ಮಾನವ ದೌರ್ಬಲ್ಯಕ್ಕೆ ಅವಶ್ಯಕತೆ ಎನ್ನುವುದು ಒಂದು ದೊಡ್ಡ ಕ್ಷಮೆ
ಅಥವಾ ಆಶ್ರಯ. ಇದು ಕಾನೂನನ್ನು ಕಡಿದು ನುಗ್ಗುತ್ತದೆ; ಇಲ್ಲಿ
ಶಿಕ್ಷೆಗೆ ಆಸ್ಪದವಿರಬಾರದು. ಕಾರಣ, ಕೃತ್ಯ ಅಥವಾ ಅಪರಾಧ ಆಯ್ಕೆ
ಯಾಗಿರದೆ ಅನಿವಾರ್ಯವಾಗಿರುತ್ತಾದ್ದರಿಂದ.
-ಬ್ಲೇಸ್ ಪಾಸಲ್
ಅವಶ್ಯಕತೆ ಯಾವ ಕಾನೂನನ್ನೂ ಗೌರವಿಸುವುದಿಲ್ಲ ಎನ್ನುವುದು ಜನಪ್ರಿಯವಾದ ಒಂದು ನಾಣ್ನುಡಿ. Legem non habet necessities” (Necessity Knows no Law) Sir. Augustine- The great quotations. Page 562
ಈ ವಿಷಯಕ್ಕೆ ಪ್ರವೇಶಮಾಡುವ ಮುನ್ನ ಅವಶ್ಯಕತೆ ಎನ್ನುವ ಪದದ ಸ್ಪಷ್ಟವಾದ ನಿಲಿವಿನ ಅರ್ಥ ಮಾಡಿಕೊಳ್ಳುವುದು ಸೂಕ್ತ ; ಅಷ್ಟೇ ಅಲ್ಲ ಅದರ ಸಿದ್ಧಾಂತವನ್ನೂ ಕೂಡ. ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟುವಿನಲ್ಲಿ
ಅವಶ್ಯ ಎಂದರೆ :- (೧) ಹಿಡಿತಕ್ಕೆ ಸಿಕ್ಕದ (೨) ವಶಕ್ಕೆ ನಿಲುಕದ (೩) ತಪ್ಪಿಸಲಾಗದ (೪) ಅನಿವಾರ್ಯವಾದ (೫) ತನ್ನ ಅಧೀನದಲ್ಲಿ ತಾನಿಲ್ಲದ, ಎಂಬಿತ್ಯಾದಿ ಅರ್ಥಗಳಿವೆ.
ವೆಬ್‌ಸ್ಟರನ ನಿಘಂಟಿನಲ್ಲಿ:-
(೧) ಸಾವು ಬದುಕಿನ ಅವಶ್ಯಕತೆಯಂತೆ- ನೈಸರ್ಗಿಕ ನಿಯಮದ ಫಲ.
(೨) ಬದುಕು ನೀರಿನ ಅವಶ್ಯಕತೆಯಂತೆ- ವಿನಾಯಿತಿಗೆ ದೂರವಾದ ಅಥವಾ ವರ್ಜಿಸಲಸಾಧ್ಯವಾದ;
(೩) ಮಾಡಲೇಬೇಕಾದ
(೪) ಬೇರ್ಪಡಿಸಲಾಗದಂತೆ ಸಂದರ್ಭದೊಡನೆ ಒಂದಾಗಿರುವ, ಇತ್ಯಾದಿ ಅರ್ಥಗಳಿವೆ.
ಇನ್ನು ಅವಶ್ಯಕತೆಯ ಸಿದ್ಧಾಂತವನ್ನು ಅವಲೋಕಿಸಿದರೆ ಅದರ ವಿವಿಧ ಸ್ವರೂಪಗಳು ಹೀಗಿವೆ:
(೧) ತಾರ್ಕಿಕ ಅವಶ್ಯಕತೆ :- ಎಂದರೆ ಇರುವ ಸ್ಥಿತಿಗಿಂತ ಬೇರೆ ಸ್ಥಿತಿಯನ್ನು ಒಳಗೊಳ್ಳಬಹುದಾಗಿದ್ದ ಸಂದರ್ಭವನ್ನೊಳಗೊಂಡ ಅವಶ್ಯಕತೆ.
