ಅಯ್ಯೋ! ತಿರುಮಳವ್ವಾ!…
ನನ್ನಮ್ಮಾ! ನನ ಕಂದಾ!
ನಿನಗೆ ಅನ್ಯಾಯ ಮಾಡಿದೆನವ್ವಾ!
ಗಿಣಿಯಂತ ನಿನ್ನ ಮಾರ್ಜಾಲನ ಉಡಿಯಲ್ಲಿ ಹಾಕಿ
ನಮ್ಮ ಕೈಯಾರೆ ಕೊಂದು ಹಾಕಿದೆನವ್ವಾ!
ಅಷ್ಟು ತಿಳಿಯಲಿಲ್ಲ!
ಹುಡುಗ ಹುಡುಗಿಯ ಸಂಬಂಧವೆಂತಹುದೆಂದು ವಿಚಾರ ಮಾಡಲಿಲ್ಲ
ಪ್ರಾಯದ ಹುಡುಗರ ಆಟವಿದು, ಮಾಮೂಲು
ಮುಂದೆ, ತನಗೆ ಹೆಂಡತಿ ಬಂದರೆ ಸರಿ ಹೋಗುವುದೆಂದು
ತಪ್ಪು ಮಾಡಿದೆವಮ್ಮಾ
ಇದು, ಈ ಮಟ್ಟದಲ್ಲಿದೆಯೆಂದು
ಹೀಗಾಗ ಬಹುದೆಂದು
ಯಾರಿಗೆ ಗೊತ್ತಿತ್ತು?
ಅವಳಿನ್ನೆ೦ತವಳೋ
ಇವರಿಬ್ಬರ ನಡುವೆ ಅದಿನ್ನೆಂತಹ ಅನು ಬಂಧವಿತ್ತೋ
ಹುಡುಗ, ಮದುವೆಯೇ ಬೇಡ
ನನಗೆ ಮದುವೆ ಯೆಂಬುದೊಂದಿದ್ದರೆ ಅದು ಅವಳೊಂದಿಗೆ ಮಾತ್ರ ಎಂದು
ಹೇಳಿಕೊಂಡು ತಿರುಗುತ್ತಿದ್ದನಂತೆ
ಎಲ್ಲಾ ಈವಾಗ ಹೇಳುವರು! ಏನು ಬಂತು?
ಅಯ್ಯೋ…!
ನಮ್ಮ ಮೋಟಾತನಕ್ಕೆ ಅನ್ಯರನಂದು ಲಾಭವೇನು
ಅಂದು, ಸ್ವಲ್ಪವೇ ಸ್ವಲ್ಪ ವಿವೇಕವೆನ್ನುವುದು ಇದ್ದ ಪಕ್ಷದಲ್ಲಿ
ಇವತ್ತು ಇಂಗಾಗುತ್ತಿತ್ತೇನು?
ನಮಗೆ ಗೊತ್ತಾಗ ಬೇಕಿತ್ತು.
ಎಲ್ಲಾ ಸಜ್ಜಾಗಿ ಧಾರೆಗೆ ಏಳುವಾಗ, ಗಂಡೇ ಎಲ್ಲೂ ಕಾಣುವುದಿಲ್ಲ
ಅಲ್ಲಿ ನೋಡಿ ಇಲ್ಲಿ ನೋಡಿ ಯೆಂದು
ಗಂಡಿನ ಕಡೆಯವರು ಪರದಾಡುವಾಗ ನಮಗೆ ಗೊತ್ತಾಗಬೇಕಿತ್ತು.
ನಾವೂ ಕೂಡ ಯೋಚಿಸ ಬೇಕಿತ್ತು
ಏನಿದು ಅವಲಕ್ಷಣ?
ಮದುವೆಯೆಂದರೆ ಈಗಿನ ಕಾಲದ ಹುಡುಗರು
ತುದಿಗಾಲಲಿ ನಿಲ್ಲುವರು
ಅಂತಾದ್ದರಲ್ಲಿ
ಏನಿದರ್‍ಹಿನ್ನೆಲೆಯು ಯಾಕಿದು ಹೀಗೆಂದು?
