ನಿಸಾರ್ ಕಾವ್ಯಬುಗ್ಗೆ : ಥೇಟ್ ಜುಲೈ ತಿಂಗಳಿನ ಶಿವಮೊಗ್ಗೆ

ನಿಸಾರ್ ಕಾವ್ಯಬುಗ್ಗೆ : ಥೇಟ್ ಜುಲೈ ತಿಂಗಳಿನ ಶಿವಮೊಗ್ಗೆ

ಸಾಹಿತ್ಯದಲ್ಲಿ ಮೀಸಲಾತಿ ಬೇಕೆ? ಇಂಥದೊಂದು ಪ್ರಶ್ನೆ ಆಗಾಗ ಮಿಂಚಿ ಮಾಯವಾಗುತ್ತಲೇ ಇರುತ್ತದೆ. ಮೀಸಲಾತಿ ಬೇಕೆ ಬೇಡವೇ ಎನ್ನುವ ಬಗ್ಗೆ ಚರ್ಚೆಗಳು ನಡೆದು ಕಾವು ಕಳೆದುಕೊಳ್ಳುತ್ತವೆ. ಇಷ್ಟಕ್ಕೂ ಮೀಸಲಾತಿ ಕಲ್ಪಿಸಲಿಕ್ಕೆ ಸಾಹಿತ್ಯವೇನು ಒಂದು ಸಮಾಜವಲ್ಲ ಅದೊಂದು ಸಾಧನ. ಇಲ್ಲಿ ಕಾಯುವ ಕುರುಬನೂ ಇಲ್ಲ ಅಂಡಲೆಯುವ ಕುರಿಗಳೂ ಇಲ್ಲ. ಸಾರಸ್ವತ ಲೋಕದ್ದು ಏಕರೂಪಿ ನಾಗರಿಕ ಸಂಹಿತೆ. ಇಲ್ಲಿ ಎಲ್ಲರೂ ಅರಸರು, ರಸಿಕರು. ಹೀಗಿದ್ದೂ ಕೆಲವರು ತಮಗೆ ತಾವೇ ಮೀಸಲಾತಿಯನ್ನು ಕಲ್ಪಿಸಿಕೊಳ್ಳುತ್ತಾರೆ, ಸಮುದಾಯಗಳಾನ್ನು ಸೃಷ್ಟಿಸಿಕೊಳ್ಳುತ್ತಾರೆ. ಆ ಮೀಸಲಾತಿ- ಸಮುದಾಯಗಳ ಕತ್ತಿ- ಗುರಾಣಿಯ ಮೂಲಕವೇ ಜನಪ್ರಿಯತೆಯ ಬೆಳಕು- ಪದವಿಗೆ ಹತ್ತಿರಾಗಲು ಹವಣಿಸುತ್ತಾರೆ.

ಮಹಿಳಾ ಸಾಹಿತಿ ಅಂತಲೋ, ಬಂಡಾಯ-ದಲಿತ ಅಂತಲೋ, ಅಲ್ಪ ಸಂಖ್ಯಾತ ಅಂತಲೋ- ಲೇಬಲ್ ಹಚ್ಚಿಕೊಂಡ, ಆ ಲೇಬಲ್ಲನ್ನೇ ನೆಚ್ಚಿಕೊಂಡ ಸಾಹಿತಿಗಳಿಗೆ ಕನ್ನಡ ಸಂದರ್ಭದಲ್ಲಿ ಬರವಿಲ್ಲ. ಅಂಥವರ ಬಂಡಾಯ ಕಾಂಟೆಸ್ಸಾದಲ್ಲಿ ಕರಗಿದ್ದನ್ನು ವಿಶ್ವವಿದ್ಯಾಲಯಗಳಲ್ಲಿ-ಪರಿಷತ್ತುಗಳಲ್ಲಿ ಐಕ್ಯವಾದುದನ್ನು ಕನ್ನಡಿಗರು ಬಲ್ಲರು. ಆದರೆ, ನಿಜವಾದ ದಲಿತ- ಬಂಡಾಯ ಸಾಹಿತ್ಯ ಸೃಷ್ಟಿಸಿದ ದೇವನೂರು ಮಹಾದೇವರಂಥ ಪ್ರತಿಭಾವಂತ ಹಾಗೂ ಸಂಕೋಚದ ಬರಹಗಾರರು ಅಪರೂಪಕ್ಕೆ ಕಾಣ ಸಿಗುತ್ತಾರೆ. ಅವರಿಗೆ ಮೀಸಲಾತಿ ಬೇಕಿಲ್ಲ ಪದವಿ ಪ್ರಭಾವಳಿಗಳ ಹಂಗಿಲ್ಲ. ಪ್ರಚಾರಕ್ಕಾಗಿ ಅಡ್ಡದಾರಿ ಹಿಡಿಯಬೇಕಾದ ಜರೂರತ್ತೂ ಇಲ್ಲ. ಬರವಣಿಗೆಯೇ ಅವರ ಬಂಡವಾಳ. ಓದುಗರೇ ಜೀವಾಳ. ಈ ವರ್ಗದಲ್ಲಿ ಹೆಚ್ಚಿನ ಜನ ಕಾಣ ಸಿಗಲಿಕ್ಕಿಲ್ಲ. ಇಂಥ ಅಪರೂಪದ ವರ್ಗಕ್ಕೆ ಸೇರಿದವರು ನಿಸಾರ್ ಅಹಮದ್. ದೇವನೂರು ಕತೆಗಾರ, ನಿಸಾರ್ ಹೆಸರು ಮಾಡಿದ್ದು ಪದ್ಯದಲ್ಲಿ.

