಾರೆಗಳು ಪರಂಪರೆಯ ಭಾಗವಾಗಿರುವುದು ಅರಿವಾಗುತ್ತದೆ. ವೈದಿಕ ಮತ್ತು ವೈದಿಕೇತರ ಧರ್ಮಗಳ ನಡುವಿನ ತಿಕ್ಕಾಟ, ವೀರಶೈವ ಮತ್ತು ಜೈನಧರ್ಮಗಳ ನಡುವಿನ ಸಂಘರ್ಷ, ಧರ್ಮದ ಒಳಗೇ ಹುಟ್ಟಿದ ಉಗ್ರಗಾಮಿ, ಮೂಲಭೂತವಾದೀ ಮನೋಧರ್ಮ, – ಈ ಎಲ್ಲ ಅಂಶಗಳು ನಮ್ಮ ಪರಂಪರೆಯ ಭಾಗವಾಗಿವೆ. ಕೋಮುವಾದಿಗಳಿಗೆ ಉತ್ತರ ಕೊಡುವ ಒಂದೇ ಕಾರಣಕ್ಕಾಗಿ ಹಿಂದೆ ಧಾರ್ಮಿಕ ಸಾಮರಸ್ಯವೊಂದೇ ಅಸ್ತಿತ್ವದಲ್ಲಿತ್ತೆಂದೂ ಇಂದು ಮಾತ್ರ ಸಾಮರಸ್ಯ ಕದಡಿದೆಯೆಂದೂ ಹೇಳುವ ಸ್ಥಿತಿಗೆ ನಮ್ಮ ನಾಲಗೆಗಳು ಸಿದ್ಧವಾಗಿವೆ! ಆದರೆ ಒಳಮಾತು ಬೇರೆಯೇ ಆಗಿರುತ್ತದೆ. ತಂತಮ್ಮ ಧರ್ಮಗಳನ್ನು ಪ್ರತಿಷ್ಠಿತಗೊಳಿಸುವ ಪ್ರಯತ್ನದಲ್ಲಿ ಬೇರೆ ಧರ್ಮ-ದೇವರುಗಳನ್ನು ಹೀಗಳೆದ ಉದಾಹರಣೆಗಳು ನಮ್ಮಲ್ಲಿವೆ, ಧರ್ಮ ವೊಂದರಲ್ಲಿ ಗುರುತಿಸಿಕೊಂಡಿದ್ದೂ ಅದನ್ನು ಮೀರಿ ಮಾನವೀಯವಾದ ನಿದರ್ಶನಗಳೂ ಇವೆ. ಈ ಎರಡೂ ಧಾರೆಗಳ ನಡುವೆ ನಿರಂತರ ಮುಖಾಮುಖಿ ನಡೆಯುತ್ತ ಬಂದಿದ್ದು, ಅಂದು ಧಾರ್ಮಿಕ ಸಾಮರಸ್ಯ ಮೇಲುಗೈ ಪಡೆಯುತ್ತಾ ಬಂದಿದೆ. ಇಂದು ಧಾರ್ಮಿಕ ಮೂಲಭೂತ ವಾದಿತನ ಮೇಲುಗೈ ಪಡೆಯುತ್ತಿದೆ.
ಇವತ್ತಿನ ಸನ್ನಿವೇಶದಲ್ಲಿ ಧರ್ಮ ಮತ್ತು ಧಾರ್ಮಿಕತೆ ಒಂದೇ ಆಗಿ ಉಳಿದಿಲ್ಲ. ಧರ್ಮ ಎನ್ನುವುದು ಒಂದು ತಾಂತ್ರಿಕ ಸಂಸ್ಥೆಯಾಗಿದೆ; ಧರ್ಮ ಮಠವಾಗಿದೆ, ಮತವಾಗಿದೆ. ಮತೀಯತೆ ಮತ್ತು ಮಠೀಯತೆಗಳನ್ನು ಮೀರಿದ ಧರ್ಮ ಕಾಣಿಸುತ್ತಿಲ್ಲ. ಆದರೆ ಧಾರ್ಮಿಕತೆಯು ಒಂದು ಸಂಸ್ಥೆಯಾಗಬೇಕಿಲ್ಲ: ಮಠವಾಗಬೇಕಿಲ್ಲ; ಮತವೂ ಆಗಬೇಕಿಲ್ಲ. ಮಠೀಯತೆ ಮತ್ತು ಮತೀಯತೆಗಳನ್ನು ಮೀರಿ ಧಾರ್ಮಿಕತೆ ಬೆಳೆಯಲು ಸಾಧ್ಯ. ಒಂದು ನಿರ್ದಿಷ್ಟ ಧರ್ಮಕ್ಕೆ ಸೇರದೆ ಇರುವವರೂ ತಮ್ಮ ಭಕ್ತಿನೆಲೆಯ ಕಾರಣಕ್ಕಾಗಿ ಧಾರ್ಮಿಕರಾಗಿರಬಹುದು. ಆದರೆ ‘ಧರ್ಮ’ ಎನ್ನುವುದು ಒಂದು ಸಂಸ್ಥೆಯಾಗಿ ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ, ಸಿಖ್ – ಮುಂತಾಗಿ ವರ್‍ಗಿಕರಣ ಗೊಂಡಿದೆ. ಹಾಗೂ ಕೇಂದ್ರೀಕರಣಗೊಂಡಿದೆ. ಇಲ್ಲಿ ಮಾನಸಿಕ ನಂಬಿಕೆಗಳಷ್ಟೇ ಮುಖ್ಯವಾಗುವುದಿಲ್ಲ, ನಂಬಿಕೆಗಳನ್ನು ಮೀರಿದ ನೆಲೆಗಳು ಕೆಲಸ ಮಾಡುತ್ತವೆ. ‘ಧರ್ಮ’ ಒಂದು ಸಂಸ್ಥೆಯಾಗಿ ಬಲಗೊಳ್ಳುತ್ತ ಹೋದಂತೆ ಸಾಮ್ರಾಜ್ಯ ವಿಸ್ತರಣೆಯ ಆಕಾಂಕ್ಷೆ ಹೆಚ್ಚುತ್ತಾ ಹೋಗುತ್ತದೆ; ಧರ್ಮ ಮಠವಾಗಿ, ಪೀಠವಾಗಿ, ಆಸ್ತಿಯಾಗಿ, ಅಧಿಕಾರವಾಗಿ ತನ್ನ ಶಕ್ತಿಯನ್ನು ವೃದ್ಧಿಸಿಕೊಳ್ಳುತ್ತದೆ. ಸಂಕೋಚಗಳಿಲ್ಲದ ಸಂಕುಚಿತ ನೀತಿ ನಿಯಮಗಳಲ್ಲಿ ಮುಳುಗುವ ಸಾಂಸ್ಥಿಕ ಧರ್ಮಕ್ಕೆ ಧಾರ್ಮಿಕ ಮನೋಧರ್ಮ ಮುಖ್ಯವಾಗುವುದಿಲ್ಲ. ಹೀಗಾಗಿ ಧರ್ಮಕ್ಕೂ ಧಾರ್ಮಿಕತೆಗೂ ಸಂಬಂಧವೇ ಇಲ್ಲದ ಸನ್ನಿವೇಶ ನಿರ್ಮಾಣವಾಗಿದೆ.
ಇಂದು ಕೋಮುವಾದವು ಒಂದು ಸಂಸ್ಥೆಯಾಗಿ ತನ್ನ ಶಕ್ತಿಯನ್ನು ವೃದ್ಧಿಸಿಕೊಳ್ಳುವುದರ ಜೊತೆಗೆ ಮನೋಧರ್ಮವಾಗಿ ಬೆಳೆಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಕೋಮು ವಾದವು ಕೇವಲ ಮೇಲ್ಜಾತಿ – ವರ್ಗಗಳ ನೀತಿಯಾಗಿಲ್ಲ. ಹಿಂದುಳಿದ ಜಾತಿ-ವರ್ಗಗಳು, ದಲಿತ ಜಾತಿ – ವರ್ಗಗಳಲ್ಲೂ ಕೋಮುವಾದದ ಪ್ರವೇಶ ಆಗುತ್ತಿದೆ. ತಾವೆಲ್ಲ ಹಿಂದೂ ಧರ್ಮದವರೆಂಬ ಭ್ರಮೆಯಲ್ಲಿ ಬೆಳೆದ ಈ ಜಾತಿ-ವರ್ಗಗಳ ಮುಗ್ಧ ಮನಸ್ಸುಗಳು ಮುಸ್ಲಿಂ ವಿರೋಧಕ್ಕೆ ಉತ್ಸಾಹದ ಪ್ರತಿಕ್ರಿಯೆ ನೀಡತೊಡಗಿದ್ದಾರೆ. ಪ್ರಮಾಣ ಎಷ್ಟೇ ಇರಲಿ, ಈ ಅಪಾಯಕಾರಿ ಬೆಳವಣಿಗೆಯನ್ನು ನಾವು ಲಘುವಾಗಿ ಪರಿಗಣಿಸುವಂತಿಲ್ಲ.
