ಕೋಮು ಹಾಗೂ ಭಯೋತ್ಪಾದನೆ ಬೇರುಗಳು

ಕೋಮು ಹಾಗೂ ಭಯೋತ್ಪಾದನೆ ಬೇರುಗಳು

“ಕ್ರೈಸ್ತರು ಮಹಮದೀಯರನ್ನು ದ್ವೇಷಿಸುವಷ್ಟು ಮತ್ತಾರನ್ನು ದ್ವೇಷಿಸುವುದಿಲ್ಲ” ಎನ್ನುವ ವಿವೇಕಾನಂದರ ಈ ಮಾತು ನನ್ನನ್ನು ಗಾಢವಾಗಿ ಕಲಕಿತು. ಏಕೆ ಹೀಗೆ ಎಂದು ಚಿಂತಿಸತೊಡಗಿದೆ. ನಾನು ಕ್ರೈಸ್ತ ಪಾದ್ರಿಗಳೊಂದಿಗೆ ಇರುವ ಸಂದರ್ಭಗಳಲ್ಲಿ ಅಂತಹ ಭಾವನೆ ವ್ಯಕ್ತವಾಗಿದ್ದನ್ನು ಗಮನಿಸಿದ್ದೇನೆ. ನಾನು ಯೂರೋಪ್ ಪ್ರವಾಸದಲ್ಲಿದ್ದಾಗಲೂ ನನಗೆ ಈ ಅನುಭವ ಆಗಿದೆ. ಹಾಗಾದರೆ ಇದಕ್ಕೆ ಕಾರಣವೇನಿರಬಹುದು ಎಂಬ ಕುತೂಹಲದಿಂದ ವಿಶ್ವಕೋಶಗಳ ಮೊರೆ ಹೊಕ್ಕೆ. ಮೈಸೂರು ವಿಶ್ವವಿದ್ಯಾಲಯದ ವಿಶ್ವಕೋಶದಲ್ಲಿ ಅದರ ಸುಳುಹು ಸಿಕ್ಕಿತು.

ಇಸ್ಮಾಯಿಲ್ ಅರಬ್ಬರ ಮೂಲ ಪುರುಷ. ಆತ ಏಬ್ರಹಾಂ (ಇಬ್ರಾಹಿಂ)ನ ಹಿರಿಯ ಮಗ. ತಾಯಿ ಹೆಗರ್, ಆಕೆ ಇಜಿಪ್ಸಿಯನ್ ದಾಸಿ. ಏಬ್ರಹಾಂನ ಮೊದಲ ಪತ್ನಿ ಸಾರಾ. ಅವಳು ಇದನ್ನು ಸಹಿಸಲಾಗದೆ ತಾಯಿ ಮಗನನ್ನು ಹೊರಗಟ್ಟುತ್ತಾಳೆ. ಸೇವಕರು ಅವರನ್ನು ಅರೆಬಿಯಾದಲ್ಲಿ ತಂದು ಬಿಡುತ್ತಾರೆ. ಬಾಯಾರಿಕೆ ಎಂದು ಇಸ್ಮಾಯೀಲ್‌ ಕಾಲಿನಿಂದ ಮರಳನ್ನು ಬಗೆಯುತ್ತಾನೆ. ಚಿಲುಮೆ ಚಿಮ್ಮುತ್ತದೆ. ಅದೆ ಇಂದಿನ ಜುಂ ಜುಂ ಚಿಲುಮೆ, ಮುಂದೆ ಏಬ್ರಹಾಂ ಮತ್ತು ಇಸ್ಮಾಯಿಲ್ ಅಲ್ಲಿ ಪವಿತ್ರ ಕಾಬಾ (ಕಪ್ಪುಕಲ್ಲಿನ ಕಟ್ಟಡ) ವನ್ನು ಕಟ್ಟಿಸುತ್ತಾರೆ. ಆ ಸ್ಥಳವೇ ಇಂದು ಮಹಮ್ಮದೀಯರ ಪವಿತ್ರ ಸ್ಥಳವಾದ ಮೆಕ್ಕಾ.

ಕ್ರೈಸ್ತರಲ್ಲಿ ಮನೆಮಾಡಿರುವ ಮಹಮ್ಮದೀಯರು ದಾಸಿ ಪುತ್ರರು ಎನ್ನುವ ಈ ಭಾವನೆಯೆ ಕೋಮು ಭಾವನೆಗೆ ಮೂಲ ಬೀಜ. ಭಯೋತ್ಪಾದನೆಯ ಮೂಲ ಬೇರು ಇರುವುದು ಇಲ್ಲಿಯೇ.