ಪ್ರೊ.ಕೆ.ಎಸ್.ನಿಸಾರ್ ಅಹಮದ್ ಎಂದು ಜನಪ್ರಿಯರಾದ ಕೊಕ್ಕರೆ ಹೊಸಹಳ್ಳಿ ಷೇಕ್ ಹೈದರ್ ನಿಸಾರ್ ಅಹಮದ್ ಹದಿನಾರಾಣೆ ಕವಿ. ಪದ್ಯದೊಂದಿಗೆ ಗದ್ಯ, ವಿಮರ್ಷೆ, ಅನುವಾದ, ಅಂಕಣ… ಹೀಗೆ ಕಾಲಕಾಲಕ್ಕೆ ಕಾಡಿದ್ದನ್ನು ನಿಸಾರ್ ಬರೆದಿದ್ದಾರಾದರೂ ಅವರ ಎಲ್ಲ ಸೃಜನಶಕ್ತಿಯನ್ನು ಹೀರಿಕೊಂಡಿದ್ದು ಕಾವ್ಯ ಪ್ರಕಾರ ಮಾತ್ರ. ಬರವಣಿಗೆಯಲ್ಲಿ ಎದ್ದು ಕಾಣುವುದು ಪದ್ಯ. ನಿಸಾರ್ ಕವಿತೆ ಪಕ್ಕದ ಮನೆಯ ಹುಡುಗಿಯಂತೆ; ಮುಗಿಲ ಮಲ್ಲಿಗೆ ಅನ್ನಿಸುವಷ್ಟು ಹತ್ತಿರ, ತೋರುಕೈಗಳ ಮುಲಾಜಿಲ್ಲದೆ ನೇರ ಓದುಗನಿಗೇ ನಿಲುಕುವಷ್ಟು ಆಪ್ತ. ಆದರೆ ಅವರ ಗದ್ಯ ಅಪರಿಚಿತ ಯುವತಿಯಂತೆ ಕೊಂಚ ಗಂಭೀರ. ಪದ್ಯದ ಸರಳತೆ ಗದ್ಯದಲ್ಲಿ ಕಾಣುವುದಿಲ್ಲ. ಇದಕ್ಕೆ ಉದಾಹರಣೆಯಾಗಿ ‘ಅಚ್ಚುಮೆಚ್ಚು’ ಪುಸ್ತಕದ ಲೇಖನಗಳನ್ನು ನೋಡಬಹುದು- ಹೂರಣ ಹಾಗೂ ಭಾಷೆಯ ಮಟ್ಟಿಗೆ ‘ಅಚ್ಚುಮೆಚ್ಚು’ ಲೇಖನಗಳು ಅಚ್ಚುಕಟ್ಟು ನಿಜ, ಆದರೆ ಅವು ಆಪ್ತ ಅನ್ನಿಸುವುದಿಲ್ಲ.
ಅಂದರೆ ನಿಸಾರ್ ವಿಫಲ ಲೇಖಕರು ಎಂದಲ್ಲ. ಅವರ ಪದ್ಯದ ಗುಂಗಲ್ಲಿ ಗದ್ಯ ರುಚಿಸುವುದಿಲ್ಲ ಅಷ್ಟೇ. ಇಷ್ಟಕ್ಕೂ ನಮಗೆ ಕವಿ ನಿಸಾರ್ ಆಪ್ತರೇ ಹೊರತು, ಲೇಖಕ ನಿಸಾರರಲ್ಲ.

‘ಅನ್ಯರೊರೆದುದನೆ, ಬರೆದುದನೆ ನಾ ಬರೆಬರೆದು
ಬಿನ್ನಗಾಗಿದೆ ಮನವು; ಬಗೆಯೊಳಗನೇ ತೆರೆದು
ನನ್ನ ನುಡಿಯಳೆ ಬಣ್ಣ ಬಣ್ಣದಲಿ ಬಣ್ಣಿಸುವ
ಪನ್ನತಿಕೆ ಬರುವನಕ ನನ್ನ ಬಾಳಿದು ನರಕ’

– ಎಂದು ಕೊರಿಗಿದ ಆಡಿಗರಂತೆಯೇ, ಪದ್ಯದ ನಂಟಿನ ಮೊದಲ ದಿನಗಳಿಂದಲೂ ತನ್ನತನಕ್ಕಾಗಿ ಹಾತೊರೆದ ಕವಿ ನಿಸಾರ್.

