ನಾ ತಿಳಿಯದ್ದೆ ಶಿವಮೊಗ್ಗೆಯ ಈ ಹೊಳೆ?
ನನ್ನ ಕೌಮಾರ್‍ಯ ಕಂಠ ಒಡೆದದ್ದೆ ಇವಳ ತೊಡೆಮೇಲೆ.
ಇವಳ ಹೊಳೆಮೈಯನ್ನು ಸೆಳೆದು
ಆಳಗಳಲ್ಲಿ ಇಳಿದು
ಸೆಳವುಗಳಲ್ಲಿ ಬೇರಲುಗಿ ಕೊಚ್ಚಿ ಹೋಗಿದ್ದೇನೆ;
ಸಕ್ಕರೆ ದಂಡೆಗಳಲ್ಲಿ ಅಕ್ಕರೆಯುಕ್ಕಿ ಮಲಗಿ
ಬಿಳಲು ಬಿಟ್ಟಿದ್ದೇನೆ ಪ್ರೀತಿಗೆ,
ಇವಳ ಮೀನುಮೈಯ ಜುಳು ಜುಳು ತಂಪಿನಲ್ಲಿ
ಕೊಳಲು ನುಡಿಸಿದ್ದೇನೆ ಬದುಕಿಗೆ,
ವಾರಾನ್ನಕ್ಕೆ ಬೆಳೆದು ಕೊಯಿಲಾಗಿ, ಕೊಯಿಲಾದರೂ ಉಯಿಲಾಗಿ,
ಉಯಿಲಾದರೂ ಬಯಲಾಗದೆ ಉಳಿದಿದ್ದೇನೆ ಇವಳ ಗೂಢಕ್ಕೆ.
ಇಷ್ಟೆಲ್ಲ ಕೊಟ್ಟು ಪಡೆದು
ನಾ ತಿಳಿಯದ್ದೆ ಶಿವಮೊಗ್ಗೆಯ ಈ ಹೊಳೆ
ಹೆತ್ತ ಜಾಗಕ್ಕೆ ನನ್ನ ನಿಲಿಸಿ ಹೊಡೆದ ಮೊಳೆ?
ಸಾಕಿದ ಬೆಕ್ಕಂಥ ಸಲಿಗೆ ಹೊಳೆ ಹಠಾತ್ತಾನೆ
ಸೊಕ್ಕು ತಿರುಗಿ ತಿಪ್ಪರಲಾಗ ಹಾಕಿಸಬರುವುದೆ?
ನಡುನೀರಿನಲ್ಲಿ ಈಜುತ್ತಿರುವಾಗ ಮೊನ್ನೆ
ಗಳಿಗೆಬಟ್ಟಲು ಸರಸರ ಸರಿದು ಬಂದಂತೆ
ಫಕ್ಕನೆ ದೊಡ್ಡ ಸುಳಿ-
ಮೊಳೆಕಾಲಿನಿಂದ ಮರತಲೆಯವರೆಗೆ
ಬಳೆ ಬಳೆ ಮೇಲಕ್ಕೆ ಬೆಳೆದು
ಗರಗರ ತಿರುಗುವ ಬಗುರಿಯನ್ನ
ನೀರಲ್ಲಿ ಕೊರೆದು ತೆಗೆದಿರುವ ಥರ.
ನಾನೋ ಸಾವು ಕಂಡಂತೆ ಚೀರಿ
ಸತ್ತೆನೋ ಎಂದು ಆಕಾಶದುದ್ದ ಒದರಿ-
ಅರೆ ಇದೇನು!
ಎಳೆಯುತ್ತಿರುವುದು ಹೊಳೆಸುಳಿಯಲ್ಲ ಹಾವು!
ಹಾವಲ್ಲ ಹಗೆ,
ಹಗೆಯಲ್ಲ ಮುಕ್ಕಿ ಮುತ್ತಿಟ್ಟದ್ದ ಪರಿಚಿತ ನಗೆ!
ಅಲೆಅಲೆಯಾಗಿ ಬೀಸಿ ಬರುವ
ರಾಡಿ ರಾಡಿ ರಾವಣಧಗೆ.
ಕಂಡ ಹೊಳೆಯ ಹೊಟ್ಟೆಯಿಂದ
ಕಾಣದ ಪಾತಾಳಗಳೆದ್ದು
ಎಲಾ! ಯಾರಿದು ಸುತ್ತ?
ಈ ಇವಳು, ಹೆತ್ತ ಕರುಳು,
ಎಂದೋ ಗತಿಸಿದ್ದ ಜುಟ್ಟು ಬಿಟ್ಟ ತಂದೆಯ ನೆರಳು,
ಕತ್ತು ಹಿಸುಕ ಬರುತ್ತಿರುವ ವಾರದ ಹುಡುಗನ ಹತ್ತೂ ಬೆರಳು!
ಬೆವರಿದೆ, ಯಮಸಾಹಸ ಎದ್ದು,
ನಾಲಿಗೆ ಕತ್ತಿ ಹಿರಿದು,
ಎತ್ತಿ ಎತ್ತಿ ಬೀಸಿದೆ.
ನೆತ್ತಿ ಬಿರಿದು ಫಕಫಕನೆ ನಗುತ್ತ,
ವಿಕಾರ ಕೇಕೆ ಕೂಗುತ್ತ,
ಸೀಳಿಬಿತ್ತು ಸೊಕ್ಕಿ ಬೆಳೆದಿದ್ದ ಮೂರೂ ದೇಹ.
ನಿಧಾನ ಮೇಲೆದ್ದು ನಡೆದ ಅದರೊಳಗಿಂದ
ಚಿಕ್ಕಂದು ನನ್ನ ಸಾಕಿದ್ದ
ದಟ್ಟ ವಿಭೂತಿ ಪಟ್ಟೆಗಳ
ಉಗ್ಗ ದುಗ್ಗಾಭಟ್ಟ
ಮರೆತೊಟ್ಟು ಸಾಧಿಸಬಂದಿದ್ದ ಬಲು ಹಳೆಯ ವೈರ.
*****