ಇಡೀ ಪ್ರಪಂಚವನ್ನು ಪವಿತ್ರವಾದ ಕ್ರೈಸ್ತ ಧರ್ಮವನ್ನಾಗಿಸಬೇಕು ಎನ್ನುವುದು ಕ್ರೈಸ್ತರ ಅಂತರಂಗ. ಅವರ ಪ್ರಾಭಲ್ಯವನ್ನು ಮುರಿದು ಇಸ್ಲಾಂ ಆಗಿಸಬೇಕು ಎಂದು ಮುಸಲ್ಮಾನರ ಸಂಚು. “ಪ್ರತಿಯೊಬ್ದರೂ ಒಂದೇ ಧರ್ಮಕ್ಕೆ ಸೇರಿ. ಒಂದೇ ಮಾರ್ಗವನ್ನು ಅನುಸರಿಸುವ ದುರ್ದಿನ ಪ್ರಪಂಚಕ್ಕೆ ಬರದಿರಲಿ. ಆಗ ಧರ್ಮ ಮತ್ತು ಆಧ್ಯಾತ್ಮಿಕ ಭಾವನೆ ನಾಶವಾಗುವುದು”. ಎನ್ನುವ ವಿವೇಕಾನಂದರ ವಿವೇಕದ ಮಾತು ಇವರ ತಲೆಗೆ ಹೋಗುವುದೇ ಇಲ್ಲ. ಇವರದು ಹೀಗಾದರೆ ಸುಮಾರು ೫೫ ರಾಷ್ಟ್ರಗಳಲ್ಲಿ ಕ್ರಿಶ್ಚಿಯನ್ ಧರ್ಮ. ೩೫ ರಾಷ್ಟ್ರಗಳಲ್ಲಿ ಇಸ್ಲಾಂ ಧರ್ಮ, ೧೧ ರಾಷ್ಟ್ರಗಳಲ್ಲಿ ಬೌದ್ಧ ಧರ್ಮವಿದೆ. ಹಿಂದೂ ರಾಷ್ಟ್ರ ಎಂದು ಹೇಳಿಕೊಳ್ಳಲು ನೇಪಾಳ ಬಿಟ್ಟರೆ (ಈಗ ಅದೂ ಇಲ್ಲ) ಒಂದು ರಾಷ್ಟ್ರವೂ ಇಲ್ಲ. ಹಾಗಾಗಿ ಭಾರತವನ್ನು ಹಿಂದೂ ರಾಷ್ಟ್ರವಾಗಿಸಬೇಕು ಎನ್ನುವ ವೈದಿಕ ಹುನ್ನಾರ, ಅಲ್ಲದೆ ಕ್ರಿಶ್ಚಿಯನ್ನರಿಗೆ ಜರೂಸಲೇಂ, ವ್ಯಾಟಿಕನ್‌ಗಳಿವೆ. ಮುಸಲ್ಮಾನರಿಗೆ ಮೆಕ್ಕಾ ಇದೆ, ಹಿಂದೂಗಳಾದ ನಮಗೆ? ಅಯೋಧ್ಯೆಯಲ್ಲಿ ರಾಮ ಮಂದಿರ ಬೇಡವೆ? ಬೇಕು. ಅದೂ ಬಾಬರಿ ಮಸೀದಿ ಇದ್ದ ಜಾಗದಲ್ಲಿಯೇ ಆಗಬೇಕು! ಕೊನೆ ಇರದ ಇಂಥ ಮತೀಯ ಅಮಲುಗಳಿಂದ ಕೋಮು ಗಲಭೆಗಳು ಭಯೋತ್ಪಾದನೆಗಳು ಅವ್ಯಾಹತವಾಗಿ ನಡೆಯುತ್ತಿವೆ. ಅದೂ ದೇವರು ಧರ್ಮದ ಹೆಸರಿನಲ್ಲಿ!

ಇಂಥ ಅಮಲುಗಳಿಂದ ಮತ್ತರಾದವರು ಹೇಗಾಗುತ್ತಾರೆ ಎಂಬುದನ್ನು ವಿವೇಕಾನಂದರು “ಮನುಷ್ಯ ಮನುಷ್ಯರಲ್ಲಿರುವ ಸಹೋದರ ಭಾವನೆಗಳಿಗೆ ಈ ಹಿಂದೂ, ಕ್ರಿಶ್ಚಿಯನ್, ಮುಸಲ್ಮಾನ ಮುಂತಾದ ಹೆಸರುಗಳು ದೊಡ್ಡ ಆತಂಕಗಳು. ಮೊದಲು ನಾವು ಅವುಗಳನ್ನು ಮುರಿಯಲು ಪ್ರಯತ್ನಿಸಬೇಕು. ಅವು ತಮ್ಮಲ್ಲಿದ್ದ ಒಳ್ಳೆಯ ಶಕ್ತಿಯನ್ನೆಲ್ಲಾ ಕಳೆದುಕೊಂಡು ಈಗ ಕೇವಲ ನಾಶಕಾರಕ ಶಕ್ತಿಯನ್ನು ಮಾತ್ರ ಹೊಂದಿವೆ. ನಮ್ಮಲ್ಲಿ ಅತ್ಯಂತ ಉತ್ತಮರಾದವರೂ ಅದರ ಭಯಂಕರ ಪ್ರಭಾವಕ್ಕೆ ಒಳಗಾಗಿ ಪಿಶಾಚಿಗಳಂತೆ ಆಗುತ್ತೇವೆ.” ಎಂದು ವಸ್ತುಸ್ಥಿತಿಯನ್ನು ಸ್ಪಷ್ಟವಾಗಿ ಮನವರಿಕೆ ಮಾಡಿದ್ದಾರೆ. ಇಂದು ದೇವರು ಧರ್ಮ ಗುಡಿ ಚರ್ಚು, ಮಸೀದಿಗಳು, ಇಂಥ ಪಿಶಾಚಿಗಳ ಕಪಿ ಮುಷ್ಠಿಗೆ ಸಿಲಿಕಿವೆ. ಆದ ಕಾರಣವೇ ಕಾರ್ಲ್‌ಮಾರ್ಕ್ “ಧರ್ಮ ಜನರ ಅಪೀಮು ಆಗಿದೆ” (Religion is the opium of people) ಎಂದು ಹೇಳಿದ್ದಾರೆ. ವಾಲ್ಟೇರ್ “ಕಡೆಯ ದೊರೆಯ ಕರುಳು ಕಡೆಯ ಪುರೋಹಿತನ ಕೊರಳಿಗೆ ಉರುಳಾಗುವ ತನಕ ಸುಖವಿಲ್ಲ ಧರೆಗೆ” ಎಂದು ಹೇಳಿದ. ಈಗ ರಾಜರ ಸ್ಥಾನದಲ್ಲಿ ರಾಜಕಾರಣಿಗಳು, ಪುರೋಹಿತಶಾಹಿಯ ಸ್ಥಾನದಲ್ಲಿ ಪುರೋಹಿತರು, ಮಠಾಧಿಪತಿಗಳು, ಮೌಲ್ವಿಗಳು, ಪಾದ್ರಿಗಳು ದೇವರು ಧರ್ಮದ ಹೆಸರಿನಲ್ಲಿ ವಿಕೃತಕ್ರಿಯೆಗಳಿಗೆ ತೊಡಗಿ ಕೋಮುಗಲಭೆ ಹಾಗೂ, ಭಯೋತ್ಪಾದನೆಗೆ ಒಳಗೊಳಗೆ ಇಂಬುಗೊಡುತ್ತಿದ್ದಾರೆ.

