ನನ್ನ ಮಗಳು ರೇಖಾ ನನಗೆ ಅಚ್ಚುಮೆಚ್ಚು. ಒಬ್ಬಳೇ ಮಗಳೆಂದೋ ಏನೋ ಯಾವಾಗಲೂ ಅವಳು ನನ್ನ ಕಣ್ಮುಂದೆ ಸುಳಿಯುತ್ತಿರಬೇಕೆಂದು ಅನ್ನಿಸುತ್ತದೆ. ಸ್ವಲ್ಪ ಕೆಮ್ಮಿದರೂ ಸಾಕು ನನ್ನ ಗಂಟಲೇ ತುಂಬಿ ಬಂದಂತಾಗುತ್ತದೆ. ಅತ್ತಾಗ ಅವಳ ಕಣ್ಣಿನಿಂದ ನೀರು ಬರುವುದಿಲ್ಲ. ನನ್ನ ಕಣ್ಣಿಂದ ನೀರು ಬರುತ್ತವೆ. ಅವಳು ಅತ್ತರೊಂದು ರುಚಿ, ನಕ್ಕರೊಂದು ರುಚಿ. ನನ್ನ ಹಾಗೂ ಅಕೆಯ ಸಂಬಂಧ ತಂದೆ ಮಗಳ ಸಂಬಂಧವೆಂದು ಮಾತ್ರ ಅನ್ನಿಸುವುದಿಲ್ಲ. ನನ್ನ ಬಾಳಿನ ಕ್ಷುದ್ರಭೂಮಿಯಲ್ಲಿ ಬೆಳೆದ ಕುಸುಮ ಅವಳು. ಆವಳ ನಡೆನುಡಿಗಳು, ಹಾವಭಾವಗಳು ನನ್ನ ಮುಂದೆ ನಯವಾದ ನಾಕಲೋಕವನ್ನೇ ತೆರೆದಿವೆ. ನನ್ನ ವ್ಯಕ್ತಿತ್ವದ ಅರೆಕೊರೆಗಳನ್ನು ಅವಳು ಸಾಕಷ್ಟು ತಿದ್ದಿದ್ದಾಳೆ. ನನ್ನ ಮುಗ್ಧಮಾತುಕತೆಗಳಿಂದ, ತನ್ನ ಮುಗುಳ್ನಗೆಯ ಬೆಳಕಿನಿಂದ. ಇಂಥ ಮಗಳನ್ನು ದಯಪಾಲಿಸಿದ ದೇವನಿಗೆ ನಾನು ಅದೆಷ್ಟು ಋಣಿಯೆಂದು ಹೇಳಬೇಕೋ ತಿಳಿಯದು.
ಅಧ್ಯಳು ಗೋಣು ಮುಂದೆ ಚಾಚಿ ಮಾತು ಆಡುತ್ರಿದ್ದಾಗ ಜಗತ್ತೇ ಮರೆತುಹೋಗುತ್ತದೆ. ಒಂದಿಷ್ಟು ಶೀಘ್ರ ಕೋಪಿಯಾದ ನಾನು ಗಟ್ಟಿಯಾಗಿ ಚೀರಿದಾಗ ‘ಮಾಮಾ, ನನಗೆ ಅಂಜಿಕೆ ಬರುತ್ತದೋ ಹಾಗೆ ಚೀರಬೇಡ’ ಎನ್ನುತ್ತಾಳೆ. (ನನಗೆ ನನ್ನ ಮಗಳು ರೇಖಾ ಕರೆಯುವುದು ಮಾಮಾನೆಂದು) ಸಂಸಾರದ ಆಡಚಣೆಯಲ್ಲಿ ಮುಖಗಂಟಿಕ್ಕಿದೆನಾದರೆ ‘ಮಾಮಾ ಒಂದಿಷ್ಟು ನಗು’ ಎಂದು ಒತ್ತಾಯ ಮಾಡುತ್ತ ಸ್ವಾಭಾವಿಕವಾಗಿ ನಗುವನ್ನು ತರಿಸುತ್ತಾಳೆ.