ಬಿಡಿ?
ವಿಚಾರ ಮಾಡಿಯೂ ಸಾಧಿಸಿಬಹುದಾದುದೇನಿತ್ತು!
ಬರಿ, ಮದುವೆಯ ಮುರುಗಡೆ ಆಗುತಿತ್ತು
ಒಟ್ಟು ಅವಳಣೆ ಬರಹದಿ ಕೆಡುವುದೇ ಬರೆದಿತ್ತು
ಅಂಗೂ ಕೆಡುವುದು ಇಂಗೂ ಕೆಡುವುದೇ ಆಗಿತ್ತು
ಸುಡು!
ಈ ಹಾಳು ಸಮಾಜವ, ಲೋಕವ
ಬಡವರಿಗೆಲ್ಲಿದ ಬಾಳು?
ಸಣ್ಣ ತಪ್ಪನೆ ಗುಡ್ಡವ ಮಾಡುವ
ಕೇಡಿಗ ಜನರೇ ಬಹಳಿರುವಾಗ
ಧಾರೆಯ ಮಟ್ಟಕ್ಕೆ ಬಂದೊಂದು ಮದುವೆಯು ಮುರಿದು
ಬಿದ್ದಿತೆಂದಾಗ!
ಇನ್ನು ಕೇಳಬೇಕೆ
ತಲೆ ಎತ್ತಿ ತಿರುಗಲು ಆಸ್ಪದ ವಿರುತಿತ್ತೆ?
ಅಂತಾದ್ದರಲ್ಲಿ ನಿಮ್ಮ ಮಗಳಿಗೆ ಇನ್ನೊಂದು ಮದುವೆ?
ಊಹಿಸಿಕೊಳ್ಳಲು ಚೆಂದವಷ್ಟೆ!
ಕಂಡವರಾರು
ಕೆಟ್ಟದ್ದೊಂದಿನ ಒಳ್ಳೆಯದಾಗಲೂ ಬಹುದು
ಇಷ್ಟು ಮೀರಿ, ಗುರುವಿಟ್ಟಿದ್ದಾಗಲಿಯೆಂದು
ದೇವರ ಮೇಲೆ ಭಾರವ ಹಾಕಿ ಕಾರ್ಯವ ಮುಗಿಸಿದೆವು.
ಕಂಡವರ ಮಕ್ಕಳು, ಗಂಡ, ಮಕ್ಕಳ ಕೂಡಿಕೊಂಡು
ಸಂತೋಷದಿಂದ ಊರಿಗೆ ಬಂದರೆ
ನಮ್ಮ ಮಗಾ ಜೋಲು ಮೋರೆ ಹಾಕ್ಕೊಂಡು
ಕಾಯಿಲೆ ಬಿದವಳಂತೆ
ಕಷ್ಟಪಟ್ಟು ನಗುವನು ತಂದುಕೊಂಡು
ಸವರ್‍ಯಾಕಿದ ದೊಣ್ಣೆಯಂಗೆ, ಒಂಟಿಯಾಗಿ ಬರುವುದ ಕಂಡರೆ
ಹೊಟ್ಟೆಯಲ್ಲಿ ಬೆಂಕಿ ಬಿದ್ದಂತಾಗುತ್ತಿತ್ತು
ಬಂದ ಬಂದ ಸರ್ತಿಗೆಲ್ಲಾ
“ಅಮ್ಮ! ನಾನ್ಯಾವ ಪಾಪವ ಮಾಡಿದ್ದೇನೆ
ಹಿಂದೆ, ನಾನ್ಯಾರ ಸಂಸಾರ ಹಾಳಾಗಲಿಕ್ಕೆ ಕಾರಣವಾಗಿದ್ದೆನೇ
ಆ ಮಹರಾಯ, ಮಾತುಕತೆ ಹೋಗಲಿ
ಕಣ್ಣೆತ್ತಿ ಕೂಡ ನೋಡುವುದಿಲ್ಲ
ಅತ್ತೆ, ಮಾವ, ನೀವೂ ಸಾರಿ ಸಾರಿ ಹೇಳುವಿರಿ
ಹ್ಯಾಗಮ್ಮಾ ಅವರ ಒಲಿಸಿಕೊಳ್ಳೋದು
ಉಂಬುವುದೇ ತಡೆ ಕೈ ಮೇಲೆ ನೀರು ಬಿಟ್ಟುಕೊಂಡು
ಅತ್ತೆ ಮಾವ ಬೈಯುತ್ತಿದ್ದರೂ
ಕೇಳಿಯೂ ಕೆಳಲಿಲ್ಲವೆಂಬಂತೆ
ನೆಟ್ಟಗೆ ಹೊರಗೆ ನಡೆಯುವರು
ಏನು ಒಂದು ದಿನ ಒಂದು ಕಾಲವೇ
ನಾನೇನು ಸನ್ಯಾಸಿಯೇ, ನನಗೇನು ಆಸೆಯಿಲ್ಲವೆ?
