ಜಾಗತಿಕ ಹತೋಟಿಗೆ ಯಾವುದೇ ವ್ಯಾಪಾರಿ ನಿರ್ಬಂಧಗಳಿಲ್ಲದಿರುವುದರಿಂದ ಕೀಟನಾಶಕಗಳು ಪರಸ್ಪರ ದೇಶ- ವಿದೇಶಗಳಿಗೆ ರಫ್ತಾಗುತ್ತಲೇ ಇರುತ್ತವೆ. ಇದರ ದುಷ್ಪರಿಣಾಮ ಮೊದಲಿಗೆ ಅಷ್ಟೇನೂ ಕಂಡು ಬಂದಿಲ್ಲವಾದರೂ ಈದೀಗ ವಿಶ್ವಸಂಸ್ಥೆಯ ಆರೋಗ್ಯ ಘಟಕವು ಈ ಕೀಟನಾಶಕಗಳಿಂದ ಜೀವರಾಶಿಗಳ ಮೇಲೆ ಆಗುವ ಅಪಾಯವನ್ನು ಮನಗಂಡಿದೆ. ಬಂಡವಾಳಶಾಹಿ ನಾಡುಗಳು ಕೀಟನಾಶಕ ನಂಜನ್ನು ಅಭಿವೃದ್ಧಿ ಶೀಲನಾಡುಗಳಿಗೆ ಅಗತ್ಯಕ್ಕಿಂತ ಹೆಚ್ಚಿಗೆ ಕಳಿಸುತ್ತಿರುವುದು ಅಪಾಯಕಾರಿಯಾಗಿದೆ. ಇದನ್ನು ವಿಶ್ವಸಂಸ್ಥೆಯ ಆರೋಗ್ಯ ಘಟಕ ತಡೆಯುವಲ್ಲಿ ವಿಫಲವಾಗಿದೆ.
ಅಮೇರಿಕಾ ದೇಶದಲ್ಲಿ D.D.T ಯ ಮೇಲೆ ನಿರ್ಬಂಧ ಇರುವುದರಿಂದ ಇಲ್ಲಿಯ ಜನ ನಂಜಿನ ಅಂಶದಿಂದ ಸ್ವಲ್ಪ ಮುಕ್ತರೆನ್ನಬಹುದು. ಭಾರತದ ಮುಂಬೈ ನಗರ ವಾಸಿಗಳ ರಕ್ತದಲಿ ಅತಿಹೆಚ್ಚು ಕೀಟನಾಶಕ ನಂಜು ಪತ್ತೆಯಾಗಿದೆ, ರಕ್ತವನ್ನು ಸೇರುವ P.E.B.ಕೀಟನಾಶಕ ನಂಜು, ಹುಟ್ಟುವ ಸಂತಾನದ ಮೇಲೂ ಪರಿಣಾಮ ಬೀರುತ್ತದೆಂಬುವುದು ಕಳವಳಕಾರಿ ಅಂಶವಾಗಿದೆ. ಈ ಬಗೆಗೆ ಸಾವಿರಾರು ದಂಪತಿಗಳನ್ನು ಅಧ್ಯಯನಕ್ಕೆ ಒಳಪಡಿಸಿದಾಗ ಗಂಡಸರು ತಮ್ಮ ವಿರ್ಯಾಣು ಶಕ್ತಿಯನ್ನು ಕುಂದಿಸಿಕೊಂಡಿರುವುದೂ ಹೆಂಗಸರಲ್ಲಿ ಗರ್ಭಪಾತ ಪ್ರಮಾಣ ಹೆಚ್ಚಿರುವುದೂ ಪತ್ತೆಯಾಗಿದೆ. ರಕ್ತಸೇರಿದ ಈ ಕೀಟನಾಶಕದ ಈ ನಂಜು ದೈಹಿಕ ಬೆಳವಣಿಗೆಗೆ, ಉಸಿರಾಟಕ್ಕೆ ದುಷ್ಪರಿಣಾಮ ಬೀರುತ್ತದೆ. ಕೀಟನಾಶಕ ಬಳಕೆಯ ನಾಡುಗಳ ಜನರನ್ನು ಪರೀಕ್ಷಿಸಿದಾಗ ಶೇ.