(೨) ನೈತಿಕ ಅವಶ್ಯಕತೆ :- ಎಂದರೆ ಒಬ್ಬನ ನೈತಿಕ ಗುಣದಿಂದ ಬರಬಹುದಾದ ಅವಶ್ಯಕತೆ.
(೩) ನೈಸರ್ಗಿಕ ಅವಶ್ಯಕತೆ (Physical Necessity) – ಎಂದರೆ ನೈಸರ್ಗಿಕ ನಿಯಮಗಳಿಂದ ಉದ್ಭವಿಸುವ ಅವಶ್ಯಕತೆಗಳು. ಈ ಆವಶ್ಯಕತೆ ನಿಯಮಕ್ಕೆ ಒಳಪಟ್ಟದ್ದು; ನಿರಂಕುಶವಾದದ್ದಲ್ಲ.
ನಿಯಮಬದ್ಧ ಸೃಷ್ಟಿಯಲ್ಲಿ ಹುಟ್ಟಿರುವ ಅನೇಕ ಜೀವಿಗಳಲ್ಲಿ ಒಂದಾದ ಮಾನವನಿಂದ ನಿರ್ಮಿತವಾದದ್ದು ಕಾನೂನು. ಅದು ಅವನಿಂದ ಅವನಿಗಾಗಿ ಅವನೇ ಮಾಡಿಕೊಂಡದ್ದು; ತನ್ನ ಸ್ವಾರ್ಥಕ್ಕಾಗಿ. ಅಲ್ಲಿ ಬಂಧಿಯಾದ್ದೂ ಅವನೆ. ಗಲಭೆ ಕಾಲದಲ್ಲಿ ಗುಂಪುಗೂಡಿ ಹೋಗಬಾರದೆಂಬ ಪ್ರತಿಬಂಧಕಾಜ್ಞೆ ಜಾರಿ ಇದ್ದಾಗಲೂ ಮೃಗಪಕ್ಷಿಗಳು ಗುಂಪುಗುಂಪಾಗಿ ವಾಯುವಿಹಾರ ಅಥವಾ ಆಹಾರ ಅನ್ವೇಷಣೆಗೆ ಹೋಗುವುದನ್ನು ನೋಡಿದಾಗ ಪ್ರಕೃತಿಯ ನಿಯಮದೆದುರು ನಮ್ಮ ಕಾನೂನು ಕೃತಕ ಹಾಗೂ ಸೀಮಿತ ಎನಿಸುತ್ತದೆ. ಕಾನೂನಿನಿಂದ ರಕ್ಷಣೆ ಪಡೆಯುವುದಕ್ಕಿಂತ ಹೆಚ್ಚಿಗೆ ಅದರ ದಬ್ಬಾಳಿಕೆಗೆ ಗುರಿಯಾಗಿ ಇಡೀ ಮಾನವ ಜನಾಂಗ ನಿರ್ವೀರ್ಯವಾಗುತ್ತ, ನಿಕೃಷ್ಟತೆಗೆ ಇಳಿದಿರುವುದನ್ನು ಕಾಣುತ್ತೇವೆ.
ಹೀಗೆ ತನ್ನ ಹಿತಸಾಧನೆಗೆ ಸೃಷ್ಟಿಸಿಕೊಂಡಿರುವ ಕಾನೂನಿನ ಒಳಗೆ ಮಾನವ ತಾನು ವಶಪಡಿಸಿಕೊಳ್ಳಲಾಗದ ಅವಶ್ಯಕತೆಗೆ ತಾನೇ ಹೇಗೆ ಬಂಧಿಯಾಗಿದ್ದಾನೆ ಎನ್ನುವುದನ್ನು ನಾವು ಸೂಕ್ಷ್ಮವಾಗಿ ಗುರುತಿಸಿಕೊಳ್ಳಬೇಕಾಗಿದೆ – ನೈಸರ್ಗಿಕವಾಗಿ ಹಾಗೆ ಬಂಧಿಯಾಗಬೇಕಾದ ಕಾರಣ ಇಲ್ಲದಿದ್ದರೂ ಸಹ.