ಏನನ್ನು ನೋಡಿಕೊಂಡು, ಯಾಕಾಗಿ, ಯಾರಿಗಾಗಿ ಬದುಕಿರಲಮ್ಮಾ
ಎನ್ನುವಾಗ
ಹೇಳೇಳಿ ಕೊಂಡು ಅಳುವಾಗ
ನೆಲವೇ ಬಾಯಿ ಬಿಟ್ಟು ನುಂಗಬಾರದೆ ಎನ್ನಿಸುತಿತ್ತು.
ಗಂಡನಾಗಿ ಬಾಳಂತೂ ಕೊಡಲಿಲ್ಲ
ಮನೆಹಾಳ!
ಅಷ್ಟಕ್ಕೆ ಸುಮ್ಮನಾಗದೆ
ಮೃತ್ಯುವಾಗಿ ತಿಂದುಕೊಂಡ ನನ್ನ ಮಗಳ
ಆಕಡೆ ಈಕಡೆ ಜನರು ಹೇಳುತಿದ್ದರೆ
ಮೈಯೆಲ್ಲಾ ಬೆಂಕಿ ಬೆಂಕಿಯಾಗುವುದು.
ಆದಿನ ಏನೇಳ್ತಿರವನ ಢೋಂಗಿಯ
ನೀರು ತಾ ಅನ್ನೋನಲ್ಲ
ಉಂಬಕಿಕ್ಕು ಅನ್ನೋನಲ್ಲವಂತೆ
‘ಇವನೇ ಏನಪ್ಪಾ ಅವನು?’ ಅನ್ನಂಗೆ ಮಾಡವ್ನೆ
ಎದ್ಯಾಗೊಂದು, ಮನಸಿನಾಗೊಂದು ಇಟ್ಟುಕೊಂಡ ಕಟುಕ
ರಾತ್ರಿಕೆ ಮಲಗಲು ರೊಪ್ಪಕೆ ಬಾರೆ ಎಂದನಂತೆ.
ಇದನ್ನು ನೋಡಿ
ಅವಳು, ಅವಳತ್ತೆ ಮಾವರು ಸಂತಸದಿಂದ ಉಬ್ಬಿಬಿಟ್ಟರಂತೆ
ದುಬ್ಬ ಜನರು
ಎಷ್ಟಾದರೂ, ಯಾರಿಗಾದರೂ ಆಸೆಯೆಂಬುದು ಕೆಟ್ಟದು ತಾನೆ.
ಅಬ್ಬಾ! ಇಷ್ಟು ದಿನಕೆ ನಿನಗೆ ಹೆಂಡತಿ ಬಗ್ಗೆ
ಮಮಕಾರ ಹುಟ್ಟಿತಲ್ಲ!
ರೊಪ್ಪಕೆ ಯಾಕೆ?
ರೊಪ್ಪಕೇ ಬೇಕಾದರೆ ಯಾರಾದರೂ ಹೋಗುವರು ಮಹಾರಾಯ
ಇನ್ನು ಮೇಲೆ ನೀನು ಮನೆಯಲ್ಲೆ ಮಲಗು ಎಂದರಂತೆ ಹಿರಿಯರು,
ಅದಕ್ಕೆ ಆ ಕಳ್ಳಾ! ಬೇಡ, ಬೇಡ
ಅವಳೇ ಅಲ್ಲಿಗೆ ಬರಲೆಂದು ಪಟ್ಟು ಹಿಡಿದುಕೂತನಂತೆ.
