ನೀವು ಕೇಳುತ್ತೀರಿ
ವಿಂಡ್ಸರ್ ಮ್ಯಾನರ್
ರಸ್ತೆ ಬದಿಯಲ್ಲಿರುವ
ಡೇರಿ ಹೂಗಳ ಮೇಲೆ
ಕಪ್ಪು ಎಣ್ಣೆ ಸವರಿದವರ್‍ಯಾರೆಂದು?
ಗುಲಾಬಿ, ಹೂಗಳ ಬಣ್ಣ
ಕಪ್ಪಾಗಿರುವುದು ಯಾಕೆಂದು
ವಿಸ್ತರಣೆಯ ನೆಪದಲ್ಲಿ
ಕೈಗಾರಿಕೀಕರಣ ಶಾಸ್ತ್ರದಲ್ಲಿ
ಹುದುಗಿರುವ ಸಂಸ್ಕೃತಿ
ಇದುವೆಯೇ? ಎಂದು.
ನಾನು ವಾಸವಾಗಿದ್ದ
ಆರ್.ಟಿ. ನಗರದಲಿ
ಮಶೀನುಗಳ ಗಡಿಯಾರದ
ಮುಳ್ಳುಗಳ ಮಧ್ಯ
ದಿನಗಳು ನೂಕಿದ್ದು
ನನ್ನ ಅರಿವಿಗೆ
ಬಾರದೆ ಹೋಯಿತು.
ನನ್ನ ಮನೆ ಮೇಲಿಂದ
ನೋಡಿದರೆ ತಿಳಿನೀರಿನ
ಕೆರೆ, ಬನ ಕಾಣುತ್ತಿದ್ದವು.
ಈಗ ಸಿಮೆಂಟು ಕಾಂಕ್ರೀಟುಗಳು
ಆ ಕೆರೆಯನ್ನೂ ಹೂಬನವನ್ನೂ
ಸದ್ದಿಲ್ಲದೇ ನುಂಗಿ ಹಾಕಿದ್ದವು.
ಅಂದು ರಾಗಿ ರೊಟ್ಟಿಗೆ
ಚಟ್ನಿ ಗತಿಯಿಲ್ಲದ ದಿನಗಳಲ್ಲಿ
ಉಪ್ಪಿನ ಹರಳುಗಳೇ
ನಮಗೆ ಗತಿಯಾಗಿದ್ದವು.
ಇಂದು ಹರಳುಪ್ಪು
ಮಾರುಕಟ್ಟೆಯಿಂದ ಮಾಯವಾಗಿ
ಅಯೋಡಿನ್ ರಹಿತ
ಪುಡಿಯುಪ್ಪಿಗೆ ನಗರಗಳು
ಶರಣಾದೆವು ಗೆಳತಿ.
ದೊಡ್ಡ ದೊಡ್ಡ ನಗರಗಳು
ಕಾರ್ಖಾನೆ ಕಂಪನಿಗಳು
ಬೃಹತ್ ಉದ್ದಿಮೆಗಳ ಉಗಮ
ಕಾರ್ಖಾನೆಗಳ ಕೊಳವೆಯಲ್ಲಿ
ನನ್ನವರ ಕೆಂಪುರಕ್ತ
ಕಪ್ಪು ಬಣ್ಣ ಕಾರಿದಾಗ
ಬಂಡವಾಳಶಾಹಿ ಸೈತಾನ
ಮೀಸೆಯ ಮರೆಯಲ್ಲಿ
ನಗುತ್ತಿದ್ದ ಗೆಳತಿ ನಗುತ್ತಿದ್ದ.
*****