ಅವಶ್ಯಕತೆಗೆ ಯಾವ ಕಾನೂನಿನ ಅಡ್ಡಿಯೂ ಇಲ್ಲ ಎನ್ನುವುದು ಪರಿಚಿತವಾದ ನಾಣ್ನುಡಿ. ಪೂರ್ಣವಾಗಿ ತಿಳಿದೂ ಬುದ್ಧಿಪೂರ್ವಕ ಉದ್ದೇಶದಿಂದ ಮಾಡಿದಾಗ್ಯೂ ಅವಶ್ಯಕವಾದ ಕ್ರಿಯೆ ತಪ್ಪಾಗುವುದಿಲ್ಲ.
ಎಲ್ಲಾ ಸಾಧ್ಯತೆಯಿಂದಲೂ ತಪ್ಪಿಸಿಕೊಳ್ಳಲು ಸಾಧ್ಯವಾಗದಂತಹ ಕ್ರಿಯೆ ಮತ್ತು ಅದಕ್ಕೆ ಒಳಗಾಗಿರುವ ಕರ್ತೃವಿಗೆ ಬೇರಾವ ಮಾರ್ಗವೂ ಇಲ್ಲದಿದ್ದಾಗ ಅದನ್ನು ಪೂರ್ಣಾರ್ಥದಲ್ಲಿ ಕ್ರಿಯೆ ಎಂದು ಕರೆಯಲು ಸಾಧ್ಯವಾಗುವುದಿಲ್ಲ.
ಒಂದು ನಿರ್ದಿಷ್ಟವಾದ ಕ್ರಿಯೆಯಲ್ಲಿ ಕರ್ತೃವಿಗೆ ತನ್ನದೇ ಆದಂತಹ ರೀತಿಯಲ್ಲಿ ಆಯ್ಕೆ ಮಾಡಿಕೊಳ್ಳುವ ಒತ್ತಾಯಪೂರ್ವಕ ಕಾರಣಗಳಿರುತ್ತವೆ. ಆಂತಹ ಸಂದರ್ಭದ ಅವಶ್ಯಕತೆಗಳನ್ನು ವಿಶ್ಲೇಷಿಸಿದಾಗ ಅಲ್ಲಿ ಮೌಲ್ಯಗಳ ತಿಕ್ಕಾಟವಿರುವುದು ಕಂಡುಬರುತ್ತದೆ: ಒಂದು ಕಡೆ ಕಾನೂನಿನ ನಿಯಮವನ್ನು ಪಾಲಿಸಬೇಕಾದ ಮೌಲ್ಯ; ಮತ್ತೊಂದು ಕಡೆ ನಿರ್ದಿಷ್ಟ ಸಂದರ್ಭ ಒತ್ತಾಯಿಸುವ ಅದಕ್ಕಿಂತ ಹೆಚ್ಚಿನ ಮೌಲ್ಯ. ಇಂತಹ ಸಂದರ್ಭದಲ್ಲಿ ಕಾನೂನು ಅದರ ನಿಯಮವನ್ನು ಮೀರಿ ನಡೆಯುವ ಅವಕಾಶವನ್ನು ಕೊಡುತ್ತದೆ; ಕೊಡಬೇಕು. ಉದಾಹರಣೆಗೆ ಜೀವರಕ್ಷಣೆಯ ಸಂದರ್ಭದಲ್ಲಿ ಮತ್ತೊಬ್ಬನ ಆಸ್ತಿಯನ್ನು ಹಾನಿಗೊಳಿಸಬೇಕಾಗುವುದು ಅಥವಾ ಹತ್ತಿ ಉರಿಯುತ್ತಿರುವ ಬೆಂಕಿಯಿಂದ ಪಾರಾಗಲು ವಾಸದ ಹುಲ್ಲು
ಗುಡಿಸಲುಗಳನ್ನು ನಾಶಮಾಡುವುದು ಇತ್ಯಾದಿ.
