ಉಗಿಯುತ್ತಿದೆ ಊರು ಓಡಿ
ಮೋರಿಯಲ್ಲಿ ಮಲಗು
ಅರಸುತ್ತಿದೆ ಕಲ್ಲು ದೊಣ್ಣೆ
ಬಿಲಗಳಲ್ಲಿ ಅಡಗು
ನಿಂತ ನೆಲವೆ ನುಂಗುತ್ತಿದೆ
ಬೆಂತರ ಬೆನ್ನಟ್ಟುತ್ತಿದೆ
ನಿರ್ಜನ ರಾತ್ರಿಗಳಲ್ಲಿ ಒಂಟಿ ಕೂತು ಕೊರಗು.
ಮುಕ್ತ ಇವನು ಮಾನದಿಂದ
ಸರಿತಪ್ಪಿನ ಜ್ಞಾನದಿಂದ
ಉಂಡ ಮನೆಗೆ ಎರಡು ಬಗೆಯಬಾರದೆಂಬ ನೀತಿಗೆ
ಬೆನ್ನೊಳಿರಿದ ಪ್ರೀತಿಗೆ,
ಭಾರ ಇವನು ಕೂಳಿಗೆ
ಭಾರ ನಾಡ ಬಾಳಿಗೆ
ತನ್ನ ತಪ್ಪ ತಿಳಿದಲ್ಲದೆ ಬೆಳಗಲಿರುವ ನಾಳೆಗೆ.
ಮರುಳ ಚೀಲರಿವನ ನೆಲಕೆ
ಹಾಕಿ ಒತ್ತಿ ತುಳಿದರು
ರಸ ತುಂಬಿದ ಹಣ್ಣ ಹಿಸುಕಿ ಧೂಳಿನಲ್ಲಿ ಒಗೆದರು
ದೇವ ಇವರ ಕ್ಷಮಿಸು
ಜ್ಞಾನವಿತ್ತು ಹರಸು
ನಮ್ಮ ಪುಣ್ಯದಿಂದ ಇವರ ಪಾಪಗಳನು ಹರಿಸು
*****