“ಸ್ಟಾಪ್ ಇಟ್! ಸ್ಟಾಪಿಟ್!” ಆತ ಚೀರಿದ. ಚೀಸಿನ ಕರಡಿಗೆ ಟಣ್ ಟಣ್ಣೆಂದು ಹಾರಿ ಕುಣಿಯುತ್ತ ದಾಪುಗಾಲಿನಲ್ಲಿ ಕೆಳಗಿಳಿಯುತ್ತಿತ್ತು. ಅದನ್ನ ತಡೆದು ನಿಲ್ಲಿಸಬೇಕಾದರೆ ಅದಕ್ಕಿಂತ ಹೆಚ್ಚಿನ ವೇಗದಲ್ಲಿ ತಾನು ಕೆಳಗಿಳಿಯಬೇಕು. ಆದರೆ ತೋಳಿನ ತುಂಬ ಚೀಲಗಳಿವೆ. ಆ ಚೀಲಗಳನ್ನು ರೇಶ್ಮಳವಶಕ್ಕೆ ಕೊಟ್ಟು ತಾನು ಕರಡಿಗೆಯ ಬೆನ್ನು ಹತ್ತುವ ಉಪಾಯ ಅಂಥ ತುರ್ತಿನಲ್ಲಿ ಅವನ ಮನಸ್ಸಿಗೆ ಹೊಳೆದಿರಲಿಲ್ಲ. ಈಗ ಅರ್ಧ ಹಾದಿಯಲ್ಲಿ ಅವನ್ನು ಎಸೆದು ಬಿಡಲಾರ. ಚೀಸಿನ ಕರಡಿಗೆಗೆ ಇದು ಗೊತ್ತಾದ ಹಾಗಿತ್ತು. ಅದು ಆಗಾಗ ಹಿಂದಕ್ಕೆ ನೋಡಿ ನಗುವಂತೆ ತೋರಿತು. ಈಗಾಗಲೆ ಅದರ ಮುಖದಲ್ಲಿ ಕಣ್ಣು ತುಟಿಗಳು ಬಂದು ಬಿಟ್ಟಿದ್ದುವು. ಇದೀಗ ಬೇಸ್ ಮೆಂಟ್ ನಲ್ಲಾದರೂ ನಿಂತರೆ ಸರಿ, ಸೀದಾ ರೋಡಿಗಿಳಿದು ಅಲ್ಲಿ ಉರುಳಲು ಆರಂಭಿಸಿದರೆ ಮಾಡುವುದೇನು? ಕೆಳಗಿನಿಂದ ಕೆಲವು ಜನ ಮೆಟ್ಟಲೇರಿ ಮೇಲೆ ಬರುತ್ತಿರುವುದು ಕಾಣಿಸಿತು. ಆದರೆ ಅವರೆಲ್ಲರೂ ಸಭ್ಯ ಜನರಂತೆ ಬಹಳ ಗೌರವದಿಂದ ಕರಡಿಗೆಗೆ ದಾರಿ ಕೊಡಲು ಬದಿಗೆ ಸರಿದು ನಿಲ್ಲುತ್ತಿದ್ದಾರೆ. ಈ ಮೂರ್ಖರಿಗೆ ಇಷ್ಟೂ ತಿಳಿಯುವುದಿಲ್ಲವೇ ಎಂದು ವಿನಯಚಂದ್ರ ರೇಗಿದ. “ಸ್ಟಾಪಿಟ್! ಸ್ಟಾಪಿಟ್!” ಎಂದು ಅರಚತೊಡಗಿದ.
ಯಾರೋ ಹಣ ಮೇಲೆ ಕೈಯಿರಿಸಿದ ಹಾಗಾಯಿತು. ಬಲವಂತವಾಗಿ ರೆಪ್ಪೆಗಳನ್ನು ತೆರೆದು ನೋಡಿದ. ಅಮ್ಮ! ಅರೆ! ಈಕೆ ಇಲ್ಲಿ! ಎಂದು ಒಂದು ಕ್ಷಣ ದಿಗಿಲಾಯಿತು.
“ವಿನೂ, ಯಾತಕ್ಕೆ ಹೀಗೆ ಕಿರುಚುತ್ತಾ ಇದ್ದೀ ಕೆಲವು ದಿನಗಳಿಂದ? ಏನಾಗಿದೆ ನಿನಗೆ? ಏನನ್ನಾದರೂ ಕಂಡು ಭಯಪಟ್ಟುಕೊಂಡಿದ್ದೀಯಾ?”
ವಿನಯಚಂದ್ರ ಹಾಸಿಗೆಯಲ್ಲಿ ಎದ್ದುಕುಳಿತು ಕಣ್ಣೊರಿಸಿಕೊಂಡ. “ಏನಿಲ್ಲಮ್ಮ, ಚೀಸಿನ ಕರಡಿಗೆ ಸ್ಟೇರ್ ಕೇಸಿನಲ್ಲಿ ಉರುಳ್ತಾ ಇತ್ತು. ಅದನ್ನ ಹಿಡಿಯೋಕೆಂತ ನಾನು ಓಡ್ತಾ ಇದ್ದೇ ” ಎಂದು ನಕ್ಕ.
“ಚೀಸಿನ ಕರಡಿಗೇನೇ?”
“ಬೇಸ್! ಚೀಸ್ ಗೊತ್ತಿಲ್ವೆ? ಬ್ರೆಡ್ ಸಾಂಡ್ ವಿಚ್, ಸಲಾಡ್?”
“ಕೆಟ್ಟ ಕನಸು ಕಂಡಿದ್ದೀಯಾ! ನೀ ರಾತ್ರಿ ಬೇಗ ಮಲಕೋತಾ ಇಲ್ಲ. ಅದಕ್ಕೇ.”
“ಫ಼ೈನಲ್ ಈಯರ್. ನೋಡಿದಿಯಾ ಈ ಪುಸ್ತಕಗಳನ್ನ! ಇವೆಲ್ಲ ಓದಿ ಜೀರ್ಣಿಸಿಕೋಬೇಕು ನಾನು.”
“ಆಯ್ತಾಯ್ತು ಈಗ ಮಲಕ್ಕೊ”
“ಗಂಟೆ ಎಷ್ಟಾಯ್ತಮ್ಮ?”
“ಇನ್ನೂ ಆರಾಗಿಲ್ಲ.”
“ಚಾ ಮಾಡಿ ಕೊಡ್ತೀಯಾ? ಅಥ್ವಾ ಬೇಡ ನಾನೇ ಮಾಡಿಕೊಳ್ತೇನೆ. ಅಂತೂ ಇನ್ನು ನಿದ್ದೆ ಮಾಡೋಕೆ ನನ್ನಿಂದಾಗಲ್ಲ. ರಾತ್ರಿಯೆಲ್ಲ ಆ ಕರಡಿಗೆ ಹಿಂದೆ ಓಡಿದ್ದಾಯಿತು!”
ಅವನು ಮುಖ ತೊಳೆದು ಬರುವಷ್ಟರ ಹೊತ್ತಿಗೆ ಕಪ್ಪಿನಲ್ಲಿ ಚಹಾ ಹೊಗೆಯಾಡುತ್ತಾ ಕುಳಿತಿತ್ತು. ಬೆಳಗಿನ ಹೊತ್ತು ಚಹಾದಷ್ಟು ಜ್ಞಾನಪ್ರಚೋದಕ ಬೇರೊಂದಿಲ್ಲ. ಪರಿಮಳವನ್ನು ಮೂಗಿನಿಂದ ಹೀರಿದ. ನಂತರ ಕಪ್ಪನ್ನು ತುಟಿಗಿರಿಸಿಕೊಂಡ.