ಅವಶ್ಯಕತೆಯ ಚಾಲನೆಯಲ್ಲಿ ಕಾನೂನಿನ ಶಿಕ್ಷೆಯನ್ನು ಮೀರಿದ ರಕ್ಷಣೆಯ ಮತ್ತೊಂದು ಮುಖವೆಂದರೆ ಅಂತಹ ಉದ್ದೇಶ ಉಳ್ಳಂತಹ ಸಂದರ್ಭ. ಅವಶ್ಯಕತೆ ಎನ್ನುವುಮ-ಕಾನೂನಿನ ಶಿಕ್ಷೆಯ ಭಯ ಅಡ್ಡಿಪಡಿಸದಂತ ಹಕ್ಕುವುಳ್ಳುವಂಥದ್ದು.
ಶಿಕ್ಷೆಯು ನಿಷ್ಪ್ರಯೋಜಕವಾದ ಅವಶ್ಯಕತೆಯ ಹಕ್ಕನ್ನು ಸ್ಪಷ್ಟವಾಗಿ ಅರ್ಥೈಸಿಕೊಳ್ಳಲು ಸಚಿತ್ರವಾದ ಉದಾಹರಣೆ ಎಂದರೆ ಆರ್ ವಿರುದ್ಧ ಗ್ರೋಥರ್ (R v/s Growther): ಒಬ್ಬರನ್ನು ಹೊರಬಲ್ಲ ಮರದ ಹಲಗೆಯನ್ನು
ಮುಳುಗುತ್ತಿರುವ ಇಬ್ಬರೂ ತಬ್ಬುವುದು.
ಇಂತಹ ಸಂದರ್ಭದಲ್ಲಿ ತನ್ನನ್ನು ಯಾರೂ ಆಶ್ರಯಿಸದೆ ಏಕಾಂಗಿಯಾಗಿದ್ದವನು ಹಾಗೆ ಆಶ್ರಯಿಸಿರುವವನಿಗೆ ಮರದ ಹಲಗೆಯನ್ನು ಬಿಟ್ಟುಕೊಡಬೇಕೆನ್ನುವುಮ ನೈತಿಕ ಹೊಣೆಯಾಗಿರಬಹುದು; ವೃದ್ಧನಾಗಿದ್ದರೆ ಯುವಕನಿಗೆ ಬಿಟ್ಟುಕೊಡಬೇಕಾಗಿರುವುದು ನೈತಿಕ ಹಾಗೂ ತಾರ್ಕಿಕವಾಗಿರಬಹುದು. ಆದರೆ ಶಕ್ತಿ ಉಳ್ಳವನು ತನ್ನ ಬಲಪ್ರಯೋಗದಿಂದ – ನೈತಿಕ ತಾರ್ಕಿಕ ಹೊಣೆಗಳೆಲ್ಲವನ್ನೂ ಮೀರಿ – ತನ್ನನ್ನು ತಾನು ಸಂರಕ್ಷಿಸಿಕೊಳ್ಳುವುದು ಅವನ ಹಕ್ಕು ; ಆದ್ದರಿಂದ ಇಂತಹ ಸಂದರ್ಭವನ್ನು ಉದ್ಧರಿಸುವಂಥ ಕಾನೂನು ಅಪ್ರಯೋಜಕವಾಗುತ್ತದೆ.