ಒಂದು ದೀಪಾವಳಿ. ಈ ಸಾರೆ ಹಣದ ಅಡಚಣೆ ಬಹಳವಾಗಿದೆ. ಬಟ್ಟೆಯ ಅಂಗಡಿಕಾರರು ಬಾಕಿ ತೀರಿಸಿ ಮತ್ತೆ ಹೊಸ ಬಟ್ಟ ಹೊಯ್ಯಬಹುದೆಂದು ಹೇಳಿದ್ದಾರೆಂದು ನನ್ನಾಕೆಯ ಎದುರು ನನ್ನ ಗೋಳನ್ನು ಹೇಳಿಕೊಳ್ಳುತ್ತಿದ್ದೆ. ಅದನ್ನು ರೇಖಾ ಯಾವ ಮೂಲೆಯಲ್ಲಿ ನಿಂತು ಕೇಳಿದ್ದಳೋ ಏನೋ, ಮರುದಿನ ಮುಂಜಾನೆ ನನಗೆ ಹೇಳಿದಳು. ‘ಮಾಮಾ ನನಗೆ ಹೊಸಬಟ್ಟೆ ಹೊಲಿಸಬೇಡ. ಪಂಚಮಿಗೆಂದು ಹೊಲಿಸಿದ ಪರಕಾರ ಪೋಲಕವನ್ನೇ ಒಗೆದು ಇಸ್ತ್ರಿ ಮಾಡಿಸೋಣ’ ಎಂದಾಗ ನನ್ನ ಕಣ್ಣಲ್ಲಿ ನನಗೆ ತಿಳಿಯದಂತೆ ಕಣ್ಣೀರು. “ಅಳಬೇಡ ಮಾಮಾ, ಸುಮ್ಮನಾಗು. ಮತ್ತೆ ಮಾಮಾ ನಾನು ಆಗಾಗ ಕೂಡಿಹಾಕಿದ ಹಣವಿದೆ. ತೆಗೆದುಕೋ ಮಾಮಾ. ನನಗೆ ಆಮೇಲೆ ಕೊಡುವೆಯಂತೆ ಎಂದು ಆರೂ ರೂ. ಎಂಟಾಣೆಯ ನಾಣ್ಯಗಳನ್ನೇ ನನ್ನ ಮುಂದೆ ಸುರುವಿದಳು.” ನಾನು ಅವಳನ್ನು ಎತ್ತಿ ಮುದ್ದಾಡದೆ ಏನು ಮಾಡಲಿ?
ಅವಳ ಜೊತೆ ಒಂದು ಸಾರೆ ಪ್ರವಾಸನ ಕೈಕೊಂಡಿದ್ದೆ. ನಸುಕಿನಲ್ಲಿ ನಮ್ಮ ಪ್ರವಾಸ ಪ್ರಾರಂಭ. ಕಣ್ಣು ತಾವಾಗಿಯೇ ಮುಚ್ಚಿಕೊಂಡಿದ್ದವು. ರೇಖಾ ತನಗೂ ಒಂದು ತಿಕೀಟನ್ನು ತೆಗೆದುಕೊಳ್ಳಬೇಕೆಂದು ಹಟ ಹಿಡಿದು ಕೆ.ಎಸ್.ಆರ್.ಟಿ.ಸಿ.ಗೆ ಲಾಭ ಮಾಡಿಕೊಟ್ಟಳು. (ಆವಳಿಗಾಗ ಮೂರು ವರ್‍ಷ ತುಂಬಿದ್ದವು ಅಷ್ಟೇ) ಬಸ್ಸು ಅಧಿಕತಮ ವೇಗದಿಂದ ಮುಂದುವರೆದಿತ್ತು. ನಾನು ಇಟ್ಟ ಸ್ಥಳದಲ್ಲಿ ನನ್ನ ಬ್ಯಾಗು ಇರಲಿಲ್ಲ. ನನ್ನ ಬ್ಯಾಗೆಲ್ಲಿ ಹೋಯ್ತು ಎಂದು ಚೀರಾಡಿದೆ. ಅಷ್ಟರಲ್ಲಿಯೇ ಒಂದು ಊರು ಬಂದದ್ದರಿಂದ ಬಸ್ಸು ನಿಂತಿತು. ಅದೇ ಆಗ ಇಳಿದವರು