ಮೇಜಿನ ಮೇಲೆ ಬೋರಲು ಹಾಕಿದ ಪುಸ್ತಕಗಳು ಒಂದು ವಾರದಿಂದಲೂ ಹಾಗೇ ಇವೆ. ಪೆನ್ನು, ಪೆನ್ಸಿಲು, ಕಾಗದ ಇತ್ಯಾದಿಗಳು ಸಂಕೇತಗಳ ಹಾಗೆ ಅಸ್ತವ್ಯಸ್ತವಾಗಿ ಬಿದ್ದಿವೆ. ಮೇಜನ್ನು ಮುಟ್ಟಲು ಯಾರಿಗೂ ಪರ್ಮಿಶನ್ ಇಲ್ಲದ ಕಾರಣ ಸಾಕಷ್ಟು ಧೂಳು ತುಂಬಿದೆ. ಹಾಗೆ ಧೂಳು ತುಂಬಿದ ಪುಸ್ತಕಗಳಲ್ಲಿ ಹೆರಾಕ್ಲಿಟಸ್ ಕೂಡ ಒಂದು. ಅದೇ ರೀತಿ, ವಾರದಿಂದ ಗಡ್ಡ ಮಾಡಿಕೊಂಡಿಲ್ಲದ ಕಾರಣ ಈಗ ತಾನೆ ಜ್ವರದಿಂದ ಎದ್ದಹಾಗೆ ಕಾಣುತ್ತದೆ. ಪರವಾಯಿಲ್ಲ. ಒಂದು ರೀತಿಯ ಇಂಟಿಗ್ರೇಟೆಡ್ ವ್ಯಕ್ತಿತ್ವ ಬರ್ತಾ ಇದೆ. ಒಂದು ವೇಳೆ, ಪುಸ್ತಕಗಳು ಅಸ್ತವ್ಯಸ್ತವಾಗಿದ್ದು ತಾನು ಮಾತ್ರ ಗಡ್ಡ ಮಾಡಿಕೊಂಡು ನಾಜೂಕಾಗಿರುತ್ತಿದ್ದರೆ ಅಥವ ಪುಸ್ತಕಗಳು ನೀಟಾಗಿದ್ದು ತಾನು ಅಸ್ತವ್ಯಸ್ತನಾಗಿರುತ್ತಿದ್ದರೆ ವ್ಯಕ್ತಿತ್ವದಲ್ಲಿ ಇಂಟಿಗ್ರಟಿ ಸಾಧಿಸುತ್ತಿರಲಿಲ್ಲ.
ಹಾಸಿಗೆ ಮೇಲೆ ಪದ್ಮಾಸನ ಹಾಕಿ ಕೂತುಕೊಂಡು ಎಲ್ಲವನ್ನೂ ಮತ್ತೊಮ್ಮೆ ನೆನಪಿಗೆ ತಂದುಕೊಂಡ. ಕೆಳಕ್ಕಿಳಿಯುತ್ತಿದ್ದ ಚೀಸಿನ ಟಿನ್ನು ಕೊನೆಗೂ ಲ್ಯಾಂಡಿಂಗ್ ಒಂದರಲ್ಲಿ ನಿಂತಿತು. ಅದನ್ನು ಚೀಲದೊಳಗೆ ಭದ್ರವಾಗಿ ಕುಳ್ಳಿರಿಸಿ ಮತ್ತೆ ಮೆಟ್ಟಲುಗಳನ್ನೇರಿ ಬಂದಾಗ ರೇಶ್ಮ ಪಕಪಕನೆ ನಗಲು ಸುರುಮಾಡಿದ್ದಳು. ಆಶ್ಚರ್ಯವೆಂದರೆ ಅವಳ ನಗುವಿನಿಂದ ಅವನಿಗೆ ಎಳ್ಳಷ್ಟು ಬೇಸರವೆನಿಸಿರಲಿಲ್ಲ. ವಿರುದ್ಧವಾಗಿ ಅವಳು ಹೀಗೆ ಇನ್ನೊಮ್ಮೆ ನಗುವುದಾದರೆ ಚೀಸಿನ ಟಿನ್ನನ್ನ ಮರಳಿ ಕೆಳಕ್ಕುರುಳಿಸಲೂ ಅವನು ತಯಾರಿದ್ದ. ಒಟ್ಟಾರೆ ಅವಳನ್ನ ನಗಿಸುವುದೇ ಒಂದು ಸಾರ್ಥಕ ಕ್ರಿಯೆ ಅನಿಸಿತ್ತು.
“ಒಳ್ಳೆ ಹಟ ಬಿಡದ ತ್ರಿವಿಕ್ರಮ ನೀವು.” ಎಂದೆಲ್ಲ ರೇಶ್ಮ ಹೊಗಳಿಕೆಯ ಮಾತುಗಳನ್ನಾಡಿದ್ದಳು. ಅವಳ ಮಾತುಗಳನ್ನು ಕೇಳುವುದೇ ಆನಂದ, ಅವಳ ಜತೆಯಲ್ಲಿ ಮೆಟ್ಟಲುಗಳನ್ನು ಏರುವುದೇ ಮಹತ್ಕಾರ್ಯ, ಅವಳು ವಾಸಿಸುತ್ತಿರೋ ಮಹಲಿನಲ್ಲಿ ಬದುಕುತ್ತಿರೋದೇ ಒಂದು ಘಟನೆ, ಅವಳಿರುವ ಯುಗದಲ್ಲಿ ತಾನೂ ಇದ್ದೇನೆಲ್ಲಾ ಎನ್ನೋದೇ ತೃಪ್ತಿ. ಕೇವಲ ಐದು ನಿಮಿಷಗಳಲ್ಲಿ ವ್ಯಕ್ತಿ ಯೊಂದು ಇಷ್ಟು ಸಮೀಪವಾಗುವುದು ಸಾಧ್ಯವೆ? ಇತ್ಯಾದಿ ಚಿಂತಿಸುತ್ತಿರುವಂತೆಯೇ ಅವರು ಅವಳ ಮನೆಯನ್ನು ತಲುಪಿದ್ದರು. ಮೌನದ ಅರ್ಥ ಜಾಸ್ತಿಯಾಗಬಹುದೆಂದು ಅವನು ಮಾತಾಡುತ್ತಲೇ ಇದ್ದ :
“ನಾನೇನು ಹೇಳ್ತ ಇದ್ದೆ ಅಂದರೆ ನನ್ನ ನೇಬರುಗಳನ್ನು ನಾನು ತಿಳೀಬೇಕು ಅಂತ. ಅಲ್ದೆ ಬದುಕಿಗೇನು ಅರ್ಥ, ಹೇಳಿ? ಈಗ ನಾನು ಇಲೆಕ್ತ್ರಾನಿಕ್ ಓದೋವನು, ನಿಮ್ಮದೇನಾದರೂ ಇಲೆಕ್ಟ್ರಾನಿಕ್ ಸಮಸ್ಯೆಗಳಿದ್ದರ್ ನನಗೆ ಹೇಳಿ ಏನೂ ಭಿಡ ಮಾಡಿಕೊಳ್ಳಬೇಡಿ!”
“ಥ್ಯಾಂಕ್ಯೂ!”