‘ನನ್ನ ದನಿ, ನನ್ನದೇ ಆದ ದನಿ. ನನ್ನೆದೆಯ ಜೀವಮಣಿ
ಎಲ್ಲಿರುವುದೊ! ಹ್ಳದಯಗಹ್ವರದಾವ ಹಳಸುಗತ್ತಲೆಯಲ್ಲಿ
ಕೆಡೆಯುತಿಹುದೊ!
ಭೂತಳದ ಶಿಲೆಯಲ್ಲಿ ಗೆರೆಯಾದ ಜಲದಂತೆ
ಯವಡೆಯ ತಡಿಯಲ್ಲಿ ಸೆಡೆಯುತಿಹುದೊ’

-ಎನ್ನುವ ತುಡಿತ ಹಾಗೂ,

‘ನಾನು- ದಿಗ್ದಿಗಂತದ ಬೆಳ್ಳಿಗೆರೆಗೆ ಆಶಿಸಿದವನು
ಕಲ್ಲಲ್ಲಿ ಸಿರಿ, ನೆಲದಲ್ಲಿ ಝರಿ, ಕಾಡೊಳಗು ದಾರಿಯನು ಕನಸಿದವನು
ನಗುವ ಭಡವರ ನಡುವೆ ಎಡವಿಬಿದ್ದರು, ಎದ್ದು
ಗೆದ್ದ ಬರುವೆನು ಎಂದು ಕಾರವಾನಿನ ಸೇನೆ ಜೊತೆಗೆ ಹೊರಟವನು’

-ಎನ್ನುವ ಮಹತ್ವಾಕಾಂಕ್ಷೆ ನಿಸಾರರ ಕವಿತೆಗೆ ಕಸುವು ತುಂಬಿದೆ. ‘ಮಣ್ಣನಲಿ ಬೇರಿರುವ ಸ್ವಂತಿಕೆಯೆ ಸಾಕೆನಗೆ/ ಹೆಮ್ಮಯಲಿ ತುಳಿಯುವೆನು ‘ನನ್ನ ದಾರಿ’ ಎನ್ನುವ ಕವಿಗೆ ತನ್ನ ಸ್ಪಷ್ಟ ಗುರಿಯ ಅರಿವಿದೆ.

ಅನೇಕ ಜನಪ್ರಿಯ ಕವಿಗಳಿಗಿಂತ ಹೆಚ್ಚು ಅರ್ಥಪೂರ್ಣವಾಗಿ ಹಾಗೂ ಅರ್ಥವಾಗುವಂತೆ ಬರೆದಿರುವುದು ನಿಸಾರರ ಅಗ್ಗಳಿಕೆ. ಅವರ ಪದ್ಯಗಳಲ್ಲಿ ಎದ್ದು ಕಾಣುವುದು ಜೀವನ ಪ್ರೀತಿ ಹಾಗೂ ಮುಗ್ಧತೆ- ‘ಸರ್ ಸಿ.ವಿ.ರಾಮನ್ ಸತ್ತ ದಿನ’ ಪದ್ಯ ನೆನಪಿಸಿಕೊಳ್ಳಿ. ರಾಮನ್ ಸಾವು ತೋಟದ ಮಾಲಿಯ ಮೇಲೆ ಯಾವುದೇ ರೀತಿಯ ಪರಿಣಾಮ ಉಂಟು ಮಾಡದೆ ಇರುವ ಬಗೆಗೆ ಬೆರಗುಗೊಳ್ಳುತ್ತಾ ಬರೆವ ಕವಿ, ನಮಗೆ ಅರಿವಿಲ್ಲದಂತೆಯೇ ವಿಷಾದವೊಂದನ್ನು ದಾಟಿಸಿಬಿಡುತ್ತಾರೆ. ಕಾಂಪೌಂಡಿನಲ್ಲಿ ಬಿದ್ದ ರಸ್ತೆಯಲ್ಲಿನ ತೆಂಗಿನ ಮರದ ನೆರಳು ಹಾಗೂ ಆ ಮರದ ನೆರಳಿಗೆ ನಿಂತ ಕಾರು- ಕವಿಯ ಚಿಂತನೆಗೆ ಗ್ರಾಸವಾಗುತ್ತದೆ. ಜಾಗತಿಕ ದೊಡ್ಡಣ್ಣ ಅಮೆರಿಕದ ಕುರಿತ ಅಮಲು-ಮೆಚ್ಚುಗೆ-ಟೀಕೆಗಳನ್ನು ಕಾವ್ಯವಾಗಿಸುವಷ್ಟೇ ಸಮರ್ಥವಾಗಿ, ‘ಕನ್ನಡವೆಂದರೆ ಬರಿ ನುಡಿಯಲ್ಲ ಹಿರಿದಿದೆ ಅದರರ್ಥ’ ಎಂದು ನಿಸಾರ್ ಬರೆಯುತ್ತಾರೆ. ಸರಹದ್ದುಗಳಿಲ್ಲದ ಆಕಾಶದಂತೆ ಚೌಕಟ್ಟುಗಳಿಲ್ಲದ ಕವಿಯಾಗಿ ನಿಸಾರ್ ಕಾಣಿಸುತ್ತಾರೆ.

