ಕಂಡಿರುವೆ ಮೂರು ಸಲ ಇವನ ಮೋರೆ,
ಮನೆಯಂಗಳಕೆ ನುಗ್ಗಿ ಹೀಚು ಹರಿವಾಗ,
ನೋಡುವರ ಕೈಕಟ್ಟಿ ಹಗಲೆ ಲೂಟಿಯ ಹೊಡೆವ ದರೋಡೆಕೋರ
ಹಂಡೆಯಂಥಾ ಹೊಟ್ಟೆ, ಕಿರುಬೆಂಡುಗಾಲು,
ಉಂಡದ್ದು ಉದರ ಸೇರದ ಯಾವ ರೋಗವೋ!
ತಿನಿಮೋರೆ ಚಂದವೋ, ಅರಕೆ ಅತೃಪ್ತಿಗಳೆ
ತೇದ ಇದ್ದಿಲಿನಲ್ಲಿ ಗೆರೆನಿಂತೆ ಬರಲುಮುಖ;
ರೆಪ್ಪೆ ತಡೆಯೂ ಇರದ ಬತ್ತುಗಣ್ಣೊಡಲಲ್ಲಿ
ನೆತ್ತರನೆ ಹೆಪ್ಪುಗಟ್ಟಿಸುವ ಥಣ್ಣನೆ ಬೆಳಕುಗೋಲಿ,
ಜೋಲ್ವ ಗೊಣೆಸಿಂಬಳದ ಬಣ್ಣದಾಲಿ;
ಕಪ್ಪು ಹಾವಂಥ ಉದ್ದನೆ ನಂಜುಗೈ ಚಾಚಿ,
ಉತ್ತಬಿತ್ತಗಳನ್ನೆ ಹೆಕ್ಕಿ,
ಹುಬ್ಬೆತ್ತಿ ನಗುವ ಲೊಟಕರಿಸಿ ನೆಕ್ಕಿ.
ಈಚೀಚೆ ಎಲ್ಲೆಲ್ಲು ಇವನ ನೆರಳು-
ಮೂಳೆಗಣ್ಣಿನ ಸುತ್ತ ಕರಿಯುಂಗುರವ ಬೆಳೆದ
ಮೂವತ್ತು ದಾಟಿರುವ ಬ್ರಹ್ಮಚಾರಿ;
ಆಳತೋಳಿಗೆ ದಬ್ಬಿ ಮಗುವನು, ಸಮಾಜದಲಿ
ಭಾಷಣದ ಸೇವೆ ನಡೆಸಿಹ ಶ್ರೀಮತಿ;
ಅಕ್ಕಿಯಂಗಡಿ ಮುಂದೆ ಮೈಲುದ್ದ ಕ್ಯೂನಿಂತು,
ಬೆವರಿಡುವ ಮುಖವ ಚೀಲದಲೆ ಒರೆಸುತ್ತಿರುವ
ಕಂಗಾಲುಗಣ್ಣಿನ ಸ್ವತಂತ್ರ ಗಣರಾಜ್ಯ;
ತಿವಿದಾಗ ಎಚ್ಚತ್ತು ಗಡಬಡಿಸಿ ಕೈಯೆತ್ತಿ
ನಿರ್ಣಯವ ಪಾಸುಮಾಡುವ ಪಕ್ಷ ಬಹುಮತ;
– ಇಲ್ಲೆಲ್ಲ ಆಡಿದಂತಿದೆ ಇವನ ಬೆರಳು.
ಇವನ ಮೈ ಒಮ್ಮೊಮ್ಮೆ ಬೆಳೆದು ಹರಡುವುದು
ಮಣ್ಣು ಮುಗಿಲಿನ ನಡುವೆ ನಂಜುತೆರೆಯಾಗಿ
ನಡುನಡುವೆ ಹರುಕಾಗಿ ಮೋಡಿ ಕೂಗುವುದು.
ಕಾರು ಮೋಟರು ರೈಲು ಕೈಗಾಡಿ ಪ್ಲೇನು,
ನರ ನಾಯಿ ಗಿಡ ಬಳ್ಳಿ ಕಾಗೆ ಗಿಳಿ ಮೀನು,
ಮಗು ಮುದುಕ ಮೊಳಕೆ ಮರ ಮಿಡಿ ಹೀಚು ಹಣ್ಣು-
ಎಲ್ಲಕ್ಕು ಸ್ಫರ್ಧೆ ಆಗ
ಹರುಕಿನಲಿ ತೂರುವಾಗ.
ತೆರೆ ತೂರಿದರೆ ಉಳಿವು
ತಡೆದು ಕೆಡೆದರೆ ಮುಗಿವು.
ತೆರೆ ಬಡಿದು ಸಿಡಿದ ಹರಣದ ಹರಹು ಕಂಡಾಗ
ಬೆರಗಾಗಿ ಬುದ್ಧಿಗನಿಸುವುದು,
ಸಾವೆ ಪ್ರಕೃತಿ, ಬಾಳೆ ವಿಕೃತಿ.
*****