“ವಿನ್. ನನ್ನ ವಿನ್ ಅಂತ ಕರೀರಿ. ನನಗೆ ಹಾಗೆ ಕರಿಸಿಕೊಳ್ಳೋದೇ ಇಷ್ಟ. ಇಂಗ್ಲೀಷಿನಲ್ಲಿ ಇದಕ್ಕೆ ಏನಂತಾರೆ ಗೊತ್ತೆ?”
“ಏನಂತಾರೆ?”
“ಡಿಮಿನ್ಯೂಟಿವ್ಸ್ ಅಂತ.”
“ಹಾಗಂದ್ರೆ?”
“ಚಿಕ್ಕದು, ಪುಟ್ಟುದು ಅಂತ.”
“ಚಿಕ್ಕಪುಟ್ಟುದು?”
“ಹೂಂ. ಅಂದರೆ ದೊಡ್ಡ ಹೆಸರನ್ನು ಅಡ್ಡಕ್ಕೆ ಕತ್ತರಿಸುವುದು. ಅಡ್ಡ ಹೆಸರು. ಇದಕ್ಕೆ ಸಾಂಕೇತಿಕಮಹತ್ವ ಇದೆ. ಹಾಗನಿಸೋಲ್ಲವೆ ನಿಮಗೆ?”
“ಅನಿಸ್ತದೆ. ಆದರೆ ಏನೂಂತ ಹೇಳಲಾರೆ.”
“ಹೆಸರು ಚಿಕ್ಕದಾದ ಹಾಗೆ ಸಂಬಂಧಗಳು ಹತ್ತಿರ ಆಗ್ತವೆ-ತರಂಗಾಂತರ.”
“ತರಂಗಾಂತರ?”
“ವೇವ್ ಲೆಂಗ್ತ್, ನಿಮಗೆಂದಾದರೂ ಈ ತರಂಗಾಂತರಗಳ ಅನುಭವ ಆಗಿದ್ಯೆ?”
“ತರಂಗಾಂತರಗಳ ಅನುಭವ ಅಂದ್ರೆ?”
“ವೇವ್ ಲೆಂಗ್ತ್…. ಯುನೋ ಟಚಿಂಗ್… ಸ್ವರ್ಶ.”
“ಸ್ಪರ್ಶ!”
“ಅಂದ್ರೆ ಒಂಥರ ಯಾರೋ ಮೈ ತಡವುವ ಹಾಗೆ ಅಥವ ಅಷ್ಟು ಹತ್ತಿರ ಬಂದ ಹಾಗೆ. ಟಚಿಂಗ್ ಎಂಡ್ ನಾಟ್ ಟಚಿಂಗ್….”
“ಬ್ಯೂಟಿಫ಼ುಲ್! ನಿಮಗೊಂದು ಗುಟ್ಟು ಹೇಳಲೆ?”
“ಹೇಳಿ!”
ಸ್ಪರ್ಶ ಅನ್ನೋ ಪದ ನನಗೆ ತುಂಬಾ ತುಂಬಾ ಇಷ್ಟ. ನನಗೆಂದಾದರೂ ಒಬ್ಬಳು ಮಗಳು ಹುಟ್ಟಿದರೆ ಅವಳಿಗೆ ಸ್ಪರ್ಶ ಅಂತ್ ಹೆಸರಿಡಬೇಕೆಂದಿದ್ದೇನೆ.”
“ಅಷ್ಟು ದೂರದ ಮಾತು ಈಗ ಯಾತಕ್ಕೆ ಅಂತ ಏನೋ ಪೆದ್ದು ಮಾತು ಹೊರಬೀಳುವ ಮೊದಲೆ ಮನೆಬಾಗಿಲು ತೆರೆದಿತ್ತು. ಈ ದೈವಾನುಗ್ರಹಕ್ಕೆ ವಿನಯಚಂದ್ರ ಕೃತಜ್ಞತನಾದ. ತಾನು ಹವ್ಯಾಸಿ ಚದುರಂಗಪಟುವಿನಂತೆ. ಆಡುವ ಉತ್ಸಾಹದಲ್ಲಿ ಆರಂಭಿಸುವವನು. ಆದರೆ ಕೊನೆ ತಲುಪುವ ರೀತಿ ತಿಳಿಯದು. ಬಾಗಿಲು ತೆರೆದುದು ನಡುವಯಸ್ಸಿನ ಹೆಂಗಸು, ರೇಶ್ಮಳ ತಾಯಿಯಿರಬಹುದು.
“ಮೈ ಮದರಿನ್….”
ಎಂದಳು ರೇಶ್ಮ ತುಸು ಚಿಂತೆಗೆ ಗುರಿಯಾದವಳಂತೆ-ಅಥವ ಸುಸ್ತಾದವಳಂತೆ. ಎರಡೂ ಇರಬಹುದು.
“ವ್ಹಾಟ್?”
ಎಂದ ವಿನಯಚಂದ್ರ, ಸರಿಯಾಗಿ ಕೇಳಿಸದೆ ಇದ್ದಿರಬಹುದು ಅಂದುಕೊಳ್ಳುತ್ತ.
“ಮದರಿನ್” ಎಂದಳು ಮತ್ತೆ.
“ಮದರಿನ್?”
“ಯಸ್, ಗೊತ್ತಲ್ವೆ?”
“ಓಹೋ!”
“ಮಮ್ಮಿ, ಇವರು ವಿನಯಚಂದ್ರ ಅಂತ. ವಿನ್ ಅಂತ ಕರೆಯೋದು ಇವರಿಗೆ ಇಷ್ಟ. ಇಲ್ಲೆ ಕೆಳಗಿದ್ದಾರೆ ಇದೇ ಬ್ಲಾಕಿನಲ್ಲಿ. ಈ ಚೀಲಗಳನ್ನ ಹೊತ್ತು ತರೋದಕ್ಕೆ ತುಂಬ ಸಹಾಯ ಮಾಡಿದರು.”
ರೇಶ್ಮ ಕಿವಿ ಕೇಳಿಸದವರಿಗೆ ಹೇಳುವಂತೆ ಬಹಳ ಎತ್ತರದ ಧ್ವನಿಯಲ್ಲಿ ವಿನಯಚಂದ್ರನ್ನ ಪರಿಚಯ ಮಾಡಿಸಿಕೊಟ್ಟಳು. ಕಿವಿ ಕೇಳಿಸದವರ ಸಹಜ ಕುತೂಹಲದಲ್ಲಿ ಆ ಮಹಿಳೆ ಪ್ರತಿಯೊಂದು ಪದವನ್ನು ಮತ್ತೆ ಮತ್ತೆ ಕೇಳಿ ತಿಳಿದುಕೊಂಡಳು.
ರೇಶ್ಮ ವಿನಯಚಂದ್ರನಿಗೆ ಹೇಳಿದಳು:
“ಒಳಕ್ಕೆ ಬನ್ನಿ. ಯೂ ಮಸ್ಟ್ ಹ್ಯಾವ್ ಸಂತಿಂಗ್!”
