ಗುಡ್ಡವನು ಹತ್ತಿ ಆಯಾಸಗೊಂಡ ಕಂಡದ್ದು ನಿನ್ನನೇನು
ಹೆಡ್ಡರಾ ಗೊಂಬೆ ಜನರನ್ನು ತಿಂಬೆ ನನ್ನನ್ನು ನಂಬಲೇನು || ೧ ||
ಕಂಡದ್ದು ಅಲ್ಲಿ ಕಣ್ಣುಗಳ ಕುಕ್ಕಿ ಇರಿವಂಥ ಚಿನ್ನ ಬೆಳ್ಳಿ
ಉಂಡದ್ದು ಧೂಳು ಕುರುಡುತನ ನೀರು ನಾಚಿಕೆಯ ಹೊರಗೆ ತಳ್ಳಿ || ೨ ||
ನೀನಿಲ್ಲ ಅಲ್ಲಿ ಆ ಗುಂಪಿನಲ್ಲಿ, ನೀನುಸಿರು ಕಟ್ಟಿ ಇಹೆಯಾ
ನಾನಿಹೆನು ನೋಡ ಪಂಜರದ ಹಕ್ಕಿ ನನ್ನದಿದು ಬಂಧಕಾಯ || ೩ ||
ದಾರಿಯಲಿ ಹೊರಗೆ ಹಾರುತ್ತ ದೂರ ದಿಟ್ಟಿಯನು ಹಾಯಿಸಿದ್ದೆ
ಮೇಲಿರಲು ಬಾನು, ಗಿರಿಸಾಲು ಸಾಲು ಸೃಷ್ಟಿಯದು ಹಸಿರ ಮುದ್ದೆ || ೪ ||
ಇಲ್ಲೆಲ್ಲು ಇಲ್ಲ ಎಂದುಸಿರ ಬಿಟ್ಟು ಗುಡ್ಡವನು ಇಳಿದು ಬಂದೆ
ಸೊಲ್ಲಿಲ್ಲವಲ್ಲ ನಿನ್ನದೆಂದೆನುತ ಕಣ್ತುಂಬ ನೀರು ತಂದೆ || ೫ ||
*****