ಕನಸುಗಣ್ಣಿನ ಹುಡುಗಿ
ಕನಸಿಗೆ ಬರುತಾಳೆ
ಕನಸು ಕಣ್ಣಲಿ ಚೆಲ್ಲಿ
ಕಣ್ಮರೆಯಾಗುತಾಳೆ //ಪ//
ಕಂಡರೆ ಅಲ್ಲೋ ಇಲ್ಲೋ
ಕಣ್ಮನ ಸೆಳಿತಾಳೆ
ಕಣ್ಮನ ಸೆಳೆದ ಸ್ಥಳವ
ಸ್ಮಾರಕ ಮಾಡುತಾಳೆ
ಕಡಲಿಗೆ ನಡೆದರೂ ಕೂಡ
ಅಲೆಯಾಗಿ ಬರುತಾಳೆ
ಅಲೆಯಾಗಿ ಒಳಗಿಳಿದು
ಭೋರ್‍ಗರೆಯುತ್ತಾಳೆ
ಕಾಡಿಗೆ ನಡೆದರೂ ಕೂಡ
ಕೋಗಿಲೆಯಾಗಿರುತಾಳೆ
ಕನ್ನಡದಲಿ ಕೂಗಿ
ನಾಡಿಗೆ ತರುತಾಳೆ
ಕಾಡಲಿ ಅವಳಿಲ್ಲ
ನಾಡಿನಲಿ ಕೂಡ
ಇರುವುದು ಅವಳೆಲ್ಲಿ
ಮತ್ತೆ ಕಾಡುತಾಳೆ
*****