(ಮನೆಯ ಯಜಮಾನರಿಗೆ ದೇವರಲ್ಲಿ ತುಂಬಾ ಶ್ರದ್ಧೆ. ಸ್ವತಃ ಪೂಜೆ ಮಾಡಿ ನೈವೇದ್ಯ ತೋರಿಸದಿದ್ದರೆ ಮನಸ್ಸಿಗೆ ಹೇಗೊ ಹೇಗೊ ಎನಿಸುವದೆಂದು ಯಾವಾಗಲೂ ಅವರು ಹೇಳುವರು. ಇಂದು ಸ್ನಾನಮಾಡಿ ದಿನದಂತೆಯೇ ಯಜಮಾನರು ದೇವರ ಕಟ್ಟೆಯ ಮೇಲೆ ಪೂಜೆಗೆ ಕುಳಿತಿರುವರು. ದೇವರ ಕಟ್ಟೆಯ ಎಡಪಕ್ಕದಲ್ಲಿಯೇ ಅಡಿಗೆಯ ತಗ್ಗಿನಕಟ್ಟೆ. ಹೆಣ್ಣು ಮಗಳೊಬ್ಬಳು ಅಡಿಗೆ ಮಾಡುತ್ತಿರುವಳು. ರಾಯರ ಪೂಜೆಗೆ ಆರಂಭವಾಗುವದು.)
“ಓಂ ಕೇಶವಾಯನಮಃ ನಾರಾಯಣಾಯನಮಃ ಓಂ ದಾಮೋದರಾಯ ನಮಃ ಏ ಗೋದೀ ಸಪ್ಪಗೀನ ತವ್ವಿಗೆ ಬ್ಯಾರೆ ಬ್ಯಾಳಿ ತಗದೀಯೋ ಇಲ್ಲೊ? ಹೂಂ! ಬೇಶ್!…. ‘ಪ್ರಣವಸ್ಯ ಪರಬ್ರಹ್ಮಋಷಿಃ’…. ಎಲೇ ಕೃಷ್ಟ್ಯಾ ಬಾಳಿ ಎಲೀ ನೆಟ್ಟಗಮಾಡು…. ಸುಮ್ಮನಽ ಅಡ್ಯಾಡಬಾಡ!…. ‘ಪಾಂತ್ವಸ್ಮಾನ್ ಪುರಹೂತ ವೈರಿ ಬಲವಾನ್’ ಬದನೀಕಾಯಿ ಎಳೇವವ, ಇಂದ ತುಂಬ ಗಾಯಿ ಪಲ್ಯಾ ಯಾಕ ಮಾಡಲಿಲ್ಲಾ? ಇದನ್ನೂ ಹೇಳಬೇಕಽ? ಗಿಂಜಗಾಯಿ ತುಂಬಗಾಯಿ ಮಾಡತಿರತೀ ಒಮ್ಮೊಮ್ಮೆ! ‘ಲಕ್ಷ್ಮೀಕಾಂತ ಸಮಂತತೊ ವಿಕಲಯನ್…’ ಏ ರಾಮಾ, ಕಷ್ಟಾ ಮಾಡಿಸಿಗೊಂಡು ಲಿಸಿಲಿಸೀ ಹೋಗಬ್ಯಾಡಾ-ಊಟಕ್ಕೂಡೂ ಜಾಗಾದಾಗಿಂದಽ! ‘ಉತ್ಕಂಠಾ ಕುಂಠಕೋಲಾ’ ಸಾಲಿಗ್ರಾಮಕ್ಕ ಈ ಬೆಳ್ಳಿ ಸಂಪುಷ್ಟ ಸಣ್ಣದಾಗೇದ! ಡೊಗ್ಗಾಲ ಕೃಷ್ಣಗ ಭಂಗಾರ ನೀರು ಕುಡಿಸಬೇಕು! ಅಣ್ಣಾಚಾರು ಕುಡಿಸ್ಯಾರಽ…. ಛಂದಾಗೇದ! ‘ಜನ್ಮಾದಿವ್ಯಾಧಿಪಾಧಿ’ ಚಟ್ನಿ ಯಾತರದು ಕುಟ್ಟೀರಿ? ಹಸೀ ಖೊಬ್ಬರೀ ಸಿಗಲಿಲ್ಲ? ಬ್ಯಾಸರ, ಪ್ಯಾಟ್ಯಾಗ ಹೋಗಬೇಕು ಯಾರು? ಖಂದಟ ಖೊಬ್ರೀ ಚೆಟ್ನಿ ತಿನಬೇಕಽ ಎಲ್ಲಾರು ಮೈಗಳ್ಳರು!…. ‘ಮಧ್ವಾಂಖ್ಯಂ ಮಂತ್ರಸಿದ್ಧಂ’ ಲಗೂ ಲಗೂ ಆಗಲಿ ಅಡಗಿ, ಕಚೇರಿಗೆ ಹೋಗಬೇಕಾಗೇದ, ಇಂದ ಪೆನಶನ್ ತಗೊಳಿಕ್ಕೆ! ಎಲಾ ರಾಮ್ಯಾ! ಅಗಸರಾಶ ಅರಿವೀ ತಂದನೊ ಇಲ್ಲೊ ನೋಡು! ಇಸ್ತ್ರಿ ಮಾಡ್ಯಾನೊ ಇಲ್ಲೊ ನೋಡು.!