ಇವನೊಂದು ವಿಚಿತ್ರ!
ಏನಾದರೋ ಮಾಡಿಕೋ, ಎಲ್ಲಾದರೂ ಮಲಗು
ಇನ್ನು ಮೇಲಾದರೂ ‘ಅಪ್ಪಾ! ಪುಣ್ಯಾತ್ಮ!’
ಗಂಡ, ಹೆಂಡತಿ ನೀವು ನಮ್ಮ ಮುಂದೆ
ನಗು, ನಗ್ತಾ ಇರಬೇಕೆಂದರಂತೆ
ಹಿಂದಿನ ದಿನವೇ ಆ ಕಿರಾತಕ ಗುಂಡಿ ತೆಗೆದು ಬಂದಿದ್ದು
ಗೊತ್ತಿಲ್ಲದ ಯಜಮಾನರು,
ಅವನತ್ತ ಹೋದ ಮೇಲೆ ಇವಳತ್ತ ತಿರುಗಿ
ಇಂದಿಗೆ, ನಿನ್ನ ನಮ್ಮ ಹರಕೆಯು ಕೈಗೂಡಿತಮ್ಮ ತಿರುಮಳವ್ವ!
ದೇವರು ಕಣ್ಣು ಬಿಟ್ಟನಮ್ಮಾ
ಮುಖ್ಯ ಪ್ರಾಯದ ಮಗಳಾದ ನಿನ್ನ ಬಿಸಿಯುಸಿರು ತಟ್ಟಿ
ಅವನು ಕರಗಿದನಮ್ಮಾ
ಇನ್ನು ಮೇಲೆಲ್ಲಾ ಸರಿಹೋಗುವುದು
ಯಾರಿಗೆ ಬೇಕಾಗಿದೆಯಮ್ಮಾ
ಸದ್ಯ! ನೀವೊಂದು ಚೆನ್ನಾಗಿದ್ದರೆ ಸಾಕು
ಹೋಗು, ಹೋಗಮ್ಮಾ!
ನೀನೇನು ಈದಿನ ಕೆಲಸ ಗಿಲಸ ಅಂತ ಹಚ್ಚಿಕೊಳ್ಳಬೇಡ
ಕೆಲಸಕ್ಕೆಲ್ಲಿಯಪಾರು
ಸಾಯೋ ತನಕ ಇದ್ದಿದ್ದೆ
ಹೋಗು ಹೋಗೆಂದರಂತೆ ಯಥಾರೀತಿಯ ಜನರು
ಎಂದೂ ಇಲ್ಲದ ಗಂಡ ಬಾರೆ ಅಂದ ತಾರೆ ಅಂದ ಅಂದು
ಇದು ಮಳ್ಳ, ಹಿಗ್ಗಿ ಹೀರೆಕಾಯಿಯಾಗಿ
ಸ್ನಾನ ಮಾಡೋದೇನೇಳ್ತಿ
ಹೂವುಮುಡಕೊಂಡು, ಒಡವೆ ವಸ್ತ್ರ ಹಾಕ್ಕೊಂಡು
ಹಬ್ಬದ ಸಂಭ್ರಮದಿ
ಎಷ್ಟೊತ್ತಿಗೆ ಬೈಗಾಗುತ್ತೋ, ಯಾವಾಗ ನನ್ನ ಗಂಡನತ್ತಿರ
ಹೋದೆನೋ
ಎಂದು ಒಂದೇ ಸಮನೆ ಹೊರಗೆ ಒಳಗೆ ಸುಳಿದಾಡುತ್ತಿದ್ದರೆ
ನೋಡಿದ ಜನರೆಲ್ಲಾ
‘ಏನವ್ವಾ ತಿರುಮಳವ್ವ! ಏನು ವಿಶೇಷ’
ಇವತ್ತೇನೂ ಮದಲಿಂಗಿತ್ತಿಯಂಗೆ ಕಾಣಿಯಲ್ಲೆ ಅಂದರೆ
ರೋಮ ರೋಮದಲ್ಲಿ ನವಿರಿನ ಮುಳ್ಳುಗಳೆದ್ದು
ಏನು ಹೇಳ ಬೇಕೆಂಬುದೆ ತೋಚದಂತಾಗಿ
ನಾಚಿಕೊಂಡು ಒಳಗೆ ಓಡಿ ಹೋಗುತ್ತಿದ್ದಳಂತೆ.