ಅವಶ್ಯಕತೆಗೆ ಮತ್ತೊಂದು ಜನಪ್ರಿಯವಾದ ಉದಾಹರಣೆ ಎಂದರೆ ಆರ್ ವಿರುದ್ಧ ಡ್ಯುಡ್ಲೇ (R v/s Dudley): ಒಡೆದು ಹೋದ ಹಡಗಿನ ನಾವಿಕರು ಬಹಳ ದಿನಗಳ ಮೇಲೆ ಆಹಾರವಿಲ್ಲದೆ ಕ್ಷಾಮಕ್ಕೆ ಈಡಾಗಿ – ಒಂದು
ಕಡೆ ಹಸಿವಿನಿಂದ ಸಾವು: ಮತ್ತೊಂದು ಕಡೆ ಸಹ ನಾವಿಗನೊಬ್ಬನನ್ನು ಕೊಂದು ಸಜಾತಿ ಭಕ್ಷಣೆಯಿಂದ ಜೀವರಕ್ಷಣೆಯ ಸಾಧ್ಯತೆ – ಈ ಹೊಯ್ದಾಟದ ಆಯ್ಕೆಯಲ್ಲಿ ಒಬ್ಬನನ್ನು ಕೊಂದು ಬದುಕಿ ಬಂದಾಗ ಕಾನೂನು ಏನು ಹೇಳುತ್ತದೆ? ಕೃತ್ಯವನ್ನು ಕೊಲೆ ಎಂದೇ ತೀರ್ಮಾನವಿತ್ತರೂ ಶಿಕ್ಷೆಯಲ್ಲಿ
ರಿಯಾಯಿತಿಯನ್ನು ನೀಡಿತು. ಇವನ್ನು ವಿವರವಾಗಿ ಒತ್ತಾಯ ಮತ್ತು ಅವಶ್ಯಕತೆಯ ಕಾನೂನು ಎನ್ನುವಲ್ಲಿ ವಿಲಿಯಂಸ್ ಎಂಬುವರು ವಿಶದವಾಗಿ ಚರ್ಚಿಸಿದ್ದಾರೆ.
ಅಲ್ಲದೆ ಮನುವು ತನ್ನ ಸ್ಮೃತಿಯಲ್ಲಿ (ಮನುಸ್ಮೃತಿ, ಅನುವಾದಕರು, ಚಕ್ರಕೋಡಿ ಈಶ್ವರಶಾಸ್ತ್ರೀ. ಅಧ್ಯಾಯ ೧೦, ಶ್ಲೋಕ ೧೦೪ ರಿಂದ ೧೦೮. ಪುಟ ೪೫೯-೪೬೦ ಪ್ರಕಟಣೆ ಸಮಾಜಪುಸ್ತಕಾಲಯ ಧಾರವಾಡ, ದ್ವಿತೀಯ ಮುದ್ರಣ೧೯೬೭) ಮರಣಾಂತ ಸಂದರ್ಭದಲ್ಲಿ ಸಿಕ್ಕಿದಲ್ಲಿ ಉಣ್ಣಬಹುದು. ಕೆಸರು ಚೆಲ್ಲಿದರೆ ಆಕಾಶ ಕೊಳೆಯಾಗುವುದಿಲ್ಲ (೧೦೪). ಹಸಿವಿಗಾಗಿ ಅಜೀರ್ಗತನು ಮಗನನ್ನು ಬಲಿಗೆ ಮಾರಲು ಮುಂದಾದನು. ಅವನಿಗೆ ಪಾಪ ಬರಲಿಲ್ಲ (೧೧೫). ಧರ್ಮಾಧರ್ಮಜ್ಞಾನಿ ವಾಮದೇವನು ಹಸಿವಿನಿಂದ ಜೀವ ಉಳಿಸಲು ನಾಯಿಯ ಮಾಂಸ ತಿಂದೂ ಪಾಪಿಷ್ಠನಾಗಲಿಲ್ಲ(೧೦೬). ಭರದ್ವಾಜನು ಕಾಡಿನಲ್ಲಿ ಮಕ್ಕಳೊಡನೆ ಹಸಿವಿಗಾಗಿ ಮೃದುವಿನಿಂದ ದನಗಳನ್ನು ತಕ್ಕೊಂಡನು. ಅವನು ಮಹಾ ತಪಸ್ವಿಯು(೧೦೭). ಧರ್ಮಾಧರ್ಮ ನಿಪುಣನಾದ ವಿಶ್ವಾಮಿತ್ರನು ಬ್ರಾಹ್ಮಣರು ವಟುವಿಗೆ ಉಪನಯನಮಾಡಿ ಗೋಪ್ಯ ಎಂದು ಬೋಧಿಸುವ ಗಾಯತ್ರಿ ಮಂತ್ರದ ಕರ್ತೃ ಈ ವಿಶ್ವಾಮಿತ್ರ. ಈತ ಕ್ಷತ್ರಿಯ. ಹಸಿವಿಗೆ ನಾಯಿಕುಂಡೆ ಮಾಂಸವನ್ನು ಹೊಲೆಯನಿಂದ ತಕ್ಕೊಂಡನು (೧೦೮). ಎಂದು ಅವಶ್ಯಕ ಸಂದರ್ಭಗಳನ್ನು ವಿವರಿಸಿದ್ದಾನೆ.
