ಬಂತಾವ್ವಾ ಬಂತಾವ್ವಾ ಬಂತವ್ವಾ ಶ್ರಾವಣಾ
ಚಂದೇನ ಚಾರೇನ ಸಾಮೇರ ಚರಣಾ ||ಪಲ್ಲ||
ಮಠತುಂಬ ರಂಗೋಲಿ ಮುತೈದಿ ಬಾಲೇರು
ಪಡಿಹಿಗ್ಗು ಪಂಚಮಿ ಮಾಡ್ಯಾರೆ
ತೋರಮುತ್ತಿನ ಕಾಂತಿ ಮುತ್ತು ಮಾಣಿಕ ದಾಂತಿ
ಕಾಶೀಯ ಪೀತಾಂಬ್ರ ಉಟ್ಟಾರೆ ||೧||
ಪರಪಂಚ ಪಂಚೇತಿ ಫಜೀತಿ ಪುರಮಾಶಿ
ಕೀರ್ತನಾ ಕೇಳಾಗ ಹೋಗೇತೆ
ಉಟಸೀರಿ ಜಾರೇತೆ ಮುಡಿಸೆರಗು ಹಾರೇತೆ
ಗರತೇರ ಮಾನಾ ಮಾರೇತೆ ||೨||
ಸಾಮೇರ ಮಂಚಕ್ಕ ಪಂಚರಂಭೇರೇರಿ
ಹಣ್ಗಾಯಿ ನೀರ್‍ಗಾಯಿ ಆಗ್ಯಾರೆ
ಸಾಮೇರ ತೊಡಿಮ್ಯಾಗ ಆರೂರ ಹುಡಿಗೇರು
ಬಕಬಾರ್‍ಲೆ ಕಣ್ತಿರಿಗಿ ಬಿದ್ದಾರೆ ||೩||
ಗುರುಗೋಳು ಬಂದಾರೆ ಗುರುವಣ್ಣಿ ಕೂಡ್ಯಾರೆ
ಮಠದಾಗ ಹೆಂಡಿರ ಮಾಡ್ಯಾರೆ
ಹೋದೋರು ಆರ್‍ಮಂದಿ ಬಂದೋರು ಮೂರ್‍ಮಂದಿ
ಊರ್‍ಮಂದಿ ಹುಡಿಗೇರು ಬಸರಾಗೆ ||೪||
ಗೋಡಿ ಬುದಬುದು ಬಿದ್ದು ಪೀಠ ಫಡಫಡ ಎದ್ದು
ಸಾಮೇರು ಕಾಮೇರು ಆಗ್ಯಾರೆ
ನವಿಲೀನ ನಾರೇರ ಕದ್ದಾರೆ ಮೆದ್ದಾರೆ
ಮುಗಿಲೀನ ತೊಟ್ಟಿಲಾ ತೂಗ್ಯಾರೆ ||೫||
*****
ಶ್ರಾವಣ=ಆತ್ಮಿಕ ಶ್ರವಣಾ; ಸ್ವಾಮೇರು = ಭಗವಂತ; ಮಠ = ಬ್ರಹ್ಮ ತತ್ವ; ಬಾಲೇರು-ಹುಡಿಗೇರು-ಗರತೇರು-ಗುರುವಣ್ಣಿ-ಹೆಂಡಿರು = ಸರ್ವ ಆತ್ಮರು; ಪಂಚಮಿ=ಪಂಚೇಂದ್ರಿಯಗಳ ಕೂಟ; ಉಟಸೀರಿ= ದೇಹಾಭಿಮಾನ (Physical Consciousness); ಆರ್‍ಮಂದಿ = ಷಡ್ವೈರಿಗಳು; ಮೂರ್‍ಮಂದಿ=ಸತ್, ಚಿತ್, ಆನಂದ; ಬಸರಾಗು=ಆತ್ಮ ಜ್ಞಾನಿಯಾಗು; ಕಾಮೇರು = ಕಾರುಣ್ಯದ ಮೇರು; ಮುಗಿಲಿನ ತೊಟ್ಟಿಲು = ಅಶರೀರ ಸ್ಥಿತಿ (Supra-mental plane).