೧
ಭಾರಿ ಭಾರಿ ಬದುಕಬೇಕೆಂದು ಬಾವಿ ತೆಗೆಯಲು ಹೋದೆ
ಗುದ್ದಲಿ ಹಿಡಿದು ಜಜ್ಜುಗಲ್ಲೆಲ್ಲ ತೆಗೆದೆ
ಅಗೆಯುತ್ತ ಅಗೆಯುತ್ತ
ಹೋದೆ;
ತಡೆಯೊಡ್ಡುವ ಬಂಡೆಗಳಿಗೆ ಡೈನಮೆಂಟಾದೆ
ಇಳಿಯುತ್ತ ಇಳಿಯುತ್ತ
ಇಳಿದೆ.
೨
ನಿಯತ್ತಿನ ನೇಗಿಲ
ಯೋಗಿ
ಯಾಗಿ
ಬೀಜ ಬಿತ್ತಿ ನೀರು ಎತ್ತಿ
ಪ್ರಾಮಾಣಿಕ ಪೈರು
ಬೆಳೆಯುವ ಹೊತ್ತಿಗೆ
ಗೊಬ್ಬರಗೋಡು
ಎಂದು ಪಟ್ಟ ಪಾಡು
ಹಾಡಾಗಿ ಹರಿಯುತ್ತಿತ್ತು
ಹೊಲ ಹೊನ್ನುಟ್ಟು
ಅಕ್ಷತೆಯ ಅಂದದಲ್ಲಿ
ದಾಳಿಂಬೆಯುಬ್ಬು ಹೊಮ್ಮುತ್ತಿತ್ತು.
೩
ಬರಬರುತ್ತ ಬಿಸಿಲ ಮೊಳೆ ಬಡಿತ
ನೀರು ಎತ್ತಲು ಹೋದಾಗ ಮತ್ತೆ ಮತ್ತೆ
ಕೈಕೊಡುವ ಕರೆಂಟು ಕೆನೆತ. ಮೀಸೆ ತಿರುವುತ್ತಿರುವಾಗ
ಕೆಳ ಹೊಲಗಳಲ್ಲಿ ಎದ್ದ ಹತ್ತೆಂಟು ಬಾವಿಗಳು
ಮೀಸೆ ತಿರುವುತ್ತಿರುವಾಗ
ನನ್ನ ಬಾವಿ ಬರಿದೇ ಬರಿದು!
ರಕ್ತ ಬಸಿದು ಹಸಿರಾದ ಹೊಲ
ಹೂ ಇಳಿಸಿ ಅಕ್ಷತೆ ಅಳಿಸಿ
ಕುಂಕುಮ ಕೆಡಿಸಿ
ಬಳೆ ಜಜ್ಜಿ ಬಯಲಾಗುತ್ತಿತ್ತು
ಅರ್ಥವಾಗದ ಆವರಣ ರಣರಣವೆನ್ನುತ್ತಿತ್ತು.
೪
ಮಹಾಶಯರೆ
ಹಿಡಿದ ಗುದ್ದಲಿ ಬಿಡುವುದಿಲ್ಲ
ನಾನು
ಹುಟ್ಟಿದ್ದಕ್ಕೆ ನಿಮಗೆ ತೊಂದರೆಯ ತಂತಿ
ತಗುಲಿ ತಲ್ಲಣವಾಗದಿರಲೆಂದು
ನಾನೇ
ಆರೂ ಮೂರಡಿಯ ಗುಂಡಿ
ತೆಗೆಯುತ್ತೇನೆ
ಇಟ್ಟಿಗೆ ಸುಟ್ಟು ಚಟ್ಟ ಕಟ್ಟಿ
ಇಟ್ಟಿರುತ್ತೇನೆ
ನೆರಳಿಗೆಂದು ಗುಂಡಿಯ ಬಳಿ
ಸಸಿಯೊಂದ ನೆಟ್ಟಿರುತ್ತೇನೆ
ಇರುವವರೆಗೆ ನೆಟ್ಟಗಿರುತ್ತೇನೆ.
*****