ಪ್ರಪಂಚದ ಅದರಲ್ಲೂ ಮುಖ್ಯವಾಗಿ ಮುಸಲ್ಮಾನರ ಭಯಂಕರ ಭಯೋತ್ಪಾದಕನೆಂದರೆ ಅಮೆರಿಕದ ಅಧ್ಯಕ್ಷ ಬುಷ್‌. ಕ್ರಿಶ್ಚಿಯನ್ನರ ವಿರುದ್ಧ ಒಸಮಾ ಬಿನ್ ಲಾಡೆನ್ ಉಗ್ರ ಭಯೊತ್ಪಾದಕನಾಗಿದ್ದರೆ ಕ್ರಿಶ್ಚಿಯನ್ ಹಾಗೂ ಮುಸಲ್ಮಾನರ ವಿರುದ್ಧ ಮಠಾಧೀಶರುಗಳು ಮುಖ್ಯವಾಗಿ ಪೇಜಾವರ ಮಠಾಧೀಶ ವಿಶ್ವೇಶ್ವರ ತೀರ್ಥ ಸೌಮ್ಯ ಭಯೊತ್ಪಾದಕರಾಗಿದ್ದಾರೆ. ಬಾಬ್ರಿ ಮಸೀದಿ ನೆಲ ಸಮವಾಗಲು ಇವರ ತೆರೆಮರೆಯ ಕೊಡುಗೆ ಅಪಾರವಾದುದು. ಅದರ ಪರಿಣಾಮ ನ್ಯೂಟನ್ನನ “ಕ್ರಿಯೆ ಮತ್ತು ಪ್ರತಿಕ್ರಿಯೆಗಳು ಸಮವಾಗಿರುತ್ತವೆ. ಹಾಗೂ ವಿರುದ್ದವಾಗಿರುತ್ತವೆ” ಎನ್ನುವ ಮೂರನೇ ನಿಯಮ. ೨೦೦೮ ಸೆ. ೧೩ ರಂದು ಮುಜಾಹಿದ್ ಸಂಘಟನೆ ಕಳುಹಿಸಿರುವ “ಬಾಬ್ರಿ ಮಸೀದಿ ದ್ದಂಸ ಮಾಡಿದ್ದನ್ನು ನಾವು ಮೆರೆತಿದ್ದೇವೆ ಅಂದುಕೊಂಡಿದ್ದೀರಾ? ಅಲ್ದಾನ ಕೃಪೆಯಿಂದ ಅದನ್ನು ಮರೆತಿಲ್ಲ. ನೀವು ಮಹಾನ್ ತಪ್ಪು ಮಾಡಿದ್ದೀರಿ. ನಿಮ್ಮ ಮುಂದಿನ ಪೀಳಿಗೆಯೂ ಅದಕ್ಕೆ ಅಪಮಾನ ಅನುಭವಿಸಬೇಕು. ಹಾಗೆ ಮಾಡುತ್ತೇವೆ. ಆದಷ್ಟು ಬೇಗ ಬಾಬ್ರಿ ಜಾಗವನ್ನು ಖಾಲಿ ಮಾಡಿ” ಎನ್ನುವ ಇ-ಮೇಲ್ ಅದಕ್ಕೆ ಸಾಕ್ಷಿ.

ಭಾರತದ ಇತರ ಭಾಗಗಳಲ್ಲಿ ಆಗುತ್ತಿರುವಂತೆ ಮತೀಯ ಗಲಭೆಗಳು ಈಗ ಕರ್ನಾಟಕದಲ್ಲಿ ಅದೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ವ್ಯಾಪಕವಾಗಿ ಆಗುತ್ತಿದೆ. ಒಂದುಕಡೆ ಭಯೋತ್ಪಾದನೆ ಮನುಕುಲದ ಬದುಕನ್ನು ಭೀಕರವಾಗಿಸುತ್ತಿದ್ದರೆ ಮತ್ತೊಂದು ಕಡೆ ಮತಾಂಧತೆ ಮಾನವನ ಮನಸ್ಸನ್ನು ವಿಕ್ಷಿಪ್ತಗೊಳಿಸುತ್ತಿದೆ.