ಹಾಗೆಯ ದಿವ್ಯ ಕುರಾನ್‌ನಲ್ಲಿ “ಯಾವನಾದರು ಪಾಪದ ಕಡೆಗೆ ವಾಲುವವನಾಗಿರದೆ, ಹಸಿವಿನ ತಾಪದಿಂದ ನಿರ್ಬಂಧಿತನಾಗಿ-ಹರಾಮ್ ಆದುದನ್ನು – ತಿಂದುಬಿಟ್ಟರೆ, ನಿಶ್ಚಯವಾಗಿಯೂ, ಅಲ್ಲಾಹನು ಬಹಳ ಹೆಚ್ಚು ಕ್ಷಮಿಸುವವನೂ, ಕರುಣಾನಿಧಿಯೂ ಆಗಿರುತ್ತಾನೆ”. (ಸೂ.ರ : ೫-೩. ಅಲ್-
ಮಾಇದ. ಪುಟ ೧೬೩)
ಒಬ್ಬ ವ್ಯಕ್ತಿ ತನ್ನನ್ನು ನುಂಗುತ್ತಿರುವ, ಸಂಪೂರ್ಣವಾಗಿ ಆವರಿಸುತ್ತಿರುವ ಸಾವಿನ ಭಯದಿಂದಾಗಿ ಕಾನೂನು ವಿರೋಧವಾದ ಕೆಲಸಮಾಡಲು ಒತ್ತಾಯ ಬಂದಾಗ ಆಂತಹ ಸಂದರ್ಭದಲ್ಲಿ ಅವನಿಗೆ ಕಾನೂನಿನ ಕ್ಷಮೆ ಇದೆ. ಕಾರಣ, ಯಾವ ಕಾನೂನೂ ಸಹ ವ್ಯಕ್ತಿಯು ತನ್ನ ಸಂರಕ್ಷಣೆ ಮಾಡಿಕೊಳ್ಳುವುದನ್ನು ಬಿಟ್ಟುಕೊಡುವುದಿಲ್ಲ. ಅಲ್ಲದೆ ಅದು ಪ್ರಕೃತಿನಿಯಮದ ಆಂತರಿಕ ಶಕ್ತಿಯಿಂದ ಜಾಗೃತವಾಗಿ ಸಹಜಗತಿಯಲ್ಲಿ ಕ್ರಿಯಾತ್ಮಕವಾಗುತ್ತದೆ. (Nothing in the Universe is contingent, but all things are conditioned to exist and operate in a particular manner by the necessity of divine nature – SPINOZA
ಇಲ್ಲಿ ಅವಶ್ಯಕತೆಯನ್ನು ಕುರಿತು ಕಾನೂನಿಗೆ ಪರೀಕ್ಷೆ ಇರುವುದು ತನ್ನ ಅಸಮರ್ಥತೆಯಲ್ಲಲ್ಲ; ಬದಲಿಗೆ ಶಿಕ್ಷೆಯ ಯುಕ್ತಾಯುಕ್ತತೆಯಲ್ಲಿ.
