ಹೊಳೆದಂಡೆಯ ಮುಟ್ಟಲು ಮರುಕಿ
ಮೆಲ್ಲಗೆ ಸ್ಪರ್ಶಿಸಿದಾಗ ಮುಳ್ಳು ಚುಚ್ಚಿ
ರಕ್ತ ಬಂತು ನಿನ್ನ ನೆನಪಾಗಿ
ಹಿತ್ತಲದ ನಂದಿ ಬಟ್ಟಲು ಹೂಗಳು
ಗಂಧ ಯಾಕೋ ಪರಿಮಳ ಸೂಸಲು
ಕಣ್ಣುಗಳು ಬಾಡಿದವು ನಿನ್ನ ನೋಟಗಳ ಮರೆತು.
ಯಾರು ಎಲ್ಲಿ ಯಾವ ಭಾವಕೆ
ಬಸಿರಾದರೂ, ನದಿ ಸುಮ್ಮನೆ
ಹರಿಯುತ್ತದೆ ಸಾಗರದ ಸೆಳುವಿಗೆ
ಮುಂಜಾನೆ ಅರಳಿದ ಹೂ ಸಂಜೆ ಬಾಡಿ
ಮಬ್ಬು ಕತ್ತಲೆ ಕೋಣೆಯಲ್ಲಿ ನಿನ್ನ ಕರಿ
ನೆರಳು ದಾಟಿ ಬರುವುದಿಲ್ಲ ಅಂಗಳದಿಂದ
ಕೋಣೆಯವರೆಗೆ ಹೊರಗೆ ಸ್ವಲ್ಪ
ತಿಳಿ ಬೆಳದಿಂಗಳು ಮಾತ್ರ ಹರಡಿದೆ ಮುಸುಕಾಗಿ.
ಎಲ್ಲೆಲ್ಲೋ ಹಾರಾಡಿದ ಚಿಟ್ಟೆ ಹೀರಿದ
ಮಕರಂದ ಜೇನು ಗೂಡಾಗಿ ನನ್ನೆದೆ
ಸಿಹಿ ಹನಿಯ ತುಂಬಿದೆ ಬರೀ ಬೆವರ
ಹನಿಗಳು ಸಾರುತ್ತಿವೆ; ತಂಗಾಳಿ ಬೀಸದ
ಉರಿ ಹಗಲಿನಲಿ ಎಲ್ಲೆಲ್ಲೋ ಆಸ್ಪತ್ರೆಯ
ವಾಸನೆ ನೀನು ಮುಖ ತೋರಿಸದೆ
ಜಡಿ ಹೋದ ಸೂರ್ಯ ತಾಪದಿಂದ
ಕುದಿದ ಹಗಲು ಹೈರಾಣವಾಗಿದೆ ನಿನ್ನಿಂದ.
ಎಲ್ಲ ಕಾಲಕ್ಕೂ, ಎಲ್ಲರಂತೆ ಇಲ್ಲದ ಸಂಬಂಧ
ನೆನಪಿನಕೊಂಡಿ ಅಲ್ಲ ನಿನ್ನ ಇಲ್ಲಿ ನನ್ನ
ಅಬ್ಬೆ ಪಾರಿಯಂತೆ ನಿಲ್ಲಿಸಿ ಬಿಟ್ಟಿವೆ ಬಯಲಿನಲಿ.
*****