ಕೋಮುವಾದವನ್ನೇ ಆತ್ಮವಾಗಿಸಿಕೊಂಡಿರುವ ಸಂಘ ಪರಿವಾರಗಳ ಅಂತರಂಗದ ಹುನ್ನಾರಗಳನ್ನು ಅರಿಯುವುದು ಅಷ್ಟು ಸುಲಭವಲ್ಲ. ಬ್ರಾಹ್ಮಣ ಬಿಲ್ಲಿಗೆ ಶೂದ್ರ ಬಾಣಗಳನ್ನು ಹೂಡಿ ಗುರಿ ಸಾಧಿಸಿಕೊಳ್ಳುವ ಅವರ ನಾಜೂಕಿನ ನಡೆ ಸುಲಭದ ಗ್ರಹಿಕೆಗೆ ಸಿಗುವಂಥದ್ದಲ್ಲ. ಬಿಲ್ಲು (ಬ್ರಾಹ್ಮಣ) ಸದಾ ಸುರಕ್ಷಿತ. ಬಾಣ (ಶೂದ್ರ) ಕೊಲ್ಲಬೇಕು ಇಲ್ಲ ಕೊಲೆಗೆ ಈಡಾಗಬೇಕು. ಈ ಬ್ರಾಹ್ಮಣ ಹುನ್ನಾರು ಭಯಂಕರವಾದುದು. ಆದ ಕಾರಣವೇ ವಿವೇಕಾನಂದರು “ಬೈರಾಗಿಗಳು, ಸನ್ಯಾಸಿಗಳು, ಒಂದು ಪಂಗಡದ ಬ್ರಾಹ್ಮಣರು ಈ ದೇಶವನ್ನು ಹಾಳು ಮಾಡುತ್ತಿರುವರು. ಅನೇಕ ಕೋಟಿ ಬ್ರಾಹ್ಮಣರು ಬಡವರ ರಕ್ತವನ್ನು ಹೀರುತ್ತಿರುವರು. ಇದು ಒಂದು ದೇಶವೋ ನರಕದ ಬೀಡೋ? ಇಲ್ಲಿರುವುದು ಧರ್ಮವೋ ಅಥವಾ ಪಿಶಾಚಿಯನರ್ತನವೋ ?…. ಪ್ರಗತಿಗೆ ಯಾವಾಗಲೂ ವಿರುದ್ಧವಾಗಿರುವ ಪುರೋಹಿತರನ್ನು ಒದ್ದೋಡಿಸಿ, ಅವರೆಂದಿಗೂ ಬದಲಾಗುವುದಿಲ್ಲ’ ಎಂದು ಅತ್ಯಂತ ಕಠಿಣವಾದ ಮಾತುಗಳಲ್ಲಿ ಖಂಡಿಸಿ ಒದ್ದೋಡಿಸಿ ಎಂದು ಕೆರೆ ಕೊಟ್ಟಿದ್ದಾರೆ. ಹಿಂದು ಮುಂದುಗಳನ್ನರಿಯದೆ ಆವೇಶದಿಂದ ಕರೆ ಕೊಡುವ ಶೂದ್ರ ಶಕ್ತಿ ಅರಿವಿನ ಕಣ್ತೆರೆದು ಮತ ಧರ್ಮಗಳನ್ನು ಮನೆಗಷ್ಟೇ ಸೀಮಿತಗೊಳಿಸಿ ಸರ್ವ ಸಮಾನತೆಯನ್ನು ಸಾರುವ ಸಂವಿಧಾನವನ್ನು ಪೂರ್ಣಾರ್ಥದಲ್ಲಿ ಜಾರಿಯಾಗುವಂತೆ ಹೋರಾಡಬೇಕು.

ಧರ್ಮ ಎಂದರೆ ಕೊಲ್ಲುವುದಲ್ಲ. ಕೊಲ್ಲುವ ಮನಸ್ಸನ್ನು ಗೆಲ್ಲುವುದು. ಕೆಡುವುವುದಲ್ಲ, ಕಟ್ಟುವುದು. ನಾಶ ಮಾಡುವುದಲ್ಲ ನಿರ್ಮಿಸುವುದು. ನಂದಿಸುವುದಲ್ಲ ನಂದಾದೀಪವಾಗಿಸುವುದು. ಆದರೆ ಇಂದು ಮತ ಧರ್ಮಗಳು ಮಾಡುತ್ತಿರುವುದೇನು? ಮತಾಂತರ ಎನ್ನುವ ವಿಕೃತ ಕ್ರಿಯೆಯಲ್ಲಿ ತೊಡಗಿ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿವೆ. ರಕ್ತದೋಕುಳಿಗೆ ಅನುವು ಮಾಡಿವೆ.