೮೦ ರಷ್ಟು ನೇರವಾಗಿ ಈ ನಂಜಿನಿಂದ ಆರೋಗ್ಯವಂಚಿತರಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ D.D.T ಯ ನಂಜು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಕಡಿಮೆಯಾದರೂ ಫ್ಲೋಲಿಕ್ಲೋರಿನೆಟೆಡ್ ಬೈಡೆನೆಲ್ಸ್ ನಂಜಿನ ಪ್ರಮಾಣ ಕಡಿಮೆಯಾಗಿಲ್ಲ. ಅಮೇರಿಕಾದಲ್ಲಿಯ ಸಂಶೋಧನೆಯಂತೆ ೧೯೮೫ ರ ಸಂದರ್ಭದಲ್ಲಿ ೨.೦ ಯಿಂದ ೧೯.೩ ಮಿಲಿ ಲೀಟರ್ D.D.T. ಅಂಶ ಜನರ ನೆತ್ತರು ಸೇರಿ ವಿವಿಧ ತೊಂದರೆಗಳಿಗೆ ಕಾರಣವಾಗಿದೆ. ಭಾರತದ ದೆಹಲಿ, ಅಹಮದಾಬಾದ್ ವಾಸಿಗಳಲ್ಲಿ ೩೭.೩ ಮಿ.ಲೀಟರ್ ಹಳ್ಳಿಗಾಡು ಜನರಲ್ಲಿ ೮.೬ ಮಿಲಿ ಲೀಟರ್ D.D.T. ಅಂಶ ರಕ್ತದಲ್ಲಿಸೇರಿಕೊಂಡಿದೆ. ಪಾಕಿಸ್ತಾನ, ಆಫ್ಘಾನಿಸ್ತಾನ, ಬಾಂಗ್ಲಾದೇಶಗಳಲ್ಲಿಯೂ ಸಹ ಮೇಲಿನ ಸ್ಥಿತಿಯೇ ಇದೆ. ಉಷ್ಣಪ್ರದೇಶದಲ್ಲಿನ ಕೀಟನಾಶಕ ನಂಜು ಬಿಸಿಗಾಳಿ ಈ ಪ್ರದೇಶಕ್ಕೆ ಸಹಜವಾಗಿ ದಾಳಿ ಮಾಡುತ್ತಿರುವುದೇ ಇಂದಿನ ಎತ್ತರ ಧೃವ ಪ್ರದೇಶದ ಆತಂಕಕ್ಕೆ ಕಾರಣವಾಗಿದೆ. ಉತ್ತರ ದೃವದ ನೀರಿನಲ್ಲಿ ಈಗಾಗಲೇ ೮,೪೦೦ ಟನ್‌ಗಳಷ್ಟು, B.H.E. ಕೀಟನಾಶಕ ನಂಜು ಸೇರಿದೆ. ಭಾರತ ಉತ್ತರ ಗಡಿಪ್ರದೇಶದಲ್ಲಿರುವ ಹಿಮಾಲಯವು ತಂಪು ಪ್ರದೇಶವಾದುದರಿಂದ ಹಿಮಾಲಯದ ತಪ್ಪಲು ಇಂದು ಕೀಟನಾಶಕ ರೋಗ ನಿರೋಧಕದ ನಂಜಿನಿಂದ ಬಸವಳಿದೆ. ಹೀಗೆ ಈ ಕೀಟನಾಶಕಗಳ ಹಾವಳಿಯಿಂದ ಮುಂದೊಂದು ದಿನ ಮನುಷ್ಯನ ರಕ್ತ ಮಲಿನಗೊಂಡು ಶುದ್ದವಾದ ರಕ್ತ ದೊರೆಯುವ ಸಂಭವವೇ ಇಲ್ಲದಾಗುತ್ತದೇನೋ?
*****