ಆದರೆ ವಿನಯಚಂದ್ರನ ಪೂರ್ತಿ ಉತ್ಸಾಹ ಕುಸಿದುಹೋಗಿತ್ತು. ಕೇವಲ ಒಂದು ಪದ ಮನುಷ್ಯನನ್ನು ಸ್ವರ್ಗದಿಂದ ನರಕಕ್ಕೆ ತಳ್ಳಬಹುದ ಎಂದುಕೊಂಡು ಆಶ್ಚರ್ಯಚಕಿತನಾದ. ರೇಶ್ಮಳ ಕುತ್ತಿಗೆ, ಕಾಲುಬೆರಳುಗಳನ್ನು ಅವನ ಕಣ್ಣುಗಳು ಹುಡುಕತೊಡಗಿದುವು. ಯಾವ ಚಿಹ್ನೆಗಳೂ ಕಂಡುಬರಲಿಲ್ಲ. ಆದರೆ ಯೂನಿಸೆಕ್ಸ್ ಯುಗದಲ್ಲಿ ಇಂಥವೆಲ್ಲ ಎಲ್ಲಿ ಕಾಣಿಸಬೇಕು?
ಶರಬತ್ತಿನ ಗ್ಲಾಸನ್ನು ಕೊಡುತ್ತ ನೀವು ತುಂಬ ಬುದ್ಧಿ ವಂತರಿರಬೇಕು.”
“ಡಿಪೆಂಡ್ಸ್,” ಅಂದ ಮುಖದಲ್ಲಿ ನಗೆಯನ್ನು ತಂದುಕೊಂಡು, ನಂತರ ಏನೋ ನೆನಪಾದವವಂತೆ-
“ಹಾಗದರೆ ನಿಮ್ಮ ಮದರ್ ಎಲ್ಲಿ?” ಎಂದ.
“ಓ, ವಿನ್! ಅದೊಂದು ದೊಡ್ಡ ಕತೆ! ” ಎಂದು ನಿಟ್ಟುಸಿರಿಟ್ಟಳು.
“ಬ್ರೀಫ಼ಾಗಿಯಾದರೂ ಹೇಳಬಾರದೆ?”
“ಎನದರ್ ಟೈಮ್!”
“ಎನದರ್ ಟೈಮ್ ಇರುತ್ಯೆ?”
“ಯಾಕಿರಲ್ಲ?”
ನಂತರ ಅವರು ತಂತಮ್ಮ ಫ಼ೋನು ನಂಬರುಗಳನ್ನ ವಿನಿಮಯ ಮಾಡಿಕೊಂಡಿದ್ದರು. ತಾನೇ ಮೊದಲು ಕರೆಯುತ್ತೇನೆ ಎಂದು ರೇಶ್ಮ ಭರವಸೆ ನೀಡಿದ್ದಳು. ಲಿಫ಼್ಟು ಈಗಾಗಲೆ ಆರಂಭವಾಗಿದ್ದರೂ ಅದಕ್ಕೆ ಕಾಯದೆ ಮಹಡಿ ಮೆಟ್ಟಲುಗಳನ್ನು ಒಂದೊಂದಾಗಿಯೆ ಇಳಿದೇ ಬಂದಿದ್ದ. ಸದ್ಯದಲ್ಲೆ ನಡೆದಿದ್ದ ಘಟನಾವಳಿಯನ್ನು ಮನಸ್ಸಿನಲ್ಲಿ ಏಕಾಂತವಾಗಿ ಮೆಲುಕುಹಾಕುವುದು ಅವನಿಗೆ ಬೇಕಾಗಿತ್ತು. ಅಂತೂ ಮನೆ ತಲುಪಿದಾಗ ಲಂಚಿನ ಸಮಯ ದಾಟಿತ್ತು. ಹೊಟ್ಟೆ ಹಸಿಯುತ್ತಿದ್ದರೂ ತಿನ್ನಲು ಮನಸ್ಸಾಗಲಿಲ್ಲ. ತಾನೇ ಒಂದು ಕಪ್ ಚಹಾ ಮಾಡಿ ಕುಡಿದ. ರೇಶ್ಮಳ ಮನೆಯ ಫೋನ್ ನಂಬರು ಈಗಾಗಲೆ ನೆನಪಿನಲ್ಲಿ ದಾಖಲಾಗಿತ್ತು.
ಕೈ ಅನಿಯಂತ್ರಿತವಾಗಿ ಫೋನಿನ ಕಡೆ ಸರಿಯಿತು. ಡಿಜಿಟಲ್ ರಿಸೀವರಿನ ನಂಬರುಗಳನ್ನು ಒತ್ತಿದ. ಆ ಕಡೆಯಿಂದ “ಯಸ್?” ಎಂಬ ದನಿ.
“ರೇಶ್ಮಾ?”
“ಸ್ಪೀಕಿಂಗ್”
“ನಾನು ವಿನ್ ಮಾತಾಡ್ತಿರೋದು”
“ವಿನ್?….ಓಹೋ! ವಿನ್! ಯಾಕೆ ಏನಾಯಿತು? ಏನಾದರೂ ಇಲ್ಲಿ ಮರೆತುಬಿಟ್ಟಿದ್ದೀರೇನು ಮತ್ತೆ?”
“ಏನೂ ಮರೆತಿಲ್ಲ, ರೇಶ್ಮ. ನಿಮ್ಮಲ್ಲೊಂದು ಕ್ಷಮಾಪಣೆ ಕೇಳಬೇಕಾಗಿದೆ.”
“ಕ್ಷಮಾಪಣೆ?ಯಾತಕ್ಕೆ?”
“ನಿಮಲ್ಲೊಂದು ಸುಳ್ಳು ಹೇಳಿದೆ.”
“ಅಂದ್ರೆ ನೀವು ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಓದ್ತ ಇಲ್ಲ?”
“ಅದಲ್ಲ. ನಾನು ಇಲೆಕ್ಟ್ರಾನಿಕ್ಸ್ ಓದ್ತಿರೋದು ಖರೇನೇ. ಈ ಮಾರ್ಚ್ ನಲ್ಲಿ ಕೊನೆ ಪರೀಕ್ಷೆ. ನಾನು ಬೋನಾಫ಼ಾಯಿಡ್ ಸ್ಟೂಡೆಂಟು. ಬೇಕಾದರೆ ನಿಮಗೆ ಐಡೆಂಟೆಟಿ ಕಾರ್ಡ್ ತೋರಿಸ್ತೇನೆ.”
“ಛಿ! ಛಿ! ಸುಮ್ಮಗೆ ಹೇಳಿದೆ ಅಷ್ಟೆ. ಬಹುಶಃ ನೀವು ಈ ಕಟ್ಟಡದಲ್ಲಿ ವಾಸ ಮಾಡ್ತ ಇಲ್ಲ!”
“ಈ ಕಟ್ಟಡದೊಳಗಿನ ನನ್ನ ಮನೆಯಿಂದ್ಲೆ ನಾನು ಮಾತಾಡ್ತಿರೋದು!”
“ಹಾಗಾದ್ರೆ ಮತ್ತಿನ್ನೇನು?”
“ನಾನು ಬೇಸ್ಮೆಂಟ್ ನಲ್ಲಿ ಕೂತಿದ್ನೆಲ್ಲ, ಅದು ಓದೋಕ್ಕೆ ಅಲ್ಲ!”
“ನನಗೆ ಗೊತ್ತಿತ್ತು!”
“ನಿಮಗೆ ಗೊತ್ತಿತ್ತು!?”
“ನೀವು ಯಾರನ್ನೊ ಕಾಯ್ತ ಇದ್ದಿರಿ ಅಲ್ವೆ?”
“ನಿಜ. ಯಾರನ್ನ ಕಾಯ್ತ ಇದ್ದೆ ಹೇಳಿ ನೋಡೋಣ!”
“ಅದು ಗೊತ್ತಿಲ್ಲ. ನಿಮ್ಮ ಪರಿಚಯವಾಗಿ ಇನ್ನೂ ಗಂಟೆ ಕೂಡ ಆಗಿಲ್ಲವಲ್ಲಾ.”