‘ನಿಸಾರ್ ಸಹಜ ಕವಿ’ ಎನ್ನುವುದು ಪುತಿನ ಹಾಗೂ ಅಡಿಗರ ಹೇಳಿಕೆ. ನಿಸಾರ್ ಕಾವ್ಯದ ಜೀವದನಿ ವಿಡಂಬನೆ ಎನ್ನುವುದು ವಿಮರ್ಶಕರ ಸಂಶೋಧನೆ. ಈ ನಿಸಾರ್ ರಸಿಕ ಕವಿಯೂ ಹೌದು ಎನ್ನುವುದು ಅವರ ಕವಿತೆಗಳಲ್ಲಿ ಒಡೆದು ಕಾಣುವ ಗುಟ್ಟು. ನಿಸಾರರ ಸಹಜ ಕಾವ್ಯ ಹಾಗೂ ವಿಡಂಬನೆ ಕಾವ್ಯದ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಆದರೆ ಅವರ ಕಾವ್ಯದ ಒಂದು ಭಾಗವಾದ ತುಂಟತನ ಮತ್ತು ರಸಿಕತೆಗಳು ಮರೆಯಲ್ಲೇ ಉಳಿದಿವೆ. ಅವರ ಸಮಕಾಲೀನ ಕವಿಗಳು ತಾಯ್ತನವನ್ನು ಬಣ್ಣಿಸುತ್ತಾ, ಹೆಣ್ಣಿನ ಮತ್ತೊಂದು ಮುಖವನ್ನು ಚಿತ್ರಿಸುವುದು ಪಾಪ ಎಂದು ನಂಬಿದ್ದ ಸಂದರ್ಭದಲ್ಲಿ ನಿಸಾರ್ ಹರಯದ ಆಕರ್ಶಣೆಯನ್ನು ಮನಸ್ಸಿನ ಚಾಂಚಲ್ಯವನ್ನು ಪದಗಳಲ್ಲಿ ಹಿಡಿದಿಟ್ಟರು. ಅವರ ಪದ್ಯದಲ್ಲಿನ ಕಾಮ ಕಣ್ಣು ಕುಕ್ಕುವಂತಹುದಲ್ಲ ಅಶ್ಲೀಲವೂ ಅಲ್ಲ. ಅದು ಕಲೋದ್ಯಾನದಲ್ಲಿ ಅರಳಿದ ಕಾಮಕಸ್ತೂರಿ. ಹೂವಿನ ಅಂದ ಕೆಡದಂತೆ ಬಾಯಿ ತುಂಬ ಜೇನು, ಕಾಲುಗಳಿಗೆ ಪರಾಗ ರೇಣು ಕಚ್ಚಿಸಿಕೊಂಡು ಹಾರುವ ದುಂಬಿಯಂತಹುದು ನಿಸಾರರ ಕಾವ್ಯ. ಅವರ ಈ ರಸಿಕತೆ ಅರ್ಥವಾಗಲಿಕ್ಕೆ ‘ಮನೋರಮಾ’, ‘ಪ್ರ್‍ಆಯ, ‘ವೈಜಯಂತಿ’, ‘ಎಲ್ಲಿದ್ದೆಯೋ ಹುಡುಗ’, ‘ನಕ್ಷತ್ರಿಕ’, ‘ಪವಾಡ’. ‘ನಿರೂಪಣೆ ಎಂದರೆ ಕತ್ತಿನ ಹಿಂಭಾಗ’ದಂಥ ಕವಿತೆಗಳನ್ನು ಓದಬೇಕು. ಕವಿಯ ತುಂಟತನದ ಒಂದು ಉದಾಹರಣೆ ನೋಡಿ:

‘ಇಕ್ಕಟ್ಟು ಸಂಧಿಯಲಿ ದಿಕ್ಕೆಟ್ಟ ಮೊಲ ಹೊಕ್ಕು
ಕಚಗುಳಿಯನಿಟ್ಟಂಥ ಮುಲುಮುಲಾಟ
ಅಮ್ಮ ಕುಚ್ಚಿಸಿಕೊಂಡ ಕೈಯ ಮೆಲಿನ ಕೆರೆತ,
ಕಾಂಪೌಂಡು ಪಾತಿಯಲಿ ಕೋತಿ ಕಾಟ’

– ಮೇಲಿನ ಈ ಕವಿತೆಯಲ್ಲಿ ನಿಸಾರ್ ಹೊಸತಾಗಿ ಕಾಣಸುತ್ತಾರೆ ಅಲ್ಲವೇ?