ಜೊತೆಗೆ ಕೋಮುವಾದ ಅಥವಾ ಧಾರ್ಮಿಕ ಮೂಲಭೂತವಾದಗಳನ್ನು ವಿರೋಧಿಸುವಾಗ ಪ್ರಧಾನವಾಗಿ ಹಿಂದೂ ಮೂಲಭೂತವಾದಿಗಳ ಹುನ್ನಾರವೇ ನಮ್ಮ ಗುರಿಯಾಗಿದ್ದರೂ, ಮುಸ್ಲಿಂ ಮೂಲಭೂತವಾದಿಗಳಿಗೆ ರಿಯಾಯಿತಿಯಿಲ್ಲ ಎಂಬುದನ್ನೂ ಸಾಮಾನ್ಯ ಜನರಿಗೆ ಮನವರಿಕೆ ಮಾಡಿಕೊಡುವ ಹೊಣೆಗಾರಿಕೆಯೂ ನಮ್ಮ ಮೇಲಿದೆ. ಕೋಮುವಾದಿಗಳು ಜನಸಾಮಾನ್ಯರ ಮುಗ್ಧನಂಬಿಕೆಗಳ ಲಾಭ ಪಡೆಯುವ ವ್ಯಾಪಕ ಹುನ್ನಾರ ನಡೆಸುತ್ತಿರುವುದರಿಂದ, ಈ ಜನಸಾಮಾನ್ಯರ ಮನಸ್ಸು ಕೋಮುವಾದದಿಂದ ಕಲುಷಿತಗೊಳ್ಳದೆ ಇರುವಂತೆ ನಾವು ಪ್ರತಿ ಪ್ರಯತ್ನಗಳನ್ನು ಮಾಡಬೇಕು. ಇಲ್ಲದಿದ್ದರೆ ಕೋಮುವಾದ ವಿರೋಧವೂ ಒಂದು ‘ಹವ್ಯಾಸ’ವಷ್ಟೇ ಆಗುವ ಅಪಾಯ ಎದುರಾಗಬಹುದು.
ಜನಸಾಮಾನ್ಯರ ಮನೋಮಾದರಿಗಳನ್ನು ಪುನರ್ ಚಿಂತನೆಗೆ ಒಳಪಡಿಸಿ ಹೊಸತನವನ್ನು ನೀಡುವ ಪ್ರಕ್ರಿಯೆ ಪ್ರಾರಂಭವಾಗಬೇಕು. ಗಾಂಧಿ Vs ಗಾಂಧಿಗಿಂತ, ಗಾಂಧಿ Vs ಗೋಡ್ಸೆ ಇಂದಿನ ಜರೂರಾಗಬೇಕು. ಯಾಕೆಂದರೆ ಗಾಂಧಿ ನಂಬಿದ ಹಿಂದೂ ಧರ್ಮ ಬೇರೆ – ಗೋಡ್ಸೆಯ ಹಿಂದೂಧರ್ಮ ಬೇರೆ. ಅಂತೆಯೇ ವಿವೇಕಾನಂದ ಪ್ರತಿಪಾದಿಸಿದ ಹಿಂದೂ ಧರ್ಮ ಬೇರೆ – ವಿ.ಎಚ್.ಪಿ.ಯ ಹಿಂದೂಧರ್ಮ ಬೇರೆ. ಮಹಮ್ಮದ್ ಪೈಗಂಬರ್ ಅವರ ಇಸ್ಲಾಂ ಬೇರೆ – ಲಾಡೆನ್‌ನ ಇಸ್ಲಾಂ ಬೇರೆ, ಏಸುಕ್ರಿಸ್ತ ಹೇಳಿದ ಕ್ರೈಸ್ತ ಧರ್ಮ ಬೇರೆ – ಜಾರ್ಜ್ ಬುಷ್‌ನ ಕ್ರೈಸ್ತ ಧರ್ಮ ಬೇರೆ. ಹೀಗೆ ಆಯಾಯ ಧರ್ಮಗಳಲ್ಲಿರುವ ಮೂಲಭೂತ ವಾದಿ ನೆಲೆಗಳನ್ನು ಬೇರ್ಪಡಿಸಿ ಅಲ್ಲಿಯೇ ಇರುವ ಧಾರ್ಮಿಕ – ಅಧಾರ್ಮಿಕ ವ್ಯಕ್ತಿತ್ವಗಳನ್ನು ಎದುರುಬದಿರಾಗಿಸಬೇಕಾಗಿದೆ. ಇದು ಇವತ್ತಿನ ಜರೂರು ಎಂದು ನಾನು ಭಾವಿಸುತ್ತೇನೆ.
*****
(೧೯೯೦)