ದುಷ್ಟ ಗಂಗೋತ್ರಿಗೆ
ಗಂಡಂದಿರ ಬಲಿ ಕೊಟ್ಟ
ನಿಮಗೆ ಮುಂಡೆಯರ
ಪಟ್ಟವೇ ಗಟ್ಟಿಯಾಯಿತೇನು?
ಉಕ್ಕಿ ಬಂದ ನಿಮ್ಮ ಹರೆಯ
ಅಂತರಂಗದಲೇ ಹಿಂಗಿತೇನು?
ಮೆಟ್ಟಿಬಂದ ಕಣ್ಣೀರು
ಗೊಂಡಾರಣ್ಯದ ಗೂಢಕ್ಕಿಳಿದು
ಗಟ್ಟಿ ಘನವಾಯಿತೇನು?
ಸಿಡಿದು ಹೋದ ಕನಸುಗಳು
ಕಡಲಾಚೆಯ ನೋವುಗಳು
ಬೆಂಕಿಯಿಲ್ಲ ಕಿಡಿಯಿಲ್ಲ
ಬರೀ ಬೂದಿಯ ಗೂಡುಗಳು.
ಒಡೆದು ಹೋದ ಕನ್ನಡಿಯಲ್ಲಿ
ಛಿದ್ರಗೊಂಡ ಕನಸುಗಳನು
ಬದುಕಿನ ಮುಸ್ಸಂಜೆಯಲಿ
ಮತ್ತೆ ಹೇಗೆ ಸಂಧಿಸುವಿರಿ?
ಬಯಕೆಗಳ ಗೋರಿಯ ಮೇಲೆ
ತೃಪ್ತಿಯ ಮುಖವಾಡವನು
ಎಲ್ಲಿಯತನಕ ಧರಿಸುವಿರಿ?
ವಿಧವೆಯ ಹಣೆಪಟ್ಟಿ ಹೊತ್ತು
ಎಲ್ಲಿಯವರೆಗೆ ನರಳುವಿರಿ?
ಕೋಗಿಲೆಯ ಕತ್ತನು
ಹಿಸುಕುವ ನಿಮ್ಮ ವಸಂತಗಳು
ಚೈತ್ರದ ಚಿಗುರುಗಳು
ಕಮರಿದ ಆಸೆಗಳು
ಬಣ್ಣ ಕಳೆದುಕೊಂಡು
ಬರಡಾದ ಚಿತ್ರಗಳು
ನಿಮ್ಮಾಳದಲ್ಲಿ ಬೇರುಬಿಟ್ಟ
ಬಿಳಲುಗಳ ಬೊಡ್ದೆಗಳಿಗೆ
ಅಲುಗಾಡಿಸಲಾರದೇ ಏದುಸಿರು ಬಿಡುತ್ತ
ಎಲ್ಲಿಯವರೆಗೆ ಜೋತು ಬೀಳುವಿರಿ?
ಅಂತಸ್ತುಗಳ ಅಂಕುಶದಡಿಯಲಿ
ಅಧೀರವಾಗಿ ಅಂಕೆ ತಪ್ಪುವ
ನಿಮ್ಮ ಅತೃಪ್ತ ಆತ್ಮಗಳು
ಗೂಡಿನಲ್ಲಿಯೇ ಕೊನೆಗಾಣುವ
ರೇಷ್ಮೆಯ ಹುಳಗಳು.
*****