ನನ್ನ ಅಖಂಡ ಪ್ರೀತಿಯನ್ನು
ನಿನ್ನ ಬೆಳ್ಳಿ ತಕ್ಕಡಿಯಲ್ಲಿಟ್ಟು
ತೂಗಬೇಡ ಮುಮ್ತಾಜ್
ದೌಲತ್ತಿನ ಆಸರೆಯಿಂದ
ನಿನ್ನ ಜಹಾಂಪನಾಹ್
ನಿನಗೊಂದು ಇಮಾರತ್ತು ಕಟ್ಟಿಸಿ,
ಅದರಲ್ಲಿ ನಿನ್ನ ಗೋರಿ ಮಾಡಿರಬಹುದು
ಆದರೆ ನನ್ನ ಪ್ರೀಯತಮನ
ಹೃದಯಲೇ ಕಟ್ಟಿದ
ಭಾವ ತುಂಬಿದ ಭವ್ಯ ಇಮಾರತ್ತಿಗೆ
ನಿನ್ನ ಅಮೃತ ಶಿಲೆಗಳು
ಸಾಟಿಯಾಗಲಾರವು ಮುಮ್ತಾಜ್.
ಪ್ರಿಯ ಮುಮ್ತಾಜ್
ನಿನ್ನ ಸುಂದರ ವದನದ ಮೇಲೆ
ಒಮ್ಮೆ ಕಣ್ಣಾಡಿಸಿ ನೋಡು-
ಅಲ್ಲಿ ನಿನ್ನ ಜಹಾಂಪನಾರ
ಶಾಹಿ ದರ್ಪದ ಮೊಹರುಗಳು ಕಂಡಾವು.
ಮುಮ್ತಾಜ್ ಯಮುನೆಯ
ತೀರದಲ್ಲೊಮ್ಮೆ ನಿಂತು
ಕಣ್ಬಿಟ್ಟು ನೋಡಿದರೆ ನಿನಗೆ
ವೀರ ಸೈನಿಕರ ರಕ್ತದಿಂದ
ತಿಳಿಜಲದ ಯಮುನೆ
ಕೆಂಪಾದುದ ಕಂಡೀತು.
ಸುಂದರ ತಾಜಮಹಲೇ
ನಿನ್ನ ಹಕೀಕತ್ತು ಎನೆಂದು
ಎಲ್ಲರಿಗೂ ಗೊತ್ತು.
ನಿನ್ನ ಪ್ರೇಮ ಸ್ಮಾರಕದ
ಮುಸುಕಿನ ಮರೆಯಲ್ಲಿ
ನಿಟ್ಟುಸಿರಿಟ್ಟ ಬೇಗಂಗಳೆಷ್ಟೋ?
ತಲೆದಿಂಬಿನಲ್ಲಿ ಇಂಗಿ ಹೋದ
ಅವರ ಬಿಸಿ ಕಂಬನಿಗಳೆಷ್ಟೋ?
ಉಕ್ಕಿದ ಹರೆಯ ಬಚ್ಚಿಡಲು
ಬಿಕ್ಕಿದ ಜನಾನಾಗಳೇಷ್ಟೋ?
ನಿನ್ನ ಅಡಿಪಾಯದಡಿಯಲ್ಲಿ
ಜಜ್ಜಿ ಹೋಗಿರುವ ಅವಶೇಷಗಳು
ಅಮೃತಶಿಲೆಗಳಲ್ಲಿ ಸಿಲುಕಿ
ನಲುಗಿ ಹೋಗಿರುವ
ಬಡಶಿಲ್ಪಿಗಳ ಆಕ್ರಂದನಗಳೆಷ್ಟೋ
ಹೆಪ್ಪುಗಟ್ಟಿದ ಅವರ ಕನಸುಗಳೆಷ್ಟೋ?
ಅವರ ನಿಟ್ಟುಸಿರಿನ ಶಬ್ದ
ಇಂದಿಗೂ ಸಹ ತಾಜಮಹಲಿನ
ಮಿನಾರುಗಳಲ್ಲಿ ಪ್ರತಿಧ್ವನಿಸುತ್ತದೆ.
ಅಳಿದು ಹೋಗುತ್ತಿರುವ
ಗೋರಿಗಳಲ್ಲಿ ಗುಣುಗುಟ್ಟುತ್ತದೆ.
ನೂಪುರಗಳ ನುಣುಪಾದ
ಗೋಡೆಗಳಲ್ಲಿ ರಕ್ತಸಿಕ್ತವಾಗುತ್ತದೆ.
ನಿನ್ನ ಬಾದಶಹನ ಹೃದಯದಲ್ಲಿ
ನೀನೊಬ್ಬಳೇನೂ ಅಲ್ಲ
ತುಂಬಿದ ಜನಾನಾಗಳುಂಟು
ಮುಜರಾಗಳಲ್ಲಿ ಮುಳುಗುವ
ಗೆಜ್ಜೆಯ ನಾದದಲ್ಲಿ ಮೈಮರವ
ಬಡವರ ರಕ್ತ ಹೀರುವ
ಅನೇಕ ಖೂನಿ ಹಕಿಕತ್ತುಗಳಿಂದ
ಸುತ್ತುವರೆದ ನಿನ್ನ ಬಾದಶಹನ
ತಾಜಮಹಲು ಪ್ರೀತಿಯ ಪ್ರತೀಕ
ಹೇಗಾದೀತು ಹೇಳು ಮುಮ್ತಾಜ್?
*****