‘ಮನೋರಮಾ’ ಪದ್ಯದಲ್ಲಿನ ಪುಟಿಯುವ ಜೀವಂತಿಕೆ ಅಪರೂಪದ್ದು:
‘ಮನೋರಮಾ ಮನೋರಮಾ;
ಸಾಲದೇನೆ ನಿನ ಹೆಸರೆ? ಮಲಗೋಬದ ಗಮಗಮ
ತುಟಿಯಗಲಿಸಿ ನಕ್ಕೆ:
ಮುಂಜಾವದ ಐದಕ್ಕೆ,
ಮಿಂಚಾದವೆ ಕೆರೆಯಂಚಿಗೆ ಹಾಲಕ್ಕಿಯ ರೆಕ್ಕೆ?’

ಮನೋರಮಾ ಕವಿತೆಯನ್ನು ಅದರ ಬಾಗು ಬಳುಕು, ಚಮತ್ಕಾರಗಳೊಂದಿಗೆ ಗಟ್ಟಿಯಾಗಿ ಓದಿಕೊಂಡರೆ ಹೇಗಿರುತ್ತದೆ? ಆ ಸುಖವನ್ನು ಓದಿಯೇ ಆನುಭವಿಸಬೇಕು. ವಿಪರ್ಯಾಸ ನೋಡಿ: ತುಂಟತನ, ಲವಲವಿಕೆಯ ಈ ಪದ್ಯ ಸಾಕಷ್ಟು ಜನರಿಗೆ ಗೊತ್ತೇ ಇಲ್ಲ. ‘ಗೋಪಿ ಮತ್ತು ಗಾಂಡಲಿನ’ಳನ್ನು ಪಾರ್ಟಿಗಳಲ್ಲಿ ಚಪ್ಪರಿಸುವವರಿಗೆ ‘ಮನೋರಮ’ಳ ಪರಿಚಯವೂ ಇಲ್ಲ. ಬಹುಶಃ, ವಿಮರ್ಶಕರು ಮೆಚ್ಚಿ ಮುಂದಿಟ್ಟದ್ದನ್ನೇ ಒಪ್ಪುವ ಪರಾವಲಂಬನೆ ಗುಣವೇ ಇಂಥ ಪದ್ಯಗಳು ಮರೆಯಲ್ಲಿ ಉಳಿಯಲಿಕ್ಕೆ ಕಾರಣವಿರಬೇಕು. ‘ಮೈಸೂರು ಮಲ್ಲಿಗೆ’ ನರಸಿಂಹಸ್ವಾಮಿ ಅವರ ಕವಿತೆಗಳಲ್ಲಿನ ಆದರ್ಶ ಪ್ರೇಮವನ್ನು ನೆಚ್ಚುವವರು, ತರುಣ ತರುಣಿಯರ ಒಳತೋಟಿಗೆ ನಿಸಾರರು ಸಹಜ ದನಿಯಾದುದನ್ನು ಗುರ್ತಿಸಿದಂತಿಲ್ಲ.