ಬ್ಯಾಗನ್ನು ಎತ್ತಿಕೊಂಡು ಹೋದರೋ ಹೇಗೆ ಎನ್ನುತ್ತ ಬಸ್ಸಿನಿಂದ ಹುಚ್ಚನಂತೆ ಇಳಿದು ಅತ್ತಿತ್ತ ಓದಾಡಿದೆ. ಬಸ್ಸಿನಲ್ಲಿ ಕೆಲವರು ನನ್ನ ಅವಸ್ಥೆಯನ್ನು ನೋಡಿ ಸಹಾನುಭೂತಿಯನ್ನು ತೋರಿದರೆ, ಇನ್ನು ಕೆಲವರು ನಕ್ಕರು. ನನ್ನ ಜೊತೆಗೆ ರೇಖಾ ಬಸ್ಸಿನಿಂದ ಇಳಿದು ಜೋರಾಗಿ ಅಳಹತ್ತಿದಳು. ನಾನು ಅವಳ ಕಪಾಳಿಗೊಂದು ಜೋರಾಗಿ ಬಿಗಿದೆ. ‘ಹೊಡಿಬ್ಯಾಡ ಮಾಮಾ ನಾನು ಬ್ಯಾಗ ತೋರಿಸುತ್ತೇನೆಂದು’ ಬಸ್ಸನ್ನು ಹತ್ತಿದಳು. ಬಸ್ಸಿನ ವೇಗದ ಓಟದಲ್ಲಿ ಬ್ಯಾಗು ಹಾರಿ ಮುಂದೆ ಹೋಗಿ ತೀರ ಮುಂದಿನ ಸೀಟಿನ ಅಡಿಯಲ್ಲಿ ಬಿದ್ದಿದ್ದನ್ನು ಅವಳು ತೋರಿಸಿದಳು. ನನ್ನ ಅಂದಿನ ಹುಚ್ಚುತನದ ಅವಸ್ಥೆಯನ್ನು ಮಗುವಿನ ಈ ನಿರೀಕ್ಷಣಾ ಶಕ್ತಿ ಪಾರುಮಾಡಿದ ಘಟನೆ ನನ್ನ ನನಪಿನಲ್ಲಿನ್ನೂ ಹಸಿರಾಗಿಯೇ ಉಳಿದಿದೆ.
ಊಟಕ್ಕೆ ಕೂತಾಗ ಮನೆಯಲ್ಲಿ ಮಾಡಿರದ ವಸ್ತುವನ್ನು ಬೇಡಿ ಹಟ ತೆಗೆಯುವಳು. ಆಗ ಎಷ್ಟು ತಾಳಬೇಕೆಂದರೂ ತಾಳಲಿಕ್ಕಾಗದೆ ಒಂದೆರಡು ಏಟುಗಳನ್ನು ಕೊಟ್ಟಾಗ ನನ್ನ ಕೈಯೊಂದಿಗೆ ಮನಸ್ಸು ಕೂಡ ಚುರ್ ಎನ್ನುತ್ತದೆ. ಊಟ ಮಾಡದೆ ಸೆಡವಿನಿಂದ ಶಾಲೆಗೆ ಹೋದ ರೇಖಾಳನ್ನು ನೆನೆದು ನನ್ನ ಗಂಟಲಲ್ಲಿ ತುತ್ತು ಇಳಿಯಲಾರದೆ ಹೋಗುತ್ತದೆ. ಶಾಲೆಯಿಂದ ಬಂದಾಗ ಮುಖ ಮುದುಡಿರುವುದಿಲ್ಲ. ಕಣ್ಣ ಕೆಂಪಾಗಿರುವುದಿಲ್ಲ-ರೇಖಾ ಒಂದಿಷ್ಟು ಬಾರಮ್ಮಾ ಎಂದು ಕೈಮಾಡಿ ಕರೆದಾಗ ನನ್ನ ಏಟುಗಳನ್ನು ಮರೆತು ಕುಣಿಯುತ್ತ ಬರುತ್ತಾಳೆ. ಕೂಸಿನ ಈ ಉದಾರ ಹೃದಯ ದೊಡ್ಡವರಾದ ನಮಗೇಕಿಲ್ಲವೆಂದು ಚಿಂತಿಸುತ್ತೇನೆ.