“ನಾನು ನಿಮ್ಮನ್ನೆ ಕಾಯ್ತಾ ಇದ್ದೆ, ರೇಶ್ಮ!”
“ನನ್ನ ಕಾಯ್ತ ಇದ್ದಿರ? ಯಾತಕ್ಕೆ?”
“ಅದು ನನಗೆ ತಿಳೀದು. ತರಂಗಾಂತರಗಳ ಬಗ್ಗೆ ನಿಮಗೆ ಹೇಳಿದ್ದೆ. ಪ್ಯಾರಾ ಸೈಕಾಲಜಿಯಲ್ಲಿ ನಿಮಗೆ ವಿಶ್ವಾಸವಿದೆಯೇ?”
“ನಿಮಗಿದೆಯೆ?”
“ನನಗಿದೆಯೋ ಇಲ್ಲವೋ ಎನ್ನುವ ಪ್ರಶ್ನೆಯಲ್ಲ. ಇಟ್ ಈಸ್ ಹ್ಯಾಪನಿಂಗ್! ಹೀಯರಂಡ್ ನೌ!”
“ಇದಕ್ಕೇನಾದರೂ ಮಾಡುವ ಹಾಗಿದೆಯೆ?”
“ಇದೆ… ಭಾಳ ಇದೆ. ಆದರೆ ಎಲ್ಲ ನೀವಿಲ್ಲಿ ಬಂದಾಗ ಹೇಳ್ತೇನೆ. ಫೋನ್ ನಲ್ಲಿ ಬೇಡ.”
“ಒಂದು ಮಾತು ಹೇಳಲೆ?”
“ಹೇಳಿ!”
“ಇನ್ನು ಮುಂದೆ ನಾನೇ ನಿಮಗೆ ಫೋನ್ ಮಾಡ್ತೇನೆ. ಅಲ್ಲೀತನಕ ವಿರಾಮ. ಯಾಕೇಂತ ಕೇಳಬೇಡಿ.”
ನಂತರ ಅವನಿಗೆ ಫ಼ಕ್ಕನೇ ಹೆರಾಕ್ಲಿಟಸ್ ಪುಸ್ತಕದ ನೆನಪಾಗಿತ್ತು. ಎಲ್ಲಿ ಹೋಯಿತು? ನಿಜ, ರೇಶ್ಮಳ ಜತೆ ಎದ್ದು ಹೋಗುವಾಗ ಪುಸ್ತಕವನ್ನು ಅಲ್ಲೆ ಒಗೆದು ಬಂದಿದ್ದ. ಇದು ಸರಿಯೆನಿಸದೆ ಮತ್ತೆ ಬೇಸ್ ಮೆಂಟ್ ಗೆ ಇಳಿದುಹೋದ. ಪುಸ್ತಕ ಇನ್ನೂ ಅಲ್ಲೆ ಬಿದ್ದಿತ್ತು. ಪುಕ್ಕಟೆ ದೊರೆತರೆ ಒಂದನ್ನೂ ಬಿಡದ ಜನ ಹೆರಾಕ್ಲಿಟಸನ್ನ ಮಾತ್ರ ಹೀಗೆ ಬಿಡಬೇಕಾದರೆ ಏನರ್ಥ? ಪುಸ್ತಕವನ್ನು ಎತ್ತಿಕೊಂಡು ಮನೆಗೆ ಬಂದ. ತಲೆಯೊಳಗೆ ಮಾತ್ರ ರೇಶ್ಮಳ ಜತೆ ನಡೆದ ಭೇಟಿ ಪುನರಾವರ್ತನೆಗೊಳ್ಳುತ್ತಲೇ ಇತ್ತು. ಸಂಭಾಷಣೆಯ ಧ್ವನಿಮುದ್ರಿಕೆ ಮತ್ತೆ ಮತ್ತೆ ತಿರುಗುತ್ತಿತ್ತು.
ಈ ಘಟನೆ ನಡೆದು ಇಡೀ ಒಂದು ವಾರವೇ ಕಳೆದರೂ ರೇಶ್ಮಳಿಂದ ಫೋನ್ ಬಂದಿರಲಿಲ್ಲ. ಫೋನ್ ನ ಗಂಟೆ ಬಾರಿಸಿದಾಗೆಲ್ಲ ಧಾವಿಸಿ ರಿಸೀವರನ್ನ ಕಿವಿಗಿಟ್ಟುಕೊಂಡು ನಿರಾಶನಾಗುತ್ತಿದ್ದ. ಅವಳ ನಂಬರುಗಳನ್ನೊತ್ತುವುದಕ್ಕೆ ಕೈ ಮುಂದರಿಯುತ್ತಿದ್ದರೂ, ಬಲವಂತದಿಂದ ತಡೆಯುತ್ತಿದ್ದ. “ಇನ್ನು ಮುಂದೆ ನಾನೇ ನಿಮಗೆ ಫೋನ್ ಮಾಡ್ತೇನೆ. ಅಲ್ಲೀತನಕ ವಿರಾಮ. ಯಾಕೇಂತ ಕೇಳಬೇಡಿ.” ಎಂದಿದ್ದಳು ಅವಳು. ಮೆಟ್ಟಲಲ್ಲಿಯಾಗಲಿ, ಲಿಫ಼್ಟಿನಲ್ಲಿಯಾಗಲಿ ಅವಳು ಕಾಣಸಿಕ್ಕಿರಲಿಲ್ಲ. ಒಂದೆರಡು ಬಾರಿ ಅವನು ಹತ್ತನೇ ಮಹಡಿತನಕ ಹೋಗಿಬಂದ. ಮನೆಯ ಕರೆಗಂಟೆಯನ್ನೊತ್ತಲು ಮನಸ್ಸು ತಹತಹಪಟ್ಟರೂ ತಡೆದುಕೊಂಡು ವಾಪಸಾದ. ಕಾಲೆಜು ಕೆಲಸ ಮುಗಿಸಿ ತಕ್ಷಣ ಮನೆಗೆ ಬರತೊಡಗಿದ. “ಯಾರದಾದರೂಫೋನ್ ಬಂದಿತ್ತೆ?” ಅನ್ನೋದು ಮೊದಲ ಪ್ರಶ್ನೆ. “ಇಲ್ವಲ್ಲ” ಎಂದು ತಾಯಿಯ ಉತ್ತರ. “ನೆನಪು ಮಾಡಿ ನೋಡಮ್ಮ.” ಎಂದು ಒತ್ತಾಯ. “ಯಾರಾದ್ರೂ ಬಂದಿದ್ರೆ? ಚೀಟಿಗೀಟಿ ಬಿಟ್ಟೋಗಿದ್ರೆ?” ಅದಕ್ಕೂ ತಾಯಿಯ ನಕಾರಾತ್ಮಕ ಉತ್ತರ. ಒಂದು ವೇಳೆ ಮನೆಯಲ್ಲಿ ಯಾರೂ ಇಲ್ಲದಾಗ ರೇಶ್ಮ ಫೋನ್ ಮಾಡಿರಬಹುದಾದ ಸಾಧ್ಯತೆಯಿಲ್ವೆ? ಅಥವಾ ಆಕೆ ಒಂದೆರಡು ವಾರಕ್ಕೆ ಎಲ್ಲಾದರೂ ಹೊರಟುಹೋಗಿರಬಹುದು. ಪರ್ಯಾಯ ಪ್ರಪಂಚಗಳನ್ನು ಸೃಷ್ಟಿಸುವ ಮನಸ್ಸಿನ ಸಾಧ್ಯತೆಗಳಿಗೆ ದಂಗಾದ-ಅಷ್ಟೆ; ಅದರಿಂದ ಉಹಾಪೋಹಗಳ ನಿರ್ಮಿತಿ ಕಾರ್ಯವೇನೂ ನಿಲ್ಲಲಿಲ್ಲ. ಬೀದಿಯಲ್ಲಿ ನಿಂತು ಹತ್ತನೇ ಫ್ಲೋರಿನ ಕಡೆ ನೋಡಿ ರೇಶ್ಮಳ ಮನೆಯನ್ನು ಗುರುತಿಸುವ ಯತ್ನ ಮಾಡಿದ. ಬಾಲ್ಕನಿಯಿಂದ ಗಾಳಿಗೆ ಬಡಿಯುತ್ತಿರುವುದು ಆಕೆಯ ಬಟ್ಟೆಯೇ ಇರಬಹುದೆ? “ವಿನ್! ದಿಸ್ ಈಸ್ ಯುವರ್ ಟೆಸ್ಟ್, ಮಗನೆ ! ನೀನಾಗಿ ಅವಳನ್ನ ಹುಡುಕೋದಕ್ಕೆ ಹೋಗಬೇಡ. ಇಷ್ಟವಿದ್ದರೆ ಅವಳಾಗಿ ಬರುತ್ತಾಳೇ; ಇಷ್ಟವಿರದಿದ್ದರೆ ಏನು ಮಾಡಿಯೂ ಉಪಯೋಗವಿಲ್ಲ. ಅದಲ್ಲದೆ, ಅದೇನೋ ದೊಡ್ಡಕತೆ” ಎಂದಿದ್ದಳು. ಹೀಗೆ ನಿರ್ಧರಿಸಿ, ಬಾಲ್ಕನಿ ಯಲ್ಲಿ ಕೂತು ಕೇವಲ ಸಿಗರೇಟಿನ ಮೊರೆಹೊಗುವ ಪರಿಪಾಠವನ್ನು ಆರಂಭಿಸಿದ.