ನಿಸಾರ್ ಅವರ ಕಾವ್ಯವನ್ನು ಪೊರೆದ ಪ್ರಜ್ಞೆಗಳಲ್ಲಿ ‘ನಗರ ಪ್ರಜ್ಞೆ’ಯೂ ಒಂದು. ನಗರ ಅವರ ಪಾಲಿಗೆ ಅಸ್ಪೃಶ್ಯವಲ್ಲ ನರಕವೂ ಅಲ್ಲ ಹಾಗೆಂದು ನಗರದ ಕುರಿತು ಅವರು ಭಾವುಕತೆಯಿಂದ ಮಾತನಾಡುವುದೂ ಇಲ್ಲ ‘ಬಿಟ್ಟ ಊರಿನ ನೆನಪು ಸುಟ್ಟರೂ ಸಾಯದು/ ಸಿಕ್ಕಲಾರದು ಹುಡುಕಿ ಬಂದ ಜಾಡು’ ಎನ್ನುವ ಹಳಹಳಿ ಇದ್ದಾಗ್ಯೂ, ನಗರ ಜೀವನದ ಜಂಜಡಗಳ ನಡುವೆಯೂ ಅಲ್ಲಿನ ಆಹ್ಲಾದಕರ ಮುಖಗಳನ್ನು ಕವಿ ಚಿತ್ರಿಸುವುದು ವಿಶೇಷ. ಗಾಂಧಿ ಬಜಾರಿನ ಜೀವಂತಿಕೆಯೊಂದಿಗೆ ಮಾಸ್ತಿಯನ್ನು ಲಾಲ್‍ಬಾಗಿನ ಸಮೃದ್ಧಿಯೊಂದಿಗೆ ಎಚ್ಚೆನ್ ಅವರನ್ನು ನಿಸಾರ್ ಚಿತ್ರಿಸುತ್ತಾರೆ. ಕವಿಯ ಪಾಲಿಗೆ ಮಾಸ್ತಿ ಹಾಗೂ ಎಚ್ಚೆನ್ ವ್ಯಕ್ತಿತ್ವ ಕೂಡ ಉದ್ಯಾನದಷ್ಟೇ ವಿಸೃತವಾದುದು, ಉದಾತ್ತವಾದುದು. ನಗರದ ಖಾಲಿಸೈಟು, ಮನೆಯ ಅಂಗಳ, ಅಂಗಳದಲ್ಲಿನ ತೆಂಗಿನ ಮರ. ರಸ್ತೆ, ರಸ್ತಯಲ್ಲಿನ ಕಾರು, ಬಡಾವಣೆಯಲ್ಲೊಂದು ಮದ್ಯಾಹ್ನ- ಎಲ್ಲವೂ ನಿಸಾರರ ಕಾವ್ಯಕ್ಕೆ ನೆಪವಾಗುತ್ತವೆ. ನಗರದಲ್ಲಿ ಅಭ್ಯಾಗತನಂತೆ ಸುಳಿವ ಸಂಜೆ ಮಳೆಗೆ ‘ಸಂಜೆ ಐದರ ಮಳೆ’ ಎಂದು ನಾಮಕರಣ ಮಾಡಿದವರು ಇದೇ ನಿಸಾರ್.

ಎಲ್ಲ ಕವಿಗಳಂತೆಯೇ ನಿಸಾರರನ್ನು ಸಾವು ಮಾಯೆಯಂತೆ ಕಾಡಿದೆ. ಈ ಸಾವನ್ನು ಅವರು ಬದುಕಿನ ಸಾರ್ಥಕ ಕ್ಷಣಗಳಿಗೆ ಮುಖಮುಖಿಯಾಗಿಸುವುದು, ಸಾವಿನ ಘಟನೆಗಳ ಮೂಲಕ ಬದುಕಿನ ಅರ್ಥಶೋಧ ನಡೆಸುವುದು ಹೊಸತಾಗಿದೆ. ಈ ಹಿನ್ನೆಲೆಯಲ್ಲಿ ‘ಅಂತರ’, ‘ಮೃಗಾಲಯ’, ‘ಮೈಲಿ ಮರ್ಗದ ಮಹರಾಯ’, ‘ಭೀಮಪ್ಪ ಮಾಸ್ತರರು’ ಕವಿತೆಗಳನ್ನು ಓದಬಹುದು. ಈ ಸಾಲಿಗೆ ಸೇರಿದ ‘ರಾಮನ್ ಸತ್ತ ಸುದ್ದಿ’ ಸಾಕಷ್ಟು ಜನಪ್ರಿಯತೆ ಗಳಿಸಿದ ಕವಿತೆ. ಬೀಚಿ ಹಾಗೂ ಬಿ.ಜಿ.ಎಲ್. ಸ್ವಾಮಿ ಅವರ ಅಗಲಿಕೆಯ ನೆನಪಿನ ‘ಸಾವಿಗೆ ಅತಿಥಿ ಪರಿಚಯ’ ಅಪ್ಪಟ ನಿಸಾರ್ ಛಾಪಿನ ಕವಿತೆ. ಸಾವಿನೊಂದಿಗೆ ಸಂವಾದ ನಡೆಸುವ ಕವಿ, ಈ ನೆಲದ ಶೀತೋಷ್ಣಮಾಪಿಗಳಾದ ಬೀಚಿ ಹಾಗೂ ಬಿ.ಜಿ.ಎಲ್. ಅವರನ್ನು ಮೃತ್ಯುವಿಗೆ ಪರಿಚಯಿಸುತ್ತಾರೆ. ವ್ಯಕ್ತಿಚಿತ್ರ, ಚಿರಸ್ಮರಣೆ, ಜಿಜ್ಞಾಸೆ ಯಾವುದೂ ಬೇಕಾದರೂ ಆಗಬಹುದಾದ ಸಾರ್ಥಕ ಕವಿತೆಯಿದು.

