ಹನ್ನೆರಡು ವರ್ಷದವಳಿದ್ದಾಗ,
ನನ್ನ ಮದುವೆ ಆಯಿತು.
ದಿನಾಲೂ ಆರು ಗಂಟೆಗೆ
ಎದ್ದು ಕೂಳು ಕುದಿಸಿ,
ಸೂರ್ಯ ಕಣ್ಣು ತೆರೆಯುವ ಮೊದಲೇ
ಭತ್ತ ಕೊಯ್ಯಲು ಹೋಗುತ್ತಿದ್ದೆ.
ಸಂಜೆ ತಂದ ಕೂಲಿಯೆಲ್ಲ
ಗಂಡ ಕಿತ್ತುಕೊಳ್ಳುತ್ತಿದ್ದ.
ಕುಡಿದು ಬಂದು
ಮನಬಂದಂತೆ ಬಡಿಯುತ್ತಿದ್ದ.
ಉಪವಾಸವಿದ್ದ ಹೊಟ್ಟೆ
ಮೇಲಿ೦ದ ಹೊಡೆತಗಳ
ಸಹಿಸಬೇಕಿತ್ತು.
ನಾನೇನೋ ಸಹಿಸಬಹುದು,
ಉಪವಾಸವಿರಬಹುದು
ಆದರೆ ನನ್ನ ಮಕ್ಕಳು
ಹಸಿವಿನಿಂದ ಬಳಲುವುದನ್ನು
ಸಹಿಸಲಸಾಧ್ಯವಾಗುತ್ತಿದ್ದು,
ದಿನದಿನಕ್ಕೆ ಬುದುಕು
ಸಂಕೀರ್ಣವಾಗುತ್ತಿತ್ತು,
ನನ್ನ ಶರೀರ ದಿನದಿನವೂ
ಯಾತನ ಶಿಬಿರವಾಗುತ್ತಿತ್ತು.
ಈಗ ನಾನು
ಪಾತ್ರೆ ತೊಳೆಯುತ್ತೇನೆ.
ಕಸ ಗುಡಿಸುತ್ತೇನೆ
ಬಟ್ಟೆ ಒಗೆಯುತ್ತೇನೆ.
ನಮ್ಮ ಮಾಲೀಕರ
ಮಕ್ಕಳನ್ನು ಆಡಿಸುತ್ತೇನೆ.
ಒಂದು ದಿನ –
ಅಂದು ಮಾಲೀಕರ
ಮನೆಗೆಲಸಕ್ಕೆ ಹೋಗಿದ್ದೆ,
ಮನೆಯ ಮಂದಿಯಲ್ಲ
ಸಿನಿಮಾಕ್ಕೆ ಹೋಗಿದ್ದರು,
ಮಾಲೀಕರು ನನ್ನ
ತಂದೆಯ ವಯಸ್ಸಿನವರು
ಅವರ ಮೇಲೆ ನನಗೆ
ಪೂರ್ಣ ವಿಶ್ವಾಸವಿತ್ತು.
ಆದರೆ ಅವರು ನನ್ನ ವಿಶ್ವಾಸವನ್ನು
ನುಚ್ಚು ನೂರಾಗಿಸಿದ್ದರು.
ಅದನ್ನು ಕಂಡ ಅವನ ಪತ್ನಿ
ನನ್ನನ್ನೇ ಹೊಡೆದು ದೂರಕ್ಕಟ್ಟಿದಳು
ಗಂಡನೂ ಮನೆಯಿಂದ
ದೂರ ಮಾಡಿದನು
ಅಂದಿನಿಂದ ಇಂದಿನವರೆಗೆ
ಈ ಕೆಂಪು ದೀಪದ
ಕೆಳಗೆ ಕುಳಿತು
ನನ್ನ ಮಕ್ಕಳು ಬರುವ
ದಾರಿ ನೋಡುತ್ತಿರುವೆ.
ಬದುಕಿನ ಕೊನೆಯ
ಅಂಚಿನಲ್ಲಿರುವ ಅವರು
ಈಗಲೂ ಬರುವುದಿಲ್ಲವೇನೋ
*****