ಹೂವ ಕಂಡು ಗೋವ ಕಂಡು
ನಿನ್ನ ನೆನೆದನು
ಮಾವು ಕಂಡು ಸಾವು ಕಂಡು
ನಿನ್ನ ಕರೆದೆನು ||೧||
ನನ್ನ ಕಂದಾ ನನ್ನ ಬಗಲ
ಬರಿದು ಮಾಡಿದೆ
ಅವ್ವ ಅವ್ವ ಅವ್ವ ಎಂದು
ಬಯಲು ಮಾಡಿದೆ ||೨||
ನಿನ್ನ ತೂಗಿ ತೂಗಿ ಕಡಿಗೆ
ಕುಣಿಗೆ ಒಯ್ದೆನೆ
ಎದಿಯ ಹಾಲು ಸುರಿದು ಸುರಿದು
ಕುಣಿಗೆ ತಂದೆನೆ ||೩||
ತುಟಿಯ ತುಂಬ ತುಟಿಯನಿಟ್ಟು
ಮಣ್ಣಿಗಿಟ್ಟೆನೆ
ಮುದ್ದು ಮಾಡಿ ಅಪ್ಪಿ ಕುಣಿದು
ಮಣ್ಣು ಸುರಿದೆನೆ ||೪||
ಅಂದು ನೀನು ಬಿಂಗ್ರಿ ಬಗರಿ
ಇಂದು ಗೋರಿಯು
ಅಂದು ನೀನು ಚಂಡು ಚಲುವು
ಇಂದು ಗಾಳಿಯು ||೫||
*****