ಮತಾಂತರ ಪ್ರಕ್ರಿಯೆ ಇಂದಿನದಲ್ಲ. ಅದು ಹಿಂದಿನಿಂದಲೂ ನಡೆದು ಬಂದಿದೆ. ಅದಕ್ಕೆ ಧರ್ಮಕ್ಕಿಂತ ಹೆಚ್ಚಾಗಿ ಸಾಮಾಜಿಕವಾದ ಅನೇಕ ಕಾರಣಗಳಿವೆ. ಅಸಾಮಾನ್ಯ ಸಮಾಜ ಚಿಂತಕರಾಗಿದ್ದ ವಿವೇಕಾನಂದರು ನೀಡುವ ಕಾರಣವೆಂದರೆ “ಭರತ ಖಂಡದ ಮಹಮ್ಮದೀಯರಲ್ಲಿ ಅನೇಕರು ಹೇಗೆ ಮಹಮ್ಮದೀಯರಾಗಿರುವರು? ಬಲಪ್ರಯೋಗದಿಂದ ಅವರನ್ನು ಮುಸಲ್ಮಾನ ಮತಕ್ಕೆ ಸೇರಿಸಿದ್ದು ಎನ್ನುವುದು ಶುದ್ಧ ತಪ್ಪು. ಜಮೀನ್ದಾರರ ಉಪಟಳದಿಂದ. ಪುರೋಹಿತರ ಹಿಂಸೆಯಿಂದ ತಪ್ಪಿಸಿಕೊಳ್ಳಬೇಕೆಂದು ಮುಸಲ್ಮಾನರಾದರು. ಆದ ಕಾರಣವೇ ಬಂಗಾಳ ದೇಶದ ರೈತರಲ್ಲಿ ಹಿಂದೂಗಳಿಗಿಂತ ಮುಸಲ್ಮಾನರೇ ಹೆಚ್ಚು…… ಬ್ರಾಹ್ಮಣರ ಬಂಧನದಿಂದ ಪಾರಾಗಲು ಯತ್ನಿಸಿದ ಜನಸಾಮಾನ್ಯರು ಕೈಸ್ತಧರ್ಮ ಮುಂತಾದ ದೇಶದ ಒಳಗೆ ಇರುವ ವಿರೋಧ ಧಾರ್ಮಿಕ ಹಾವಳಿಗೆ ಸಿಕ್ಕಿದರು”. ವಿವೇಕಾನಂದರ ಈ ವಾಣಿ ಕಟುವಾಸ್ತವ ಹಾಗೂ ಸತ್ಯ. ಜನ ಮತಾಂತರಗೊಳ್ಳಲು ಕಾರಣ ಸತ್ಯವಾಗಿದೆ. ಅದೇ ಹಿಂದೂ ಧರ್ಮದ (ವಾಸ್ತವವಾಗಿ ವೈದಿಕ ಧರ್ಮದ) ವರ್ಣ ಹಾಗೂ ಜಾತಿ ವ್ಯವಸ್ಥೆ. ಅದನ್ನು ಸರಿಪಡಿಸಿಕೊಳ್ಳಲಾಗದೆ ಧರ್ಮದ ಹೆಸರಿನ ಸೋಗಲಾಡಿ ಮಾತುಗಳನ್ನಾಡುತ್ತಾ ಅಂತರಂಗದ ಸ್ವಾರ್ಥ ಸಾಧಿಸಿಕೊಳ್ಳುತ್ತಾ ಅನ್ಯ ಧರ್ಮವರಿಗೆ ಅವಕಾಶ ಮಾಡುತ್ತಿರುವ ಹಿಂದೂ ಧಾರ್ಮಿಕ ಮಂಖಂಡರು ಕಿಂಚಿತ್ತಾದರೂ ಚಿಂತಿಸಿದ್ದಾರೆಯೇ? ದೇಶ ನಾಶವಾಗಲಿ, ಜನ ಸಾಯಲಿ ಅವರಿಗೆ ಸಂಪ್ರದಾಯ ದೊಡ್ಡದು; ಸಂವಿಧಾನಕ್ಕಿಂತ ತಮ್ಮ ಸ್ವಹಿತ ಕಾಪಾಡುವ ಮನುಸ್ಮೃತಿಯೇ ಮಾನ್ಯ.

ಈ ಭಾರತದಲ್ಲಿರುವ ಪ್ರತಿಯೊಬ್ಬರೂ ಭಾರತೀಯರೇ ಆಗಿದ್ದಾರೆ. ಮೂಲ ಕ್ರಿಶ್ಚಿಯನ್ನನಾಗಲಿ ಮೂಲ ಮಹಮ್ಮದೀಯನಾಗಲಿ ಭಾರತದಲ್ಲಿ ಇಂದು ಯಾರೂ ಇಲ್ಲ. ಇರುವ ಎಲ್ಲರೂ ಮತಾಂತರಗೊಂಡಿರುವವರೇ. ಧರ್ಮ ಅವರನ್ನು ಪ್ರತ್ಯೇಕವಾಗಿ ಮಾಡುವಂತೆ ಮಾಡಿದೆ ಅಷ್ಟೆ.