ಅಲ್ಲಿ ಕೂತಾಗೆಲ್ಲ, ಮನುಷ್ಯರು ಯಾಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬ ಪ್ರಶ್ನೆ ಅವನನ್ನು ಕಾಡುತ್ತಿತ್ತು. ಕೆಲವೇ ತಿಂಗಳುಗಳ ಹಿಂದೆ ಒಬ್ಬಾಕೆ ಎಂಟನೇ ಮಹಡಿಯಿಂದ ಕೆಳಕ್ಕೆ ಹಾರಿ ಸತ್ತಿದ್ದಳು, ಘಟನೆ ನಡೆದಾಗ ತಾನಿರದಿದ್ದರೂ, ಬಿದ್ದ ದೇಹದ ವಿವರಗಳನ್ನು ಇತರರಿಂದ ತಿಳಿದಿದ್ದ. ಎಷ್ಟು ತೊಳೆದರೂ ನೆಲದಮೇಲಿನ ರಕ್ತದ ಕಲೆ ಹೋಗಲಿಲ್ಲವಂತೆ. ಆಕೆ ಯಾತಕ್ಕೆ ಹೀಗೆ ಮಾಡಿದಳು ಎಂಬ ಕುರಿತು ಖಚಿತವಾಗಿ ಯಾರಿಗೇನೂ ಗೊತ್ತಿರಲಿಲ್ಲ. ಒಂಟತನ, ವ್ಯಭಿಚಾರ, ಅತ್ತೆಯ ಕಿರುಕುಳ, ಅವಮಾನ- ಯಾವುದಿದ್ದರೂ ಇರಬಹುದು. ಆತ್ಮಹತ್ಯೆಗೆ ಐದನೆಯ ಮಹಡಿಯೂ ನಡೆಯುತ್ತದೆ. ಇದನ್ನು ನೆನೆಯುತ್ತಲೇ ತಲೆಸುತ್ತುವಂತಾಗುವುದು. ವರ್ಟಿಗೋ! ಅಥವಾ ಸಾವಿನ ಪ್ರೇರಣೆ? ಇಂಥ ರಾತ್ರಿಗಳಲ್ಲೇ ನಿದ್ದೆಯಲ್ಲಿ ಬೇಸಿನ ಕರಡಿಗೆ ಉರುಳಲು ಸುರುವಾಗುವುದು, ಎಷ್ಟು ತಡೆದರೂ ಅದು ನಿಲ್ಲದಿರುವುದು, ಯಾರಾದರೂ ಅದನ್ನ ನಿಲ್ಲಿಸಬಾರದೇ ಎಂದು ತಾನು ಚೀರುವುದು.
ಬಹಳ ದಿನಗಳ ನಂತರ ಈಜಲು ಹೋದಾಗ ಆತ್ಮೀಯ ಗೆಳೆಯ ಸಂತೋಷ್ ಚಟರ್ಜಿ ಸಿಕ್ಕಿದ, ಚಟರ್ಜಿ ಸಿಕ್ಕಿದ. ಚಟರ್ಜಿ ಡಿಪಾರ್ಟ್ ಮೆಂಟ್ ನಲ್ಲಿ ಅದೇನೋ ಸಂಶೋಧನಾ ಕೆಲಸದಲ್ಲಿ ತೊಡಗಿದ್ದವನು. ಸ್ಪೋರ್ಟ್ಸ್ ನಿಂದ ಹಿಡಿದು ಮನೋವಿಜ್ಞಾನದತನಕ ಸಕಲದರಲ್ಲೂ ತಲೆಹಾಕಿದ್ದರಿಂದ ಅವನ ರಿಸರ್ಚು ಎಂದೆಂದೂ ಮುಗಿಯದ ಕತೆಯಾಗಿತ್ತು. ಈಜು ಮುಗಿದ ಮೇಲೆ ವಿನಯಚಂದ್ರ ಅವನನ್ನು ಹತ್ತಿರದ ಬಾರಿಗೆ ಕರೆದೊಯ್ದ.
“ನಿನ್ನ ಜತೆ ಮಾತಾಡಬೇಕಿದೆ, ಸಂತೋಷ್. ವಾಸನೆ ಬರದ ಯಾವುದಾದರೂ ಡ್ರಿಂಕ್ಸ್ ಗೆ ಹೇಳು.”
“ವಾಸನೆ ಬರದ ಡ್ರಿಂಕ್ಸ್?”
“ಮನೆಯಲ್ಲಿ ತಾಯಿ ಇದ್ದಾಳಪ್ಪ, ಆಕೆಗೆ ಬೇಸರವಾಗಬಾರದು”
“ಚಟರ್ಜಿ ವಿನಯಚಂದ್ರನಿಗೋಸ್ಕರ ಪೈನು ತನಗೋಸ್ಕರ ವಿಸ್ಕಿ ಆರ್ಡರ್ ಮಾಡಿದ.
“ಸರಿ. ಈ ಒಂದು ವರ್ಷದಲ್ಲಿ ಏನೇನು ತಪ್ಪು ಮಾಡಿದ್ದಿಯೋ ಸಕಲವನ್ನೂ ಹೇಳು.”