ಜನಪ್ರಿಯತೆಯ ಮಟ್ಟಿಗೆ ನಿಸಾರ್ ಅದೃಷ್ಟವಂತ ಕವಿ. ಅವರ ‘ನಿತ್ಯೋತ್ಸವ’ ಗೀತೆ ಪರ್ಯಾಯ ನಾಡಗೀತೆ ಅನ್ನುವಷ್ಟು ಜನಪ್ರಿಯ. ‘ನಿತ್ಯೋತ್ಸವ’ ಧ್ವನಿಸುರುಳಿ ನಿಸಾರ್ ಕವಿತೆಗಳನ್ನು ಅಕ್ಷರವಿಮುಖರಿಗೂ ಮುಟ್ಟಿಸಿದೆ. ಅದು ಕನ್ನಡ ಭಾವಗೀತೆಗಳ ಮೊಟ್ಟ ಮೊದಲ ಧ್ವನಿಸುರುಳಿ. ‘ಕುರಿಗಳು, ಸಾರ್, ಕುರಿಗಳು’ ಕವಿತೆಯನ್ನು ಗಟ್ಟಿಯಾಗಿ ಹಾಡಿಕೊಂಡು ಚಪ್ಪರಿಸುವ ಕಾವ್ಯಪ್ರೇಮಿಗಳ ಸಂಖ್ಯೆ ಯಾವ ಕಾಲಕ್ಕೂ ಇದ್ದೇ ಇದೆ.

ಕವಿತೆಗಳಲ್ಲಿ ಕವಿಯ ಜಾತಕವನ್ನು ಹುಡುಕುವುದು ವಿಮರ್ಶಕ ಲೋಕದ ಕೆಟ್ಟ ಚಾಳಿಗಳಲ್ಲೊಂದು. ಅದರಲ್ಲೂ ಬರಹಗಾರ ದಲಿತನೋ ಮುಸ್ಲಿಂ ಸಮುದಾಯಕ್ಕೆ ಸೇರಿದ ವ್ಯಕ್ತಿಯೋ ಆಗಿದ್ದರೆ ಮುಗಿದೇಹೋಯಿತು, ಆತನ ಬರಹಗಳಲ್ಲಿ‌ಆತನ ಹುಟ್ಟಿನ ಪ್ರಭಾವದ ಕುರಿತು ಘನ ಕೃತಿಗಳೇ ಪ್ರಕಟವಾಗಿಬಿಡುತ್ತವೆ. ದಲಿತ ವರ್ಗಕ್ಕೆ ಸೇರದ ಲೇಖಕ, ದಲಿತ ಬದುಕಿನ ಕುರಿತು ಉತ್ತಮ ಕೃತಿ ರಚಿಸಿದರೆ ಅದರೆ ಬಗ್ಗೆ ಅನುಮಾನ ವ್ಯಕ್ತಪಡಿಸುವ, ದಲಿತ ಹಿನ್ನೆಲೆಯ ಲೇಖಕನ ಸಾಧಾರಣ ಕೃತಿಯನ್ನು ಮಹತ್ವದ್ದೆಂದು ನಂಬಿಸುವ ಪ್ರಯತ್ನಗಳು ಆಗಾಗ ನಡೆಯುತ್ತವೆ. ಇಂಥ ಪ್ರಯತ್ನ ನಿಸಾರ್ ಕುರಿತೂ ನಡೆದಿದೆ. ಅವರ ಕವಿತೆಗಳಲ್ಲಿ ಮುಸ್ಲಿಂ ಸಮಾಜವನ್ನು ಕಾಣಲು ಕೆಲವು ವಿಮರ್ಶಕರು ಬೂತುಗನ್ನಡಿ ಇಟ್ಟು ಹುಡುಕಿದ್ದಿದೆ. ‘ಅಮ್ಮ ಆಚಾರ, ನಾನು’, ‘ರಂಗೋಲಿ ಮತ್ತು ಮಗು’ ಎನ್ನುವ ಒಂದೆರಡು ಕವಿತೆಗಳ ವಿನಃ ನಿಸಾರ್ ಕವಿಗಳಲ್ಲಿ ಮುಸ್ಲಿಂ ಸಂವೇದನೆಯೇ ಸೊನ್ನೆ ಎಂದು ನಿರಾಶರಾಗಿ ಗೊಣಗಿದ್ದೂ ಇದೆ. ಆದರೆ ನಿಸಾರ್ ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಂಡವರಲ್ಲ ತಮ್ಮ ಪಾಡಿಗೆ ತಾವು ಪದ್ಯ ಬರೆಯುತ್ತಾ ಹೋದ ಕವಿಯವರು. ಕನ್ನಡದ ಬರಹಗಾರ ಎಂದು ಗುರ್ತಿಸಿಕೊಳ್ಳುವುದರಲ್ಲೇ ಅವರಿಗೆ ಹಿತವೇನೋ ಅನ್ನಿಸುತ್ತದೆ.

