ಕಾರದ ಹೂಹನಿ ನೀ
ಖಾರವಾಗದೇ ಬಾ
ಉಬ್ಬರಿಸದೆ ಅಬ್ಬರಿಸದೆ
ತೇಲುವ ಮಳೆಬಿಲ್ಲಿಗೆ ಮಧುರ ಸ್ಪರ್ಶ
ಮೋಹನನಾಗಿ ಬಾ
ಲಘು ತೆಪ್ಪಕ್ಕೆ ನೀರ ಸೆಲೆಯಾಗಿ ಬಾ
ಶರಧಿಯಾಳದಿ ಚಿಪ್ಪ ಗರ್ಭವ ಸೇರಿ
ಮುತ್ತಾಗು ಬಾ
ಒತ್ತಾದ ಗಿಡಗಂಟಿಗೆ
ಮಸ್ತಕಾಭಿಷೇಕದ ಮಂತ್ರಜಲವಾಗಿ ಬಾ
ಮೊದಲ ಮಳೆಹನಿಯ ಮುದ್ದು
ಆಲಿಂಗನ ಬೇಡುವ ಎಳೆ ಬಾಲೆಯರ
ಮುಂಗುರಳ ನೇವರಿಸು ಬಾ
ಪದ್ಮಪತ್ರದ ಮೇಲೆ ಕುಣಿವ
ಅಂಟಿಕೊಳ್ಳದ ಒಂಟಿ ಹನಿಯಾಗಿ ಬಾ
ಮುಗಿಲಕನ್ಯೆಯ ಮಸ್ತಕಕೆ ಮುದ್ದಾಡಿ
ಮನವೊಲಿಸಿ ಭೂರಾಣಿ ರಂಗೇರಿಸು ಬಾ
ಅಂತಕ್ಕೂ ಅನಂತಕ್ಕೂ ಎಣೆಯಾಗಿ
ಅಣುಅಣುವ ಮಣಿಗೊಳಿಸು ಬಾ
ಮುಗಿಲಿಂದ ಬಿದ್ದರೂ
ಮಣ್ಣ ಆಸೆಯ ಹೊತ್ತು
ಮುಗಿಲಿಗೇರಿದರೂ ಚುಕ್ಕಿ
ಚಂದ್ರಮನ ಮೋಹಕ್ಕೆ ಸೋತು
ಮರೆಯದೇ ಬಾ ಮಧುವಾಗಿ ಬಾ.
*****