ಇಂದ್ರಿಯಕ್ಕಿರುವುದೆಲ್ಲ ಅರ್ಧಸತ್ಯದ ಪ್ರಾಪ್ತಿ,
ಪೂರ್ಣ ದಕ್ಕವುದಿಲ್ಲ ಪಂಚಭೂತಕ್ಕೆ;
ಅರ್ಧಸತ್ಯದ ನೋಟ ಅಜ್ಞಾನಕ್ಕಿಂತ ಕೀಳು,
ಪಾಲಾಗಿರುವ ಕಾಳು,
ಬೆಳೆದು ಪಡೆಯುವ ಶಕ್ತಿ
ಕಳೆದು ಹೋಗಿರುವ ಹೋಳು,
ತೆರೆಸರಿಸಿ ದಾಟಿ ಒಳನುಗ್ಗಿ ಪಡೆಯುವುದಕ್ಕೆ
ಸಾಧ್ಯವಾಗದ ಬರಡು, ಕಣ್ಣಿದ್ದೂ ಕುರುಡು;
ಕಂಡರೂ ಸಹ ಬಿತ್ತ, ವಂಚಿಸುತ್ತದೆ ಕಣ್ಣ
ಒಳಗೆ ಮಲಗಿರುವ ಮರ
ಇದ್ದೂ ಇಲ್ಲದ ಥರ;
ದರ್ಶನ ಭಾಗ್ಯವಿಲ್ಲ ಹೋಳು ಸತ್ಯಕ್ಕೆ
ಸಿಗದೆ ಕಲ್ಪಕವರ.
ಇದ್ದದ್ದ ತಿಳಿಯಲು ಇಲ್ಲದ್ದೊಂದರ ನೆರವು
ಬೇಕೊ ಹೇಗೆ ?
ಜೀವನದ ಅರ್ಥ ಅಭಿನಯದ ಹುಸಿಯಲ್ಲಿ ಮಾತ್ರ,
ಅರಳುವ ಹಾಗೆ ?
ಕತ್ತೆತ್ತಿ ನೋಡಿದರೆ ವಾಸ್ತವಕ್ಕೆ ತೋರುವುದು
ಗಾಳಿ ಬಗೆಯುವ ಗರುಡಪಾದ ;
ವಾಸ್ತವವ ಕಡೆದು ನೋಡದೆ ಹೇಗೆ ಹೊಳೆಯುವುದು
ಬೆನ್ನೇರಿ ಸಾಗಿರುವ ಪೂರ್ಣ ದೃಶ್ಯ ?
*****