ದಿನವೂ ಸಂಜೆ ತಿರುಗಾಡಲಿಕ್ಕೆ ಹೊರಟು ನಿಂತಾಗ ರೇಖಾ ತಾನೂ ಬರುವೆನೆಂದು ಹಟ ತೆಗೆಯುತ್ತಾಳೆ. ನಾನು ಕರೆದೊಯ್ಯಲಾರೆ-ಎಂದಾಗ ಜೋರಾಗಿ ರಂಪ ಮಾಡಿ ಬೆನ್ನುಹತ್ತಿಯೇ ಬಿಡುವಳು. ಮತ್ತೆ ನನಗೆ ಭರವಸೆ ಕೊಡುತ್ತಾಳೆ. ನಾನು ನಡೆಯುತ್ತ ಬರುವೆ ಮಾಮಾ… ನಿನಗೆ ರಿಕ್ಷಾ ತೆಗೆದುಕೊಳ್ಳಲು ಕಾಡುವದಿಲ್ಲ. ನಾಲ್ಕು ಹೆಜ್ಜೆ ನಡೆದಳೋ ಅಂದರೆ ನನಗೆ ನಡೆಸುತ್ತ ಕರೆದುಕೊಂಡು ಹೋಗಬೇಡವೋ ಮಾಮಾ. ರಾತ್ರಿ ನನ್ನ ಕಾಲು ನೋಯುತ್ತವೆ. ನೀನೇ ನನ್ನ ಕಾಲೊತ್ತಬೇಕಾಗುವುದು ಪಾಪ! ಎನ್ನುವಳು. ನಿಮ್ಮವ್ವ ನಿನ್ನ ಕಾಲೊತ್ತುವುದಿಲ್ಲವೇನಮ್ಮ ಆಂದಾಗ ಅವಳು ಹೊಡೀತಾಳ ಮಾಮಾ ಕಾಲೊತ್ತಬೇಕಾದವನು ನೀನು ಅನ್ನುತ್ತಾಳೆ. ಅಂತೂ ಅವಳಿಗಾಗಿ ರಿಕ್ಷಾ ತೆಗೆದುಕೊಂಡು ಹೊರಟಾಗ ಅವಳಿಗೆ ಕೂಡಲು ಪ್ರಶಸ್ತ ಜಾಗ ಸಿಕ್ಕಿಲ್ಲವೆನಿಸುವದು-ಆಗ ಎಷ್ಟು ದಪ್ಪ ಆಗಿದ್ದೀಯೋ ಮಾಮಾ ಎನ್ನುವಳು. ‘ಹೌದಮ್ಮ ನಿನ್ನ ಮಾತು ಕೇಳಿ ಇಷ್ಟು ದಪ್ಪವಾಗಿದ್ದೀನಿ’ ಎನ್ನುವೆ. ಹಾಗಾದರೆ ಮಾತು ಕೇಳಿದರೆ ದಪ್ಪಾಗುತ್ತೀರೇನು ಮಾಮಾ ಎಂದು ಜಾಣತನದ ಪ್ರಶ್ನೆ ಕೇಳಿ ನಿರುತ್ತರನನ್ನಾಗಿ ಮಾಡುತ್ತಾಳೆ. ಅದಕ್ಕಾಗಿಯೇ ಅನ್ನುತ್ತಾರೆ, ದೊಡ್ಡವರ ಜಾಣತನ ಸಣ್ಣ ಹುಡುಗರ ಎದುರಿಗೆ ನಿಲ್ಲಲಾರದು ಎಂದು.
