ಕರ್ತವ್ಯದ ನೆಪದಲ್ಲಿ
ಅತ್ಯಾಚಾರ ಮಾಡುವ ಹೆತ್ತವರು
ಕತ್ತೆಯೊಂದಕ್ಕೆ ಗಂಟು ಹಾಕಿದರೂ
ಏನು ಮಾಡುವುದು ಹಣೆ ಬರಹವೆಂಬ
ತಲೆ ಬುಡವೇ ಇಲ್ಲದ ಬುದ್ಧಿಗೇಡಿ ತತ್ವಕ್ಕೆ ಶರಣಾಗದೆ
ನಿಷ್ಠೆ, ಒಳ್ಳೆತನದ ಸೋಗು ಹಾಕಿ
ಬೆಂಕಿ ಬಿದ್ದ ಹತ್ತಿಯಂತೆ ಹಾಳಾಗಲೊಲ್ಲದೆ
ಪ್ರೇತ ಬದುಕಿಗೆ ತಲೆ ಕೊಡದೆ
ಹಿತ ಶತ್ರುಗಳ ಪಂಜರದಿಂದ ಪಾರಾಗಿ ಒಲುಮೆಯ ಬದುಕನರಸಿ
ಹೊರ ಹೊರಟೆ.
ಬೆಳದಿಂಗಳಲ್ಲಿ ಉಂಡು
ಸವಿಯಾದ ತಾಂಬೂಲ ತಿಂದು
ಕೆಂಪು ತುಟಿಗಳ ಸ್ಪರ್ಧೆ ನಡೆಸಿದೆವು ಸುಖದ ಬಿಸಿಯನ್ನು ಸವಿದೆವು :
ಇರುಳು ಹಗಲುಗಳ ಉದ್ದ ಗಾತ್ರಗಳನಳೆದೆವು
ಕುಣಿ ಕುಣಿಯುತ್ತ ಬಂತು ಬೇಸಿಗೆ
ನೀರು ನೆರಳನ್ನು ಹಾರೈಸಿ
ಅತ್ತಿತ್ತ ನೋಡಿದರೆ
ಊರು ತುಂಬಾ ಬರಿ ಜಾಲಿ, ಬ್ಯಾಲ
ಬೇಲಿಯೊಳಗೆ ಭದ್ರವಾಗಿರುವ ತೋಟ ತುಡಿಕೆಗಳು
ಮುಕ್ತ ಆಶ್ರಯ ತಾಣ ಒಂದೂ ಕಂಡು ಬರಲಿಲ್ಲ.
ಕೆಟ್ಟ ಕೆಟ್ಟ ಕನಸುಗಳು ಬೀಳಲಾರಂಭಿಸಿ
ಭಯವಾಗಿ ನಡುಕ ಗದಗುಡಿಸ ತೊಡಗಿತು.
ಪಾಪ ಪ್ರಜ್ಞೆಯ ಭೂತ ನೃತ್ಯವು ಸಾಗಿ
ಬಾರಿ ಬಾರಿಗೂ ತಪ್ಪಾಯಿತೆನಿಸಿತು
ಮನಸು ‘ತಬ್ಬಲಿ’ ‘ತಬ್ಬಲಿ’ ಯೆಂದು ಚೀರ ತೊಡಗಿತು.
ಅನ್ನ ವಿಷವಾಯಿತು
ಬದುಕು ನಿಸ್ಸಾರವಾಯಿತು
ಅಂಗಿದ್ದರೇನು? ಇಂಗಿದ್ದರೇನು?
ಹ್ಯಾಗಿದ್ದರೇನು?
ಕರೆವವರೆ? ಕಳುವವರೆ?
ನೋಡುವವರೆ? ನಲಿವವರೆ?
ನಮಗೆ ಯಾರಿದ್ದಾರೆ?
‘ಇದೊಂದು ಜೀವನಾನ?’ ಎನ್ನಿಸಿ
ಆಸೆಯೇ ಇಮರಿ ಹೋಯಿತು.
ಅನ್ನೋ ಹಾಗಿಲ್ಲ ಅನುಭವಿಸೋ ಹಾಗಿಲ್ಲ
ಬನ್ನ ಬವಣೆ ಅಂತಗೊಣಗುವಂತಿಲ್ಲ
ಚೆನ್ನಿಗ ನನ್ನವನಿಗೂ ಹೀಗೆ ಅನ್ನಿಸುತ್ತಿರಬೇಕು ಎಲ್ಲಾ!
*****