ತುಮಕೂರಿನಲ್ಲಿ ನಡೆದ ೬೯ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಚರ್ಚೆಯಾದ ಹೆಸರುಗಳಲ್ಲಿ ನಿಸಾರ್ ಹೆಸರೂ ಸೇರಿತ್ತು. ಅವರು ಅಧ್ಯಕ್ಷರಾಗುವುದು ಖಚಿತ ಎನ್ನುವ ಗುಲ್ಲು ಸಾಹಿತ್ಯ ವಲಯದಲ್ಲಿ ದಟ್ಟವಾಗಿತ್ತು. ಕೊನೆಯ ಕ್ಷಣದಲ್ಲಿ ಆದದ್ದೇ ಬೇರೆ. ಏನದು? ನಿಸಾರ್ ಪ್ರತಿಕ್ರಿಯಿಸಲಿಲ್ಲ. ಅಧ್ಯಕ್ಷ ಪದಕ್ಕೆ ಅನಂತಮೂರ್ತಿ ಆಯ್ಕೆ ಸರಿಯಾದದ್ದು ಎಂದಷ್ಟೇ ಹೇಳಿ ಮೌನವಾದರು. ಆದರೆ, ಅನಗತ್ಯವಾಗಿ ತಮ್ಮ ಹೆಸರು ಪ್ರಸ್ತಾಪವಾದದ್ದು ಅವರಿಗೆ ನೋವು ತಂದಿತ್ತು. ಆ ನೋವಿಗೆ ಮದ್ದೇನೊ ಎನ್ನುವಂತೆ ಅಮೆರಿಕದ ಡೆಟ್ರಾಯಿಟ್‍ನಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನ (೨೦೦೪)ದಲ್ಲಿ ಭಾಗವಹಿಸುವ ಅವಕಾಶ ಅವರಿಗೆ ದೊರೆಯಿತು.

ನಿಸಾರ್ ಕವಿತೆಗಳಲ್ಲಿ ಅನೇಕ ಉಜ್ವಲ ವ್ಯಕ್ತಿ ಚಿತ್ರಗಳಿವೆ. ಅಂಥ ವ್ಯಕ್ತಿಚಿತ್ರಗಳಲ್ಲಿ ಮಾಸ್ತಿ ಅವರನ್ನು ಕುರಿತ ಕವಿತೆಯೂ ಒಂದು. ‘ಇವರು ನನ್ನೆದುರಲ್ಲಿ ಹಾದು ಹೋದಾಗಲೆಲ್ಲ/ಹಳ್ಳಿಗಾಡಿನ ಕಡೆಯ ಸುಪ್ರಸನ್ನತೆಯೊಂದು ನಗರಕ್ಕೆ ಸಂದಂತೆ’ ಎಂದು ಮಾಸ್ತಿ ಕುರಿತು ಅವರು ಬರೆದಿದ್ದಾರೆ. ಈ ಪ್ರಸನ್ನ ಭಾವ ನಿಸಾರರ ಎಲ್ಲಕವಿತೆಗಳ ಜೀವವಾಗಿ ಕಾಣುತ್ತದೆ. ವ್ಯಕ್ತಿಯಾಗಿಯೂ ‘ಮಾಸ್ತಿ ಗರಡಿ’ಗೆ ಸೇರಿದವರೇ ಆದ ನಿಸಾರ್ ಕಿಡಿಯಿಲ್ಲದ ಆರೋಗ್ಯಕರ ವಿಡಂಬನೆಯನ್ನೂ ಕಾವ್ಯಕ್ಕೇ ಸೀಮಿತಗೊಳಿಸಿದ ಸಜ್ಜನರು.

‘ಇಪ್ಪತ್ತನೆಯ ಶತಮಾನದ ಕೊಲಂಬಸ್’ ಕವಿತೆಯಲ್ಲಿ‘ನಾನಿಷ್ಟೆ ಲೋಕಕ್ಕೆ: ತೇದಂತೆ ಕರಗುವ ಗಂಧದೊಂದು ಚಕ್ಕೆ’ ಎನ್ನುತ್ತಾರೆ ನಿಸಾರ್. ಹೌದು, ಅವರು ಗಂಧದ ಚಕ್ಕೆ; ಕನ್ನಡ ಕಾವ್ಯಾಗಸದ ಮಿನುಗು ಚುಕ್ಕೆಯೂ. ಈ ಅಪರೂಪದ ಕವಿಯೊಂದಿಗೆ ನಮ್ಮನ್ನು ಗುರ್ತಿಸಿಕೊಳ್ಳುವುದು, ಅವರ ಕವಿತೆಗಳಿಗೆ ಮುಖಾಮುಖಿಯಾಗುವುದು ಖುಷಿಯ ಸಂಗತಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಕ್ಷಯ
Next post ಈ ಕೊರಗು

ಸಣ್ಣ ಕತೆ

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…