ವಿನಯಚಂದ್ರ ಸಕಲವನ್ನೂ ಹೇಳಿ, ಚಟರ್ಜಿಯ ಉತ್ತರಕ್ಕಾಗಿ ಕಾದುಕುಳಿತ. ಸಿಗರೇಟಿನ ಮೇಲೆ ಸಿಗರೇಟು ಸೇದುತ್ತ ಆತ ಇವನ ಮಾನಸಿಕ, ಸಾಮಾಜಿಕ, ಲೈಂಗಿಕ ಸಮಸ್ಯೆಗಳನ್ನ ವಿಶ್ಲೇಷಣೆ ಮಾಡತೊಡಗಿದ. ಇದೆಲ್ಲದಕ್ಕೂ ಕಾರಣ ರಿಪ್ರೆಶನ್ ಎಂಬ ತೀರ್ಮಾನ ಕೊಟ್ಟು ಇನ್ನೊಂದು ರೌಂಡಿಗೆ ಆರ್ಡರ್ ಮಾಡಿದ.
“ರಿಪ್ರೆಶನ್ ಅಂದರೆ ಮನುಷ್ಯನ ಮನಸ್ಸಿನೊಳಗಿನ ಸ್ಕ್ಯಾನಿಂಗ್ ನಲ್ಲಿ ಎಲ್ಲೋ ಒಂದು ಕಡೆ ಲೆಕ್ಕಾಚಾರ ತಪ್ಪಾಗಿಬಿಡೋದು. ಅಪ್ ದ ಗಾರ್ಡನ್ ಪಾತ್! ತಲೆ ಬಂಡೆಗೆ ಡಿಕ್ಕಿ ಹೊಡೆದಂತೆ! ಇಲ್ಲೇನಪಾಂತಂದರೆ; ಯಾವುದೂ ಇಲ್ಲದೆ ಆಗೋದಿಲ್ಲ. ನಥಿಂಗ್ ಬಿಕಮ್ಸ್ ನಲ್! ಆದ್ದರಿಂದ ರಿಪ್ರೆಸ್ ಆಗಿರೋದು ಎಲ್ಲೋ ಕತ್ತಲ ತಿರುವಿನಲ್ಲಿ ಕಾದುಕೊಂಡಿರತ್ತದೆ. ಕಳ್ಳಬೆಕ್ಕಿನ ಹಾಗೆ. ಅವಕಾಶ ಸಿಕ್ಕಾಗ ನುಗ್ಗಿ ಬಿಡತ್ತೆ. ಭಾರತೀಯರು ಸೆಕ್ಸಿನ ಬಗ್ಗೆ ಕನಸಿನಲ್ಲಿ ಕಾಣೋವಷ್ಟು ಪಾಶ್ಚಾತ್ಯರು ಕಾಣಲ್ಲ. ಯಾಕೆ ಗೊತ್ತೆ?”
“ಯಾಕೆ”
“ಭಾರತೀಯರಲ್ಲಿ ಸೆಕ್ಸ್ ರಿಪ್ರೆಶನ್ ಜಾಸ್ತಿ. ಈಗ ನೀನು ಆಲ್ಕಾಹಾಲ್ ಕುಡಿಯೋಕೆ ಭಯಪಡ್ತೀ. ತಾಯಿಗೆ ಬೇಸರಾಗಬಾರದು ಅಂತ. ನಿನಗೀಗ ವಯಸ್ಸೆಷ್ಟು ಹೇಳು.”
“ಇಪ್ಪತ್ತೈದು.”
“ನೋಡಿದಿಯಾ!” ಇಷ್ಟು ವಯಸ್ನಲ್ಲೂ ನೀನು ಇಂಡಿಪೆಂಡೆಂಟ್ ಆಗಿಲ್ಲ. ಆದ್ದರಿಂದಲೆ ಇಂಥ ಫ಼ಜೀತಿಗಳಲ್ಲಿ ಸಿಗಹಾಕ್ಕೊಳ್ತಾ ಇದ್ದೀ. ಅದೇನೋ ಕನಸಿನಲ್ಲಿ ಉರುಳ್ತಾಹೋಗ್ತದೆ ಅಂದಿಯಲ್ಲಾ!”
“ಚೀಸ್ ನ ಟಿನ್”
“ಇಗ್ ಸಾಕ್ ಟ್ಲೀ! ಚೀಸ್ ಎಂದರೆ ಹಾಲು. ಹಾಲೆಂದರೆ ಮದರ್, ವೈಫ಼್, ಸೆಕ್ಸ್! ಅದು ಉರುಳ್ತ ಹೋಗ್ತಿದೆ. ಎರಡೆರಡು ಮೆಟ್ಟಲಗಳನ್ನ ಹಾರಿಕೊಂಡು, ನಿನ್ನ ಪ್ರಜ್ಞೆಯ ಆಳಕ್ಕೆ ಇಳೀತಾ ಇದೆ. ಆಗಾಗ ಹಿಂದೆ ತಿರುಗಿ ನಕ್ಕು ಚೀಸ್ ಮಾಡ್ತ ಇದೆ. ಪ್ರಜ್ಞೇನ ಸುಪ್ತಪ್ರಜ್ಞೆ ಓವರ್ ಟೇಕ್ ಮಾಡ್ತಿದೆ! ಲೆಟಸ್ ಹ್ಯಾವ್ ಎನದರ್ ರೌಂಡ್.”
“ಶೂರ್! ಆದರೆ ನಾ ನಿನ್ನ ಸಲಹೆ ಕೇಳ್ತ ಇರೋದು ಈ ಪರಿಸ್ಥಿತೀಲಿ ನಾ ಏನು ಮಾಡಬೇಕೂ ಅಂತ.”
“ಯಾವ ಪರಿಸ್ಥಿತೀಲಿ?”
“ಹುಡುಗಿ ಫೋನ್ ಮಾಡ್ತೀನಿ, ಬರ್ತೀನಿ ಅಂದಿದ್ಲು. ನೀನಾಗಿ ಫೋನ್ ಮಾಡ್ಬೇಡ ಎಂದಿದ್ಲು.”
ಚಟರ್ಜಿ ದೀರ್ಘವಾಗಿ ಸಿಗರೇಟಿನ ಹೊಗೆಯನ್ನು ನುಂಗಿ ಹೊರಕ್ಕೆ ಬಿಟ್ಟ. ಅದು ಹತ್ತಿರದ ಹತ್ತು ಚದುರಡಿ ಸ್ಥಳವನ್ನು ಒಮ್ಮೆಲೆ ವ್ಯಾಪಿಸಿತು. “ಟೆಲ್ ಯೂ ವಾಟ್,” ಎಂದವನೆ ಎದ್ದು ಬಾತ್ ರೂಮಿನ ಕಡೆ ನಡೆದ. ಏನಿದರ ಅರ್ಥ ಎಂದು ವಿನಯಚಂದ್ರ ದಿಜ಼್ಮೂಢನಾದ , ಒಗಟುಗಳನ್ನು ಬಿಡಿಸುವುದರಲ್ಲೆ ತನ ಜೀವನವೆಲ್ಲ ಕಳೆಯಿತಲ್ಲ!
ಬಾತ್ ರೂಮಿನಿಂದ ಮರಳಿದ ಚಟರ್ಜಿ ತಾವು ಆರ್ಡರ್ ಮಾಡಿದ್ದ ರೌಂಡ್ ಇನ್ನೂ ಬಂದಿಲ್ಲದ್ದು ಕಂಡು ರೇಗಿದ. ಹೂ ಈಸ್ ದ ಬಾಸ್ ಹೀಯರ್ ?” ಎಂದು ದೊಡ್ಡದಾಗಿ ಅರಚಿದ. ಡ್ರಿಂಕ್ಸ್ ತಂದಿಟ್ಟ ವೈಟರ್, ಅತ್ಯಂತ ವಿನೀತನಾಗಿ ಕ್ಷಮಾಪಣೆ ಕೇಳಿ ಹಿಂದಕ್ಕೆ ಹೋಗಿ ನಿಂತ.