ಅತ್ತ ಹೊತ್ತು ಥಣಾರ್ ಅನ್ನೋದೆ ತಡ
ಉಣ್ಣುತ್ತ ಕೂತರೆ ತಡವಾಗ ಬಹುದೆಂದು
ಇಬ್ಬರಿಗೂ ಬುತ್ತಿಯ ಅಲ್ಲಿಗೆ ತುಂಬಿ ಕೊಂಡು
ಒಂದೆ ಹೆಜ್ಜೆಗೆ ಹಾರಿ ಹೋದಳಂತೆ
ಜೀವಂತ ತಿರುಗಿ ಬರಲಿಲ್ಲವಂತೆ.
ತಾನಂದು ಕೊಂಡಂತೆ ಎಲ್ಲವೂ ನಡೆವುದ ಕಂಡಾಗ
ಮುಖದಲ್ಲಿ, ಮಾತಿನಲ್ಲಿ ಒಂದಿಷ್ಟೂ ಬಿಟ್ಟು ಕೊಡದ
ಆ ರಕ್ತ ಪಿಪಾಸಿ
ಒಳಗೊಳಗೆ ಸಂತಸಪಟ್ಟವನೆ.
ಹಾಲು ಅನ್ನ ಉಣ್ಣವರು, ಒಳ್ಳೆ ಮನಸಿನವರು
ಮನೆಯಾಗಂತ ಹೆಂಡತಿ ಇಟ್ಟುಕೊಂಡು
ಏನಿದು ನಿನ್ನ ಮೆಟ್ಟಿಡಿಯ ಬದುಕು
ಆ ಹುಡುಗಿಗೆ ಅನ್ಯಾಯ ಮಾಡಿದರೆ
ನಿನಗೆ, ಒಳ್ಳೆಯದಾಗುವುದೇನೋ?
ನಮಗೇನೋ ನಿನ್ನ ಬದುಕು ಸರಿಕಾಣಲಿಲ್ಲ ಬಿಡು! ಎಂದು
ಛೀಮಾರಿ ಹಾಕವರೆ….
ಅದಕೆ, ಇವಳಿದ್ದರಲ್ಲವೆ ಇದು ಎಂದು
ಅವಳನ್ನೇ ಮುಗಿಸಲು ತೀರ್ಮಾನ ಮಾಡವನೆ.
ರಕ್ತಸ, ನಗುತ್ತ, ನಲಿಯುತ್ತ ಉಂಡವನೆ
ನೀನೂ ಉಣ್ಣು ಅಂದವನೆ
ಗಂಡನೇ ನಂಬಿಸಿ ಕುತ್ತಿಗೆ ಕೊಯ್ಯವನೆಂದರೆಯಾರಾದರೂ ನಂಬುವರೆ?
ಯಾಕೋ ಆ ದಿನ ರೊಪ್ಪದ ಕುರಿಗಳು ಅರಚೇ ಅರಚುತ್ತಿದ್ದವಂತೆ
ಕಾವಲು ನಾಯಿ ಕೂಡ ಏನೋ ಕಂಡಂತೆ ಒಂದೇ ಸಮನೆ
ಅಳುತ್ತಿತ್ತಂತೆ.