ಒಂದು ಸಾರೆ ಮನೆಗೆ ಬಂದ ನೆರೆಮನೆಯ ಮಕ್ಕಳನ್ನು ಕುರಿತು ‘ಭೀಕಾರಿ’ ಎಂದಳು ರೇಖಾ-ಆ ಮಕ್ಕಳ ತಾಯಿತಂದೆಗಳ ಎದುರಿಗೆ. ಪಾಪ ಆ ಮಕ್ಕಳ ತಾಯಿತಂದೆಗಳು ಏನು ತಿಳಿದುಕೊಂಡರೋ ಎಂದೆನ್ನುತ್ತ-‘ನೋಡಮ್ಮ ರೇಖಾ, ಹೀಗೆಲ್ಲ ಎರಡನೆಯವರಿಗೆ ಭೀಕಾರಿ ಆನ್ನಬಾರದು. ಏನು ಕೈಯಲ್ಲಿದ್ದರೂ ಅದನ್ನು ಹಂಚಿಕೊಂಡು ತಿನ್ನಬೇಕು’ ಎಂದು ಸಲಹೆ ಕೊಟ್ಟೆ. ‘ಹೀಗೋ’ ಅಂದಳು ಮಗಳು. ಮರುಕ್ಷಣದಲ್ಲೇ ‘ಒಂದೆಂಟಾಣೆ ಕೊಡೋ ಮಾಮಾ’ ಎಂದಳು. ‘ಯಾಕಮ್ಮ ಏಕೆ ಬೇಕಾಗಿತ್ತು’ ಎಂದು ಕೇಳಿದೆ. ನಾನು ಎಂಟಾಣೆಯ ಪೆಪ್ಪರಮೆಂಟು ತಂದು ಓಣಿಯ ಹುಡುಗರಲ್ಲಿ ಹಂಚ್ಚುತ್ತೇನೆ ಎಂದು ಅವಳ ಉತ್ತರ. ನನ್ನ ಮಾತಿನ ಔದಾರ್ಯ ಕಾರ್ಯರೂಪಕ್ಕೆ ತರಬೇಕೆನ್ನುವ ಮಗಳ ಮಾತಿಗೆ ಅಂಜಿಹೋದೆ.
ಅವಳದೇ ಆದ ವಿಶೇಷ ರೀತಿಯ ತರ್ಕದಿಂದ ನನ್ನ ಮನಸ್ಸನ್ನು ಅಗಾಧವಾಗಿ ಹದಗೊಳಿಸುತ್ತಾಳೆ. ಅವಳ ಉತ್ತರಗಳು ತೀಕ್ಷ್ಣವಾಗಿದ್ದಂತೆ ಸಹಜವಾಗಿಯೂ ಇರುತ್ತವೆ. ಯಾವಾಗಲೂ ಅಳುತ್ತಿರುವ ಅವಳ ಹಟಮಾರಿ ಸ್ವಭಾವವನ್ನು ಮನದಂದು-ಏನಮ್ಮ ಅಳಮ್ಮ ಅಂದು ಕರೆದರೆ ಏನಪ್ಪ ಅಳಪ್ಪ ಎನ್ನುತ್ತಾಳೆ. ಯಾವುದೂ ಅವಳಲ್ಲಿ ಉದ್ರಿ ಎಂಬುದಿಲ್ಲ. ‘ನಾನೆಲ್ಲಿ ನಿನ್ನ ಹಾಗೆ ಅತ್ತಿದ್ದೇನಮ್ಮ’ ಎಂದು ಕೇಳಿದಾಗ ‘ಅಂದು ಊರಿನಲ್ಲಿ ಅತ್ತಿರಲಿಲ್ಲವೇ?’ ಎಂದು ಆ ದಿನದ, ಆ ಕರಾಳದಿನದ ನೆನಪು ತೆಗೆದು ನನ್ನನ್ನು ಮೂಕಗೊಳಿಸುತ್ತಾಳೆ. ಮಕ್ಕಳ ನೆನಪಿನ ಶಕ್ತಿಯನ್ನು ಕಂಡು ಅಗಾಧವೆನಿಸುತ್ತದೆ.
“ರೇಖಾ… ನೀನು ಬರುಬರುತ್ತ ಕುದುರೆ ಹೋಗಿ ಕತ್ತೆಯಾಗುತ್ತಿದ್ದಿ” ಎಂದು ಅವಳ ತುಂಟತನಕ್ಕೆ ಬೇಸತ್ತು ನುಡಿದಾಗ ಮಾಮಾ ನೀನು ಮಾತ್ರ ಇಷ್ಟು ದೊಡ್ಡವನಾಗಿದ್ದೀ, ನೀನು ಮಾತ್ರ ಕುದುರೆಯಾಗಿ ಉಳಿದಿದ್ದಯೇನೋ ಎನ್ನುತ್ತಾಳೆ. ಆಕೆಗೆ ನಾನೇನೆಂದು ಉತ್ತರ ಕೂಡಲಿ.