ಕೊಡೆಗೆ : ಪ್ರಪಂಚದ ಎಲ್ಲಾ ಧರ್ಮಗಳ ಕೊಡುಗೆ ಮಹತ್ತರವಾದುದು. ವಿಶ್ವ ಸಂಸ್ಕೃತಿಯ ಬೆಳವಣಿಗೆಗೆ ಅವು ಪೂರಕವಾಗಿವೆ. ಅವುಗಳಲ್ಲಿ ಪ್ರಧಾನವಾಗಿ ಕ್ರೈಸ್ತ ಧರ್ಮದ ದಯೆ. ಇಸ್ಲಾಂ ಧರ್ಮದ ಸಮಾನತೆ. ಹಿಂದೂ ಧರ್ಮದ ಅಧ್ಯಾತ್ಮ ಇವು ಮನುಕುಲದ ಬೆಳಕಾಗಿ ಬಂದಿವೆ. ಈಗಿನ ತುರ್ತು ಎಂದರೆ ಕ್ರೈಸ್ತ ಧರ್ಮದ ದಯೆಯನ್ನು ಇಸ್ಲಾಂ ಹಾಗೂ ಹಿಂದೂ ಧರ್ಮೀಯರು ಅಪ್ಪಿಕೊಳ್ಳಬೇಕು. ಇಸ್ಲಾಂ ಧರ್ಮದ ಸಮಾನತೆಯನ್ನು ಹಿಂದೂ ಹಾಗು ಕ್ರಿಶ್ಚಿಯನ್ನರು ಅಪ್ಪಿಕೊಳ್ಳಬೇಕು. ಹಿಂದೂ ಧರ್ಮದ ಅಧ್ಯಾತ್ಯವನ್ನು ಇಸ್ಲಾಂ ಧರ್ಮದವರು ಒಪ್ಪಿ ಅಪ್ಪಿಕೊಳ್ಳಬೇಕು, ಆಗ ಭೂಮಿಯ ಮೇಲೆ ವಿಶ್ವ ಮಾನವತ್ವ ಗರಿಗೆದರಿ ಮಾನವ ಧರ್ಮದ ದಿವ್ಯ ಜ್ಯೋತಿ ಬೆಳಗುವುದನ್ನು ಕಾಣಬಹುದು.

ಭಾರತದಲ್ಲಿ ಸದ್ಯ ತುರ್ತಾಗಿ ಆಗಬೇಕಾಗಿರುವ ಅಗತ್ಯವನ್ನು ಕುರಿತು ವಿವೇಕಾನಂದರು “ನಮ್ಮ ಮಾತೃಭೂಮಿಯಲ್ಲಿ ಹಿಂದೂ ಮತ್ತು ಮುಸಲ್ಮಾನ ಧರ್ಮಗಳೆರಡೂ ಮಿಲನವಾಗಬೇಕು. ವೇದಾಂತದ ಮಿದುಳು ಇಸ್ಲಾಮಿನ ದೇಹ ಇದೊಂದೇ ನಮ್ಮ ಪುರೋಗಮನಕ್ಕೆ ಹಾದಿ” ಎಂದು ಪ್ರಗತಿಯ, ಸೌಖ್ಯದ ಸೌಹಾರ್ದಯುತ ಮಾರ್ಗವನ್ನು ತೋರಿದ್ದಾರೆ.

ನಾವಿಂದು ಧರ್ಮದ ಶಕ್ತಿ ಕಳೆಗುಂದಲು ಕಾರಣವಾಗಿರುವ ಮನುಷ್ಯನ ಹಿನ್ನಡೆಯನ್ನು ಗುರುತಿಸಿಕೊಳ್ಳಬೇಕಾಗಿದೆ. “ಅದ್ಭುತ ಶಕ್ತಿಯುಳ್ಳ ಧರ್ಮಗಳು ಪ್ರಪಂಚಕ್ಕೆ ಒಳ್ಳೆಯದನ್ನು ಮಾಡುವುದಕ್ಕಿಂತ ಕೆಟ್ಟದ್ದನ್ನು ಮಾಡಿವೆ. ಇದಕ್ಕೆ ಕಾರಣ ಆ ಧರ್ಮಗಳ ಸಂಕುಚಿತ ಭಾವನೆ.. ಸ್ವಮತಾಭಿಮಾನ. ಅನ್ಯ ಮತದ್ವೇಷ ಮತ್ತು ಇವುಗಳಿಂದ ಉತ್ಪನ್ನವಾದ ಘೋರ ಧಾರ್ಮಿಕ ದುರಭಿಮಾನ ಈ ಸುಂದರ ಜಗತ್ತನ್ನು ಬಹುಕಾಲದಿಂದಲೂ ಆವರಿಸಿಕೊಂಡಿರುವುವು. ಹಲವು ದೇಶಗಳನ್ನು ನಿರಾಶೆಯ ಕೂಪಕ್ಕೆ ತಳ್ಳಿರುವುವು. ಇಂತಹ ಉಗ್ರ ಧರ್ಮಾಂಧತೆಯ ದೈತ್ಯರಿಲ್ಲದೇ ಇದ್ದರೆ ಮಾನವಜನಾಂಗ ಇಂದಿಗಿಂತಲೂ ಎಷ್ಟೋ ಮುಂದುವರಿದು ಹೋಗಬೇಕಾಗಿತ್ತು” ಎಂದು ವಸ್ತು ಸ್ಥಿತಿಯನ್ನು ವಿವೇಕಾನಂದರು ಮನವರಿಕೆ ಮಾಡಿದ್ದಾರೆ.