ಥಕ್ಕಲು ಜಾತಿ ಹುನ್ನಾರ ಮಾಡಿದಂತೆ
ಸುಳ್ಳು, ಸುಳ್ಳು, ಕುರಿಗಳ ತಡಕಾಡಿದಂತೆ ಮಾಡಿ
ಏ! ಒಂದು ಕುರಿ ತಪ್ಪಿಸ್ಕೊಂಡಿದೆ
ಮನೆಯವರಿಗೆ ತಿಳಿದರೆ ಜಾಮಿಟ್ಟಾಡಿಸಿ ಬಿಡ್ತಾರೆ
ನಾನೂ ಒಬ್ಬನೆ ನೀನೂ ಬಾರೆ
ಜಲ್ದು, ಹುಡುಕ್ಕೊಂಡು ಬಂದು ಬಿಡೋಣಯೆಂದು
ಹೊರಡಿಸಿ ಕೊಂಡು ಬಂದು
ನಿಗದಿತ ಜಾಗವ ತಲುಪವನೆ.
ನಾನು ಹೀಗೆ ಬರುವೆ ನೀನು ಹಾಗೆ ಬಾರೆಂದು
ಸೊಪ್ಪು, ಸೆದೆ ಮುಚ್ಚಿ ಕಾಣದಂತೆ ಮಾಡಿದ
ಖೆಡ್ಡಾದಂತ ಗುಂಡಿಗೆ ಕೆಡವವ್ನೆ
ಕಾರೆಂಬ ಕತ್ತಲಲ್ಲಿ
ಘೋರವಾದ ಅಡವಿಯಲ್ಲಿ
ಅಡುಮುರ್‍ಕೊಂಡು ಬಿದ್ದವಳ
ಏಳಲು ಕೊಡದೆ ಏನಿದುಯೆಂದು ತಿಳಿಯಲು ಬಿಡದೆ
ಉಸಿರು ತಿರುಗಿಸಿ ಕೊಳ್ಳಲು ಅವಕಾಶ ಕೊಡದಂತೆ
ಗಬ ಗಲ ಮಣ್ಣ ನೆಳೆದು ಮಟ್ಟಸ ಮಾಡವ್ನೆ
ಮಳ್ಳಿಯಂಗೆ ಬಂದು ಬಿದ್ದು ಕೊಂಡವ್ನೆ
ಹೇಳಿದರೆ ನೀವ್ಯಾರು ನಂಬೋದಿಲ್ಲಾರಿ
ನೋಡೋದಕ್ಕೆ ಅಂಗಿದಾನೆ ಕಳ್ಳ ಕೊರಮ
ಶಿವಾ ಶಿವಾ!
ಗುಂಡಿಯೊಳಗೆ ಬಿದ್ದ ನನ್ನ ಕಂದಾ!
ಎಷ್ಟೊಂದು ಅತ್ತು, ಕರೆದಿರ ಬೇಕು
ನೋವಿನಲ್ಲಿ ಹೇಗೆ ಬೋರಾಡಿರ ಬೇಕು
ಪ್ರಾಣ ಹೋಗುವಾಗ ಎಷ್ಟೊಂದು ಒದ್ದಾಡಿ, ಒದರಾಡಿ
ಅಂಪರ್‍ಲಾಡಿರಬೇಕು
ಅಯ್ಯೋಯ್ಯೋ! ತಿರುಮಳವ್ವ! ನನ್ನಮ್ಮಾ! ನನ ಕಂದಾ!
ನಿನಗೆಂತಾ ಸಾವು ಬಂತೆ! ನಿನಗೆಂತಾ ಸಾವು ಬಂತೆ!
ಈ ಪಾಪಿ ಹೊಟ್ಟಾಗೇ ಯಾಕೆ ಹುಟ್ಟಿ ಬಂದೆ.
ಇಲ್ಲಮ್ಮಾ! ಇಲ್ಲಮ್ಮಾ!
ಇವನು ತಾಯಿ ಹೆತ್ತ ಮಗನಲ್ಲಮ್ಮ
ನಿಜವಾಗಿ ಮನುಷ್ಯನಮ್ಮಾ
ಎಲವೋ! ಕರ್ಮಿಷ್ಟಿ
ನನ್ನ ಮಗಳು ನಿನಗ್ಯಾವ ಕೇಡನ್ನು ಮಾಡಿದ್ದಳೋ
ಗರತಿ, ಅತ್ತೆ ಮಾವರ ಮಾತಂತೆ ನಡೆಯುತ್ತಾ
ಹೊಸಿಲು ದಾಟದಂಗೆ
ನೋವೆಲ್ಲಾ ನುಂಗಿಕೊಂಡು
ಕೊಟ್ಟವರು, ತಂದವರಿಬ್ಬರಿಗೂ ಕೀರ್ತಿಯ ತಂದ
ಹಸುಮಗುವಿನ ಮನಸ್ಸಿನ ನನ್ನ ಕಂದನ ಕೊಲ್ಲಲು
ನಿನಗಿನ್ನೆಂಗೆ ಮನಸು ಬಂತೋ, ನಿನ್ನಂತ ಜನರಿಗೆ ಯಾವ
ಶಿಕ್ಷೆಸಾಟಿ?