ಕಾನೂನಿನ ಪರಿವೆಯೆ ಇಲ್ಲದ ಉದ್ದೇಶಿತ ಕ್ರಿಯೆಗೆ ಕಾನೂನಿನ ಭಯವಿರಬೇಕು ಎಂಬುದು ನ್ಯಾಯವಾದುದು. ಆದರೆ ಶಿಕ್ಷೆಯ ಪರಧಿಯಲ್ಲಿ ಕಾನೂನಿಗೆ ತನ್ನದೇ ಆದ ಸೀಮಿತ ಎಲ್ಲೆ ಇರಬೇಕು. ಉದಾಹರಣೆಗೆ: ಒಂದು ಸಣ್ಣ ಕಳ್ಳತನಕ್ಕೆ ಜೀವಸಹಿತ ಸುಡಬೇಕೆನ್ನುಬುದು ಶಿಕ್ಷೆ ಎನ್ನುವುದಾದರೆ ಹಸಿವಿನಿಂದ ಸಾಯುತ್ತಿರುವವನಿಗೆ ಚೂರು ರೊಟ್ಟಿ ಕದಿಯುವುದು ಸಾಧ್ಯತೆಗೆ ದೂರವಾಗುತ್ತದೆ. ಆಗ ಅವಶ್ಯಕತೆ ಎನ್ನುವ ಪದ ತನ್ನ ಅರ್ಥವನ್ನೇ ಕಳೆದುಕೊಳ್ಳುತ್ತದೆ. ನಾವು ಆಸ್ತಿಗಳ ಮೇಲಿನ ಹಕ್ಕನ್ನು ಉನ್ನತ ಸ್ಥಾನದಲ್ಲಿ ಇರಿಸಲು ಸಾಧ್ಯವಾಗುವುದಿಲ್ಲ, ಹಾಗಾದ ಪಕ್ಷದಲ್ಲಿ ಕೃತ್ಯಗಳ ಉದ್ದೇಶವನ್ನು ಕಾನೂನಿನ ಶಿಕ್ಷೆಯಿಂದ ರಕ್ಷಿಸಲು ಸಾಧ್ಯತೆಗೆ ದೂರವಾಗುತ್ತದೆ. ಇಂತಹ ಸಂದರ್ಭಗಳಲ್ಲಿಯೆ ನೈತಿಕತೆ ಕಾನೂನನ್ನು ಮೀರಿ ನಿಲ್ಲುತ್ತದೆ. ಅಂತಹ ಸಂದರ್ಭಗಳನ್ನು ಮೀರಿ ನಿಲ್ಲಲಾಗದ ಶ್ರೀಸಾಮಾನ್ಯ ದೃಷ್ಟಿಯಿಂದ ನಾವು ಇದನ್ನು ನಿಂತು ನೋಡಬೇಕಾಗುತ್ತದೆ. ಉದಾಹರಣೆಗೆ: ಜಗತ್ಪ್ರಸಿದ್ಧ ಬರಹಗಾರನಾದ ವಿಕ್ಟರ್ ಹ್ಯೂಗೋನ ಲೇ ಮಿಸರಬಲ್ ಕಾದಂಬರಿಯ ಜೀನ್‌ವಾಲ್‌ಜಿನ್ ಹಸಿದವನು ಸಾವಿನ ದವಡೆಯಲ್ಲಿ ಸಿಕ್ಕಿದ್ದಾಗ ಅವನನ್ನು ಬದುಕಿಸುವ ಸಲುವಾಗಿ ರೊಟ್ಟಿ ಆಂಗಡಿಯಲ್ಲಿ ತುಂಡು ರೊಟ್ಟಿಯನ್ನು ಕದ್ದು ತಂದುದಕ್ಕೆ ಅವನಿಗೆ ಜೈಲಿನ ಕ್ರೂರಶಿಕ್ಷೆ. ಹಾಗೆ ಲಂಕೇಶರ ರೊಟ್ಟಿ ಕಥೆಯಲ್ಲಿನ ಸಂದರ್ಭ ಕೂಡ – ಪೋಲಿಸರ ಒದೆತ.