ದಿನವೂ ಶಾಲೆ ಬಿಟ್ಟು ಬಂದ ನಂತರ ಟೀಚರ್ ಪಾತ್ರ ವಹಿಸುತ್ತಾಳೆ-ರೇಖಾ. ಒಂದು ಟಾವಲ್‍ನ ತುದಿಯನ್ನು ಟೊಂಕಕ್ಕೆ ಸುತ್ತಿ ಕೈಯಲ್ಲಿ ಕಟ್ಟಿಗೆಯೊಂದನ್ನು ಹಿಡಿದು, ತನಗಿಂತಲೂ ಚಿಕ್ಕವರಾದ ನೆರೆಮನೆಯ ಹುಡುಗರಿಗೆ ಪಾಠ ಹೇಳುವಳು. ಇಲ್ಲವೆ ಕೇವಲ ಶಿಕ್ಷೆಕೊಡುವ ಶಿಕ್ಷಕಿಯಾಗುವಳು. ಅವರಾರೂ ಸಿಗದಿದ್ದರೆ ನಾನು ಅವಳ ವಿದ್ಯಾರ್ಥಿಯಾಗುವ ಪ್ರಸಂಗ ಬರುತ್ತದೆ. ಹೊಡೀತೀನಿ ನೋಡು ಬರೆ ಎಂದು ಹೊಡದದ್ದೂ ಉಂಟು. ಒಂದೊಂದು ಸಾರೆ ನಾನೂ ವಿದ್ಯಾರ್ಥಿಯಾಗಲು ಒಪ್ಪದಿದ್ದರೆ ೮-೧೦ ಸಣ್ಣ ಕಲ್ಲುಗಳನ್ನು ಇಟ್ಟುಕೊಂಡು ಪಾಠ ಹೇಳುವ ನಾಟಕ ಮಾಡುತ್ತಾಳೆ. ಈ ನಾಟಕದಲ್ಲಿ ಅವಳ ತಾದಾತ್ಮ್ಯವನ್ನು ಕಂಡು ನನ್ನ ಹೃದಯ ತುಂಬಿಬರುತ್ತದೆ. ಒಮ್ಮೊಮೆ ನನ್ನ ಎದುರಿಗೆ ಬಂದು ಕೇಳುತ್ತಾಳೆ-
‘ಮಾಮಾ ನೀನು ರೇಖಾ ಆಗು, ನಾನು ಮಾಮಾ ಆಗುತ್ತೇನೆ.’ ನಾನು ಹೂಂ ಅನ್ನುತ್ತೇನೆ. ನಾನು ರೇಖಾ ಆಗಿ ಪ್ರಾರಂಭಮಾಡುತ್ತೇನೆ- ‘ಏ ಮಾಮಾ ರೊಕ್ಕ ಕೊಡೋ’ ಎಂದು ಅಂದರೆ, ‘ಇಲ್ಲ ಹೋಗು’ ಎಂದು ನಾನು ಯಾವಾಗಲೂ ಅವಳಿಗೆ ನುಡಿದ ಮಾತನ್ನೇ ಪುನರುಚ್ಚರಿಸಿ ನನ್ನ ಮುಖಕ್ಕೆ ಮಂಗಳಾರತಿ ಮಾಡಿದ್ದೂ ಇದೆ.