ಹೆಂಡತಿ ಯಂತ ಅಲ್ಲದಿದ್ದರೂ
ಅಮಾಯಕ ಹೆಣ್ಣೊಂದ ಕೊಲ್ಲುವಾಗ
ನಿನಗೆ ಕರುಳು ಚುರ್ರೆನ್ನಲಿಲ್ಲವೇನೋ?
ನಿನಗೆ ಸಾಮಾನ್ಯ ಸಾವು ಬರುತ್ತೇನೋ ?
ವತಾರಿಕೆದ್ದು ಮನೆಗ್ಹೋದಾಗ
ಎಲ್ಲಲಾ ತಿರುಮಳವ್ವ? ಬರಲಿಲ್ಲ! ಅಂದರೆ
ಏನೇಳ ಬೇಕಿವನು?
ನನಗೇನು ಗೊತ್ತು
ಯಾವನನ್ನು ಹೊತ್ತುಕೊಂಡು ಹೋದಳೋ ಎಂದನಂತೆ
ತಿಕತಿರುವಿ ಕೊಂಡು ಹೋದನಂತೆ.
ಆಂ! ಇದೇನಲಾ ಇಂಗೇಳ್ತಿಯಾ’ ಯೆಂದವರೆ
ಬಯಲಿಗೆ ಬಿಡದೆ
ಮನೆಮಂದಿಯೆಲ್ಲಾ ಒಳಗೊಳಗೆ ಆ ಬಾವಿ ಈ ಬಾವಿ
ಆ ಮರ ಈ ಮರ, ಆ ಮನೆ ಈ ಮನೆ, ಆ ಊರು ಈ ಊರು
ತಡಕಾಡವರೆ
ಇದ್ದರೆ ತಾನೇ ಸಿಕ್ಕೋದು
ಕುರಿ ದನದ್ಹುಡುಗರು
ನೆನ್ನೆ ಆವಣ್ಣಾ ತೆಗೆಸಿದ ಚಿಲುಮೆಯಲ್ಲಿ
ನೀರು ಗೀರು ಬಿದ್ದವೇನೋ ನೋಡೋಣ ಬರ್ರೋ ಎಂದು
ನಾನು ಮುಂದು ತಾನು ಮುಂದು ಎಂದು ಓಡೋಡಿಬಂದವರೆ.
ಬಂದು ನೋಡಿದರೆ, ಏನೈತೆ?
ಚಿಲುಮೆಯು ಮುಚ್ಚೈತೆ, ಸೊಪ್ಪು ಸದೆ ಹರಡೈತೆ
ಯಾರೋ ಸೂಳೆಮಕ್ಕಳು, ಹೊಟ್ಟೆ ಕಿಚ್ಚಿ ನವರು
ಮುಚ್ಚಿ ಹಾಕವರೆ
ಬರ್ರೋ ಇನ್ನೊಮ್ಮೆ ನೋಡೋಣ ಎಂದು ತೋಡವರೆ,
ಅಂಗೆ ತೋಡುತ್ತ, ತೋಡುತ್ತ
ಹೆಣ್ಣಿನ ಹೆಣವ ಕಂಡವರೆ
ಹೆದರಿ, ಗಾಬರಿ ಬಿದ್ದು
ಊರಿಗೆ ಹೋಗಿ ಸುದ್ದಿಯ ತಿಳಿಸವರೆ
ಜನ ಬಂದು ನೋಡಿದರೆ ‘ತಿರುಮಳವ್ವ’!
*****