ಸರ್ಕಾರ ತನ್ನ ಕಾನೂನಿನ ದಬ್ಬಾಳಿಕೆಯ ಮೂಲಕ ಕಡ್ಡಾಯವಾಗಿ ಲೆವಿ ಧಾನ್ಯ ಸಂಗ್ರಹಣೆ ಮಾಡಿ ಉಗ್ರಾಣದಲ್ಲಿಟ್ಟು ಅದು ಕೊಳೆತು, ಹುಳು ಹತ್ತಿ ಗೊಬ್ಬರವಾಗುತ್ತಿರುವುದು ಒಂದು ಕಡೆ, ಹಸಿದ ಕೋಟ್ಯಾಂತರ ಹೊಟ್ಟೆಗಳ ಆರ್ತನಾದ ಮತ್ತೊಂದು ಕಡೆ. ಉಗ್ರಾಣದಲ್ಲಿ ಕೊಳೆಯುತ್ತಿರುವ ಮತ್ತು
ಹಸಿದ ಹೊಟ್ಟೆಗಳ ಆರ್ತನಾದದ ನಡುವೆ ಅಡ್ಡಗೋಡೆಯಾಗಿರುವ ಈ ಕಾನೂನು ಏನು? ಎಂಥದು! ಏಕೆ?
ಒಟ್ಟಿನಲ್ಲಿ ಈ ಅವಶ್ಯಕತೆ ಎನ್ನುವುದು ಕಾನೂನಿನ ನಿಯಮಗಳನ್ನು ಮೀರಿದ ಉನ್ನತ ಮೌಲ್ಯವನ್ನು ಹೊಂದಿದ್ದಾಗ ಅದು ಸಮರ್ಥನೀಯವಾದುದು. ಪುರಾವೆಗಳಿಂದ ದೃಢೀಕರಿಸಲಸಾಧ್ಯವಾದ ಹಾಗೂ ಶಿಕ್ಷೆ ನಿರರ್ಥಕವಾದಂತ ಸಂದರ್ಭಗಳಲ್ಲಿ ಅವಶ್ಯಕತೆಯ ನ್ಯಾಯ ಗಟ್ಟಿಯಾಗಿ ನಿಲ್ಲುತ್ತದೆ.
ಸಾಮಾಜಿಕ ಅನ್ಯಾಯಗಳಿಂದ, ಅಂದರೆ ಅಸಮಾನತೆಯಿಂದ, ತಿನ್ನಲು ಏನೂ ಇಲ್ಲದವನು ಹಸಿವಿನಿಂದ ಆತ್ಮಹತ್ಯೆ ಮಾಡಿಕೊಂಡರೆ ಅದು ಕೊಲೆಯೆ? ಎನ್ನುವ ಪ್ರಶ್ನೆಗೆ ಕಾನೂನು ಮೌನ ತಾಳುತ್ತದೆ! ಏಕೆ? ಇದು ರಾಷ್ಟ್ರದ ಜವಾಬ್ದಾರಿಯಲ್ಲವೆ ? ರೊಟ್ಟಿ ಚೂರು ಕದ್ದವನಿಗೆ ಶಿಕ್ಷೆ ವಿಧಿಸುವ ರಾಷ್ಟ್ರ, ಕಾನೂನು, ಅದರ ಪ್ರಜೆಯೊಬ್ಬನಿಗೆ ಹಸಿವಿನಿಂದ ಉಂಟಾದ ಆತ್ಮಹತ್ಯೆಗೆ ಏನು ಹೇಳುತ್ತದೆ? ಹೇಳಬೇಕು!?
– ಇಲ್ಲೇ ಮಾನವ ನಿರ್ಮಿತ ಕಾನೂನಿನ ಅತ್ಯಂತ ಸೂಕ್ಷ್ಮತಮ ಕ್ರೌರ್ಯ ಅಡಗಿರುವುದು.
*****
ಮೇ, ೧೯೮೧