ದೌರ್ಬಲ್ಯ: ಮನುಷ್ಯನ ದೊಡ್ಡ ದೌರ್ಬಲ್ಯವೆಂದರೆ ಧರ್ಮಗ್ರಂಥಗಳ ಕುರಿತ ಅವನ ಸಂಕುಚಿತ ಭಾವನೆ. ತನ್ನ ಧರ್ಮದ ಗ್ರಂಥವೇ ಸರ್ವ ಶ್ರೇಷ್ಠ ಎಂದು ಬಾವಿಯ ಕಪ್ಪೆಯಂತಾಗುವುದು. ವಿವೇಕಾನಂದರು “ನನ್ನ ದೃಷ್ಟಿಯಲ್ಲಿ ಗ್ರಂಥಗಳು ಒಳ್ಳೆಯದಕ್ಕಿಂತ ಹೆಚ್ಚು ಕೆಡುಕನ್ನು ಉಂಟುಮಾಡಿವೆ. ಹಲವು ದೋಷಯುಕ್ತ ಸಿದ್ಧಾಂತಗಳಿಗೆ ಅವೇ ಕಾರಣ; ಸಿದ್ಧಾಂತಗಳೆಲ್ಲಾ ಗ್ರಂಥದಿಂದ ಬರುವುವು. ಮತಾಂಧತೆ, ಅನ್ಯ ಧರ್ಮೀಯರನ್ನು ಹಿಂಸಿಸುವುದು, ಇವಕ್ಕೆಲ್ಲ ಗ್ರಂಥಗಳೇ ಕಾರಣ. ಇಂದಿನ ಕಾಲದಲ್ಲಿ ಗ್ರಂಥಗಳು ಎಲ್ಲ ಕಡೆಯೂ ಕಪಟಿಗಳನ್ನು ಉಂಟು ಮಾಡುತ್ತಿರುವುವು. ಹೊರ ದೇಶಗಳಲ್ಲಿಯೂ ಇರುವ ಕಪಟಿಗಳ ಸಂಖ್ಯೆಯನ್ನು ನೋಡಿ ನನಗೆ ಆಶ್ಚರ್ಯವಾಗುತ್ತವೆ” ಎಂದಿದ್ದರೆ, ರಾಷ್ಟ್ರಕವಿ ಕುವೆಂಪು. “ಯಾವ ಒಂದು ಗ್ರಂಥವೂ ಏಕೈಕ ಪರಮಪೂಜ್ಯ ಧರ್ಮ ಗ್ರಂಥವಾಗಬಾರದು. ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಸಾದ್ಯವಾದವುಗಳನ್ನೆಲ್ಲ ಓದಿ ತಿಳಿದು ತನ್ನ ದರ್ಶನವನ್ನು ತಾನೆ ನಿರ್ಣಯಿಸಿ ಕಟ್ಟಿಕೊಳ್ಳಬೇಕು” ಎಂದು ಮುಕ್ತ ಮತದ ಅನುಸರಣೆಗೆ ಕರೆ ಕೊಡುತ್ತಾರೆ.

ಧರ್ಮಗ್ರಂಥಗಳ ಕುರಿತ ಶ್ರದ್ಧೆ ತೀವ್ರವಾದಾಗ ಎಂಥ ಅಪಾಯಕ್ಕೆ ಎಡೆ ಮಾಡಬಹುದು ಎಂಬುದಕ್ಕೆ ಅಲೆಕ್ಸಾಂಡ್ರಿಯಾವನ್ನು ಗೆದ್ದ ಓಮರ್-೧ ಹೀಗೆ ಹೇಳಿದ್ದಾನೆ. “ಗ್ರಂಥಾಲಯಗಳನ್ನು ಸುಟ್ಟು ಹಾಕಿ. ಅವುಗಳ ಮೌಲ್ಯ ಈ ಒಂದು ಗ್ರಂಥದಲ್ಲಿದೆ. ಅದೇ ಕುರಾನ್.” ಇದು ಹೆಮ್ಮೆ ಎಂತೋ ಅಂತೆ ಅಜ್ಞಾನದ ಪರಮಾವಧಿ ಕೂಡ. ಈ ಹಿನ್ನಲೆಯಲ್ಲಿ “ಪ್ರಪಂಚದ ಅಧ್ಯಾತ್ಮಿಕ ದರ್ಶನಗಳು ಒಂದು ಅಮೋಘಶಾಸ್ತ್ರ; ಬೈಬಲ್, ವೇದ, ಕುರಾನ್ ಮತ್ತು ಇತರ ಧರ್ಮಶಾಸ್ತ್ರಗಳೆಲ್ಲ ಕೆಲವು ಪುಟಗಳು ಮಾತ್ರ. ವ್ಯಕ್ತವಾಗಲು ಇನ್ನೂ ಅನಂತ ಪುಟಗಳಿವೆ” ಎನ್ನುವ ವಿವೇಕಾನಂದರ ಮಾತು ಧರ್ಮೀಯರ ವಿವೇಕದ ಕಣ್ಣು ತೆರೆಸುವಂಥದ್ದು.

ಪರಿಹಾರ : ಶಾಸ್ತ್ರ ಸಂಪ್ರದಾಯಗಳ ಸುಳಿಗೆ ಸಿಕ್ಕ ಮತೀಯ ಮನಸ್ಸುಗಳು ಸಾಮಾಜಿಕ ವ್ಯವಸ್ಥೆಯನ್ನು ಸರಿಪಡಿಕೊಳ್ಳಲಾಗದೆ ಧರ್ಮವನ್ನು ಮತಾಂತರ ಪ್ರಕ್ರಿಯೆಗೆ ಪ್ರೇರಕ ಮಾರ್ಗವನ್ನಾಗಿ ಮಾಡಿಕೊಳ್ಳುತ್ತಿರುವುದು ಎಲ್ಲ ಸಮಸ್ಯೆಗಳಿಗೆ ಮೂಲವಾಗಿದೆ. ಶಾಸ್ತ್ರ ಸಂಪ್ರದಾಯಗಳ ಬಂಧನದಿಂದ ಬಿಡುಗಡೆ ಹೊಂದದೆ, ಅಂತರಂಗದ ಸ್ವಾರ್ಥ ಸುಳಿಯಿಂದ ಹೊರ ಬರದಿದ್ದರೆ ಪರಿಹಾರ ಮರೀಚಿಕೆಯಾಗುತ್ತದೆ. ಇದಕ್ಕೆ ಇರುವ ಏಕೈಕ ಮಾರ್ಗವೆಂದರೆ ಮನಸ್ಸನ್ನು ಪ್ರಚೋದಿಸುವ ಮತವನ್ನು ದೂರ ಮಾಡಿ ಹೃದಯವನ್ನು ವಿಕಾಸಗೊಳಿಸುವ ಧರ್ಮವನ್ನು ಧರಿಸುವುಮ, ಹೃದಯದಲ್ಲೇ ಸುಪ್ತವಾಗಿರುವ ದೈವತ್ವವನ್ನು ಉದ್ದೀಪನ ಗೊಳಿಸಿಕೊಳ್ಳುವುದು.