“ಚೀಸ್ ಸಾಲಡ್ ಒಂದು ಪ್ಲೇಟು ತಗೊಂಡ್ಬನ್ರಿ!” ಎಂದು ಚಟರ್ಜಿ ಇನ್ನೊಂದು ಆರ್ಡರ್ ಕೊಟ್ಟ.
“ನೀನು ಫೋನ್ ಮಾಡ್ಬಾರ್ದು ಅಂದಿದ್ಳು. ಆದರೆ ನಾನು ಮಾಡ್ಬಾರ್ದು ಅಂತೇನೂ ಇಲ್ವಲ್ಲ?”
“ನೀನು? ನೀನು ಫೋನ್ ಮಾಡ್ತಿಯಾ?”
“ದ್ಯಾಟ್ ಈಸ್ದ ಐಡಿಯಾ”
“ಏನಂತ ಮಾಡ್ತಿ?”
“ಆಮೇಲೆ ಹೇಳ್ತೇನೆ. ಈಗ ನಂಬರ್ ಕೊಡು.”
ನಂಬರ್ ಅವನಿಗೆ ಕೊಟ್ಟ ಕ್ಷಣದಿಂದ ವಿನಯಚಂದ್ರನಿಗೆ ಹೊಟ್ಟೆಯೊಳಗೆ ಒಂದು ಥರ ಸಂಕಟ ಆರಂಭವಾಯಿತು. ಫ಼ಸ್ಟ್ ರೇಟ್ ವೂಮನೈಸರ್ ಎಂದು ಹೆಸರಾಗಿದ್ದ ಮಂಗನ ಕೈಗೆ ತಾನು ಮಾಣಿಕ್ಯ ಕೊಟ್ಟುಬಿಟ್ಟೆನೆ! ಆದರೆ ಆಗಲೆ ಚಟರ್ಜಿ ಕೌಂಟರಿಗೆ ತೂರಾಡುತ್ತ ತಲುಪಿ ಫೋನಿಗೆ ಕೈಹಾಕಿದ್ದ. ಜತೆಗೆ ಹೊರಟವನನ್ನು ಅಲ್ಲೇ ಕೂಡುವಂತೆ ಹೇಳಿ ಇನ್ನಷ್ಟು ಚಿಂತೆಗೆ ಗುರಿಮಾಡಿದ್ದ. ಹುಳಿ ದ್ರಾಕ್ಷಾರಸವನ್ನು ಹೀರುತ್ತ ಕುಳಿತುಕೊಳ್ಳುವುದಲ್ಲದೆ ಬೇರೆ ದಾರಿಯ ಇರಲಿಲ್ಲ. ’ತನ ಆತ್ಮೀಯ ರಹಸ್ಯಗಳನ್ನು ಎಂದೂ ಇನ್ನೊಬ್ಬರ ವಶಮಾಡುವುದಿಲ್ಲವೆಂದು ಆಗಿಂದಲೆ ನಿರ್ಣಯಿಸಿದ.
ಆದರೆ ಚಟರ್ಜಿ ಮರಳುವುದಕ್ಕೆ ಹೆಚ್ಚು ಹೊತ್ತೇನೂ ತಗುಲಲಿಲ್ಲ. ಫೋನು ಕೆಟ್ಟು ಹೋಗಿರಬಹುದು, ಯಾರೂ ಎತ್ತಿಕೊಳ್ಳದೇ ಇರಬಹುದು – ಎರಡರಲ್ಲಿ ಒಂದಾದರೂ ಆಗಿರಲಿ ಎಂದು ವಿನಯಚಂದ್ರ ದೇವರಿಗೆ ಹರಕೆ ಹೊತ್ತ.
“ಪೋನು ಮಾಡಿದಿಯಾ?”
“ಮಾಡಿದೆ.”
“ಹ್ಹ!”
“ನಿನ್ನ ಹುಡುಗಿ ಮಾತ್ರ ಸಿಗಲಿಲ್ಲ.”
“ಇನ್ನು ಯಾರು ಸಿಕ್ಕರು?”
“ಯಾರೋ. ಆಕೆ ತಂಗಿ ಇದ್ದರೂ ಇರಬಹುದು. ರೇಶ್ಮ ಊರಲ್ಲಿಲ್ಲವಂತೆ.”
“ಊರಲ್ಲಿಲ್ಲವೆ! ಎಲ್ಲಿ ಹೋದಳು!”
“ಭಾಳ ಕಾಂಪ್ಲಿಕೇಟೆಡ್ ಕಣೋ!”
“ಹೇಳಯ್ಯ ಬೇಗನೆ. ಯಾಕೆ ಸುಮ್ಮನೆ ಸಸ್ಟೆನ್ಸ್ ಉಂಟುಮಾಡ್ತ ಇದೀಯ?”
“ಸಾಲಡ್ ಇನ್ನೂ ತಂದಿಲ್ವೆ? ಪೈಟರ್!!!”
“ತರ್ತಾನಯ್ಯ. ಈಗ ನನ್ನ ಪ್ರಶ್ನೆಗೆ ಉತ್ತರ ಹೇಳ್ತೀಯೋ ಇಲ್ವೋ?”
ರೇಶ್ಮಾ ಸಾವುದಿ ಅರೇಬಿಯಾಗೆ ಹೋಗಿದ್ದಾಳೆ.”
“ಗಾಡ್! ”
“ನಿನಗೆ ಕೇಳಿದರೆ ಶಾಕ್ ಆಗುತ್ತೇಂತ ಗೊತ್ತು. ಆದರೆ ಫ಼್ಯಾಕ್ಟ್ ಈಸ್ ಎ ಫ಼್ಯಾಕ್ಟ್.”
“ಇರ್ಲಿ. ಯಾವಾಗ ಬರ್ತಾಳೆ, ಯಾತಕ್ಕೆ ಹೋಗಿದ್ದಾಳೆ ಎಂದು ವಿಚಾರಿಸ್ದೆಯ?”
“ವಿಚಾರಿಸ್ದೆ ಇರ್ತೆನೆಯೆ? ಎಲ್ಲ ವಿಚಾರಿಸ್ದೆ. ನೀನು ಯಾರು ಕೇಳೋನು ಎಂದಳು. ಪೋದ್ದಾರ್ ಎಂದೆ. ತಕ್ಷಣ ಫೋನ್ನ ಕೆಳಕ್ಕೆ ಚಚ್ಚಿದಳು. ಭಾಳ ಕಾಂಪ್ಲಿಕೇಟೆಡ್ ಕೇಸು ಕಣೋ. ಈ ಲೋಕದಲ್ಲಿ ಸುಂದರಿಯರಾದ ಹುಡುಗಿಯರಿಗೆ ಬರವಿಲ್ಲ. ರೇಶ್ಮಳನ್ನು ನೀನು ಮರೆತುಬಿಟ್ಟು ಹೊಸ ಅಧ್ಯಾಯ ಸುರುಮಾಡು!” ಎಂದ ಚಟರ್ಜಿ.
“ಐ ಕಾಂಟ್! ” ಎಂದ ವಿನಯಚಂದ್ರ.
*****