ಬಾಲಕರ ಮನಸ್ಸು ಮಡಿ ಮಾಡಿದ ಬಟ್ಟೆಯಂತಿರುತ್ತದೆಂದು ಎಲ್ಲೋ ಓದಿದ ನೆನಪು. ಆ ಮಾತು ನನ್ನ ಮಗು ರೇಖಾಳ ಸಾನ್ನಿಧ್ಯದಲ್ಲಿ ಸತ್ಯವಾಗಿ ಪರಿಣಮಿಸುತ್ತಿದೆ. ಮಕ್ಕಳ ಮನಸ್ಸಿನ ರೀತಿಯಲ್ಲಿ ಒಂದು ಮಗುವಿನ ಸಾಮೀಪ್ಯದಲ್ಲಿ ಸ್ಪಷ್ಟವಾಗುತ್ತ ನಡೆದಿದೆ. ಇದೊಂದು ಸಣ್ಣ ಘಟನೆ. ಒಂದು ಸಾರೆ ಬಸ್ಸಿನಲ್ಲಿ ನಾನು ಕುಟುಂಬಸಮೇತವಾಗಿ ಪ್ರವಾಸ ಮಾಡುತ್ತಿದ್ದೆ. ಟಾಯಿಮ್ ಪಾಸ್ ಎನ್ನುತ್ತ ಸೇಂಗಾ ಮಾರುವ ಹುಡುಗನೊಬ್ಬ ಬಸ್ಸಿನಲ್ಲಿ ಏರಿ ನಮ್ಮ ಸುತ್ತಲೂ ಸುಳಿಯಲಾರಂಭಿಸಿದ. ರೇಖಾನ ಮುಖವನ್ನೇ ನಾನು ನೋಡುತ್ತ ಅವಳ ಪ್ರತಿಕ್ರಿಯೆಯನ್ನು ಗಮನಿಸುತ್ತಿದ್ದೆ. ಅವಳಿಗೆ ಸೇಂಗಾ ಅಂದರೆ ಇಷ್ಟ ಆದರೆ ಬಾಯಿಂದ ಕೇಳಲು ಅಭಿಮಾನ ಕಾಡುತ್ತಿದೆ. ಅವಳು ಕೇಳಿದರೆ ಕೊಳ್ಳಬೇಕೆಂದು ನನ್ನ ಹಟ. ಅವಳು ಮುಖ ತಿರುಹಿ ನನ್ನ ಬಯಕೆಯನ್ನು ಅದುಮಿಟ್ಟುಕೊಂಡಳು. ಕೊನೆಗೂ ನಾನೇ ಸೋತು ಅವಳು ಕೇಳದೆ ಇದ್ದರೂ ಅವಳ ಎದುರಿಗೆ ಸೇಂಗಾದ ಪುಡಿಯನ್ನು ಎತ್ತಿ ಹಿಡಿದಾಗ ‘ಮಾಮಾ ಎಷ್ಟು ಖೊಟ್ಟಿ ಇದ್ದಾನೆ. ನೋಡಮ್ಮ ನನಗೆ ಸೇಂಗಾ ಬೇಡವಾಗಿದ್ದರೂ ಕೊಂಡಿದ್ದಾನೆ’ ಎನ್ನುತ್ತ ಲಗುಬಗೆಯಿಂದ ಸೇಂಗಾದ ಪುಡಿಯನ್ನು ಕೈಯಲ್ಲಿರಿಸಿಕೊಂಡಳು. ಸಣ್ಣ ಮಗುವಿನಲ್ಲಿಯ ಅಭಿಮಾನ ಹಾಗೂ ಬಯಕೆಗಳ ನಡುವಿನ ಹೋರಾಟ ನನಗೆ ಮನೋವಿಜ್ಞಾದ ಹೊಸಪಾಠವನ್ನೇ ಹೇಳಿಕೊಟ್ಟಿತು.
ಒಂದು ಕಡೆ ಕಾರಂತರು ಹೇಳಿದ್ದಾರೆ-‘ನಾವು ಮಕ್ಕಳಿಗೆ ತೋರುವ ಅಕ್ಕರೆಗಿಂತಲೂ ಹೆಚ್ಚಾಗಿ ಅವರಿಂದ ಜೀವನದಲ್ಲಿ ಆನಂದವನ್ನು ಪಡೆಯುತ್ತೇವೆ’ ಎಂದು. ಆ ಮಾತು ನನಗೆ ಪ್ರತ್ಯಕ್ಷ ಅನುಭವಕ್ಕೆ ಬಂದಿದೆ. ಜಗದ ಜಂಜಡ ಮರೆಯಲು ಮಕ್ಕಳಿಗಿಂತ ಹೆಚ್ಚಿನ ಬಂಧುಗಳಾರೂ ಇಲ್ಲ. ಈ ಮಾತು ಪೂರ್ತಿಯಾಗಿ ಮನವರಿಕೆಯಾಗಿಹೋಗಿದೆ.
*****