“ಹಿಂದೆ ಇದ್ದ ಧರ್ಮಗಳನ್ನೆಲ್ಲಾ, ನಾನು ಸ್ವೀಕರಿಸುತ್ತೇನೆ. ನಾನು ಮಹಮ್ಮದೀಯರ ಮಸೀದಿಗೆ ಹೋಗುತ್ತೇನೆ. ಕ್ರೈಸ್ತರ ಚರ್ಚಿನಲ್ಲಿ ಶಿಲುಬೆಯ ಎದುರಿಗೆ ಬಾಗುತ್ತೇನೆ. ಬೌದ್ಧರ ವಿಹಾರದಲ್ಲಿ ಬುದ್ದನಲ್ಲಿ ಮತ್ತು ಅವನ ಧರ್ಮದಲ್ಲಿ ಶರಣಾಗತನಾಗುತ್ತೇನೆ. ಹಿಂದುಗಳೊಂದಿಗೆ ಕಾಡಿಗೆ ಹೋಗಿ ಎಲ್ಲರಲ್ಲಿ ಬೆಳೆಗುತ್ತಿರುವ ಆ ಪರಂಜ್ಯೋತಿಯ ದರ್ಶನಕ್ಕಾಗಿ ಧ್ಯಾನ ಮಾಡುವವರೊಂದಿಗೆ ನಾನೂ ಧ್ಯಾನಮಗ್ನನಾಗುತ್ತೇನೆ. ನಾನು ಇದನ್ನೆಲ್ಲಾ ಮಾಡುವುದು ಮಾತ್ರವಲ್ಲ ಭವಿಷ್ಯದಲ್ಲಿ ಏನೇನು ಬರುವುದೋ ಅದನ್ನೆಲ್ಲ ಸ್ವೀಕರಿಸುವುದಕ್ಕೆ ನನ್ನ ಹೃದಯವನ್ನು ತರೆದಿರುವೆನು” ಎನ್ನುವ ವಿವೇಕಾನಂದರ ಹೃದಯ ವೈಶಾಲ್ಯತೆಯನ್ನು ಆಲಂಗಿಸಿದಾಗ ಮಾತ್ರ ಭೂಮಿಯ ಮೇಲೆ ಕೋಮು ಹಾಗೂ ಭಯೋತ್ಪಾದನೆಯ ಬೇರುಗಳ ಬತ್ತಿ ನೈಜ ‘ಮಾನವ ಧರ್ಮದ ಮೊಳಕೆ ಮೈದೋರುವುದು. ಹಾಗೆ ಪಲ್ಲವಿಸುವತ್ತ ಎಲ್ಲರ ಚಿತ್ತ ಕ್ರಿಯಾಶೀಲವಾಗುವುದೇ ಭಯೋತ್ಪಾದಕತೆಯಿಂದ. ಕೋಮು ಗಲಭೆಗಳಿಂದ ಮುಕ್ತವಾಗಲು ಇರುವ ಏಕೈಕ ಮಾರ್ಗ.

ಗುಡಿ ಚರ್ಚು ಮಸೀದಿಗಳು ಅವೈಚಾರಿಕ, ಅವೈಜ್ಞಾನಿಕ ಮತ್ತು ಅಮಾನವೀಯ ಆಚರಣೆಗಳಿಂದ ಹೊರಬಂದು ಇಂಥ ಹೃದಯ ವ್ಶೆಶಾಲ್ಯದ ತಾಣಗಳಾಗಲಿ ಎಂದು ಆಶಿಸೋಣ.

*****
೨೦೦೮

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆತ್ಮದ ಬೆಳಕು
Next post ಗುರುದೇವ ಜನನಿ

ಸಣ್ಣ ಕತೆ

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಕುಟೀರವಾಣಿ

    ಪೀಠಿಕೆ ನನ್ನ ಬಡಗುಡಿಸಲ ಹೆಸರು "ಆನಂದಕುಟೀರ". ಒಂದು ದಿನ ನಡುಮಧ್ಯಾಹ್ನ. ಕುಟೀರದೊಳಗೆ ಮುರುಕು ಕಿಟಿಕಿಯ ಹತ್ತಿರ ಕುಳಿತು, ಹೊರಗಿನ ಪ್ರಸಂಚವನು ನೋಡುತಿದ್ದೆ. ಮನಸು ಬೇಸರದಿಂದ ತುಂಬಿ ಹೋಗಿತ್ತು.… Read more…