…. ಕಣ್ಣ ಮುಚ್ಚಬ್ಯಾಡಾ. ಹುಡಗೋರು ಹ್ಯಾಂಗ ಚಕ್ ಚಕ್ ಇರಬೇಕು! ‘ಸಾಭ್ರೋಷ್ಣಾಭೀ ಶುಶುಭ್ರಾ’ ಗೋದೀ, ಭಕ್ರಿಹಿಟ್ಟು ಮುಗಿಸಿ ಬಿಡಬ್ಯಾಡ! ಒಲಿಮ್ಯಾಲೆ ಹಾಂಗಽ ಸ್ವಲ್ಪ ಹಂಚು ಇಟ್ಟೀರು! ಊಟಕ್ಕ ಕೂತಾಗಽ ಒಂದು ಬಿಸಿ ಬಿಸೀ ದಮಟೀ ಮಾಡಿ ಹಾಕೀ ಅಂತ….! ಹಲ್ಲಿಂದೊಂದು ತ್ರಾಸನಽ ಆಗೇದ… ಪೂರಾ ಅರೆ ಬಿದ್ದು ಹೋಗವೊಲ್ವೂ. ಹೆಡಮಾಸ್ತರ್‍ಹಂಗ ಹೊಸಾ ಹಲ್ಲು ಕೂಡಿಸಬೇಕಂದರಽ! ‘ಆನಂದಾನ್ಮಂದ ಮಂದಾ’ ಹುಳೀಗೆ ತುಪ್ಪದ ಒಗ್ಗರಣೇ ಹಾಕು- ಗಂಟಲ್ಯಾಕೊ ಘುಸೂ ಘುಸೂ ಅಂತದ… ಲುಚ್ಯಾರು ಈಗ ಎಣ್ಣೀ ಒಳಗ ಭಯಿಮಂಗದ ಎಣ್ಣಿ ಕೂಡಸ್ತಾರ! (ಖೇಕರಿಸಿ) ಮರೀಬ್ಯಾಡ…. ತುಪ್ಪದ ಒಗ್ಗರಣೀ ಕೊಡು…! ‘ವಂದೇಹಂತಂ ಹನೂಮಾನ್’ ಅಕ್ಚದಾಸ ಭಟ್ಟ ಕಳಿಸಿದ ಗಂಧಕೊರಡು; ಭಾಳವಾಸ ಅದಽ ಇದು; ಸಾಣೀಕಲ್ಲೊಂದು ಸಂವದು ಹೋಗೇದ….; ಎಷ್ಟು ಹೊಡೀತು ನೋಡು ಕೃಷ್ಣಾ… ಹನ್ನೊಂದಽ? ಅಬ್ಬಾಽ! ಹಾಂ, ಹಾಕು ಎಲಿ, ತಗೀ ನೈವೇದ್ಯ….? ‘ವಂದೇ ವಂದ್ಯಂ ಸದಾನಂದಂ….’ ಸೀತಾಬಾಯಿ, ಮಣೀ ಹಾಕು! ನನ್ನ ಮಣೀ ಎಲ್ಲಿ ಅದಽ? ದಿನಾ ಹೇಳಬೇಕೇನು? ನೋಡು, ಎಲ್ಲಾರದೂ ಸ್ನಾನಾಗೇದೊ ಇಲ್ಲೊ…. ? ‘ಸುಜನೋದಧಿ ಸಂವೃದ್ಧಿ….’ ಹೂಂ ಬಡಿಸಲಿಕ್ಕೆ ಸುರೂ ಮಾಡು. ಈಗ ನೈವೇದ್ಯ ಇಡತೀನಿ! ಲಿಂಬಿಹಣ್ಣು ಹೆಚ್ಚರಿ, ದಿನಾ ಮರೀತೀರಿ. ಸುಳ್ಳೇ ಒಣಗೀ ಹೋಗತಾವ ಅವು! ‘ಮಂಗಲಾನಿ ಭವಂತು ಸಂತತಂ ಶ್ರೀರಸ್ತು….! ಆತು ಮುಗೀತಽ ನನ್ನ ಪೂಜಿ! ಯಾವಾಗ ಒಂಭತ್ತು ಘಂಟೇಕ ಸ್ನಾನಾಮಾಡಿ ಕೂತೀನಿ, ಹನ್ನೊಂದು ಹೊಡೀತೀಗ! ಉಪ್ಪಿನಕಾಯಿ ತಗದಿಲ್ಲಽ? ಉಪ್ಪಿನಕಾಯೀ ಅಂದೆ! ಪ್ರಥಮೊ ಹನುಮನಾಮ…’ ತೀರ್ಥಾ ತಕ್ಕೂಳ್ಳಿರೊ ಹುಡುಗೂರ್‍ಯಾ! ಉಪ್ಪಿನಕಾಯಿ ಇಲ್ಲಿದ್ರೆ ಇಲ್ಲ; ಸ್ವಲ್ಪ ಮೆಂತೇದಹಿಟ್ಟು ಹಾಕು! ಅಕ್ಷಂತೀ ತಗೊ ಕೃಷ್ಣಾ!… ಮುಟ್ಟೀ ಹೋಗಕಡೆ! ಹೂಂ ಕೂಡ್ರಿ ಎಲ್ಲಾರೂ! ಶ್ರೀಮದ್‍ರಮಾರಮಣ ಗೋವಿಂದಾಽಽ ಗೋ…. ಇಂದಾ !”
(ಯಜಮಾನರು ಆಪೋಶನ ತೆಗೆದುಕೊಂಡು ಊಟಕ್ಕೆ ಪ್ರಾರಂಭಿಸುವರು.)
*****